ರಾಜ್ಯದ ಪ್ರಾ. ಆರೋಗ್ಯ ಕೇಂದ್ರಗಳ ಪುನರ್ವಿಂಗಡನೆ
35 ಸಾವಿರ ಜನಸಂಖ್ಯೆಗೆ ಒಂದು ಆರೋಗ್ಯ ಕೇಂದ್ರ
Team Udayavani, Feb 8, 2022, 7:15 AM IST
ಉಡುಪಿ: ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪಕೇಂದ್ರಗಳನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ ಪುನರ್ವಿಂಗಡನೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಸಮತಟ್ಟು ಪ್ರದೇಶದಲ್ಲಿ ಪ್ರತೀ 35 ಸಾವಿರ ಜನಸಂಖ್ಯೆಗೆ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ 20 ಸಾವಿರ ಜನಸಂಖ್ಯೆಗೊಂದು ಪ್ರಾ.ಆ. ಕೇಂದ್ರ ಇರಬೇಕೆಂಬುದು ಕೇಂದ್ರ ಸರಕಾರದ ನಿಯಮ. ಆದರೆ ರಾಜ್ಯದಲ್ಲಿ 5 ಸಾವಿರದಿಂದ 50 ಸಾವಿರ ವರೆಗಿನ ಜನಸಂಖ್ಯೆಗೆ ಕೇಂದ್ರಗಳಿದ್ದು, ಅಸಮರ್ಪಕ ಹಂಚಿಕೆಯಾಗಿದೆ.
ಆಡಳಿತ ಕಾರ್ಯಕ್ಕೆ ತೊಂದರೆ
ಒಂದು ಪ್ರಾ.ಆ. ಕೇಂದ್ರಕ್ಕೆ ಹಲವು ಗ್ರಾ.ಪಂ.ಗಳು ಹಂಚಿ ಹೋಗಿವೆ. ಅಂತೆಯೇ ಒಂದು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು 2ರಿಂದ 5 ಪ್ರಾ.ಆ. ಕೇಂದ್ರಗಳಿಗೆ ಹಂಚಿಹೋಗಿರುವುದರಿಂದ ಆಡಳಿತ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸುವ ದೃಷ್ಟಿಯಿಂದ ಜನಸಂಖ್ಯೆ ಆಧಾರಿತವಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚು ಸಂಪೂರ್ಣ ಗ್ರಾ.ಪಂ. ಒಂದು ಪ್ರಾ.ಆ. ಕೇಂದ್ರದ ಆಡಳಿತಕ್ಕೆ ಒಳಪಡುವ ಅಗತ್ಯ ಇದೆ.
ಅನುಕೂಲಗಳು
ಉತ್ತಮ ಆಡಳಿತ, ಸ್ಥಳೀಯ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ, ರಾಷ್ಟ್ರೀಯ ಆರೋಗ್ಯ ಕಾರ್ಯ
ಕ್ರಮಗಳ ಸುಲಲಿತ ಮೇಲ್ವಿಚಾರಣೆ, ಪ್ರಾ.ಆ. ಕೇಂದ್ರಗಳ ವ್ಯಾಪ್ತಿಗೊಳಪಡುವ ಜನರಿಗೆ, ಫಲಾನುಭವಿಗಳಿಗೆ ಸೌಲಭ್ಯಗಳು ಸುಲಭದಲ್ಲಿ ದೊರೆಯಲಿವೆ.
ಹೊಸ ಹುದ್ದೆಯ ಸೃಷ್ಟಿ
ನೂತನ ಉಪಕೇಂದ್ರಗಳಿಗೆ ಪ್ರಾ.ಆ. ಆರೈಕೆ ಅಧಿಕಾರಿಗಳ ಹೊಸ ಹುದ್ದೆ ಸೃಷ್ಟಿಸಲಾಗಿದೆ. ಅದೇ ತಾಲೂಕಿನಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಆರೈಕೆ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಬಹುದು. ಇದರಿಂದ ನಗರ ಉಪಕೇಂದ್ರ ಮತ್ತು ಗುಡ್ಡಗಾಡು ಪ್ರದೇಶ ಹಾಗೂ ಗ್ರಾಮಾಂತರ ಭಾಗದದತ್ತಾಂಶ ಪಡೆಯಬಹುದಾಗಿದೆ. ಮೇಲ್ವಿಚಾರಕರು, ಕಿರಿಯ ಪುರುಷ ಆರೋಗ್ಯ ಸಹಾಯಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಪ್ರಯಾಣದ ಅವಧಿಯನ್ನು ಕಡಿತಗೊಳಿಸಬಹುದಾಗಿದೆ.
ಸಮಿತಿ ರಚನೆ
ಇದಕ್ಕಾಗಿ ನೂತನ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಆಯಾ ಜಿ.ಪಂ. ಸಿಇಒ, ಸದಸ್ಯ ಕಾರ್ಯ
ದರ್ಶಿಯಾಗಿ ಜಿಲ್ಲಾ ಆರೋಗ್ಯ ಅಧಿಕಾರಿ, ಸದಸ್ಯರಾಗಿ ಆರ್‌ಸಿಎಚ್ ಅಧಿಕಾರಿ ಹಾಗೂ ಆಯಾ ತಾಲೂಕು ಆರೋಗ್ಯಾಧಿಕಾರಿಗಳು ಇರಲಿದ್ದಾರೆ.
ಮಾಹಿತಿ ಸಂಗ್ರಹಕ್ಕೆ ಸೂಚನೆ
ತಾಲೂಕು ಆರೋಗ್ಯಾಧಿಕಾರಿ ತನ್ನ ವ್ಯಾಪ್ತಿಯ ಎಲ್ಲ ಪ್ರಾ.ಆ. ಕೇಂದ್ರಗಳ ವೈದ್ಯಾಧಿಕಾರಿಗಳ ಸಭೆ ಕರೆದು ಅವುಗಳ ವ್ಯಾಪ್ತಿಗೆ ಒಳಪಡುವ ಗ್ರಾಮಗಳು ಮತ್ತು ಜನಸಂಖ್ಯೆಯ ಪಟ್ಟಿ ಸಿದ್ಧಪಡಿಸಬೇಕು. ನಗರ ಪ್ರದೇಶಗಳಲ್ಲಿ 10 ಸಾವಿರ ಜನಸಂಖ್ಯೆಗೆ ಒಂದು ಉಪಕೇಂದ್ರದಂತೆ, ಗ್ರಾಮಾಂತರ ಪ್ರದೇಶಗಳಲ್ಲಿ ಸಮತಟ್ಟು ಪ್ರದೇಶವಾದಲ್ಲಿ 5 ಸಾವಿರ ಜನಸಂಖ್ಯೆಗೆ ಒಂದು, ಗುಡ್ಡಗಾಡು ಪ್ರದೇಶವಾದರೆ 3 ಸಾವಿರ ಜನಸಂಖ್ಯೆಗೆ ಒಂದು ಉಪಕೇಂದ್ರದಂತೆ ಪರಿಗಣಿಸ
ಬೇಕು. ಪುನರ್ ವಿಂಗಡಿಸುವಾಗ ಒಂದು ಉಪಕೇಂದ್ರದಲ್ಲಿ ಒಂದೇ ಗ್ರಾ.ಪಂ.ನ ಗ್ರಾಮಗಳು ಒಳಪಡಬೇಕೆಂದೇನಿಲ್ಲ ಎಂದು ತಿಳಿಸಲಾಗಿದೆ.
10 ಕಿ.ಮೀ. ಒಳಗೆ
ಪುನರ್ವಿಂಗಡನೆ ವೇಳೆ ಎಲ್ಲ ಉಪಕೇಂದ್ರಗಳು ಪ್ರಾ.ಆ. ಕೇಂದ್ರದಿಂದ 10 ಕಿ.ಮೀ. ಒಳಗೆ ಇರುವಂತೆ ನೋಡಿಕೊಳ್ಳಬೇಕು. ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸಂಪೂರ್ಣ ಚಿಕಿತ್ಸಾ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂಬ ನಿರ್ಧಾರ ಆರೋಗ್ಯ ಇಲಾಖೆಯದ್ದು.
ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರಗಳನ್ನು ತೆರೆಯುವ ಬಗ್ಗೆ ಸರಕಾರದಿಂದ ಈಗಾಗಲೇ ಸುತ್ತೋಲೆ ಬಂದಿದೆ. ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.
– ಡಾ| ನಾಗಭೂಷಣ ಉಡುಪ,
ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.