Putturu: ವಿದೇಶಗಳಿಂದ ಅಡಿಕೆ ಆಮದು ಪರಿಣಾಮ ಅಧ್ಯಯನ: ಸಂಸದ ಕ್ಯಾ.ಬ್ರಿಜೇಶ್ ಚೌಟ
ಬೆಳೆ ವಿಮೆ ಹಣ ರೈತರಿಗೆ ಬರದಿರುವುದು, ಬೆಳೆ ಸಮೀಕ್ಷೆ ಸಮಸ್ಯೆ ಬಗ್ಗೆ ಪರಿಶೀಲಿಸುವೆ
Team Udayavani, Oct 6, 2024, 7:40 AM IST
![Cap-Brijesh-Chowta](https://www.udayavani.com/wp-content/uploads/2024/10/Cap-Brijesh-Chowta-620x372.jpg)
![Cap-Brijesh-Chowta](https://www.udayavani.com/wp-content/uploads/2024/10/Cap-Brijesh-Chowta-620x372.jpg)
ಪುತ್ತೂರು: ಅಡಿಕೆ ಆಮದಿನಿಂದ ದೇಶೀ ಅಡಿಕೆ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಆದರೂ ಕೇಂದ್ರ ವಾಣಿಜ್ಯ ಸಚಿವರು ಹಾಗೂ ಕ್ಯಾಂಪ್ಕೋ ಜತೆಗೆ ಚರ್ಚೆ ನಡೆಸುವೆ. ಈ ಬಗ್ಗೆ ಅಧ್ಯಯನ ಮಾಡಿ ಅನಂತರ ಪ್ರತಿಕ್ರಿಯಿಸುವೆ ಎಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಅಡಿಕೆ ದರ ಸಮತೋಲನ, ಆಮದು ವಿಚಾರ, ಎಲೆ ಚುಕ್ಕಿ, ಹಳದಿ ರೋಗದ ಸಹಿತ ಎಲ್ಲದರಲ್ಲೂ ಪಕ್ಷವು ಯಾವತ್ತೂ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿದೆ. ರೋಗ ನಿಯಂತ್ರಣದ ಬಗ್ಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದ್ದು, ಮಾತಕತೆ ನಡೆಯುತ್ತಿದೆ. ಬೆಳೆ ವಿಮೆ ಹಣ ರೈತರಿಗೆ ಬಾರದ ಬಗ್ಗೆ ಹಾಗೂ ಬೆಳೆ ಸಮೀಕ್ಷೆ ಸಮಸ್ಯೆ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಬಿಜೆಪಿ ಗೆಲುವು ನಿಶ್ಚಿತ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಯ ವಿಧಾನ ಪರಿ ಷತ್ತಿನ ಉಪಚುನಾವಣೆಯಲ್ಲಿ ಪಕ್ಷ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡಿದ್ದು, ಅಭೂತಪೂರ್ವ ಗೆಲುವು ದಾಖಲಿಸುವುದು ನಿಶ್ಚಿತ ಎಂದು ಚೌಟ ಹೇಳಿದರು. ಪುತ್ತೂರಿನ ಕಿಶೋರ್ ಕುಮಾರ್ ಬೊಟ್ಯಾಡಿ ಪಕ್ಷದ ತಳಮಟ್ಟದಿಂದ ಬೆಳೆದು ಬಂದ ಕಾರ್ಯಕರ್ತ. ಪಕ್ಷದ ಗೆಲುವಿಗಾಗಿ 13 ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣ ನಿರ್ವಹಣೆಗೆ ಬೇಕಾದ ತಂಡ ರಚಿಸಿ ಮತದಾರರನ್ನು ತಲುಪುವ ಪ್ರಯತ್ನ ನಡೆಯುತ್ತಿದೆ. ಒಟ್ಟು 6,011 ಮತಗಳಲ್ಲಿ ಪಕ್ಷದ ಪರವಾಗಿ 3.5 ಸಾವಿರಕ್ಕೂ ಹೆಚ್ಚಿದೆ ಎಂದರು.
3.5 ಲಕ್ಷ ಸದಸ್ಯತ್ವ ಗುರಿ
ಸದಸ್ಯತ್ವ ಅಭಿಯಾನ ಸೆ.2ರಿಂದ ದೇಶದೆಲ್ಲೆಡೆ ನಡೆಯುತ್ತಿದೆ. ಈಗಾಗಲೇ 2.5 ಲಕ್ಷ ಸದಸ್ಯರು ಜಿಲ್ಲೆಯಲ್ಲಿ ನೋಂದಾಯಿಸಲ್ಪಟ್ಟಿದ್ದು, 3.5 ಲಕ್ಷದ ಗುರಿಯನ್ನು ತಲುಪುವ ವಿಶ್ವಾಸವಿದೆ. ಎರಡನೇ ಹಂತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಭಿಯಾನ ಮಾಡಲಾಗುವುದು ಎಂದು ಸಂಸದರು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ, ಗ್ರಾಮಾಂತರ ಮಂಡಲ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ಥಾ ಮೊದಲಾದವರಿದ್ದರು.