ರಾಜ್ಯ ಬಿಜೆಪಿ ಸರಕಾರದಿಂದ ಜನತೆಗೆ ದ್ರೋಹ: ಪ್ರಿಯಾಂಕ್ ಖರ್ಗೆ
Team Udayavani, Sep 7, 2022, 8:57 AM IST
ಮಂಗಳೂರು: ರಾಜ್ಯ ಬಿಜೆಪಿ ಸರಕಾರವು ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸದೆ ಹಗರಣಗಳಲ್ಲೇ ಮುಳುಗಿದೆ. ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದೆ. ಇದನ್ನು ಜನರು ಗಮನಿಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು.
ಎಐಸಿಸಿ ಕಾರ್ಯದರ್ಶಿ, ಕೇರಳ ಶಾಸಕ ರೋಜಿ ಜಾನ್ ಮಾತನಾಡಿ, ರಾಹುಲ್ ಗಾಂಧಿ ನೇತೃತ್ವದಲ್ಲಿ 3570 ಕಿ.ಮೀ. ಭಾರತ್ ಜೋಡೊ ಪಾದಯಾತ್ರೆ ಆಯೋಜಿಸಲಾಗಿದ್ದು, ಕರ್ನಾಟಕ ದಲ್ಲಿ 21 ದಿನಗಳ ಕಾಲ ನಡೆಯಲಿದೆ ಎಂದರು.
ನಿಷ್ಪಕ್ಷ ತನಿಖೆಯಾದರೆ ಸರಕಾರ ಪತನ
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತದ ವೇಳೆ ನಡೆದಿರುವ ಬಿಟ್ ಕಾಯಿನ್, ಪಿಎಸ್‌ಐ ಹಗರಣದ ಬಗ್ಗೆ ಪಾರದರ್ಶಕ, ನಿಷ್ಪಕ್ಷ ತನಿಖೆ ಮಾಡಿದರೆ ಸರಕಾರ ಬೀಳಲಿದೆ ಎಂದರು.
ಪ್ರಧಾನಿ ಮೇಲಿನ ನಿರೀಕ್ಷೆ ಹುಸಿ
ಕರಾವಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನದಿಂದ ಅಚ್ಛೇ ದಿನ್ ಬರುತ್ತೆ ನಿರೀಕ್ಷೆ ಜನತೆ ಇಟ್ಟುಕೊಂಡಿದ್ದರು. ಪ್ರಧಾನಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುತ್ತಾರೆ, ನಾರಾಯಣಗುರು ಪೀಠ ಮತ್ತು ನಿಗಮ ಸ್ಥಾಪನೆ ಮಾಡುತ್ತಾರೆ ಎಂಬ ನಿರೀಕ್ಷೆ ಜನರಲ್ಲಿತ್ತು. ಮೋದಿ ಸಮ್ಮುಖದಲ್ಲಿ ಮುಖ್ಯಮಂತ್ರಿ ಕೂಡ ಈ ಬಗ್ಗೆ ಪ್ರಸ್ತಾವನೆ ಮಾಡಲಿಲ್ಲ. ನಿರೀಕ್ಷೆಗಳೆಲ್ಲವೂ ಹುಸಿಯಾಗಿವೆ ಎಂದರು.
ಡಬಲ್ ಧೋಖಾ ಸರಕಾರ
ಪ್ರಧಾನಿ ಹೋದಲ್ಲೆಲ್ಲಾ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಾರೆ. ಇಲ್ಲಿ ಕನ್ನಡದಲ್ಲಾಗಲಿ, ತುಳುವಿನಲ್ಲಾಗಲಿ ಮಾತನಾಡಿಲ್ಲ. ಇದರಿಂದ ಬಹಳಷ್ಟು ಜನರಿಗೆ ನಿರಾಸೆಯಾಗಿದೆ. ಇದು ಡಬಲ್ ಎಂಜಿನ್ ಸರಕಾರ ಅಲ್ಲ, ಡಬಲ್ ಧೋಖಾ ಸರಕಾರ ಎಂಬುದು ಸಾಬೀತು ಆಗಿದೆ. ಈ ಸರಕಾರದಿಂದ ಯಾವುದೇ ಅಭಿವೃದ್ಧಿ ಆಗುವುದಿಲ್ಲ ಎಂಬುದು ಸ್ವತಃ ಬಿಜೆಪಿ ಕಾರ್ಯಕರ್ತರಿಗೇ ಮನವರಿಕೆಯಾಗಿದೆ ಎಂದವರು ಆರೋಪಿಸಿದರು.
ಬಿಜೆಪಿಯವರಿಗೆ ಈಗ ಉಳಿದಿರುವುದು ಕೇವಲ ಧರ್ಮ ರಾಜಕೀಯ ಮಾತ್ರ. ಭ್ರಷ್ಟಾಚಾರದ ಬಗ್ಗೆ ಕೇಳಿದರೆ ಬಿಜೆಪಿಯವರು ಹಲಾಲ… – ಜಟ್ಕಾ ಬಗ್ಗೆ ಮಾತನಾಡುತ್ತಾರೆ. ಅಭಿವೃದ್ಧಿಗೆ ಹಣ ಕೇಳಿದರೆ ಕಾಶ್ಮೀರ್ ಫೈಲ… ಬಗ್ಗೆ ಹೇಳುತ್ತಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಕೇಳಿದರೆ, ಟಿಪ್ಪು ಸುಲ್ತಾನ್ ವಿಚಾರ ಪ್ರಸ್ತಾವಿಸುತ್ತಾರೆ ಎಂದು ಟೀಕಿಸಿದರು.
ಅತಿವೃಷ್ಟಿಯಿಂದ ರಾಜ್ಯದಲ್ಲಿ ತೀವ್ರ ಹಾನಿಯಾಗಿದೆ. ಆದರೆ ಸರಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಕಮಿಷನ್‌ನಲ್ಲಿ ಮಾತ್ರ ಅವರಿಗೆ ಆಸಕ್ತಿ. ಎನ್‌ಡಿಆರ್‌ಎಫ್ ಮುಖ್ಯಸ್ಥರಾಗಿರುವ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದಾಗ ವಿಶೇಷ ಕ್ರಿಯಾ ಪಡೆ ರಚಿಸಿ ಅನುದಾನಕ್ಕೆ ಮನವಿ ಮಾಡುವ ಧೈರ್ಯ ಬಿಜೆಪಿ ಶಾಸಕರು, ಸಂಸದರು ತೋರಲಿಲ್ಲ. ಜಿಎಸ್‌ಟಿಯಲ್ಲಿ ರಾಜ್ಯದ ಪಾಲು ಕೇಳಲು ರಾಜ್ಯ ಸರಕಾರಕ್ಕೆ ಆಗುತ್ತಿಲ್ಲ. ಕೇಂದ್ರದಿಂದ ಸಿಗುತ್ತಿರುವುದು ಬಿಡಿಗಾಸು ಮಾತ್ರ. ನರೇಂದ್ರ ಮೋದಿಯರಲ್ಲಿ ಮಾತನಾಡಲು ಬಿಜೆಪಿ ಜನಪ್ರತಿನಿಧಿಗಳಿಗೆ ಧೈರ್ಯ ಇಲ್ಲ ಎಂದರು.
ಕಾನೂನಿನಂತೆ ತನಿಖೆಯಾಗಲಿ
ಚಿತ್ರದುರ್ಗ ಮುರುಘಾ ಶ್ರೀಗಳ ಪ್ರಕರಣ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕಾನೂನಿನಂತೆ ತನಿಖೆಯಾಗಲಿ ಮತ್ತು ತಪ್ಪಿತಸ್ಥರು ಯಾರೇ ಆಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಆಗಬೇಕು ಎಂಬುದು ಕಾಂಗ್ರೆಸ್ ನಿಲುವು ಎಂದವರು ಹೇಳಿದರು.
ಕೆಪಿಸಿಸಿ ಉಸ್ತುವಾರಿ ಮಧು ಬಂಗಾರಪ್ಪ, ಮಾಜಿ ಸಚಿವರಾದ ರಮಾನಾಥ ರೈ, ಅಭಯ ಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಐವನ್ ಡಿ’ಸೋಜಾ, ಮೊದಿನ್ ಬಾವಾ, ಜೆ.ಆರ್. ಲೋಬೊ, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕೆಪಿಸಿಸಿ ಪ್ರ.ಕಾರ್ಯದರ್ಶಿಗಳಾದ ಮಿಥುನ್ ರೈ, ಇನಾಯತ್ ಅಲಿ, ಯು.ಎಚ್. ಖಾಲಿದ್, ನೀರಜ್ ಚಂದ್ರ ಪಾಲ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.