ತೀವ್ರ ತರಹದ ಮಾನಸಿಕ ಅನಾರೋಗ್ಯಗಳು ಮತ್ತು ಮನಃಶಾಸ್ತ್ರೀಯ ಪುನರ್ವಸತಿ ಯೋಜನೆ


Team Udayavani, May 23, 2022, 1:38 PM IST

20

ಪ್ರತೀ ವರ್ಷ ಮೇ 24ನ್ನು ವಿಶ್ವ ಸ್ಕಿಜೋಫ್ರೀನಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಸ್ಕಿಜೋಫ್ರೀನಿಯಾ ಒಂದು ಗಂಭೀರ ಮಾನಸಿಕ ಅನಾರೋಗ್ಯವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಾಗತಿಕವಾಗಿ 21 ದಶಲಕ್ಷಕ್ಕೂ ಅಧಿಕ ಮಂದಿಯನ್ನು ಬಾಧಿಸುತ್ತಿದೆ. ಈ ಅನಾರೋಗ್ಯದ ಬಗ್ಗೆ ಅರಿವು, ಮಾಹಿತಿಯನ್ನು ಹೆಚ್ಚಿಸುವುದು ಮತ್ತು ಅದರ ಬಗ್ಗೆ ಜನಸಮುದಾಯದಲ್ಲಿ ಇರುವ ಮೂಢನಂಬಿಕೆಗಳು ಮತ್ತು ತಪ್ಪು ತಿಳಿವಳಿಕೆಗಳನ್ನು ದೂರ ಮಾಡುವುದು ಈ ದಿನಾಚರಣೆಯ ಉದ್ದೇಶವಾಗಿದೆ.

ಗೊಂದಲಮಯವಾದ ಆಲೋಚನೆಗಳು, ಭ್ರಮೆಗಳು ಮತ್ತು ಅವಾಸ್ತವಿಕ ಊಹೆಗಳು ಸ್ಕಿಜೋಫ್ರೀನಿಯಾ ಸಾಮಾನ್ಯ ಲಕ್ಷಣಗಳು. ಸ್ಕಿಜೋಫ್ರೀನಿಯಾ ಎಂಬುದು ಒಂದು ಮನಃಶಾಸ್ತ್ರೀಯ ಅನಾರೋಗ್ಯವಾಗಿದ್ದು, ಮಿದುಳಿನ ಕೆಲವು ಭಾಗಗಳಲ್ಲಿ ಕೆಲವು ರಾಸಾಯನಿಕಗಳು ಸಮತೋಲನ ತಪ್ಪುವುದರಿಂದ ಇದು ಉಂಟಾಗುತ್ತದೆ. ಸ್ಕಿಜೋಫ್ರೀನಿಯಾ ಹದಿಹರಯದ ಕೊನೆಯಲ್ಲಿ ಅಥವಾ ಪ್ರೌಢ ವಯಸ್ಸಿನ ಆರಂಭಿಕ ಹಂತದಲ್ಲಿ ಅಂದರೆ 15ರಿಂದ 28 ವರ್ಷ ವಯಸ್ಸಿನ ನಡುವೆ ಆರಂಭವಾಗುತ್ತದೆ.

ಸ್ಕಿಜೋಫ್ರೀನಿಯಾದಿಂದ ವ್ಯಕ್ತಿಯ ಬದುಕಿ ನಲ್ಲಿ ಗಮನಾರ್ಹ ತೊಂದರೆ ಉಂಟಾಗುತ್ತದೆ; ಇದು ವೈಯಕ್ತಿಕ, ಕುಟುಂಬ, ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಕಾರ್ಯನಿರ್ವಹಣೆ – ಹೀಗೆ ಬದುಕಿನ ಎಲ್ಲ ಆಯಾಮಗಳನ್ನು ಬಾಧಿಸುತ್ತದೆ. ಸ್ಕಿಜೋಫ್ರೀನಿಯಾ ಹೊಂದಿರುವ ವ್ಯಕ್ತಿಗಳ ವಿಚಾರದಲ್ಲಿ ಮೂಢನಂಬಿಕೆಗಳು, ಪೂರ್ವಾಗ್ರಹಗಳು, ತಾರತಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಸಾಮಾನ್ಯವಾಗಿದೆ.

ಜಗತ್ತಿನಲ್ಲಿ ಮನಃಶಾಸ್ತ್ರೀಯ ತೊಂದರೆ ಹೊಂದಿರುವವರ ಪೈಕಿ ಮೂರನೇ ಎರಡರಷ್ಟು ಮಂದಿಗೆ ಪರಿಣಿತ ಮನೋವೈದ್ಯರಿಂದ ಆರೈಕೆ ದೊರಕುವುದಿಲ್ಲ. ಸ್ಕಿಜೋಫ್ರೀನಿಯಾ ಬಾಧಿತರಿಗಾಗಿ ಪರಿಣಾಮಕಾರಿ ಆರೈಕೆ ವ್ಯವಸ್ಥೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ ಮತ್ತು ಸ್ಕಿಜೋಫ್ರೀನಿಯಾ ಹೊಂದಿರುವ ಪ್ರತೀ ಮೂವರಲ್ಲಿ ಕನಿಷ್ಠ ಒಬ್ಬರು ಪೂರ್ಣವಾಗಿ ಚೇತರಿಸಿಕೊಳ್ಳಲು ಶಕ್ತರಾಗುತ್ತಾರೆ. ಸ್ಕಿಜೋಫ್ರೀನಿಯಾ ಅಥವಾ ತೀವ್ರ ತರಹದ ಮಾನಸಿಕ ಅನಾರೋಗ್ಯ ಹೊಂದಿರುವವರಿಗೆ ಮನಃಶಾಸ್ತ್ರೀಯ ಪುನರ್ವಸತಿ ಸೇವೆಯು ಅತ್ಯುತ್ತಮ ಚಿಕಿತ್ಸೆಯ ಆಯ್ಕೆಯಾಗಿ ಶಿಫಾರಸುಗೊಳ್ಳುತ್ತದೆ.

ಪುನರ್ವಸತಿಯು ಏಕೆ ಅಗತ್ಯ? ಬೈಪೋಲಾರ್‌ ಡಿಸಾರ್ಡರ್‌ ಮತ್ತು ಸ್ಕಿಜೋಫ್ರೀನಿಯಾದಂತಹ ಗಂಭೀರ ಮತ್ತು ದೀರ್ಘ‌ಕಾಲಿಕ ಮಾನಸಿಕ ಅನಾರೋಗ್ಯ ಹೊಂದಿರುವವರು ತಮ್ಮ ಅನಾರೋಗ್ಯದಿಂದಾಗಿ ಮಾನಸಿಕವಾಗಿ ವೈಕಲ್ಯ ಹೊಂದಿರಬಹುದು ಮತ್ತು ಇಂಥವರಿಗೆ ಮೂಲ ಕೌಶಲಗಳನ್ನು ಮರಳಿ ಗಳಿಸುವುದಕ್ಕಾಗಿ ಪುನರ್ವಸತಿಯು ಅಗತ್ಯವಾಗಿರುತ್ತದೆ. ಸಮಾಜದ ಪ್ರಧಾನ ವಾಹಿನಿಯ ಜತೆಗೆ ಒಗ್ಗೂಡಲು ಅಗತ್ಯವಾದ ಸಾಮಾಜಿಕ ಕೌಶಲಗಳನ್ನು ವ್ಯಕ್ತಿಯು ಮರಳಿ ಗಳಿಸಿಕೊಳ್ಳುವುದಕ್ಕೆ ಸಹಾಯ ಮಾಡುವುದು ಪುನರ್ವಸತಿ ಪ್ರಕ್ರಿಯೆಯ ಗುರಿಯಾಗಿರುತ್ತದೆ. ಇದು ಮನೆ ಮತ್ತು ಕೆಲಸದ ಸ್ಥಳದಲ್ಲಿ ವ್ಯಕ್ತಿಯು ಅರ್ಥಪೂರ್ಣ ಪಾತ್ರವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಪುನರ್ವಸತಿಯು ವ್ಯಕ್ತಿಗೆ ಅವಕಾಶಗಳನ್ನು ಒದಗಿಸಿಕೊಡುತ್ತದೆ, ಕಳಂಕಗಳನ್ನು ಮತ್ತು ತಾರತಮ್ಯಗಳನ್ನು ತಡೆಯುತ್ತದೆ.

ಬಹುತೇಕ ದೀರ್ಘ‌ಕಾಲಿಕ ಮಾನಸಿಕ: ಅನಾರೋಗ್ಯಗಳು ವ್ಯಕ್ತಿಯ 18ರಿಂದ 25 ವರ್ಷ ವಯಸ್ಸಿನ ನಡುವೆ ಆರಂಭವಾಗಿರುತ್ತವೆ. ಇದು ಜನರು ತಮ್ಮ ಬದುಕಿನಲ್ಲಿ ದೃಢ ಗುರಿಗಳನ್ನು ಹಾಕಿಕೊಂಡು ಅವುಗಳನ್ನು ಸಾಧಿಸುವತ್ತ ಕೆಲಸ ಮಾಡುವ ವಯಸ್ಸು. ವ್ಯಕ್ತಿಯೊಬ್ಬನಿಗೆ ತೀವ್ರ ತರಹದ ಮಾನಸಿಕ ಅನಾರೋಗ್ಯ ಇರುವುದು ತಪಾಸಣೆಯ ಮೂಲಕ ಪತ್ತೆಯಾದಾಗ ಅವರು ಕೆಲಸ ಅಥವಾ ಅಧ್ಯಯನ ಮಾಡಲು ಸಾಧ್ಯವಾಗದೆ ಇದ್ದು ಅನೇಕ ತಿಂಗಳುಗಳು ಅಥವಾ ವರ್ಷಗಳು ಕಳೆದಿರುತ್ತವೆ. ಚಿಕಿತ್ಸೆಯ ಬಳಿಕವೂ ಅವರಿಗೆ ಅವಕಾಶಗಳು ದೊರಕದೆ ಇದ್ದಾಗ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ. ಕೆಲವೊಮ್ಮೆ ವ್ಯಕ್ತಿಗಳ ಗೆಳೆಯ -ಗೆಳತಿಯರು ಅಥವಾ ಕುಟುಂಬಗಳು ಅತೀ ಟೀಕಾಕಾರರಾಗಿರಬಹುದು ಅಥವಾ ಅತೀ ರಕ್ಷಣಾತ್ಮಕವಾಗಿರಬಹುದು. ವ್ಯಕ್ತಿಗಳಿಗೆ ಅವರ ಅನಾರೋಗ್ಯದಿಂದಾಗಿ ಉಂಟಾದ ವೈಕಲ್ಯಕ್ಕೆ ಇದು ಕೊಡುಗೆಯನ್ನು ನೀಡುತ್ತದೆ.

ಪುನರ್ವಸತಿ ಪ್ರಕ್ರಿಯೆ: ಅನಾರೋಗ್ಯಕ್ಕೀಡಾಗಿ ಚೇತರಿಸಿಕೊಂಡ ವ್ಯಕ್ತಿ ಮತ್ತು ಅವರ ಕುಟುಂಬದ ಜತೆಗೆ ಪುನರ್ವಸತಿ ವೃತ್ತಿಪರರು ಸಮಾಲೋಚನೆ ನಡೆಸುವುದರ ಮೂಲಕ ಪುನರ್ವಸತಿ ಪ್ರಕ್ರಿಯೆಯು ಆರಂಭವಾಗುತ್ತದೆ. ಈ ಸಮಾಲೋಚನೆಯ ಮೂಲಕ ರೋಗಿಯ ಸಾಮರ್ಥ್ಯಗಳು, ಸಾಧ್ಯತೆಗಳು ಮತ್ತು ಆಸಕ್ತಿಗಳನ್ನು ತಿಳಿದುಕೊಳ್ಳಲಾಗುತ್ತದೆ. ರೋಗಿಯ ಸ್ವಂತ ಆದ್ಯತೆಗಳ ಆಧಾರದಲ್ಲಿ ಅವರಿರುವ ಸನ್ನಿವೇಶಕ್ಕೆ ಹೊಂದುವ ನಿರೀಕ್ಷೆಗಳ ಅನುಸಾರ ರೋಗಿಗೆ ಅಗತ್ಯವಾದ ಕೌಶಲ ತರಬೇತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆಯನ್ನು ಯೋಜಿಸಲಾಗುತ್ತದೆ.

ಮಧ್ಯಸ್ಥಿಕೆಯ ಸಂದರ್ಭದಲ್ಲಿ ಕೆಲವು ರೋಗಿಗಳಿಗೆ ತಮ್ಮ ಮೂಲ ಕೌಶಲಗಳನ್ನು ಮರಳಿ ಗಳಿಸಿಕೊಂಡು ತಮ್ಮ ಕಾರ್ಯಚಟುವಟಿಕೆಗಳಿಗೆ ಮರಳಲು ಸಾಧ್ಯವಾಗುತ್ತದೆ. ರೋಗಿಗೆ ಗಮನಾರ್ಹ ಸವಾಲುಗಳಿದ್ದಲ್ಲಿ, ಅವರ ಹೊಸ ಗುರಿಗಳು, ಆದ್ಯತೆಗಳು ಮತ್ತು ಮೌಲ್ಯಗಳನ್ನು ಹೊಂದಾಣಿಸಿಕೊಳ್ಳಲು ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳುವಂತೆ ತರಬೇತಿಯನ್ನು ಒದಗಿಸಲಾಗುತ್ತದೆ. ಹೊಸ ಕೌಶಲವೊಂದನ್ನು ಗಳಿಸಿಕೊಳ್ಳುವಲ್ಲಿ, ಹೊಸ ಆಸಕ್ತಿಯನ್ನು ಪ್ರದರ್ಶಿಸುವಲ್ಲಿ ರೋಗಿ ಶಕ್ತನಾದಾಗ ಅದು ಈ ಪ್ರಕ್ರಿಯೆಯಲ್ಲಿ ಆಶಾದಾಯಕ ಬೆಳವಣಿಗೆ ಎನ್ನಿಸಿಕೊಳ್ಳುತ್ತದೆ.

ಗ್ರಹಣಾತ್ಮಕ ವರ್ತನಾ ಚಿಕಿತ್ಸೆ, ಸಾಮಾಜಿಕ ಕೌಶಲಗಳ ತರಬೇತಿ, ಗ್ರಹಣ ತರಬೇತಿ, ವೊಕೇಶನಲ್‌ ತರಬೇತಿ, ಮನೆ ನಿರ್ವಹಣೆ ಕೌಶಲಗಳ ತರಬೇತಿ ಇತ್ಯಾದಿ ವ್ಯಕ್ತಿಗತ ಮಧ್ಯಸ್ಥಿಕೆ ಇತ್ಯಾದಿಗಳು ಮನಃಶಾಸ್ತ್ರೀಯ ಪುನರ್ವಸತಿಯ ಸಂದರ್ಭದಲ್ಲಿ ಒದಗಿಸಲಾಗುವ ಸಾಮಾನ್ಯ ಕಾರ್ಯಯೋಜನೆಗಳು. ಪುನರ್ವಸತಿ ಚಿಕಿತ್ಸೆ ಪ್ರಕ್ರಿಯೆಯ ಸಂದರ್ಭದಲ್ಲಿ ಬಹುತೇಕ ಪುನರ್ವಸತಿ ಕಾರ್ಯಯೋಜನೆಗಳು ರೋಗಿಯ ಕುಟುಂಬ ಸದಸ್ಯರನ್ನೂ ಒಳಗೊಂಡಿರುತ್ತವೆ.

ಪುನರ್ವಸತಿ ಪ್ರಕ್ರಿಯೆಯಲ್ಲಿ ಕುಟುಂಬದ ಒಳಗೊಳ್ಳುವಿಕೆ ಹೇಗಿರಬೇಕು, ಎಷ್ಟಿರಬೇಕು? ವ್ಯಕ್ತಿಯೊಬ್ಬನಿಗೆ ಮಾನಸಿಕ ಅನಾರೋಗ್ಯ ಇರುವುದು ಪತ್ತೆಯಾದಾಗ ಅವರ ಕುಟುಂಬ ಅಥವಾ ಆರೈಕೆದಾರರು ಕೂಡ ಈ ರೋಗಪತ್ತೆಯ ವಿಚಾರಕ್ಕೆ ಹೊಂದಿಕೊಳ್ಳುವುದು ಅಗತ್ಯ. ಇದರ ಜತೆಗೆ ಈ ಹೊಂದಾಣಿಕೆಯನ್ನು ಕ್ಲಿಷ್ಟಗೊಳಿಸುವ ಇತರ ಅಂಶಗಳು ಕೂಡ ಇರುತ್ತವೆ: ರೋಗಿಯ ಬಗ್ಗೆ, ಅವರಿಂದ ಏನು ಸಾಧ್ಯ ಎಂಬ ಬಗ್ಗೆ, ಕುಟುಂಬದಲ್ಲಿ ಅವರ ಪಾತ್ರವೇನು ಎಂಬ ಬಗ್ಗೆ ಬದಲಾದ ದೃಷ್ಟಿಕೋನ. ರೋಗಿಯ ರೋಗ ಪತ್ತೆಯಾದ ವಿಚಾರದ ಬಗ್ಗೆ ಬದುಕುವುದಕ್ಕೆ, ಹೊಂದಿಕೊಳ್ಳುವುದಕ್ಕೆ ಕುಟುಂಬ ಮತ್ತು ಆರೈಕೆದಾರರಿಗೆ ಕೂಡ ಹೆಚ್ಚುವರಿ ಬೆಂಬಲ, ಸಹಾಯದ ಅಗತ್ಯವಿರುತ್ತದೆ.

ರೋಗಪತ್ತೆಯನ್ನು ಅರಗಿಸಿಕೊಳ್ಳುವುದಕ್ಕೆ, ಬದಲಾದ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದಕ್ಕೆ ಮತ್ತು ರೋಗಿಯ ಕುರಿತಾದ ನಿರೀಕ್ಷೆಗಳು ಬದಲಾಗಿರುವ ಹೊಸ ಸನ್ನಿವೇಶಕ್ಕೆ ಒಗ್ಗಿಕೊಳ್ಳಲು ಪುನರ್ವಸತಿ ಪ್ರಕ್ರಿಯೆಯು ಸಹಾಯ ಮಾಡುತ್ತದೆ. ವ್ಯಕ್ತಿಯ ಸಾಮರ್ಥ್ಯಗಳನ್ನು ಅರ್ಥ ಮಾಡಿಕೊಂಡು ಮನೆಯಲ್ಲಿ ಅಥವಾ ಸಮಾಜದಲ್ಲಿ ಅರ್ಥಪೂರ್ಣ ಕೊಡುಗೆಗಳನ್ನು ನೀಡುವುದಕ್ಕೆ ಅಗತ್ಯವಾದ ಅವಕಾಶಗಳನ್ನು ಸೃಷ್ಟಿಸಲು ಕೂಡ ಪುನರ್ವಸತಿ ಪ್ರಕ್ರಿಯೆಯು ಸಹಾಯ ಮಾಡುತ್ತದೆ.

ಪುನರ್ವಸತಿ ಪ್ರಕ್ರಿಯೆಯಲ್ಲಿ ಕುಟುಂಬದ ಒಳಗೊಳ್ಳುವಿಕೆಯು ಅತ್ಯಂತ ಮುಖ್ಯವಾದ ಭಾಗ. ಕುಟುಂಬ ಸದಸ್ಯರ ಸಕ್ರಿಯ ಮತ್ತು ಧನಾತ್ಮಕವಾದ ಬೆಂಬಲವು ಪುನರ್ವಸತಿ ಪ್ರಕ್ರಿಯೆಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ ಎಂಬುದಾಗಿ ಮನಃಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಕುಟುಂಬ ಸದಸ್ಯರು ಮಾನಸಿಕ ಅನಾರೋಗ್ಯಕ್ಕೆ ಈಡಾದ ತಮ್ಮ ಆಪ್ತ ಸದಸ್ಯನಿಗೆ ನೆರವಾಗುವ ವಿಚಾರದಲ್ಲಿ ಗಮನಾರ್ಹ ಸಮಯ ಮತ್ತು ಶ್ರಮವನ್ನು ವಿನಿಯೋಗಿಸಿದಲ್ಲಿ ಅನಾರೋಗ್ಯಕ್ಕೀಡಾಗಿರುವ ವ್ಯಕ್ತಿ ಹೊಸ ಕೌಶಲಗಳನ್ನು ಗಳಿಸಿಕೊಳ್ಳುವ ಅಥವಾ ಹೊಸ ಗುರಿಗಳನ್ನು ಹಾಕಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಇದರಿಂದ ಕುಟುಂಬಕ್ಕೂ ಪ್ರಯೋಜನಗಳಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಸ್ಕಿಜೋಫ್ರೀನಿಯಾದಿಂದ ಬಳಲುತ್ತಿರುವವರಿಗೆ ಪರಿಣಾಮಕಾರಿ ಆರೈಕೆಯ ಹಲವು ವಿಧಾನಗಳಿವೆ. ಈ ಪೈಕಿ ಮನಃಶಾಸ್ತ್ರೀಯ ಪುನರ್ವಸತಿ ಯೋಜನೆಯು ಸಮಗ್ರ ಚಿಕಿತ್ಸಾ ವಿಧಾನ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಇದು ವ್ಯಕ್ತಿಯ ಅಗತ್ಯಗಳನ್ನು ಆಧರಿಸಿದ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದಲ್ಲದೆ, ಆರೈಕೆದಾರರ ಹೊರೆಯನ್ನು ಕಡಿಮೆ ಮಾಡುತ್ತದೆ; ಜತೆಗೆ ಸ್ಕಿಜೋಫ್ರೀನಿಯಾ ಹೊಂದಿರುವವರು ಸಮಾಜದ ಜತೆಗೆ ವಿಲೀನಗೊಳ್ಳಲು ಸಹಾಯ ಮಾಡುತ್ತದೆ.

ಮನೋ-ಸಾಮಾಜಿಕ ಪುನರ್ವಸತಿ ಎಂದರೇನು? ಸ್ಕಿಜೋಫ್ರೀನಿಯಾ ಅಥವಾ ಬೈಪೋಲಾರ್‌ ಅಫೆಕ್ಟಿವ್‌ ಡಿಸಾರ್ಡರ್‌ನಂತಹ ತೀವ್ರತರಹದ ಮಾನಸಿಕ ಅನಾರೋಗ್ಯಗಳಿಗೆ ಚಿಕಿತ್ಸೆಯು ಸಾಮಾನ್ಯವಾಗಿ ಎರಡು ಆಯಾಮಗಳಲ್ಲಿರುತ್ತದೆ: ಒಂದನೆಯದು ಔಷಧ ಚಿಕಿತ್ಸೆಯಾದರೆ ಇನ್ನೊಂದು ಮನಃಶಾಸ್ತ್ರೀಯ ಪುನರ್ವಸತಿ. ಔಷಧ ಚಿಕಿತ್ಸೆಯು ರೋಗಿಯಲ್ಲಿ ಕಂಡುಬರುವ ರೋಗಲಕ್ಷಣಗಳನ್ನು ಕಡಿಮೆ ಮಾಡುವತ್ತ ಗಮನ ಕೇಂದ್ರೀಕರಿಸುತ್ತದೆ. ದೈಹಿಕ ಅನಾರೋಗ್ಯಗಳಿಗೆ ಔಷಧ ಮತ್ತು ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಪರಿಹಾರ ಸಿಗಬಲ್ಲುದಾದರೆ ಮಾನಸಿಕ ಅನಾರೋಗ್ಯಗಳು ಹಾಗಲ್ಲ. ಇಲ್ಲಿ ಔಷಧ ಚಿಕಿತ್ಸೆಯ ಜತೆಗೆ ಇತರ ಸ್ವರೂಪದ ಚಿಕಿತ್ಸೆಗಳ ಅಗತ್ಯವಿರುತ್ತದೆ. ರೋಗಿಗೆ ಯಾವ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತದೆ ಎನ್ನುವುದು ಅವರಲ್ಲಿ ಪತ್ತೆಯಾಗಿರುವ ಅನಾರೋಗ್ಯ, ಅದರ ತೀವ್ರತೆ ಹಾಗೂ ಅವರ ದೈಹಿಕ ಮತ್ತು ಭಾವನಾತ್ಮಕ ಸ್ಥಿತಿಗತಿಯನ್ನು ಆಧರಿಸಿರುತ್ತದೆ.

ವ್ಯಕ್ತಿಯೊಬ್ಬನಿಗೆ ಇವುಗಳಲ್ಲಿ ಈ ಕೆಲವು ವಿಧಗಳ ಚಿಕಿತ್ಸೆಯನ್ನು ಸಂಯೋಜಿತವಾಗಿ ನೀಡಬೇಕಾಗಿರುತ್ತದೆ: ಔಷಧ, ಚಿಕಿತ್ಸೆ, ಆಪ್ತಸಮಾಲೋಚನೆ, ಆಸ್ಪತ್ರೆ ದಾಖಲಾತಿ, ಮಿದುಳನ್ನು ಪ್ರಚೋದಿಸುವ ಚಿಕಿತ್ಸೆಗಳು ಮತ್ತು ಮನಃಶಾಸ್ತ್ರೀಯ ಪುನರ್ವಸತಿ. ಮನಃಶಾಸ್ತ್ರೀಯ ಪುನರ್ವಸತಿಯು ವ್ಯಕ್ತಿಗೆ ಕಾರ್ಯಚಟುವಟಿಕೆಯ ಗರಿಷ್ಠ ಮಟ್ಟಕ್ಕೆ ಮರಳಲು ಮತ್ತು ಜೀವನದ ಗುರಿಗಳನ್ನು ಪೂರೈಸಿಕೊಳ್ಳಲು ಅನುವು ಮಾಡಿಕೊಡುವ ಚಿಕಿತ್ಸೆಯ ಆಯಾಮವಾಗಿದೆ. ಇದನ್ನು ಔಷಧ, ಮನೋವೈಜ್ಞಾನಿಕ ಮತ್ತು ಸಾಮಾಜಿಕ ಪೂರಕಗಳನ್ನು ಒದಗಿಸುವ ಮೂಲಕ ಸಾಧಿಸಲಾಗುತ್ತದೆ. ಮಾನಸಿಕ ಅನಾರೋಗ್ಯಕ್ಕೆ ಒಳಗಾದ ಎಲ್ಲರಿಗೂ ಪುನರ್ವಸತಿ ಬೇಕಾಗುವುದಿಲ್ಲ. ಅನೇಕ ವ್ಯಕ್ತಿಗಳಿಗೆ ಔಷಧ ಅಥವಾ ಔಷಧ ಮತ್ತು ಚಿಕಿತ್ಸೆಯ ಸಂಯೋಜನೆಯಿಂದ ಕಾರ್ಯಚಟುವಟಿಕೆಯುಕ್ತ ಬದುಕಿಗೆ ಮರಳಲು ಸಾಧ್ಯವಾಗುತ್ತದೆ. ಇತರ ಕೆಲವರಿಗೆ ಪುನರ್ವಸತಿಯು ಚಿಕಿತ್ಸೆಯ ಆವರ್ತನದಲ್ಲಿ ಅಂತಿಮ ಅತ್ಯಗತ್ಯ ಭಾಗವಾಗಿರುತ್ತದೆ.

 

ಪುನರ್ವಸತಿ ಸೇವೆಗಳನ್ನು ಯಾರು ಪಡೆಯಬಹುದು?

 ಚಿಕಿತ್ಸೆಯ ಬಳಿಕ ಉತ್ತಮ ಮಾನಸಿಕ ಆರೋಗ್ಯ ಪಡೆದಿರುವವರು, ಆದರೆ ಅನಾರೋಗ್ಯವು ಅವರ ಕಾರ್ಯಚಟುವಟಿಕೆಯ ಮೇಲೆ ಸ್ವಲ್ಪ ಪರಿಣಾಮವನ್ನು ಬೀರಿರುತ್ತದೆ – ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ.

 ವ್ಯಕ್ತಿಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ ಸನ್ನಿವೇಶ ಗಳಿಂದಾಗಿ ಮತ್ತು / ಅಥವಾ ಅವರು ಎದುರಿಸುವ ಕಳಂಕಗಳಿಂದಾಗಿ ಹತಾಶರಾಗಿ ರುತ್ತಾರೆ ಅಥವಾ ಕೈಚೆಲ್ಲಿರುತ್ತಾರೆ.

 ಕಾರ್ಯಚಟುವಟಿಕೆಯಿಂದಿರುವ ವ್ಯಕ್ತಿಗಳು. ಆದರೆ ಪರಿಸರದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯದೆ ಇರುವವರು.

 ಮಾನಸಿಕ ಅನಾರೋಗ್ಯದಿಂದಾಗಿ ಅಸಂಪೂರ್ಣ ಕೌಶಲಗಳನ್ನು ಹೊಂದಿರುವವರು.

ಪುನರ್ವಸತಿ ಪ್ರಕ್ರಿಯೆಯು ಈ ಕೆಳಗಿನ ಅಂಶಗಳತ್ತ ಗಮನ ಕೇಂದ್ರೀಕರಿಸುತ್ತದೆ:

 ವ್ಯಕ್ತಿಯ ಕಾರ್ಯಸಾಮರ್ಥ್ಯಗಳೇನು ಎಂಬುದರ ವಿಶ್ಲೇಷಣೆ (ಅವರ ಕೌಶಲಗಳು, ಬಲಾಬಲಗಳು ಮತ್ತು ಸಾಮರ್ಥ್ಯಗಳು)

 ಅನಾರೋಗ್ಯದಿಂದಾಗಿ ಉಂಟಾಗಿರುವ ಮಿತಿಗಳನ್ನು ಸ್ವೀಕರಿಸಿಕೊಳ್ಳುವುದು

 ಈ ಅಂಶಗಳನ್ನು ಆಳವಾಗಿ ಅರ್ಥ ಮಾಡಿಕೊಂಡ ಬಳಿಕ ತರಬೇತಾದ ನುರಿತ ವೃತ್ತಿಪರ ತಜ್ಞರು ಕಾರ್ಯಚಟುವಟಿಕೆ ಯುಕ್ತ ಬದುಕಿಗೆ ಮರಳಲು ವ್ಯಕ್ತಿಗೆ ಯಾವ ರೀತಿಯ ಸಹಾಯಗಳು ಅಗತ್ಯ ಎಂಬುದನ್ನು ತಿಳಿದುಕೊಳ್ಳುತ್ತಾರೆ.

– ಪ್ರವೀಣ್‌ ಜೈನ್‌

ಮನೋ ಸಾಮಾಜಿಕ ಕನ್ಸಲ್ಟಂಟ್‌,

ಸೈಕಿಯಾಟ್ರಿ ವಿಭಾಗ ಮತ್ತು ಹೊಂಬೆಳಕು

ಪುನರ್ವಸತಿ ಕೇಂದ್ರ, ಕೆಎಂಸಿ, ಮಣಿಪಾಲ

 

ಟಾಪ್ ನ್ಯೂಸ್

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

18-uv-fusion

UV Fusion: ನಿಸ್ವಾರ್ಥ ಜೀವ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.