Rain, Flood: ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೆರವು: ಉಸ್ತುವಾರಿ ಸಚಿವ ದಿನೇಶ್
ಬಂಟ್ವಾಳದ ನೆರೆ ಪೀಡಿತ ಪ್ರದೇಶಗಳಲ್ಲಿ
Team Udayavani, Aug 3, 2024, 6:53 AM IST
ಬಂಟ್ವಾಳ: ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ 1.25 ಲಕ್ಷ ರೂ. ಪರಿಹಾರ ಮೊತ್ತದ ಜತೆಗೆ ವಿವಿಧ ವಸತಿ ನಿಗಮಗಳ ಯೋಜನೆಗಳನ್ನು ಸೇರಿಸಿಕೊಂಡು 5 ಲಕ್ಷ ರೂ. ನೆರವು ನೀಡುವ ಕುರಿತು ಅಧಿಕೃತ ಘೋಷಣೆಯಾಗಿದೆ. ಜತೆಗೆ ಭಾಗಶಃ ಹಾನಿಗೀಡಾದ ಮನೆಗೆ ನೀಡುತ್ತಿದ್ದ 6,500 ರೂ.ಗಳನ್ನು 50 ಸಾವಿರ ರೂ.ಗಳಿಗೆ ಏರಿಸಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಶುಕ್ರವಾರ ಬಂಟ್ವಾಳದಲ್ಲಿ ನೆರೆ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ ಬಳಿಕ ಪತ್ರಕರ್ತರ ಜತೆಗೆ ಮಾತನಾಡಿದರು.
ಹಿಂದೆ ಮೂರು ರೀತಿಯಲ್ಲಿ ಪರಿಹಾರ ವಿತರಿಸಲಾಗುತ್ತಿದ್ದು, ಅದರಲ್ಲಿ ಸಾಕಷ್ಟು ನ್ಯೂನತೆಗಳಿತ್ತು. ಜತೆಗೆ ಅದನ್ನು ದುರ್ಬಳಕೆ ಮಾಡಿದ ಉದಾಹರಣೆಗಳೂ ಇವೆ. ವಿಕೋಪದ ಸಂದರ್ಭದಲ್ಲಿ ಜನರ ಪರವಾಗಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದ್ದೇವೆ ಎಂದರು.
ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಿಲ್ಲ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಶೋಕ್ ಕಂದಾಯ ಸಚಿವರಾಗಿದ್ದಾಗ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ನಾವು ಕೇಳಬೇಕಿದೆ. ತಾನು ಹಿಂದೆ ಜಿಲ್ಲಾ ಭೇಟಿ ನಿಗದಿ ಮಾಡಿದ್ದಾಗ ವಿಮಾನ ತಾಂತ್ರಿಕ ಸಮಸ್ಯೆಯಿಂದ ಭೇಟಿ ಸಾಧ್ಯವಾಗಲಿಲ್ಲ. ಬಳಿಕ ದಿಲ್ಲಿ ಭೇಟಿಯಲ್ಲಿದ್ದೆ ಎಂದರು.
ತಾನು ದ.ಕ.ಜಿಲ್ಲಾಡಳಿತದ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದೇನೆ. ಪ್ರಾಕೃತಿಕ ವಿಕೋಪದ ಪರಿಹಾರ ಕೆಲಸಗಳು, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಈ ಹಿಂದೆಯೇ ಸಭೆಗಳನ್ನು ನಡೆಸಿದ್ದೆ. ವಿಕೋಪಗಳಾದಾಗ ಆಡಳಿತದ ಸಿದ್ಧತೆ, ಹೋಂಗಾರ್ಡ್, ಅಗ್ನಿಶಾಮಕ ಸಿಬಂದಿ, ಬೋಟ್‌ಗಳ ವ್ಯವಸ್ಥೆ, ಅಗತ್ಯ ಔಷಧಗಳು, ಇತರ ಪರಿಕರ ಗಳನ್ನು ಮೊದಲೇ ತಯಾರಿಸಿ ಇಟ್ಟುಕೊಳ್ಳಲಾಗಿದೆ ಎಂದರು.
ತುರ್ತು ಅಗತ್ಯ ಅನುದಾನ ಕೂಡ ಜಿಲ್ಲಾಧಿಕಾರಿಗಳ ಪಿಡಿ ಖಾತೆ ಯಲ್ಲಿದೆ. ಪ್ರತಿ ಗ್ರಾ.ಪಂ.ಗಳಿಗೂ ಹಣ ನೀಡಲಾಗಿದೆ. ತುರ್ತು ಕೆಲಸ ಗಳಿಗೆ ಶೀಘ್ರ ಅನುಮೋದನೆಗೂ ವ್ಯವಸ್ಥೆ ಮಾಡಿದ್ದೇವೆ. ಜಿಲ್ಲಾಡಳಿತ ಸಮರ್ಪಕವಾಗಿ ಸ್ಪಂದಿಸುತ್ತಿದೆ. ಜಿಲ್ಲಾಧಿ ಕಾರಿ, ಜಿ.ಪಂ.ಸಿಇಒ ಸಹಿತ ಎಲ್ಲ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಮಾಜಿ ಸಚಿವ ರಮಾನಾಥ ರೈ, ಜಿ.ಪಂ.ಮಾಜಿ ಸದಸ್ಯ ಪದ್ಮಶೇಖರ್ ಜೈನ್, ತಾ.ಪಂ.ಮಾಜಿ ಅಧ್ಯಕ್ಷ ಸುದರ್ಶನ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್ ಉಪಸ್ಥಿತರಿದ್ದರು.
ಆಲಡ್ಕ ಸಮಸ್ಯೆಗೆ ನಿವೇಶನ ಅಗತ್ಯ
ನೆರೆ ಪೀಡಿತ ಆಲಡ್ಕದಲ್ಲಿ ಮನೆ ಮುಳುಗಡೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ನಿವೇಶನದ ಅಗತ್ಯವಿದ್ದು, ಈಗಾಗಲೇ ನಿಗದಿ ಮಾಡಿರುವ 3 ಎಕ್ರೆ ಜಾಗಕ್ಕೆ ಯಾರೋ ಕುಮ್ಕಿ ಜಾಗವೆಂದು ಕೇಸ್ ಹಾಕಿದ್ದಾರೆ. ಅದು ಜಿಲ್ಲಾಧಿಕಾರಿಗಳ ಮುಂದಿದ್ದು, ಹೀಗಾಗಿ ಅದನ್ನು ಶೀಘ್ರ ಇತ್ಯರ್ಥ ಮಾಡಿ ಸೈಟ್‌ಗಳ ಮೂಲಕ ಹಂಚಿಕೆ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಸರಕಾರದ ವಸತಿ ಯೋಜನೆ ಅನುದಾನ ಬಳಸಿಕೊಂಡು ಅವರು ಮನೆ ನಿರ್ಮಿಸಿಕೊಳ್ಳಬೇಕಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.