ಕಲಿತು ಸಾಧಿಸಿದ ಸಂಭ್ರಮವೇ ಅತೀ ದೊಡ್ಡದು
Team Udayavani, Jul 15, 2020, 10:23 AM IST
ದ್ವಿತೀಯ ಪಿಯುಸಿಯಲ್ಲಿ ವಿಶೇಷ ಸಾಧನೆ ಮಾಡಿರುವ ಮಕ್ಕಳು ತಮ್ಮ ಶ್ರೇಯಸ್ಸು ಮತ್ತು ಭವಿಷ್ಯದ ಸುಂದರ ಕನಸುಗಳನ್ನು ಹಂಚಿಕೊಂಡಿದ್ದು ಈ ರೀತಿ. ಎಲ್ಲರ ಮಾತಿನಲ್ಲಿ ಮೂಡಿದ ಅಭಿಪ್ರಾಯವೆಂದರೆ ಕಲಿತು ಸಾಧಿಸುವ ಸಂಭ್ರಮ ಕೊಡುವ ಖುಷಿಯೇ ಬೇರೆ ಎಂಬುದು.
ಮನಸ್ಸಿಟ್ಟು ಓದುತ್ತಿದ್ದೆ : l ರಿತಿಕಾ
ಕಾರ್ಕಳ: ಇಲ್ಲಿನ ಜ್ಞಾನಸುಧಾ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ರಿತಿಕಾ ಕಾಮತ್ ವಾಣಿಜ್ಯ ವಿಭಾಗದಲ್ಲಿ 594 ಅಂಕ (4ನೇ ರ್‍ಯಾಂಕ್) ಗಳಿಸಿದ್ದಾರೆ. ಅವರು ಕಾರ್ಕಳ ನಗರದಲ್ಲಿ ದಿನಸಿ ಅಂಗಡಿ ಹೊಂದಿ ರುವ ಬಿ. ಸುಧೀರ್ ಕಾಮತ್ ಮತ್ತು ಗೃಹಿಣಿ ಗೀತಾ ಕಾಮತ್ ದಂಪತಿಯ ಪುತ್ರಿ.
ಕಾಲೇಜಿಗಿಂತ ಹೆಚ್ಚಾಗಿ ಮನೆಯಲ್ಲಿ ಓದುತ್ತಿದ್ದೆ. ದಿನಕ್ಕೆ 3ರಿಂದ 4 ಗಂಟೆ ಓದಿಗೆ ಮೀಸಲಿಡುತ್ತಿದ್ದೆ. ಯಾವ ಒತ್ತಡಕ್ಕೆ ಒಳಗಾಗದೆ ಗಮನವಿಟ್ಟು ಅಧ್ಯ ಯನ ಮಾಡುತ್ತಿದ್ದೆ. ಇದು ಹೆಚ್ಚು ಅಂಕಕ್ಕೆ ಸಾಧ್ಯವಾಯಿತು ಎಂದು ಅವರು ಸಂತಸ ಹಂಚಿಕೊಂಡರು. ಪಾಠದ ಜತೆ ಪಠ್ಯೇತರ ಚಟುವ ಟಿಕೆಯಲ್ಲಿ ಅವರು ಮುಂದಿದ್ದಾರೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 95.6 ಅಂಕ ಗಳಿಸಿದ್ದರು.
ನಿರಂತರ ಓದಿನ ಫಲ : ಸ್ವಾತಿ
ಕುಂದಾಪುರ: ಛಲ ಬಿಡದ ಸತತ ಓದು ಈ ಫಲಿತಾಂಶಕ್ಕೆ ಕಾರಣ. ಯಾವುದಾದರೊಂದು ರ್‍ಯಾಂಕ್ ಬರುವ ನಿರೀಕ್ಷೆ ಇತ್ತು. 594 ಅಂಕ ಬರಬಹುದು ಎಂದು ಅಂದಾಜಿಸಿರಲಿಲ್ಲ. ಈಗ ಮನೆಮನತುಂಬ ಸಂಭ್ರಮ ಎನ್ನುತ್ತಾರೆ ಕುಂದಾಪುರದ ವೆಂಕಟರಮಣ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್ ಗಳಿಸಿರುವ ಸ್ವಾತಿ ಪೈ.
ಕುಂದಾಪುರದ ಫೆರ್ರಿ ರಸ್ತೆಯ ಶಿವಾನಂದ ಪೈ-ಶಿಲ್ಪಾ ಪೈ ಅವರ ಪುತ್ರಿ ಸ್ವಾತಿ ಪೈ ಅವರು ಸಿಎ ಆಗಬೇಕೆಂಬ ಹಂಬಲ ಹೊಂದಿದ್ದಾರೆ. ಹಾಗಾಗಿ ಪ್ರಾಕ್ಟಿಕಲ್‌ಗೆ ಹೆಚ್ಚು ಒತ್ತು ನೀಡುತ್ತಿದ್ದೆ, ಕಾಲೇಜಿನಲ್ಲಿ ಕಲಿಸಿದ್ದನ್ನು ಮತ್ತೆ ಮನೆಯಲ್ಲಿ ಓದುತ್ತಿದ್ದೆ, ನಿತ್ಯ ಓದು ನನ್ನ ಯಶಸ್ಸಿನ ಗುಟ್ಟು ಎನ್ನುತ್ತಾರೆ.
ಅಧ್ಯಯನದಿಂದ ರ್‍ಯಾಂಕ್ : ಮೇಧಾ
ಉಡುಪಿ: ನಿರಂತರ ಪರಿಶ್ರಮ ಹಾಗೂ ನಿಗದಿತ ಸಮಯದ ಅಧ್ಯಯನದಿಂದ ರ್‍ಯಾಂಕ್ ಪಡೆಯಲು ಸಾಧ್ಯವಾಯಿತು ಎಂದು ವಿಜ್ಞಾನ ವಿಭಾಗದಲ್ಲಿ 593 ಅಂಕ ಪಡೆದು ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಮೇಧಾ ಎನ್. ಭಟ್ ಸಂತಸ ವ್ಯಕ್ತಪಡಿಸಿದರು.
ಮಣಿಪಾಲ ಡಾಟ್ ನೆಟ್ ಸಿಇಒ ಮತ್ತು ಎಂಡಿ ಡಾ| ನರಸಿಂಹ ಭಟ್ ಹಾಗೂ ಶಶಿಕಲಾ ಭಟ್ ಅವರ ಪುತ್ರಿಯಾಗಿರುವ ಮೇಧಾ ಇಂಗ್ಲಿಷ್ ಸಾಹಿತ್ಯದಲ್ಲಿ ಹೆಚ್ಚಿನ ಒಲವು ಹೊಂದಿದ್ದು, ಈಗಾಗಲೇ ಆಂಗ್ಲ ಭಾಷಾ ಕವಿತೆ ಪುಸ್ತಕವನ್ನು ಹೊರ ತಂದಿದ್ದಾರೆ.ಇಂಗ್ಲಿಷ್ ಸಾಹಿತ್ಯ ಅಥವಾ ಎಂಜಿಯರಿಂಗ್ ವಿಭಾಗದಲ್ಲಿ ಮುಂದಿನ ಉನ್ನತ ಶಿಕ್ಷಣ ಪಡೆಯಲಿದ್ದಾರೆ.
ಪರಿಶ್ರಮದಿಂದ ಸಾಧನೆ : ಗ್ರೀಷ್ಮಾ
ಉಡುಪಿ: ಜಗತ್ತಿನಲ್ಲಿ ಯಾವುದೂ ಕಷ್ಟವಲ್ಲ. ನಿರಂತರ ಪರಿಶ್ರಮ, ಕಠಿನ ಅಭ್ಯಾಸದ ಮೂಲಕ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯ ಎಂದು ದ್ವಿತೀ ಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 593 ಅಂಕ ಪಡೆದು ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯೋದಯ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಗ್ರೀಷ್ಮಾ ಕೆ. ಸಂತಸ ಹಂಚಿಕೊಂಡರು.
ಇವರು ಅಂಬಲಪಾಡಿ ಕಿದಿಯೂರು ದಿ| ಕರು ಣಾಕರ್ ಹಾಗೂ ಚಂದ್ರಿಕಾ ದಂಪತಿ ಪುತ್ರಿ.
ಮಗಳು ನಿರಂತರವಾಗಿ ಓದುತ್ತಿದ್ದಳು. ಕಾಲೇಜಿ ನಲ್ಲಿ ದೊರೆತ ಸಹಕಾರ ಮತ್ತು ಆಕೆಗೆ ಓದಿನ ಮೇಲಿನ ಶ್ರದ್ಧೆಯಿಂದ ರ್‍ಯಾಂಕ್ ಗಳಿಸಿದ್ದಾಳೆ ಎಂದು ತಾಯಿ ಚಂದ್ರಿಕಾ ಹರ್ಷ ವ್ಯಕ್ತಪಡಿಸಿದರು.
ನಿರೀಕ್ಷಿತ ಫಲಿತಾಂಶ : ಪದ್ಮಿನಿ ಪುರಾಣಿಕ್
ಕೋಟ: ಕೋಟ ವಿವೇಕ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪದ್ಮಿನಿ ಪುರಾಣಿಕ್ 592 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 6ನೇ ಸ್ಥಾನಿಯಾಗಿ ಮೂಡಿಬಂದಿದ್ದಾರೆ.
ಕೋಟದ ನಿವಾಸಿ ಉದಯವಾಣಿ ದಿನಪತ್ರಿಕೆಯ ಪ್ರಸರಣ ವಿಭಾಗದ ವ್ಯವಸ್ಥಾಪಕ ಶ್ರೀಕಾಂತ್ ಪುರಾಣಿಕ್ ಹಾಗೂ ಮಧುರಾ ದಂಪತಿಯ ಪುತ್ರಿಯಾಗಿರುವ ಈಕೆ ಭವಿಷ್ಯದಲ್ಲಿ ಲೆಕ್ಕಪರಿಶೋಧಕಿಯಾಗುವ ಆಸೆ ಹೊಂದಿದ್ದಾರೆ. ನನಗೆ ಪರೀಕ್ಷೆ ಬಗ್ಗೆ ಯಾವುದೇ ಭಯ ಇರಲಿಲ್ಲ. ಮನೋರಂಜನೆ, ಕ್ರೀಡೆಯ ಜತೆ-ಜತೆಗೆ ಓದುತ್ತಿದ್ದೆ, ನಿದ್ದೆಗೆಟ್ಟು ಅಥವಾ ಬೆಳಗ್ಗೆ ಬೇಗ ಎದ್ದು ಓದುವ ಅಭ್ಯಾಸವಿರಲಿಲ್ಲ. ಆದರೆ ಕಾಲೇಜು ತರಗತಿ ಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದೆ ಎನ್ನುತ್ತಾರೆ.
ಕಲಿಕೆ ಹೊರೆಯಲ್ಲ : ಪದ್ಮಿಕಾ
ಉಡುಪಿ: ಕಲಿಕೆ ಹೊರೆ ಎನ್ನುವ ಭಾವನೆಯಿಂದ ಹೊರಬಂದು ಅಭ್ಯಾಸ ಮಾಡಿದಾಗ ಮಾತ್ರ ಉತ್ತಮ ಅಂಕ ಗಳಿಸಲು ಸಾಧ್ಯ ಎಂದು ವಿಜ್ಞಾನ ವಿಭಾಗದಲ್ಲಿ 592 ಅಂಕ ಪಡೆದು ರಾಜ್ಯ ಮಟ್ಟದಲ್ಲಿ 5ನೇ ರ್‍ಯಾಂಕ್ ಗಳಿಸಿರುವ ವಿದ್ಯೋದಯ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಪದ್ಮಿಕಾ ಸಂತಸ ಹಂಚಿಕೊಂಡರು.
ಆಡಳಿತದ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹದಿಂದ ನನಗೆ ರ್‍ಯಾಂಕ್ ಬಂದಿದೆ. ನೀಟ್‌ಗೆ ಹೆಚ್ಚಿನ ಗಮನ ಹರಿಸಿದ್ದೇನೆ. ಮುಂದೆ ನ್ಯೂರೋ ಸೈನ್ಸ್ ವಿಭಾಗದಲ್ಲಿ ಸಾಧನೆ ಮಾಡಬೇಕು ಎಂಬ ಹಂಬಲ ವಿದೆ. ಆಯಾ ದಿನದ ಪಾಠವನ್ನು ಅಂದೇ ಓದುತ್ತಿದ್ದೆ ಎಂದರು. ಇವರು ಬ್ರಹ್ಮಾವರ ತಾ| ನ ಸಾಲಿಕೇರಿಯ ಕುಶಲ್ ಶೆಟ್ಟಿ ಹಾಗೂ ನಿಶ್ಚಲಾ ಶೆಟ್ಟಿ ಅವರು ಪುತ್ರಿ.
ಆಸೆ ಪೂರೈಸುವೆ : ರಾಘವೇಂದ್ರ
ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮುಧೋಳ ತಾಲೂಕಿನ ಅಪ್ಪಣ್ಣ ಬಡಿಗೇರ್ ಮತ್ತು ಕಲಾವತಿ ಬಡಿಗೇರ್ ದಂಪತಿಯ ಪುತ್ರ ರಾಘವೇಂದ್ರ ಅವರು ವಿಜ್ಞಾನ ವಿಭಾಗದಲ್ಲಿ 600ರಲ್ಲಿ 591 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ರ್‍ಯಾಂಕ್ ಗಳಿಸಿದ್ದಾರೆ.
ರಾಘವೇಂದ್ರ ಪ್ರಸ್ತುತ ನೀಟ್ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಮೆಡಿಕಲ್ ಓದಬೇಕೆಂದು ಆಸೆ ಇದೆ. ತಂದೆಯವರು ಹಲವರ ಆರ್ಥಿಕ ಸಹಕಾರ ಪಡೆದು ಓದಿಸಿದ್ದಾರೆ. ಆದುದರಿಂದ ಅವರೆಲ್ಲರ ಆಸೆಯನ್ನು ಪೂರೈಸುವುದಕ್ಕಾಗಿ ಹೆಚ್ಚು ಶ್ರಮವಹಿಸಿ, ಓದಿ, ಅವರ ನಿರೀಕ್ಷೆಗೆ ತಕ್ಕುದಾದ ಶಿಕ್ಷಣ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಶಿಸ್ತು ಬದ್ಧ ಕಲಿಕೆ : ಜಾಗೃತಿ
ಉಡುಪಿ: ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಎಷ್ಟು ಓದುತ್ತಾರೆ ಎನ್ನುವುದಕ್ಕಿಂತ ಎಷ್ಟು ಗಮನವಿಟ್ಟು ಓದುತ್ತಾರೆ ಎನ್ನುವುದು ಮುಖ್ಯ. ಶಿಸ್ತು ಬದ್ಧ ಕಲಿಕೆಯಿಂದ ಉತ್ತಮ ಅಂಕ ಗಳಿಸಲು ಸಾಧ್ಯ ಎಂದು ಎಂದು ವಿಜ್ಞಾನ ಭಾಗದಲ್ಲಿ 591 ಅಂಕ ಪಡೆದು ರಾಜ್ಯ ಮಟ್ಟದಲ್ಲಿ 6ನೇ ರ್‍ಯಾಂಕ್ ಗಳಿಸಿರುವ ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಜಾಗೃತಿ ಉದಯವಾಣಿಯೊಂದಿಗೆ ಸಂತಸ ಹಂಚಿಕೊಂಡರು.
ನೀಟ್‌ಗೆ ಅಗತ್ಯವಿರುವ ಸಿದ್ಧತೆ ಮಾಡಿಕೊಂಡಿದ್ದೇನೆ. ಮುಂದೆ ಮೆಡಿಕಲ್‌ನಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವ ಆಸೆ ಇದೆ ಎಂದರು. ಈಕೆ ಸಕಲೇಶಪುರ ನಿವಾಸಿ ಕೆ.ಎಂ. ಜಗದೀಶ್ ಹಾಗೂ ಕೆ.ಜೆ. ಮೀನಾಕ್ಷಿ ಅವರ ಪುತ್ರಿ.
ಎಂಜಿನಿಯರ್ ಆಗುವ ಕನಸು : ಶ್ರೀಶಕೃಷ್ಣ
ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿ, ಕರೋಪಾಡಿ ಗ್ರಾಮದ ಶ್ರೀಪತಿ ಭಟ್ ಒಡಿಯೂರು ಮತ್ತು ಉಮಾಶಂಕರಿ ದಂಪತಿಯ ಪುತ್ರ ಶ್ರೀಶಕೃಷ್ಣ ಒ. ವಿಜ್ಞಾನ ವಿಭಾಗದಲ್ಲಿ 600ರಲ್ಲಿ 591 ಅಂಕ ಗಳಿಸಿ, ರಾಜ್ಯದಲ್ಲಿ 6ನೇ ರ್‍ಯಾಂಕ್ ಗಳಿಸಿದ್ದಾರೆ.
ಆಂಗ್ಲ ಭಾಷೆಯಲ್ಲಿ ನಿರೀಕ್ಷಿತ ಅಂಕ ಬರಲಿಲ್ಲ; ಉಳಿದಂತೆ ನೀರಿಕ್ಷಿತ ಫಲಿತಾಂಶ ಬಂದಿದೆ ಎನ್ನುವ ಅವರು, ಉತ್ತಮ ಕಾಲೇಜಿನಲ್ಲಿ ಸೀಟ್ ಲಭ್ಯವಾದಲ್ಲಿ ಎಂಜಿನಿಯರಿಂಗ್ ಮಾಡುತ್ತೇನೆ. ತಪ್ಪಿದಲ್ಲಿ ಪದವಿ ಅಭ್ಯಸಿಸಿ, ಸಂಶೋಧನೆ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಮಗನ ಸಾಧನೆಗೆ ಹೆತ್ತವರು ಸಂತಸ ವ್ಯಕ್ತಪಡಿಸಿದ್ದಾರೆ.
ಕೋಚಿಂಗ್ ಪಡೆಯದೆ ಸಾಧನೆ : ನಿರೀಕ್ಷಾ
ಬೆಳ್ಮಣ್: ನಂದಳಿಕೆ ಶ್ರೀ ಲಕ್ಷ್ಮೀಜನಾರ್ದನ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರೀಕ್ಷಾ ಕೋಟ್ಯಾನ್ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 591 ಅಂಕಗಳೊಂದಿಗೆ 6ನೇ ರ್‍ಯಾಂಕ್ ಗಳಿಸಿದ್ದಾರೆ.
ತಂದೆಯನ್ನು ಕಳೆದುಕೊಂಡಿದ್ದ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ನಿರೀಕ್ಷಾ ಕೋಟ್ಯಾನ್‌ಗೆ ತಾಯಿಯೇ ಮೊದಲ ಗುರುವಾಗಿ ಬೀಡಿ ಕಟ್ಟಿ ಶಾಲೆ ಓದಿಸಿದರು. ಬಾಲ್ಯದಿಂದಲೂ ಕಲಿಕೆಯತ್ತ ಒಲವು ಹೊಂದಿದ್ದ ನಿರೀಕ್ಷಾ ನಿರೀಕ್ಷೆಯಂತೆ ಎಸೆಸೆಲ್ಸಿಯಲ್ಲಿಯೂ ನಂದಳಿಕೆ ಶ್ರೀ ಲಕ್ಷ್ಮೀಜನಾರ್ದನ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಟಾಪರ್ ಆಗಿದ್ದಳು. ಯಾವುದೇ ಕೋಚಿಂಗ್ ಇಲ್ಲದೆ ಪಿಯುಸಿಯಲ್ಲಿ ಈ ಸಾಧನೆ ಮಾಡಿದ್ದಾರೆ.
ನಿರೀಕ್ಷಾಗೆ ಜೀವಶಾಸ್ತ್ರ ಕ್ಷೇತ್ರ ಆಸಕ್ತಿಯದ್ದಾಗಿದೆ.
ಸಿಎ ಆಗುವಾಸೆ : ಸ್ಮತಿ ದೇವದಾಸ್
ಸುರತ್ಕಲ್: ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಸ್ಮತಿ ದೇವದಾಸ್ ಕರ್ಕೇರ (591) 7ನೇ ರ್‍ಯಾಂಕ್ ಗಳಿಸಿದ್ದಾರೆ.
ಈಕೆ ಸುರತ್ಕಲ್ ನಿವಾಸಿ ದೇವದಾಸ್ ಕರ್ಕೇರ ಮತ್ತು ಯಶವಂತಿ ಡಿ. ಕರ್ಕೇರ ಅವರ ಪುತ್ರಿ.
ಚಾರ್ಟರ್ಡ್ ಅಕೌಂಟೆಂಟ್, ಕಂಪೆನಿ ಸೆಕ್ರೆಟರಿ ಆಗುವ ಕನಸನ್ನು ಹೊಂದಿದ್ದೇನೆ. ಏಕಾಗ್ರತೆಯಿಂದ ನಿರಂತರವಾಗಿ ಓದಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದೇನೆ. ಮೊದಲ ಮೂರು ರ್‍ಯಾಂಕ್‌ನ ನಿರೀಕ್ಷೆ ಹೊಂದಿದ್ದೆ. ಮಧ್ಯದಲ್ಲಿ ಇಂಗ್ಲಿಷ್ ಪರೀಕ್ಷೆ ವಿಳಂಬವಾದದ್ದೂ ಸ್ವಲ್ಪ ಸಮಸ್ಯೆಯಾಯಿತು. ತಂದೆ ತಾಯಿ, ಸಹೋದರಿ, ಕಾಲೇಜಿನ ಉಪನ್ಯಾಸಕ ವರ್ಗದವರು ಉತ್ತಮ ಪ್ರೋತ್ಸಾಹ ಮಾರ್ಗದರ್ಶನ ನೀಡಿದ್ದಾರೆ ಎನ್ನುತ್ತಾರೆ ಸ್ಮತಿ ಅವರು.
“ಅಪೂರ್ವ’ ಸಾಧನೆ : ಅಪೂರ್ವಾ
ಮಂಗಳೂರು: ವಾಣಿಜ್ಯ ವಿಭಾಗದಲ್ಲಿ 594 ಅಂಕ ಗಳಿಸಿ 4ನೇ ರ್‍ಯಾಂಕ್ ಪಡೆದ ಪದವಿನಂಗಡಿಯ ಅಪೂರ್ವಾ, ಮೇರಿಹಿಲ್ ವಿಕಾಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ.
“ರ್‍ಯಾಂಕ್ ನಿರೀಕ್ಷೆ ಇರಲಿಲ್ಲ. ಆದರೆ ಶೇ. 95 ಕ್ಕಿಂತ ಹೆಚ್ಚು ಅಂಕ ಗಳ ನಿರೀಕ್ಷೆಯಿತ್ತು.ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ. ಹೆತ್ತವರ ಮತ್ತು ಉಪನ್ಯಾಸಕರ ಪ್ರೋತ್ಸಾಹ ಅನನ್ಯ. ಎಂಬಿಎ ಓದಬೇಕೆಂದಿರುವ ಅಪೂರ್ವಾ , ಸೇಲ್ಸ್‌ಮ್ಯಾನ್ ಆಗಿರುವ ಮೋಹನ್ ಪೂಜಾರಿ ಮತ್ತು ಶಿಕ್ಷಕಿ ಪ್ರತಿಮಾ ಪೂಜಾರಿ ಅವರ ಪುತ್ರಿ.
ವೇಳಾಪಟ್ಟಿಯಂತೆ ಓದು : ಪೃಥ್ವಿ ಎನ್. ಹೆಬ್ಟಾರ್
ಮಂಗಳೂರು: ವಾಣಿಜ್ಯ ವಿಭಾಗದಲ್ಲಿ 593 ಅಂಕಗಳೊಂದಿಗೆ 5ನೇ ರ್‍ಯಾಂಕ್ ಪಡೆದ ಪೃಥ್ವಿ ಎನ್. ಹೆಬ್ಟಾರ್ ಕೊಡಿಯಾಲ್‌ಬೈಲ್ ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ. ಮುಂದೆ ಸಿಎ ಓದಬೇಕೆಂಬ ಇಚ್ಛೆ ಅವರದ್ದು. “ಪ್ರತಿದಿನ ಇಷ್ಟು ಓದಲೇಬೇಕೆಂಬ ವೇಳಾ ಪಟ್ಟಿ ಹಾಕಿಕೊಂಡು, ಹಳೆಯ ಪ್ರಶ್ನೆಪತ್ರಿಕೆಗಳನ್ನೂ ಮೆಲುಕು ಹಾಕಿದ್ದೆ. ಇದೆಲ್ಲವೂ ಓದಲು ಸಹಕಾರಿಯಾಯಿತು’ ಎನ್ನುತ್ತಾರೆ ಅವರು. ಕರ್ಣಾಟಕ ಬ್ಯಾಂಕಿನ ನಿವೃತ್ತ ಎಜಿಎಂ ನಾಗರಾಜ್ ಆರ್. ಹೆಬ್ಟಾರ್ ಮತ್ತು ಬ್ಯಾಂಕಿನ ದೇರೆಬೈಲ್ ಶಾಖೆಯ ಸೀನಿಯರ್ ಮ್ಯಾನೇಜರ್ ಉಷಾ ಎನ್. ಹೆಬ್ಟಾರ್ ಅವರ ಪುತ್ರಿ.
ಹಾಡು ಓದಿಗೆ ಪೂರಕ : ಪೃಥ್ವಿ ಜಿ.ಕೆ.
ಮಂಗಳೂರು: ವಿಜ್ಞಾನ ವಿಭಾಗದಲ್ಲಿ 592 ಅಂಕ ಗಳಿಸಿರುವ ಬಾಸ್ಕೋಸ್ ಪ.ಪೂ. ಕಾಲೇಜಿನ ಪೃಥ್ವಿ ಜಿ.ಕೆ. ರಾಜ್ಯಕ್ಕೆ 5ನೇ ರ್‍ಯಾಂಕ್ ಗಳಿಸಿದ್ದಾರೆ. ಅವರು ಕುವೆಂಪು ವಿವಿ ಯ ಪ್ರೊ| ಜೆ. ಕೇಶವಯ್ಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿ ಶೈಲಜಾ ಅವರ ಪುತ್ರಿ.
“ತುಂಬಾ ಖುಷಿಯಾಗಿದೆ. 10ರೊಳಗಿನ ಸ್ಥಾನ ನಿರೀಕ್ಷಿಸರಲಿಲ್ಲ.ಆದರೆ ಉತ್ತಮ ಅಂಕ ಬರುವ ಬಗ್ಗೆ ಆತ್ಮವಿಶ್ವಾಸವಿತ್ತು. ಮುಂದೆ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದಿರುವೆ ಎಂದು ಹೇಳುವ ಅವರಿಗೆ, ಹಾಡು ಕೇಳುವ ಅಭ್ಯಾಸ ಕಲಿಯುವ ಆಸಕ್ತಿಯನ್ನು ಹೆಚ್ಚಿಸಿದೆಯಂತೆ.
ಮೆಡಿಕಲ್ ಓದುವಾಸೆ : ಅನರ್ಘ್ಯಾ
ಮೂಡುಬಿದಿರೆ: ಆಳ್ವಾಸ್ ಪ.ಪೂ. ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಅನರ್ಘ್ಯಾ ಕೆ. 592 ಅಂಕಗಳೊಂದಿಗೆ ಐದನೇ ರ್‍ಯಾಂಕ್ ಗಳಿಸಿದ್ದಾರೆ.
ಆಳ್ವಾಸ್‌ನಲ್ಲಿ ಅಧ್ಯಯನಕ್ಕೆ ಯೋಗ್ಯ ವಾತಾವರಣ, ಎಲ್ಲ ಸೌಕರ್ಯಗಳಿವೆ.ಮುಂದೆ ಮೆಡಿಕಲ್ ಓದುವಾಸೆ ಇದೆ ಎನ್ನುತ್ತಾರೆ ಅನರ್ಘ್ಯಾ ಕೆ. ಅವರ ತಂದೆ ಬೆಳ್ತಂಗಡಿ ಬಡಗ ಕಾರಂದೂರಿನ ಕೃಷಿಕ ಶಿವ ಭಟ್. “ಆಳ್ವಾಸ್ ಸಂಸ್ಥೆಯ ಶಿಸ್ತಿಗೆ ಹೊಂದಿಕೊಂಡು ಓದಿದವರಿಗೆ ಯಶಸ್ಸು ಖಂಡಿತ. ನನ್ನ ದೊಡ್ಡ ಮಗಳು ಅನುಷಾ ಕೂಡ ಇಲ್ಲೇ ಓದಿ ಬಳಿಕ ಎಂಜಿನಿಯರ್ ಆಗಿದ್ದಾಳೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಶಿವಭಟ್.
ವೇಳಾಪಟ್ಟಿಯಂತೆ ಅಧ್ಯಯನ :ಲಿಶಾನ್ ಎ.ಎ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಲಿಶಾನ್ ಎ.ಎ. ಅವರಿಗೆ ಐದನೇ ರ್‍ಯಾಂಕ್ ಲಭಿಸಿದೆ.
ಕಾಲೇಜಿನ ವೇಳಾಪಟ್ಟಿ ಯಂತೆ ಓದಿದ್ದು ಬೋಧಕರು ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಬೆಳಗ್ಗೆ 5ರಿಂದ ರಾತ್ರಿ 10.30ರ ವರೆಗೆ ನಮಗೆ ಓದಲು ಅವಕಾಶ ಕಲ್ಪಿಸಲಾಗಿತ್ತು. ಮುಂದೆ ನೀಟ್ ಪರೀಕ್ಷೆ ಕಟ್ಟಿ ಎಂಬಿಬಿಎಸ್ ಮಾಡುವ ಆಶಯವಿದೆ ಎನ್ನುತ್ತಾರೆ ಲಿಶಾನ್ .
ಲಿಶಾನ್ ಅವರು ಕೊಡಗಿನ ಭಾಗಮಂಡಲದ ತಾವೂರು ಗ್ರಾಮದ ವ್ಯಾಪಾರಿ ಎಂ.ಆರ್. ಅಪ್ಪಣ್ಣ ಎ.ಕೆ. ಅವರ ಪುತ್ರ. ಮಗನ ಸಾಧನೆ ಬಗ್ಗೆ ತಂದೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅಳ್ವಾಸ್‌ನಲ್ಲಿ ಓದಿದ್ದಕ್ಕೆ ಸಾರ್ಥಕ : ಶ್ರೇಯಾ ಕೆ.ಬಿ.
ಮೂಡುಬಿದಿರೆ: ಆಳ್ವಾಸ್‌ನ ಶ್ರೇಯಾ ಕೆ.ಬಿ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 591 ಅಂಕಗಳೊಂದಿಗೆ 7ನೇ ರ್‍ಯಾಂಕ್ ಗಳಿಸಿದ್ದಾರೆ.
ನನಗೆ 595 ಅಂಕ ಸಿಗುವ ಭರವಸೆ ಇತ್ತು. ಆದರೂ ಪರವಾಗಿಲ್ಲ. ಖುಷಿಯಾಗಿದೆ. ಆಳ್ವಾಸ್‌ನಲ್ಲಿ ಉಚಿತ ಶಿಕ್ಷಣ ಪಡೆಯುವ ಅವಕಾಶ ಲಭಿಸಿತ್ತು. ಇಲ್ಲಿ ಓದಿದ್ದಕ್ಕೆ ಸಾರ್ಥಕವಾಗಿದೆ. ಉತ್ತಮ ಅಂಕಗಳಿಸಲು ಬಹಳ ಸಹಕಾರಿಯಾಗಿದೆ. ಮುಂದೆ ಸಿಎ ಮಾಡುವಾಸೆ ಇದೆ. ಎಂದಿದ್ದಾರೆ. ಅವರು ಪುತ್ತೂರು ಸುಂಕದಕಟ್ಟೆ ಇತ್ತೂರು ಗ್ರಾಮದ ಕೃಷಿಕ ಬಿಜು ಕೆ.ಟಿ. ಅವರ ಪುತ್ರಿ. ತಾಯಿ ಅಂಗನವಾಡಿ ಶಿಕ್ಷಕಿ.
ರ್‍ಯಾಂಕ್ ಸಾಧನೆಗೆ ಸ್ಫೂರ್ತಿ: ದಿಶಾ ಹೆಗ್ಡೆ
ಮಂಗಳೂರು: ವಿಜ್ಞಾನ ವಿಭಾಗದಲ್ಲಿ 6ನೇ ರ್‍ಯಾಂಕ್ ಗಳಿಸಿದ ಕೊಟ್ಟಾರ ಚೈತನ್ಯ ಪ.ಪೂ. ಕಾಲೇಜಿನ ದಿಶಾ ಹೆಗ್ಡೆಗೆ ಎಂಜಿನಿಯರಿಂಗ್ ಓದುವಾಸೆ. ಪ್ರತಿ ದಿನ ಓದಿಗಾಗಿ 2 ಗಂಟೆ ಮೀಸಲಿಟ್ಟಿದ್ದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆಸುತ್ತಿದ್ದ ತಯಾರಿಯೂ ಸಹಕಾರಿ ಯಾಯಿತು. ಉತ್ತಮ ಅಂಕ ಸಿಗುವ ನಿರೀಕ್ಷೆ ಇತ್ತು.
ಈಗ ರ್‍ಯಾಂಕ್ ಬಂದದ್ದು ಖುಷಿಯಾಗಿದೆ ಎನುತ್ತಾರೆ ದಿಶಾ. ಅವರು ಶ್ರೀನಿವಾಸ ತಾಂತ್ರಿಕ ಕಾಲೇಜಿನ ಏರೋನಾಟಿಕಲ್ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಎನ್. ಹೆಗ್ಡೆ ಮತ್ತು ಎನ್‌ಐಟಿಕೆ ಸುರತ್ಕಲ್‌ನ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸತ್ಯಭಾಮಾ ಅವರ ಪುತ್ರಿ.
ಸಿಎ ಮಾಡುವೆ : ರಕ್ಷಾ ಭಕ್ತ
ಮಂಗಳೂರು: ಮೇರಿಹಿಲ್ ವಿಕಾಸ್ ಕಾಲೇಜಿನ ವಿದ್ಯಾರ್ಥಿನಿ ರಕ್ಷಾ ಭಕ್ತ ಅವರು ವಾಣಿಜ್ಯ ವಿಭಾಗ ದಲ್ಲಿ 591 ಅಂಕಗಳೊಂದಿಗೆ ರಾಜ್ಯದಲ್ಲಿ 7ನೇ ರ್‍ಯಾಂಕ್ ಗಳಿಸಿದ್ದಾರೆ.
ಹೆತ್ತವರು ನೀಡಿದ ನಿರಂತರ ಮಾರ್ಗದರ್ಶನ, ಕಾಲೇಜಿನ ಬೋಧಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆ ಸಿಎ ಮಾಡಬೇಕೆಂದಿದ್ದೇನೆ ಎನ್ನುತ್ತಾರೆ ಅವರು.
ರಕ್ಷಾ, ಮಂಗಳೂರಿನಲ್ಲಿ ಟ್ಯಾಕ್ಸಿ ಚಾಲಕರಾಗಿರುವ ಕೆ. ರಘುನಾಥ ಭಕ್ತ ಹಾಗೂ ಗೃಹಿಣಿ ಕೆ. ಸಂಗೀತಾ ಭಕ್ತ ಅವರ ಪುತ್ರಿ.
ಆಟದ ಜತೆಗೆ ಪಾಠ : ಅಮಿತ್ ಆಂಟೊನಿ ಸಲ್ಡಾನ
ಮಂಗಳೂರು: ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ 7ನೇ ಸ್ಥಾನ ಪಡೆದ ನಗರದ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಅಮಿತ್ ಆಂಟೊನಿ ಸಲ್ಡಾನ ಅವರು ಮುಂದೆ ಆಗುವ ಸಿಎ ಗುರಿ ಹೊಂದಿದ್ದಾರೆ.
ಯಾವುದೇ ಒತ್ತಡ ಇಲ್ಲದೆ ಓದುತ್ತಿದ್ದೆ. ನಿರಂತರ ಓದದೇ, ದಿನಕ್ಕೆರಡು ಗಂಟೆ ಆಟಕ್ಕೆ ಸಮಯ ಮೀಸಲಿಡುತ್ತಿದ್ದೆ. ಇದರಿಂದ ಓದಲು ಮತ್ತು ನೆನಪಿಟ್ಟು ಕೊಳ್ಳಲು ಹೆಚ್ಚು ಸಹಾಯ ವಾಯಿತು ಎನ್ನುತ್ತಾರೆ ಅವರು.
ಅಮಿತ್ ಅವರು ಕುತ್ತಾರು ನಿವಾಸಿ ದೂರದರ್ಶನ ಸಿಬಂದಿ ಜಾನ್ ಸಲ್ಡಾನ ಮತ್ತು ಗೃಹಿಣಿ ಐರಿನ್ ಸಲ್ಡಾನ ಅವರ ಪುತ್ರ.
ರ್‍ಯಾಂಕ್ ಅನಿರೀಕ್ಷಿತ : ಮುಸ್ಕಾನ್
ಕುಂದಾಪುರ: ಗಂಗೊಳ್ಳಿ ತೌಹೀದ್ ಪದವಿ ಪೂರ್ವ ಕಾಲೇಜಿನ ವಿದ್ಯಾ ರ್ಥಿನಿ ಮುಸ್ಕಾನ್ ಅವರು ವಾಣಿಜ್ಯ ವಿಭಾಗ ದಲ್ಲಿ 7ನೇ ರ್‍ಯಾಂಕ್ ಪಡೆದಿದ್ದಾರೆ.
ತುಂಬಾ ಖುಷಿಯಾಗಿದೆ ಎನ್ನುವ ಮುಸ್ಕಾನ್ ರಿಗೆ, ರಾಜ್ಯ ಮಟ್ಟದಲ್ಲಿ ರ್‍ಯಾಂಕ್ ಬರುವ ನಿರೀಕ್ಷೆ ಇರಲಿಲ್ಲ. ಒಳ್ಳೆಯ ಅಂಕ ಬರುವ ನಿರೀಕ್ಷೆ ಇತ್ತು. ನಿತ್ಯ ಒಂದು ಗಂಟೆಯಷ್ಟೇ ಓದುತ್ತಿದ್ದೆ. ಮುಂದೆ ಬಿ.ಕಾಂ. ಮಾಡುವಾಸೆ ಎಂದರು.
ಮೇಲ್ ಗಂಗೊಳ್ಳಿ ನಿವಾಸಿ ಮುದಸ್ಸೀರ್ ಹಾಗೂ ಆಸ್ಮಾ ದಂಪತಿಯ ಪುತ್ರಿ.
7ನೇ ರ್‍ಯಾಂಕಿನ ಖುಶಿ : ಪ್ರಿಯಾಂಕಾ ಎಚ್.
ಮಂಗಳೂರು: ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ 7ನೇ ರ್‍ಯಾಂಕನ್ನು ಗಳಿಸಿರುವ ನಗರದ ಮೇರಿಹಿಲ್ ವಿಕಾಸ್ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕಾ ಎಚ್. ಅವರಿಗೆ ರ್‍ಯಾಂಕ್ ಬಂದಿರುವುದು ಅತ್ಯಂತ ಖುಷಿ ತಂದಿದೆ.
ನನ್ನ ಹೆತ್ತವರು ಹಾಗೂ ಕಲಿತ ಕಾಲೇಜಿಗೆ ಸಲ್ಲುವ ಗೌರವ ಇದು. ರ್‍ಯಾಂಕ್ ಬರ ಬಹುದೆಂಬ ನಿರೀಕ್ಷೆ ಇತ್ತಾದರೂ ಈ ಸಾಧನೆ ಅಚ್ಚರಿ. ಎನ್ನುವ ಪ್ರಿಯಾಂಕಾ ಅವರು.
ಈಕೆ ಕಾಸರಗೋಡು ನಿವಾಸಿ ಕೇಬಲ್ ಆಪರೇಟರ್ ಆಗಿರುವ ಹರಿಕಾಂತ ಕೆ. ಹಾಗೂ ಶುಭಾ ದಂಪತಿಯ ಪುತ್ರಿ.
ನಿರೀಕ್ಷೆ ಮೀರಿ ಸಾಧನೆ : ಸುಧನ್ವ ಶ್ಯಾಂ ಎಸ್.
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸುಧನ್ವ ಶ್ಯಾಂ ಎಸ್. ಅವರು ವಿಜ್ಞಾನ ವಿಭಾಗದಲ್ಲಿ 6ನೇ ಸ್ಥಾನ ಗಳಿಸಿದ್ದಾರೆ.
ಪುತ್ತೂರು ತಾಲೂಕಿನ ಬಲಾ°ಡು ಗ್ರಾಮದ ಉಜ್ರುಪಾದೆ ಪಾದೆ ನಿವಾಸಿ ಸುಬ್ರಹ್ಮಣ್ಯಕುಮಾರ್ ಬಿ. ಹಾಗೂ ಸುಶೀಲಾದೇವಿ ಎಸ್. ಅವರ ಪುತ್ರ.
ಅಂದಂದಿನ ಪಾಠಗಳನ್ನು ಅಂದಂದೇ ಓದಿ ಮನನ ಮಾಡಿ ಕೊಳ್ಳುತ್ತಿದ್ದೆ. ಯಾವುದೇ ಟ್ಯೂಷನ್ ತರಗತಿಗಳಿಗೆ ಹೋಗಿಲ್ಲ. ಬೆನ್ನೆಲುಬಾಗಿ ನಿಂತ ಹೆತ್ತವರು, ಉಪನ್ಯಾಸಕರ ಸಹಕಾರ ಸ್ಮರಣೀಯ. ಉಪನ್ಯಾಸಕನಾಗುವ ಆಸೆಯಿದೆ.
ಪಠ್ಯೇತರ ಚಟುವಟಿಕೆ : ರಿತೇಶ್ ರೈ ಎಂ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ರಿತೇಶ್ ರೈ ವಾಣಿಜ್ಯ ವಿಭಾಗದಲ್ಲಿ 8ನೇ ಸ್ಥಾನ ಗಳಿಸಿದ್ದಾರೆ. ಅವರು ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಮೇಗಿನಗುತ್ತು ನಿವಾಸಿ ಶಿವರಾಮ ರೈ ಹಾಗೂ ಸರಸ್ವತಿ ರೈ ದಂಪತಿಯ ಪುತ್ರ.
ಸಾಧನೆಯ ಹಿಂದೆ ನನ್ನ ವೈಯಕ್ತಿಕ ಶ್ರಮದ ಜತೆೆಗೆ ಉಪನ್ಯಾಸಕರ, ಹೆತ್ತವರ ಪರಿಶ್ರಮವಿದೆ. ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದೆ. ಹೀಗಾಗಿ ನನಗೆ ಒತ್ತಡ ಮುಕ್ತ ವಾತಾವರಣ ಸಿಕ್ಕಿತು.
ಈ ಫಲಿತಾಂಶ ತುಂಬಾ ಖುಷಿ ಕೊಟ್ಟಿದ್ದು, ಮುಂದೆ ಸಿಎ ಮಾಡುವ ಹಂಬಲ ಇದೆ ಎನ್ನುತ್ತಾರೆ ರಿತೇಶ್ ರೈ ಅವರು.
ಪ್ರತಿ ದಿನದ ಅಭ್ಯಾಸ : ಅಂಕಿತಾ ಸಿ.
ಪುತ್ತೂರು: ತರಗತಿಗಳಲ್ಲಿ ನಡೆಯುತ್ತಿದ್ದ ಪಾಠ ಗಳನ್ನು ಗಮನವಿಟ್ಟು ಕೇಳಿ ಆಯಾ ದಿನವೇ ಅಭ್ಯಾಸ ಮಾಡುತ್ತಿದ್ದೆ.
ಈ ಸಾಧನೆಗೆ ತಂದೆ – ತಾಯಿಯರ ಸಹಕಾರ, ಉಪನ್ಯಾಸಕರ ಪ್ರೋತ್ಸಾಹ ಕಾರಣ ಎನ್ನುತ್ತಾರೆ ವಿಜ್ಞಾನ ವಿಭಾಗದಲ್ಲಿ 7ನೇ ರ್‍ಯಾಂಕ್ ಗಳಿಸಿದ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಂಕಿತಾ ಸಿ.
ಈ ಸಾಧನೆ ಖುಷಿ ನೀಡಿದೆ ಎನ್ನುತ್ತಾರೆ ಅವರು. ಅವರು ಸುಳ್ಯದ ಪಂಜದ ಸಿ. ಗಂಗಾಧರ ಶಾಸ್ತ್ರಿ ಹಾಗೂ ಸಾವಿತ್ರಿ ಸಿ. ದಂಪತಿಯ ಪುತ್ರಿ. ಹೆತ್ತವರೂ ಸಂತಸ ವ್ಯಕ್ತಪಡಿಸಿದ್ದಾರೆ.
ಸಿಎ ಮಾಡುವಾಸೆ : ರಕ್ಷಿತಾ
ಕಾರ್ಕಳ: ಜ್ಞಾನಸುಧಾ ಪಿ.ಯು. ಕಾಲೇಜಿನ ವಾಣಿಜ್ಯ ವಿಭಾಗದ ರಕ್ಷಿತಾ ಅವರು 6ನೇ ರ್‍ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ಪಾಠವನ್ನು ಅಂದಂದೇ ಓದುತ್ತಿದ್ದೆ. ಪೂರ್ವ ಸಿದ್ಧತೆ ಪರೀಕ್ಷೆಗಳು ಹೆಚ್ಚು ಅಂಕ ತೆಗೆಯಲು ನೆರವಾದವು. ಮುಂದೆ ಸಿಎ ಮಾಡಬೇಕು ಎಂದುಕೊಂಡಿದ್ದು, ತ್ರಿಷಾ ಕಾಲೇಜಿನಲ್ಲಿ ಕೋಚಿಂಗ್ ಪಡೆಯುತ್ತಿರುವೆ ಎಂದು ತಮ್ಮ ಇಚ್ಛೆ ಯನ್ನು ವ್ಯಕ್ತಪಡಿಸುತ್ತಾರೆ ರಕ್ಷಿತಾ.
ಇವರೀಗ ತಮ್ಮ ದೊಡ್ಡಪ್ಪ ಹಾಗೂ ದೊಡ್ಡಮ್ಮನೊಂದಿಗೆ ಕಾರ್ಕಳದಲ್ಲಿ ವಾಸವಾಗಿದ್ದಾರೆ.
ಸಿಎ ಗುರಿ : ಶ್ರಾವ್ಯಾ
ಮಂಗಳೂರು: ವಾಣಿಜ್ಯ ವಿಭಾಗದಲ್ಲಿ 8ನೇ ಸ್ಥಾನ ಪಡೆದ ನಗರದ ಕೊಡಿಯಾಲ್‌ಬೈಲ್‌ನ
ಸೈಂಟ್ ಅಲೋಶಿಯಸ್ ಪ.ಪೂ. ಕಾಲೇಜಿನ ವಿದ್ಯಾ ರ್ಥಿನಿ ಶ್ರಾವ್ಯಾ ಅವರಿಗೆ ಸಿಎ ಮಾಡುವ ಗುರಿ.
ನನ್ನ ಸಾಧನೆ ಹೆತ್ತವರು ಮತ್ತು ಕಾಲೇಜಿಗೆ ತಂದ ಹೆಮ್ಮೆ. ಸಿಎ ಕೋಚಿಂಗ್ ಜತೆ ಜತೆಗೆ ದ್ವಿತೀಯ ಪಿಯುಸಿಗೆ ಅಧ್ಯಯನ ನಡೆಸಿದ್ದೆ ಎಂದರು.
ಶ್ರಾವ್ಯಾ, ಸೈಂಟ್ ಅಲೋಶಿಯಸ್ ಸಂಧ್ಯಾ ಕಾಲೇಜಿನ ವಾಣಿಜ್ಯ ವಿಭಾಗ ಪ್ರೊಫೆಸರ್ ಡಾ| ರವಿ ಶೆಟ್ಟಿ ಮತ್ತು ಗೃಹಿಣಿ ಚಂಪಾ ಅವರ ಪುತ್ರಿ.
ಶ್ರಮದ ಫಲ ರ್‍ಯಾಂಕ್ : ಅದಿತಿ ಪ್ರಭು ಕೆ.ಪಿ.
ಮಂಗಳೂರು: ವಿಜ್ಞಾನ ವಿಭಾಗದಲ್ಲಿ 7ನೇ ರ್‍ಯಾಂಕ್ ಗಳಿಸಿರುವ ಮಣ್ಣಗುಡ್ಡೆಯ ಅದಿತಿ ಕೆ.ಪಿ. ಕೊಡಿಯಾಲ್‌ಬೈಲ್ ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ.
ಕುವೈಟ್‌ನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಅನಿಲ್ ಪ್ರಭು ಹಾಗೂ ಗೃಹಿಣಿ ಉಷಾ ಪ್ರಭು ದಂಪತಿಯ ಪುತ್ರಿ.
ಪ್ರತಿದಿನ ಕಾಲೇಜಿನಲ್ಲಿ ಮಾತ್ರ ವಲ್ಲದೆ, ಮನೆಯಲ್ಲಿ 3-4 ಗಂಟೆ ಓದಿಗಾಗಿ ಸಮಯ ಮೀಸಲಿಡುತ್ತಿದ್ದೆ. ರ್‍ಯಾಂಕ್ ನಿರೀಕ್ಷೆ ಇಲ್ಲದಿದ್ದರೂ ಉತ್ತಮ ಅಂಕ ಬರುವ ನಿರೀಕ್ಷೆ ಇತ್ತು. ಉಪನ್ಯಾಸಕರ ಉತ್ತಮ ಮಾರ್ಗದರ್ಶನ ಸಹಕಾರಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.