ತೈಲೋತ್ಪನ್ನಗಳ ಬೆಲೆ: ಸರಕಾರ ತೆರಿಗೆ ವಿನಾಯಿತಿ ನೀಡಲಿ
Team Udayavani, Jun 7, 2021, 6:45 AM IST
ಪಂಚರಾಜ್ಯಗಳ ಚುನಾವಣ ಫಲಿತಾಂಶ ಘೋಷಣೆಯಾದ ಬಳಿಕ ನಿರಂತರವಾಗಿ ಏರಿಕೆಯಾಗುತ್ತಲೇ ಸಾಗಿರುವ ತೈಲೋತ್ಪನ್ನಗಳ ಬೆಲೆ ಈಗ ದೇಶದ ಆರು ರಾಜ್ಯಗಳಲ್ಲಿ ಶತಕದ ಗಡಿ ದಾಟಿದೆ. ಮೇ 4ರ ಬಳಿಕ 20ನೇ ಬಾರಿಗೆ ತೈಲೋತ್ಪನ್ನಗಳ ಬೆಲೆ ಹೆಚ್ಚಳವಾಗಿದ್ದು ರವಿವಾರ ಪೆಟ್ರೋಲ್ ಪ್ರತೀ ಲೀ. ಗೆ 21 ಪೈಸೆ ಮತ್ತು ಡೀಸೆಲ್ ಪ್ರತೀ ಲೀ. ಗೆ 20 ಪೈಸೆಗಳಷ್ಟು ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಸತತವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ತೈಲೋತ್ಪನ್ನಗಳ ಬೆಲೆಯನ್ನು ಏರಿಸುತ್ತಲೇ ಬಂದಿವೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಬ್ರೆಂಟ್ ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 72 ಅಮೆರಿಕನ್ ಡಾಲರ್‌ಗಳಿಗೇರಿದೆ. ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಅನಿಶ್ಚತತೆ ಮುಂದುವರಿದಿರುವುದರಿಂದ ತೈಲೋತ್ಪನ್ನಗಳ ಬೆಲೆ ಒಂದೇ ಸಮನೆ ಹೆಚ್ಚುತ್ತಲೇ ಸಾಗಿದೆ. ಇತ್ತ ಕೇಂದ್ರ ಮತ್ತು ರಾಜ್ಯ ಸರಕಾರಗಳೂ ಕೊರೊನಾದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ತೈಲೋತ್ಪನ್ನಗಳಿಂದ ತಮ್ಮ ಬೊಕ್ಕಸಕ್ಕೆ ಹರಿದು ಬರುತ್ತಿರುವ ಆದಾಯಕ್ಕೆ ಕತ್ತರಿ ಹಾಕಿಕೊಳ್ಳಲು ಸಿದ್ದವಾಗಿಲ್ಲ. ಇದರಿಂದಾಗಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುವಂತಾಗಿದೆ.
ದೇಶವೀಗ ಕೊರೊನಾ 2ನೇ ಅಲೆ ಹೊಡೆತದಿಂದ ನಿಧಾನವಾಗಿ ಚೇತ ರಿಸಿಕೊಳ್ಳಲಾರಂಭಿಸಿದೆ. ಮೊದಲ ಅಲೆಗಿಂತ ಅತ್ಯಂತ ಕ್ಷಿಪ್ರಗತಿಯಲ್ಲಿ ದೇಶಾದ್ಯಂತ ವ್ಯಾಪಿಸಿ ಭಾರೀ ಸಂಖ್ಯೆಯ ಜನರನ್ನು ಬಾಧಿಸಿದ್ದೇ ಅಲ್ಲದೆ ಬಲುದೊಡ್ಡ ಸಂಖ್ಯೆಯಲ್ಲಿ ಜನರ ಪ್ರಾಣವನ್ನೂ ಕಸಿದುಕೊಂಡಿದ್ದ 2ನೇ ಅಲೆ ಇಡೀ ದೇಶವನ್ನು ಕಂಗೆಡಿಸಿತ್ತು. ಈ ಬಾರಿ ಲಾಕ್‌ಡೌನ್, ನಿರ್ಬಂಧ ಹೇರುವ ಹೊಣೆಗಾರಿಕೆಯನ್ನು ಕೇಂದ್ರ ಸರಕಾರ ಆಯಾಯ ರಾಜ್ಯಗಳಿಗೆ ನೀಡಿದ್ದರಿಂದಾಗಿ ರಾಜ್ಯ ಸರಕಾರಗಳು ತಮ್ಮಲ್ಲಿನ ಸ್ಥಿತಿಗತಿಗನುಗುಣವಾಗಿ ಲಾಕ್‌ಡೌನ್, ನಿರ್ಬಂಧಗಳನ್ನು ಜಾರಿಗೊಳಿಸಿ ಕೊರೊನಾ ನಿಯಂತ್ರಣಕ್ಕಾಗಿ ಹರಸಾಹಸ ಪಡುವಂತಾಯಿತು. ಇದೀಗ ಕೊರೊನಾ ಎರಡನೇ ಅಲೆಯ ತೀವ್ರತೆ ಕ್ರಮೇಣ ಕಡಿಮೆಯಾಗುತ್ತಿದ್ದು ಬಹುತೇಕ ರಾಜ್ಯಗಳು ಹಂತಹಂತವಾಗಿ ಲಾಕ್‌ಡೌನ್, ನಿರ್ಬಂಧಗಳಲ್ಲಿ ಸಡಿಲಿಕೆ ಮಾಡಲಾರಂಭಿಸಿವೆ. ಮುಂದಿನ ಒಂದೆರಡು ವಾರಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳೀತು ಎಂಬ ವಿಶ್ವಾಸ ಮೂಡಿದೆ. ಇಂಥ ಸಂದರ್ಭದಲ್ಲಿ ತೈಲ ಬೆಲೆಗಳು ಗಗನಕ್ಕೇರಿರುವುದು ತುಸು ಆತಂಕಕಾರಿ ವಿಷಯವೇ. ತೈಲ ಬೆಲೆಗಳು ಏರುಮುಖೀಯಾಗಿದ್ದರೆ ಜನಜೀವನ ಮಾತ್ರವಲ್ಲದೆ ಇಡೀ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಲು ಮತ್ತಷ್ಟು ಸಮಯ ಹಿಡಿದೀತು.
ದೇಶದ ಆರ್ಥಿಕ ವ್ಯವಸ್ಥೆಯೊಂದಿಗೆ ನೇರವಾದ ನಂಟು ಹೊಂದಿ ರುವ ತೈಲ ಬೆಲೆಗಳ ಮೇಲೆ ನಿಯಂತ್ರಣ ಸಾಧಿಸುವುದು ಈಗಿನ ತುರ್ತು ಅಗತ್ಯವಾಗಿದೆ. ಈ ದಿಸೆಯಲ್ಲಿ ಕೇಂದ್ರ ಸರಕಾರ ಆದ್ಯತೆಯ ಮೇಲೆ ಗಮನ ಹರಿಸಲೇಬೇಕಿದೆ. ಕನಿಷ್ಠ ಪಕ್ಷ ದೇಶದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುವವರೆಗಾದರೂ ಕೇಂದ್ರ ಸರಕಾರ ತೈಲೋತ್ಪನ್ನಗಳ ಮೇಲಣ ತನ್ನ ಪಾಲಿನ ತೆರಿಗೆಯಲ್ಲಿ ಕಡಿತಗೊಳಿಸಬೇಕಿದೆ. ಇದರ ಜತೆಯಲ್ಲಿ ರಾಜ್ಯ ಸರಕಾರಗಳೂ ವ್ಯಾಟ್ ಸಹಿತ ಸ್ಥಳೀಯ ತೆರಿಗೆಗಳಲ್ಲಿ ಕೊಂಚ ರಿಯಾಯಿತಿಯನ್ನು ನೀಡುವ ಮೂಲಕ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕಿದೆ. ತೈಲೋತ್ಪನ್ನ ಕಂಪೆನಿಗಳು ಕೂಡ ಈ ಸಂದಿಗ್ಧದ ಸಂದರ್ಭದಲ್ಲಿ ಗ್ರಾಹಕ ಸ್ನೇಹಿ ನಿರ್ಧಾರವನ್ನು ಕೈಗೊಂಡು ತೈಲೋತ್ಪನ್ನಗಳು ಜನಸಾಮಾನ್ಯರ ಕೈಗೆಟಕುವಂತೆ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.