Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?
ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯವಾಗಿದೆ.
Team Udayavani, Apr 17, 2024, 12:10 PM IST
ಉಡುಪಿ: ಯುಗಾದಿಯ ಸಂದರ್ಭದಲ್ಲಿ ಹಾಗೂ ಅನಂತರ ಭೂಮಿಯಲ್ಲಿ ಅನೇಕ ಪರಿವರ್ತನೆಗಳು ಸೂರ್ಯನ ತಾಪದಿಂದಾಗಿ ಆಗುತ್ತವೆ. ವಸಂತದ ಸೂರ್ಯನ ಪ್ರತಾಪದಿಂದ ಸೆಕೆಯ ಅನುಭವ ಪ್ರಾಣಿ ಸಂಕುಲಕ್ಕಾದರೆ, ಸಸ್ಯಗಳಿಗೆ ಹೊಸ ಚೈತನ್ಯದ ಅನುಭವವಾಗುತ್ತದೆ. ಹೊಸ ಚಿಗುರು, ಹೂವು, ಹಣ್ಣುಗಳ ಮೂಡುವಿಕೆ ಸಸ್ಯಗಳ ಅಂದವನ್ನು ಹೆಚ್ಚಿಸಿ ಪ್ರಕೃತಿಯನ್ನು ಸುಂದರವಾಗಿಸುತ್ತದೆ.
ಸೂರ್ಯನಿಗೆ ಅನ್ವಯ ದೇಹ ಸ್ಪಂದನ
ಹಿಂದೆ ಸರಿದ ಶಿಶಿರದ ಚಳಿಯಲ್ಲಿ ದೇಹದಲ್ಲಿ ಹೆಪ್ಪುಗಟ್ಟಿರುವ ಕಫವನ್ನು ಬೇಸಗೆಯ ಸೂರ್ಯನ ಶಾಖ ಕರಗಿಸಿದರೂ, ಅದು ಅತಿ ಶೀಘ್ರದಲ್ಲಿ ಕಫರೋಗಗಳನ್ನು ಉಂಟು ಮಾಡುವ ಸಾಧ್ಯತೆ ಅಧಿಕವಾಗುತ್ತದೆ. ಜೀರ್ಣ ಶಕ್ತಿಯೂ ಕಡಿಮೆ ಯಾಗುತ್ತದೆ. ಹಾಗಾಗಿ ಕಫವನ್ನು ಕೂಡಲೇ ನಿಯಂತ್ರಿಸಬೇಕು. ಸ್ವಸ್ಥರಾದರೂ ಕೂಡ ಪಂಚಕರ್ಮಗಳಲ್ಲಿ ಒಂದಾದ ವಮನ ಕ್ರಮ, ನಸ್ಯಕರ್ಮ ಇತ್ಯಾದಿಗಳನ್ನು ಅನುಸರಿಸಿದರೆ ಕಫಾಂಶವನ್ನೊಳಗೊಂಡ ದೋಷಗಳು ಶರೀರದಿಂದ ಹೊರ ಹಾಕಲ್ಪಟ್ಟು ಮುಂದೆ ಬರಬಹು ದಾದ ಕಫ ರೋಗಗಳನ್ನು ನಿಯಂತ್ರಿಸಬಹುದು. ಅದರಲ್ಲೂ ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯವಾಗಿದೆ.
ದ್ರವಾಹಾರಕ್ಕೆ ಪ್ರಾಮುಖ್ಯತೆ ಇರಲಿ
ಉಷ್ಣತೆಯಿಂದಾಗಿ ದೇಹದ ನೀರು, ಶರ್ಕರ ಮತ್ತು ಲವಣಾಂಶ ಬೆವರಿನಲ್ಲಿ ಹೊರಹೋಗುತ್ತದೆ. ಜೀವಕೋಶಗಳು ಶಕ್ತಿಗಾಗಿ
ಹಾತೊರೆಯುತ್ತವೆ. ಅದಕ್ಕಾಗಿಯೇ ಪಾನಕದ ಅಭ್ಯಾಸ ಒಳ್ಳೆಯದು. ಬೆಲ್ಲದ ಪಾನಕಗಳು ದೇಹಕ್ಕೆ ಪೂರಕ. ಈ ದಿನಗಳಲ್ಲಿ ಬೆಳೆಯುವ ಬೇಲದ ಹಣ್ಣು, ಮಾವಿನಹಣ್ಣುಗಳ ರಸದ ಸೇವನೆ ಸಕಲ ಧಾತುಗಳನ್ನು ಪೋಷಿಸಿ ಹೃದಯಕ್ಕೂ ಹಿತವಾಗಿ ದೇಹದ
ಆರೋಗ್ಯವನ್ನು ಕಾದಿರಿಸುತ್ತದೆ. ನೀರಿನ ಜತೆಗೆ ಲಾವಂಚ, ರಕ್ತಚಂದನ, ಶುಂಠಿ, ಜೇನು ಬೆರೆಸಿಯೂ ಸೇವಿಸಬಹುದು. ಹಾಗಾಗಿಯೇ ಬೇಸಗೆಯಲ್ಲಿ ರಾಮನವಮಿ, ವಸಂತೋತ್ಸವಗಳಲ್ಲಿ ಪಾನಕ-ಕೋಸಂಬರಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ.
ವರ್ಜಿಸಬೇಕಾದ ಆಹಾರ
ಸಿಹಿ, ಹುಳಿ, ಲವಣಯುಕ್ತ, ಸ್ನಿಗ್ಧ ಆಹಾರಗಳನ್ನು ಸೇವಿಸಬಾರದು. ಎಣ್ಣೆಯಲ್ಲಿ ಕರಿದ ತಿಂಡಿಗಳಾದ ವಡೆ, ಪಕೋಡ, ಬೋಂಡ, ಪೂರಿ, ಸಮೋಸ, ಪಪ್, ಚಾಟ್ ಇತ್ಯಾದಿಗಳನ್ನು ವರ್ಜಿಸಬೇಕು. ಹೊಸ ಅಕ್ಕಿ, ರಾಗಿ, ಗೋಧಿ, ಉದ್ದುಗಳನ್ನು ತಿನ್ನದಿದ್ದರೆ ಒಳಿತು.
ಬೇಸಗೆಯಲ್ಲಿ ಆಹಾರ ನಿಯಮಗಳು
ಜಠರಾಗ್ನಿಯನ್ನು ಉದ್ದೀಪಿಸುವ ಖಾರ, ಕಫವನ್ನು ಶಮನ ಮಾಡುವ ಒಗರು ಹಾಗೂ ಕಹಿ ರಸ ಉಳ್ಳ ದ್ರವ್ಯಗಳನ್ನು ಸೇವಿಸಬೇಕು. ಬೇವು-ಬೆಲ್ಲದ ಸೇವನೆಯ ಪರಿಪಾಠವೂ ಆಹಾರದ ಕ್ರಮವನ್ನು ಕಾಲಕ್ಕನುಸಾರವಾಗಿ ಬದಲಾಯಿಸಿಕೊಳ್ಳಿ ಎಂಬ ಅವರ ಸೂಚನೆಯನ್ನು ತಿಳಿಸುತ್ತದೆ. ಹಳೆ ಅಕ್ಕಿ, ಹಳೆ ಗೋಧಿ, ಹಳೆಬಾರ್ಲಿ, ಹೆಸರು ಇತ್ಯಾದಿಯಿಂದ ತಯಾರಿಸಿದ ಆಹಾರ, ತುಂಬಾ ಬಿಸಿಯಿರದ ಅನ್ನ, ನಿಂಬೆ, ಪಡವಲ, ಬದನೆ ಇತ್ಯಾದಿ ಕಹಿ ರಸವಿರುವ ವಾತಹರ ತರಕಾರಿಗಳು, ಜೇನುತುಪ್ಪ ಸೇವನೆಗೆ ಅರ್ಹವಾಗಿವೆ. ಕೋಸಂಬರಿ ಸೆಕೆಗಾಲದಲ್ಲಿ ಒಳ್ಳೆಯ ಆಹಾರ. ಸ್ವಲ್ಪ ಹೆಸರುಕಾಳು, ಕಡಲೇಬೇಳೆ, ಸೌತೆಕಾಯಿ, ಕೊತ್ತಂಬರಿ ಸೊಪ್ಪು,ಉಪ್ಪು ಸೇರಿಸಿ ಅದನ್ನು ತಯಾರು ಮಾಡಬಹುದು. ತಿಮಿರೆ, ಅತ್ತಿ, ಶುಂಠಿ, ಮೆಂತೆಗಳನ್ನು ಬಳಸಿದ ತಂಬುಳಿಗಳನ್ನು
ಬಳಸಬಹುದು.
ವಿಹಾರ ನಿಯಮಗಳು
ಕಫವನ್ನು ನಿಯಂತ್ರಿಸಲು ಸ್ವಲ್ಪ ಅಧಿಕವೆನಿಸುವ ಸ್ನಾನ, ವ್ಯಾಯಾಮ, ಯೋಗ, ಕುಸ್ತಿ, ವೇಗದ ನಡಿಗೆ, ಸೈಕಲ್ ಸವಾರಿ, ಸ್ಕಿಪ್ಪಿಂಗ್ ಇತ್ಯಾದಿಗಳು ಈ ಸಮಯದಲ್ಲಿ ಸೂಕ್ತ. ಮೈಯನ್ನು ಚೆನ್ನಾಗಿ ತಿಕ್ಕಿಸಿಕೊಳ್ಳಿಸಲು ಮರ್ದನ ಕ್ರಿಯೆ ಒಳ್ಳೆಯದು. ಇದಕ್ಕೆ ಎಳ್ಳೆಣ್ಣೆ ಅಲ್ಲದೇ ಔಷಧೀಯ ಚೂರ್ಣಗಳನ್ನು ಬಳಸಬಹುದು. ಶರೀರಕ್ಕೆ ನೈಸರ್ಗಿಕವಾದ ಚಂದನ, ಕುಂಕುಮಗಳ ಲೇಪನ
ಹಿತವಾಗಿರುತ್ತದೆ. ಪ್ರಕೃತಿ ಸೌಂದರ್ಯದ ಸರೋವರಗಳಿರುವ ಉಪವನಗಳಲ್ಲಿ, ಕಾಡು-ಮೇಡುಗಳಲ್ಲಿ, ಕೋಗಿಲೆಗಳ ದನಿಯನ್ನು ಆಲಿಸುವ ವಿಹಾರವೂ ಆರೋಗ್ಯದಾಯಕ. ಹಗಲುನಿದ್ರೆ ಸುತಾರಾಂ ಸಲ್ಲದು. ಸ್ನೇಹಿತರ ಸಂಗಕ್ಕೆ, ಪ್ರಿಯವ್ಯಕ್ತಿಗಳ ಭೇಟಿಗೆ, ಕ್ರೀಡೆಗಳಲ್ಲಿ, ಕಥೆ- ಕವನ- ಪುರಾಣ ಶ್ರವಣ, ಸಾಹಿತ್ಯ-ವಿಜ್ಞಾನ ಇತ್ಯಾದಿ ಗೋಷ್ಠಿಗಳಲ್ಲಿ ಭಾಗವಹಿಸುವುದಕ್ಕೆ ಇದು ಸಕಾಲ. ಬೇಸಗೆಯಲ್ಲಿ ದೇವಸ್ಥಾನಗಳ ರಥೋತ್ಸವ, ಮದುವೆ ಮುಂಜಿ ಇತ್ಯಾದಿ ಮಂಗಳಕಾರ್ಯಗಳು ಜರಗುತ್ತವೆ.ರಾಮನವಮಿ, ವಸಂತೋತ್ಸವ ಹೀಗೆ ಹಬ್ಬಗಳ ಸಾಲೂ ಇದೆ. ಮನಸ್ಸನ್ನು ಸಂತೋಷವಾಗಿರಿಸಲು ಇದೆಲ್ಲ ಸಹಕಾರಿ. ಮನಸ್ಸು ಸಂತೋಷದಿಂದ ಇದ್ದರೆ ಶರೀರವೂ ಆರೋಗ್ಯದಿಂದಿರುತ್ತದೆ.
ರೋಗಾಣುಗಳಿಂದ ರಕ್ಷಣೆ ಅಗತ್ಯ ಕಲುಷಿತ ಗಾಳಿ- ನೀರು- ಉಸಿರು- ಕ್ರಿಮಿ- ವಾತಾವರಣಗಳಿಂದ ನೆಗಡಿ- ಕೆಮ್ಮು- ಜ್ವರ- ಚರ್ಮರೋಗ ಹೀಗೆ ಅನೇಕ ಸಾಂಕ್ರಾಮಿಕ ರೋಗಗಳು ದೇಹವನ್ನು ಆಕ್ರಮಿಸಬಹುದು. ಹಾಗಾಗಿ ಜಾಗರೂಕತೆ ಅನಿವಾರ್ಯ.
*ಡಾ| ಚೈತ್ರಾ ಹೆಬ್ಬಾರ್,
ಆಯುರ್ವೇದ ವೈದ್ಯರು, ಎಸ್‌ಡಿಎಂ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.