ರಾಹುಲ್ ತೆವಾಟಿಯ ಸಿಕ್ಸರ್ ಮೇನಿಯ!
Team Udayavani, Apr 10, 2022, 6:35 AM IST
ಮುಂಬಯಿ: ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲ್ಲಿಸುವುದು ಏಕದಿನ ಕ್ರಿಕೆಟ್‌ನಲ್ಲಿ ಅತ್ಯಮೋಘ ಸಾಧನೆ ಎನಿಸಿತ್ತು. ಸರಿಯಾಗಿ 32 ವರ್ಷಗಳ ಹಿಂದೆ (1986, ಎ. 18) ಶಾರ್ಜಾದಲ್ಲಿ ನಡೆದ ಆಸ್ಟ್ರೇಲೇಶ್ಯ ಕಪ್ ಫೈನಲ್‌ನಲ್ಲಿ ಪಾಕಿಸ್ಥಾನದ ಜಾವೇದ್ ಮಿಯಾಂದಾದ್ ಭಾರತದ ಚೇತನ್ ಶರ್ಮ ಓವರ್‌ನಲ್ಲಿ ಇಂಥದೊಂದು ಪರಾಕ್ರಮ ತೋರಿದಾಗ ಕ್ರಿಕೆಟ್ ಜಗತ್ತು ದಂಗಾಗಿತ್ತು. ಆದರೆ ಟಿ20 ಜಮಾನಾದಲ್ಲಿ ಇದೆಲ್ಲ ಮಾಮೂಲಾಯಿತು. ಈಗ ಕಾಲ ಮತ್ತೂ ಮುಂದುವರಿದಿದೆ. ಅಂತಿಮ ಎರಡು ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿ ತಂಡವನ್ನು ಗೆಲ್ಲಿಸುವ ಸಾಧಕರು ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನ, ಗುಜರಾತ್ ಟೈಟಾನ್ಸ್‌ನ ರಾಹುಲ್ ತೆವಾಟಿಯ.
ಪಂಜಾಬ್ ಕಿಂಗ್ಸ್ ಎದುರಿನ ಶುಕ್ರವಾರ ರಾತ್ರಿಯ ಮುಖಾಮುಖಿಯಲ್ಲಿ ಗುಜರಾತ್ ಗೆಲುವಿಗೆ ಅಂತಿಮ ಓವರ್‌ನಲ್ಲಿ 19 ರನ್ನುಗಳ ಕಠಿನ ಗುರಿ ಎದುರಿಗಿತ್ತು. ಬೌಲರ್ ಒಡೀನ್ ಸ್ಮಿತ್. ಕೆಲವು ನಾಟಕೀಯ ವಿದ್ಯಮಾನಗಳ ಬಳಿಕ ಅಂತಿಮ 2 ಎಸೆತಗಳಲ್ಲಿ 12 ರನ್ ಗುರಿ ಎದುರಾಯಿತು. ಅವಳಿ ಸಿಕ್ಸರ್ ಹೊರತುಪಡಿಸಿ ಇಲ್ಲಿ ಬೇರೆ ಯಾವುದೇ ಮಾರ್ಗವಿರಲಿಲ್ಲ. ಇದರಲ್ಲಿ ಯಶಸ್ಸು ಸಾಧಿಸುವ ಮೂಲಕ ತೆವಾಟಿಯ ತಮ್ಮ ಇತ್ತೀಚಿನ ಬ್ಯಾಟಿಂಗ್ ವೈಫಲ್ಯವನ್ನೆಲ್ಲ ಹೊಡೆದೋಡಿಸಿದರು.
ಮೊದಲ ಹೊಡೆತ ಡೀಪ್ ಮಿಡ್ ವಿಕೆಟ್ ಮೂಲಕ ಆಗಸಕ್ಕೆ ನೆಗೆಯಿತು. ಮುಂದಿನದು ಮತ್ತೊಂದು ಸಿಕ್ಸರ್!
ತೆವಾಟಿಯಾ ಅವರ ಈ ಅಮೋಘ ಸಾಹಸದಿಂದ ಸೋಲಿನ ಹಾದಿಯಲ್ಲಿದ್ದ ಗುಜರಾತ್ ನಂಬಲಾಗದ ಜಯ ಸಾಧಿಸಿತು. 2020ರ ಶಾರ್ಜಾ ಪಂದ್ಯದಲ್ಲಿ ಪಂಜಾಬ್ ವಿರುದ್ಧವೇ ತೆವಾಟಿಯಾ ಅಂತಿಮ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿ ರಾಜಸ್ಥಾನ್ ತಂಡವನ್ನು ಗೆಲ್ಲಿಸಿದ ದೃಶ್ಯಾವಳಿ ಕಣ್ಮುಂದೆ ಸುಳಿಯಿತು. ಅಂದು ಕೂಡ ವೆಸ್ಟ್ ಇಂಡೀಸ್ ಬೌಲರೇ ದಂಡಿಸಿಕೊಂಡಿದ್ದರು. ಅದು ಶೆಲ್ಡನ್ ಕಾಟ್ರೆಲ್.
ಎಂ.ಎಸ್. ಧೋನಿ ಮೊದಲಿಗ
ಅಂತಿಮ 2 ಎಸೆತಗಳಲ್ಲಿ ಗೆಲುವಿಗೆ 12 ರನ್ ಅಗತ್ಯವಿದ್ದಾಗ ಸಿಕ್ಸರ್ ಬಾರಿಸಿದ ಮೊದಲಿಗನೆಂದರೆ ಮಹೇಂದ್ರ ಸಿಂಗ್ ಧೋನಿ. ಆಗ ಅವರು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿದ್ದರು. ಅದು 2016ರ ವಿಶಾಖಪಟ್ಟಣ ಪಂದ್ಯ. ಎದುರಾಳಿ ಕೂಡ ಪಂಜಾಬ್ ತಂಡವೇ ಆಗಿತ್ತು. ಅಲ್ಲಿ ಧೋನಿಯಿಂದ ದಂಡಿಸಿಕೊಂಡವರು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್.
ರವೀಂದ್ರ ಜಡೇಜ ಕೂಡ ಒಮ್ಮೆ ಕೆಕೆಆರ್ ವಿರುದ್ಧ ಕೊನೆಯ 2 ಎಸೆತಗಳನ್ನು ಸಿಕ್ಸರ್‌ಗೆ ರವಾನಿಸಿದ್ದರು. ಆಗ ಚೆನ್ನೈ ಗೆಲುವಿಗೆ 7 ರನ್ನಷ್ಟೇ ಬೇಕಿತ್ತು.
ಉಳಿದಂತೆ ಡ್ವೇನ್ ಬ್ರಾವೊ, ಕೆ.ಎಸ್. ಭರತ್ ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲ್ಲಿಸಿದ ನಿದರ್ಶನವಿದೆ. ಆಗ ಜಯಕ್ಕೆ 5-6 ರನ್ನಷ್ಟೇ ಸಾಕಿತ್ತು.
ಗುಜರಾತ್ ಹ್ಯಾಟ್ರಿಕ್ ಗೆಲುವು
ರಾಹುಲ್ ತೆವಾಟಿಯ ಸಾಹಸದಿಂದ ಗುಜರಾತ್ ಟೈಟಾನ್ಸ್ ಮೂರಕ್ಕೆ ಮೂರೂ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಸಾಧಿಸಿತು. ಇದು ನೂತನ ತಂಡದ ಪಾಲಿಗೊಂದು “ಡ್ರೀಮ್ ಬಿಗಿನಿಂಗ್’. ಸದ್ಯ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿದೆ.
ಮತ್ತೊಂದು ನೂತನ ತಂಡವಾದ ಲಕ್ನೋವನ್ನು 5 ವಿಕೆಟ್‌ಗಳಿಂದ ಮಣಿಸುವ ಮೂಲಕ ಹಾರ್ದಿಕ್ ಪಾಂಡ್ಯ ಬಳಗ ಗೆಲುವಿನ ಓಟ ಆರಂಭಿಸಿತ್ತು. ಬಳಿಕ ಬಲಿಷ್ಠ ಡೆಲ್ಲಿಯನ್ನು 14 ರನ್ನುಗಳಿಂದ ಕೆಡವಿತು. ಇದೀಗ ಪಂಜಾಬ್ ವಿರುದ್ಧ ಸೋಲು ಖಚಿತ ಎನ್ನುವಾಗಲೇ ನಂಬಲಸಾಧ್ಯ ಜಯವನ್ನು ಒಲಿಸಿಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ 9 ವಿಕೆಟಿಗೆ 189 ರನ್ ಪೇರಿಸಿದರೆ, ಗುಜರಾತ್ ಸರಿಯಾಗಿ 50 ಓವರ್‌ಗಳಲ್ಲಿ 4 ವಿಕೆಟಿಗೆ 190 ರನ್ ಬಾರಿಸಿ ಗೆದ್ದು ಬಂದಿತು. ಆರಂಭಕಾರ ಶುಭಮನ್ ಗಿಲ್ 96, ಸಾಯಿ ಸುದರ್ಶನ್ 35, ಹಾರ್ದಿಕ್ ಪಾಂಡ್ಯ 27 ಹಾಗೂ ಕೊನೆಯಲ್ಲಿ ರಾಹುಲ್ ತೆವಾಟಿಯ ಕೇವಲ 3 ಎಸೆತಗಳಿಂದ 13 ರನ್ ಸಿಡಿಸಿ ಗುಜರಾತ್ ಗೆಲುವನ್ನು ಸಾರಿದರು.
ತೆವಾಟಿಯ ಪ್ರತಿಮೆ ನಿರ್ಮಿಸಿ!
ತಮ್ಮ ಸಾಹಸಮಯ ಬ್ಯಾಟಿಂಗ್ ಪರಾಕ್ರಮಕ್ಕಾಗಿ ರಾಹುಲ್ ತೆವಾಟಿಯ “ಲಾರ್ಡ್ ತೆವಾಟಿಯ’ ಎಂದು ಹೊಗಳಿಸಿಕೊಂಡಿದ್ದಾರೆ. ಅವರನ್ನು ಹೀಗೆ ಪ್ರಶಂಸಿ ಟ್ವೀಟ್ ಮಾಡಿದವರು ಬೇರೆ ಯಾರೂ ಅಲ್ಲ, ವೀರೇಂದ್ರ ಸೆಹವಾಗ್. ಜತೆಗೆ ಪಂಜಾಬ್ ಕಿಂಗ್ಸ್ ತಂಡದ ಕಾಲೆಳೆದಿದ್ದಾರೆ ಕೂಡ.
ಪಂಜಾಬ್ ಕಿಂಗ್ಸ್ ತಂಡ ತನ್ನ ಡಗೌಟ್‌ನಲ್ಲಿ ರಾಹುಲ್ ತೆವಾಟಿಯ ಅವರ ಪ್ರತಿಮೆಯೊಂದನ್ನು ನಿಲ್ಲಿಸಲಿ ಎಂದಿದ್ದಾರೆ ಸೆಹವಾಗ್!
ಸದಾ ಪಂಜಾಬ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ತೆವಾಟಿಯ ಎರಡು ಸಲ ಅವರ ಗೆಲುವನ್ನು ಕಸಿದಿರುವುದೇ ಇದಕ್ಕೆ ಕಾರಣ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.