Health tips; ಪ್ರಾಸ್ಟ್ರೇಟ್ ಗ್ರಂಥಿಯಿಂದಾಗಿ ಮೂತ್ರಾಂಗ ಸಮಸ್ಯೆಗಳು
ಮೂತ್ರ ವಿಸರ್ಜನೆ ಸಂಪೂರ್ಣವಾಗಿ ನಿಂತು ಮೂತ್ರ ಕಟ್ಟಿಕೊಳ್ಳುವುದಕ್ಕೂ ಕಾರಣವಾಗಬಹುದು.
Team Udayavani, Apr 27, 2023, 12:55 PM IST
ಪುರುಷರ ದೇಹದಲ್ಲಿ ಮಾತ್ರ ಕಂಡುಬರುವ, ಸಣ್ಣ ಲಿಂಬೆಯಷ್ಟು ಗಾತ್ರದ ಒಂದು ಅಂಗ ಪ್ರಾಸ್ಟ್ರೇಟ್ ಗ್ರಂಥಿ. ದೇಹದಲ್ಲಿ ಪ್ರಾಸ್ಟ್ರೇಟ್ ಗ್ರಂಥಿಯು ಮೂತ್ರಕೋಶದ ಕೆಳಗೆ ಇರುತ್ತದೆ ಮತ್ತು ಇದು ಎರಡು ಕೆಲಸಗಳನ್ನು ನಿರ್ವಹಿಸುತ್ತದೆ.
ವೀರ್ಯೋತ್ಪಾದನೆಗೆ ಕೊಡುಗೆ ನೀಡುತ್ತದೆ ಹಾಗೂ ಯುರೆತ್ರಾ ಎಂದು ಕರೆಯಲ್ಪಡುವ ಮೂತ್ರನಾಳದ ಒಂದು ಭಾಗವಾಗಿಯೂ ಇರುತ್ತದೆ. 40 ವರ್ಷ ವಯಸ್ಸಿನ ಬಳಿಕ ಪ್ರಾಸ್ಟ್ರೇಟ್ ಗ್ರಂಥಿಯು ನಿಧಾನಗತಿಯ, ಸೌಮ್ಯಸ್ವರೂಪದ ಊತಕ್ಕೆ ಒಳಗಾಗಿ ತನ್ನ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತದೆ. ಗ್ರಂಥಿಯ ಗಾತ್ರ ವೃದ್ಧಿಸುವುದರ ಪರಿಣಾಮವಾಗಿ ಮೂತ್ರನಾಳದ ಮೇಲೆ ಒತ್ತಡ ಬೀಳುತ್ತದೆ ಮತ್ತು ಅದು ಸಂಕೋಚನಗೊಳ್ಳುತ್ತದೆ ಹಾಗೂ ಈ ಅಡಚಣೆಯನ್ನು ನಿವಾರಿಸಿಕೊಳ್ಳಲು ಮೂತ್ರಕೋಶವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದು ನಾಕೂrರಿಯಾ (ರಾತ್ರಿ ಏಳಬೇಕಾಗುವುದು), ಹಗಲು ಹೆಚ್ಚು ಬಾರಿ ಮೂತ್ರವಿಸರ್ಜನೆ, ಮೂತ್ರ ವಿಸರ್ಜನೆಯ ತುರ್ತು ಉಂಟಾಗುವುದು, ಅನಿಶ್ಚಿತ ಮೂತ್ರಶಂಕೆ, ಮೂತ್ರಕೋಶ ಸಂಪೂರ್ಣವಾಗಿ ಬರಿದಾಗಿಲ್ಲದಿರುವ ಅನುಭವ, ಮೂತ್ರಧಾರೆ ತೆಳುವಾಗಿರುವುದು, ಮೂತ್ರ ಅನಿಯಂತ್ರಿತವಾಗಿ ಹರಿಯುವುದು ಇತ್ಯಾದಿಯಾಗಿ ಹಲವು ಮೂತ್ರಕೋಶ ತುಂಬಿ ತುಳುಕುವ ಅಡಚಣೆ (ಬ್ಲಾಡರ್ ಓವರ್‌ಫ್ಲೋ ಒಬ್‌ಸ್ಟ್ರಕ್ಷನ್) ಲಕ್ಷಣಗಳನ್ನು ಉಂಟು ಮಾಡುತ್ತದೆ.
ರೋಗಿಯು ಇವುಗಳ ಪೈಕಿ ಒಂದು ಅಥವಾ ಹೆಚ್ಚು ಲಕ್ಷಣಗಳನ್ನು ಅನುಭವಿಸಬಹುದು ಮತ್ತು ಇದು ನಿಧಾನವಾಗಿ ಜೀವನದ ಗುಣಮಟ್ಟವನ್ನು ಬಾಧಿಸುವುದಕ್ಕೆ ತೊಡಗುತ್ತದೆ. ಸಾಮಾನ್ಯವಾಗಿ ಪ್ರಾಸ್ಟ್ರೇಟ್ ಗ್ರಂಥಿಯ ಊತವು ಸೌಮ್ಯವಾಗಿ, ನಿರಪಾಯಕಾರಿಯಾಗಿ ಇರುತ್ತದಾದರೂ ಪ್ರಾಸ್ಟ್ರೇಟ್ ಕ್ಯಾನ್ಸರ್ ಆಗಿರುವ ಸಾಧ್ಯತೆಯೂ ಇಲ್ಲದಿಲ್ಲ. ರೋಗಿಯು ಇಂತಹ ಲಕ್ಷಣಗಳು ಅನುಭವಿಸಿದಾಗ ಅದು ಕ್ಯಾನ್ಸರ್ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಯುರಾಲಜಿಸ್ಟ್ ಅವರನ್ನು ಸಂಪರ್ಕಿಸಿ ತಪಾಸಿಸಿಕೊಳ್ಳುವುದು ಅತ್ಯಂತ ಮುಖ್ಯ. ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ಇರುವುದು ಪತ್ತೆಯಾದರೂ, ಆರಂಭಿಕ ಹಂತದಲ್ಲಿ ಅದು ಪತ್ತೆಯಾಗುವುದರಿಂದ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.
ಆದರೆ, ಚಿಕಿತ್ಸೆ ಒದಗಿಸದೆ ಊತವನ್ನು ಹಾಗೆಯೇ ಬಿಟ್ಟರೆ ಊದಿಕೊಂಡ ಪ್ರಾಸ್ಟ್ರೇಟ್ ಗ್ರಂಥಿಯು ಮೂತ್ರಕೋಶದ ಸ್ನಾಯುಗಳಿಗೆ ಹಾನಿ ಉಂಟು ಮಾಡಬಹುದು, ಪದೇಪದೇ ಸೋಂಕುಗಳಿಗೆ ಕಾರಣವಾಗಬಹುದು, ಮೂತ್ರಪಿಂಡಗಳಿಗೆ ಹಾನಿ ಉಂಟು ಮಾಡಬಹುದು ಹಾಗೂ ಕೆಲವು ರೋಗಿಗಳಲ್ಲಿ ಮೂತ್ರ ವಿಸರ್ಜನೆ ಸಂಪೂರ್ಣವಾಗಿ ನಿಂತು ಮೂತ್ರ ಕಟ್ಟಿಕೊಳ್ಳುವುದಕ್ಕೂ ಕಾರಣವಾಗಬಹುದು.
ಯುರಾಲಜಿಸ್ಟ್ ವಿಶ್ಲೇಷಣೆ ನಡೆಸಿದ ಬಳಿಕ ಪ್ರಾಸ್ಟ್ರೇಟ್ ಗ್ರಂಥಿಯ ಗುರಿನಿರ್ದೇಶಿತ ಕೆಲವು ತಪಾಸಣೆಗಳನ್ನು ನಡೆಸಬಹುದು. ಮೂತ್ರಪರೀಕ್ಷೆಯನ್ನು ಕೈಗೊಳ್ಳುವುದರಿಂದ ಮೂತ್ರಾಂತ ವ್ಯೂಹದಲ್ಲಿ ಸೋಂಕು ಉಂಟಾಗಿದೆಯೇ ಎಂದು ಪತ್ತೆ ಹಚ್ಚಬಹುದು. ರಕ್ತಪರೀಕ್ಷೆಗಳು ಮೂತ್ರಪಿಂಡ ಕಾರ್ಯಾಚರಣೆಗಳನ್ನು, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಪತ್ತೆ ಮಾಡುತ್ತದೆ. ಪ್ರಾಸ್ಟ್ರೇಟ್ ಸ್ಪೆಸಿಫಿಕ್ ಆ್ಯಂಟಿಜೆನ್ (ಪಿಎಸ್‌ಎ) ಎಂಬ ಪರೀಕ್ಷೆಯು ಪ್ರಾಸ್ಟ್ರೇಟ್ ಕ್ಯಾನ್ಸರನ್ನು ಪತ್ತೆ ಮಾಡಿಕೊಡುತ್ತದೆ. ರಕ್ತದಲ್ಲಿ ಪಿಎಸ್‌ಎ ಪ್ರಮಾಣ ಹೆಚ್ಚಿರುವುದು ಪ್ರಾಸ್ಟ್ರೇಟ್ ಕ್ಯಾನ್ಸರ್ ಇರುವುದಕ್ಕೆ ಪೂರ್ಣಪ್ರಮಾಣದ ಸಾಕ್ಷ್ಯ ಅಲ್ಲ. ಹೀಗಾಗಿ ಕ್ಯಾನ್ಸರ್ ಪತ್ತೆ ಮಾಡಲು ಇನ್ನಷ್ಟು ತಪಾಸಣೆಗಳನ್ನು ನಡೆಸಬೇಕಾಗುತ್ತದೆ. ಪ್ರಾಸ್ಟ್ರೇಟ್ ಗ್ರಂಥಿಯ ಗಾತ್ರ ಮತ್ತು ಮೂತ್ರಕೋಶದಲ್ಲಿ ಉಳಿಕೆಯಾಗಿರುವ ಮೂತ್ರದ ಪ್ರಮಾಣವನ್ನು ತಿಳಿಯಲು ಅಲ್ಟ್ರಾಸೌಂಡ್ ಸ್ಕ್ಯಾನ್ ಸಹಾಯ ಮಾಡುತ್ತದೆ.
ವ್ಯಕ್ತಿ ಎಷ್ಟು ಶಕ್ತಿಯುತವಾಗಿ ಮೂತ್ರವಿಸರ್ಜನೆ ಮಾಡುತ್ತಾನೆ ಎಂಬುದನ್ನು ತಿಳಿಯಲು ಮೂತ್ರಧಾರೆಯ ತಪಾಸಣೆ ನಡೆಸಲಾಗುತ್ತದೆ. ಸಾಮಾನ್ಯವಾಗಿ, ದೊಡ್ಡ ಗಾತ್ರದ ಪ್ರಾಸ್ಟ್ರೇಟ್ ಗ್ರಂಥಿಯು ಮೂತ್ರ ವಿಸರ್ಜನೆಗೆ ಹೆಚ್ಚು ಅಡಚಣೆಯನ್ನು ಒಡ್ಡುತ್ತದೆ ಆದರೆ, ಸಣ್ಣ ಗಾತ್ರದ ಪ್ರಾಸ್ಟ್ರೇಟ್ ಗ್ರಂಥಿಯೂ ತೀವ್ರ ಅಡಚಣೆಯನ್ನು ಒಡ್ಡುವುದುಂಟು. ಹೀಗಾಗಿ ಮೂತ್ರಧಾರೆಯ ತಪಾಸಣೆ ಉಪಯುಕ್ತವಾಗುತ್ತದೆ ಗಮನಾರ್ಹವಾದ ಅಡಚಣೆ ಇಲ್ಲವಾಗಿದ್ದಲ್ಲಿ, ಪ್ರಾಸ್ಟ್ರೇಟ್ ಲಕ್ಷಣಗಳನ್ನು ದೂರ ಮಾಡಲು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಹಾಯ ಮಾಡುತ್ತದೆ.
ಕಾಫಿ, ಚಹಾ ಮತ್ತು ಕೋಲಾದಂತಹ ಕೆಫೀನ್‌ಯುಕ್ತ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದು ಇದರಲ್ಲಿ ಸೇರಿದೆ. ರಾತ್ರಿ ಮದ್ಯಪಾನವನ್ನು ಕಡಿಮೆ ಮಾಡುವುದರಿಂದ ರಾತ್ರಿ ನಿದ್ರಾಭಂಗ ಉಂಟಾಗುವುದನ್ನು ತಡೆಯಬಹುದು. ರಾತ್ರಿ ಮೂತ್ರವಿಸರ್ಜನೆಗೆ ಏಳಬೇಕಾಗಿ ಬರುವುದನ್ನು ಕಡಿಮೆ ಮಾಡಲು ನಿರ್ದಿಷ್ಟವಾಗಿ ಸಂಜೆ ಮತ್ತು ರಾತ್ರಿ ದ್ರವಾಹಾರ ಸೇವನೆಯನ್ನು ಮಿತಗೊಳಿಸುವುದು ಅಗತ್ಯ. ಪ್ರಾಸ್ಟ್ರೇಟ್ ಗ್ರಂಥಿಯ ಊತದಿಂದ ಸಮಸ್ಯೆಗಳು ತೀವ್ರವಾಗಿರುವ ಅಥವಾ ಅಡಚಣೆ ಇರುವುದು ತಪಾಸಣೆಗಳಿಂದ ಖಚಿತವಾಗಿರುವ ರೋಗಿಗಳಿಗೆ ಪ್ರಾಸ್ಟ್ರೇಟ್ ಗ್ರಂಥಿಯನ್ನು ಸಡಿಲಿಸುವ ಔಷಧಿಗಳು ಮತ್ತು ಅಗತ್ಯವಾದರೆ ಅದರ ಗಾತ್ರವನ್ನು ಕುಗ್ಗಿಸುವ ಔಷಧಿಗಳನ್ನು ಶಿಫಾರಸು ಮಾಡಲಾಗುತ್ತದೆ.
ಮೂತ್ರಾಂಗದ ಕಾರ್ಯಾಚರಣೆ ಬಾಧಿತವಾಗಿರುವ ರೋಗಿಗಳಲ್ಲಿ ಅಥವಾ ಔಷಧಿಗಳಿಗೆ ಪ್ರತಿಸ್ಪಂದಿಸದ ರೋಗಿಗಳಲ್ಲಿ ಅಡಚಣೆ ಉಂಟು ಮಾಡುವ ಪ್ರಾಸ್ಟ್ರೇಟ್ ಗ್ರಂಥಿಯ ಭಾಗವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಾಗುತ್ತದೆ. ಸಾಮಾನ್ಯವಾಗಿ ನಡೆಸಲಾಗುವ ಶಸ್ತ್ರಚಿಕಿತ್ಸೆಯನ್ನು ಟಿಯುಆರ್‌ಪಿ (ಟ್ರಾನ್ಸ್‌ಯುರೆಥಾÅಲ್ ರಿಸೆಕ್ಷನ್ ಆಫ್ ದಿ ಪ್ರಾಸ್ಟ್ರೇಟ್ ಗ್ಲಾಂಡ್) ಎಂದು ಕರೆಯಲಾಗುತ್ತಿದ್ದು, ಇದು ಸಂಪೂರ್ಣವಾಗಿ ಅಂರ್ತದರ್ಶಕ ಶಸ್ತ್ರಕ್ರಿಯೆಯಾಗಿದೆ, ಇದರಲ್ಲಿ ದೇಹದ ಯಾವುದೇ ಭಾಗವನ್ನು ಕತ್ತರಿಸಿ ತೆರೆಯಬೇಕಾಗಿಲ್ಲ. ಇದೇ ಶಸ್ತ್ರಕ್ರಿಯೆಯನ್ನು ಲೇಸರ್ ಉಪಯೋಗಿಸಿಯೂ ನಡೆಸಬಹುದು.
ಸಾರಾಂಶವಾಗಿ ಹೇಳುವುದಾದರೆ, ಪ್ರಾಸ್ಟ್ರೇಟ್ ಗ್ರಂಥಿಯ ಸಮಸ್ಯೆಯು ವಯೋವೃದ್ಧರಾಗುತ್ತಿರುವ ಪುರುಷರಲ್ಲಿ ಕಾಣಿಸಿಕೊಳ್ಳುವುದು ಅತ್ಯಂತ ಸಾಮಾನ್ಯವಾಗಿದೆ. ಇದರಲ್ಲಿ ಮೂತ್ರಾಂಗ ಲಕ್ಷಣಗಳು ಪ್ರಧಾನವಾಗಿರುತ್ತವೆ ಮತ್ತು ಅವುಗಳನ್ನು ಅಲಕ್ಷಿಸಬಾರದು. ಬಹುತೇಕ ಪ್ರಕರಣಗಳಲ್ಲಿ ಊತವು ಸೌಮ್ಯರೂಪದ್ದಾಗಿರುತ್ತದೆ. ಆದರೆ, ಕ್ಯಾನ್ಸರ್ ಆಗಿರುವ ಸಾಧ್ಯತೆಯೂ ಇಲ್ಲದಿಲ್ಲ. ಈ ಲಕ್ಷಣಗಳನ್ನು ನಿರ್ಲಕ್ಷಿಸದೆ, ಯುರಾಲಜಿಸ್ಟ್ ಅವರ ಜತೆಗೆ ಸಮಾಲೋಚಿಸಿ, ತಪಾಸಣೆಗೊಳಪಡುವುದು ಅತ್ಯಂತ ಪ್ರಾಮುಖ್ಯ. ಜೀವನ ಶೈಲಿಯಲ್ಲಿ ಬದಲಾವಣೆಗಳು, ಔಷಧಿಗಳು ಮತ್ತು ಶಸ್ತ್ರಕ್ರಿಯೆ ಪ್ರಾಸ್ಟ್ರೇಟ್ ಗ್ರಂಥಿಯ ಸಮಸ್ಯೆಗಳಿಗೆ ಒಳಗಾದ ಪುರುಷರಿಗೆ ಇರುವ ಚಿಕಿತ್ಸೆಯ ಆಯ್ಕೆಗಳಾಗಿವೆ.
– ಡಾ| ಅಮೃತ್‌ರಾಜ್ ರಾವ್
ಸೀನಿಯರ್ ಕನ್ಸಲ್ಟೆಂಟ್ ಯುರಾಲಜಿಸ್ಟ್,
ಯುರೋ-ಓಂಕಾಲಜಿಸ್ಟ್ ಮತ್ತು ರೊಬೊಟಿಕ್ ಸರ್ಜನ್,
ಯುರಾಲಜಿ ವಿಭಾಗ,ಮಣಿಪಾಲ ಆಸ್ಪತ್ರೆ, ಬೆಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.