Rain Alert: ಕರಾವಳಿಯಲ್ಲಿ ಎಲ್ಲೋ ಅಲರ್ಟ್; ಮಳೆ ಸಾಧ್ಯತೆ
Team Udayavani, Sep 11, 2024, 1:34 AM IST
ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ ಇದ್ದು, ಸೆ.11 ಮತ್ತು 12 ರಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ವೇಳೆ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ. ದ.ಕ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಮಂಗಳೂರಿನಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.
ಉಡುಪಿ ಜಿಲ್ಲಾದ್ಯಂತ ಮಂಗಳವಾರ ಹಲವೆಡೆ ಸಾಧಾರಣ ಮಳೆಯಾಗಿದೆ. ಬೈಂದೂರು, ಕುಂದಾಪುರ, ಹೆಬ್ರಿ, ಪಡುಬಿದ್ರಿ, ಕಾರ್ಕಳ, ಅಜೆಕಾರು, ಉಡುಪಿ, ಕಾಪು, ಬ್ರಹ್ಮಾವರ ಭಾಗದಲ್ಲಿ ಬಿಸಿಲು ಮೋಡ ಕವಿದ ವಾತಾವರಣದೊಂದಿಗೆ ಬಿಟ್ಟುಬಿಟ್ಟು ಸಣ್ಣದಾಗಿ ಮಳೆ ಸುರಿದಿದೆ. ಮಂಗಳೂರಿನಲ್ಲಿ 29.6 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.1 ಡಿ.ಸೆ. ಕಡಿಮೆ ಮತ್ತು 23.8 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗು ವಾಡಿಕೆಗಿಂತ 0.7 ಡಿ.ಸೆ. ಹೆಚ್ಚಿತ್ತು.
ಕೊಡಗಿನಲ್ಲಿ ಮುಂದುವರಿದ ಮಳೆಯ ಅಬ್ಬರ
ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಮಳೆ ಮುಂದುವರಿದಿದ್ದು, ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಕಳೆದ 24 ಗಂಟೆಗಳಲ್ಲಿ ಮೂರು ಇಂಚು ಮಳೆಯಾಗಿದೆ. ಮಳೆ ತಾಲೂಕಿನಲ್ಲಿ ಬೆಳಗ್ಗೆ ಬಿಸಿಲಿನ ವಾತಾವರಣವಿತ್ತಾದರೂ 11 ಗಂಟೆಯ ಅನಂತರ ನಿರಂತರ ಮಳೆ ಸುರಿದಿದೆ. ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರ ಪೇಟೆ ಹಾಗೂ ಕುಶಾಲನಗರ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.
ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 26.65 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 13.43 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2712.85 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1380.25 ಮಿ.ಮೀ ಮಳೆಯಾಗಿತ್ತು.
ಕೊಟ್ಟಿಗೆಹಾರ: 7 ಸೆಂ.ಮೀ. ಮಳೆ
ಬೆಂಗಳೂರು: ಮಂಗಳ ವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆ ಮಳೆಯಾಯಿತು. ಕ್ಯಾಸಲ್ರಾಕ್, ಹೊನ್ನಾವರ ಮತ್ತು ಕೊಟ್ಟಿಗೆಹಾರದಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 7 ಸೆಂ.ಮೀ. ಮಳೆ ಸುರಿಯಿತು.
ಗುರುವಾರ ಬೆಳಗ್ಗೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಜಿಲ್ಲೆಗಳ ಒಂದೆರಡು ಕಡೆ ಭಾರೀ ಮಳೆಯಾಗಲಿದ್ದರೆ, ಉಳಿದಂತೆ ರಾಜ್ಯದ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.