Ration: ಕರಾವಳಿಗೆ ಹೊರರಾಜ್ಯದ ಕುಚಲಕ್ಕಿಯೇ ಅನಿವಾರ್ಯ; ಭತ್ತವೂ ಇಲ್ಲ, ಅಕ್ಕಿಯೂ ಇಲ್ಲ,
ಈ ವರ್ಷ ಮಳೆ ಉತ್ತಮವಾಗಿ ಬಂದಿದ್ದರೂ ಬಿತ್ತನೆ 35 ಸಾವಿರ ಹೆಕ್ಟೇರ್ ದಾಟಿಲ್ಲ
Team Udayavani, Oct 16, 2024, 7:50 AM IST
ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯಡಿ ಸ್ಥಳೀಯ ಕುಚ್ಚಲು ಅಕ್ಕಿ ನೀಡುವ ಪ್ರಸ್ತಾವನೆಗೆ ಗೆದ್ದಲು ಹಿಡಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಕಡಿಮೆಯಾಗಿದ್ದರಿಂದ ಉತ್ಪಾದನೆಯ ಮೇಲೂ ಹೊಡೆತ ಬಿದ್ದಿದ್ದು ಹೊರ ರಾಜ್ಯದ ಅಕ್ಕಿ ಅನಿವಾರ್ಯವಾಗುವ ಸ್ಥಿತಿ ಉದ್ಭವಿಸಿದೆ. ಇದರಿಂದ ಸ್ಥಳೀಯ ಕುಚ್ಚಲಕ್ಕಿ ದರ ಏರಿಕೆಗೂ ಕಾರಣವಾಗಬಹುದು.
2023ರ ಮುಂಗಾರಿನಲ್ಲಿ ಜಿಲ್ಲಾದ್ಯಂತ 38 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಸಕಾಲದಲ್ಲಿ ಮಳೆ ಬಾರದೇ ಇದ್ದುದ್ದರಿಂದ ರೈತರು ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಪಡೆದಿರಲಿಲ್ಲ. ಈ ವರ್ಷ ಮಳೆ ಚೆನ್ನಾಗಿ ಬಂದಿದ್ದರೂ ಬಿತ್ತನೆ 35 ಸಾವಿರ ಹೆಕ್ಟೇರ್ ದಾಟಿರಲಿಲ್ಲ. ಕಳೆದ ವರ್ಷಕ್ಕಿಂತ ಸುಮಾರು 3 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆ ಕಡಿಮೆಯಾಗಿದೆ. ಹಿಂಗಾರಿನಲ್ಲಿ ಕಳೆದ ವರ್ಷ 5000 ಹೆ. ಬಿತ್ತನೆ ಮಾಡಲಾಗಿತ್ತು. ಈ ವರ್ಷ 5179 ಹೆ. ಏರಿಕೆಯಾಗಿದೆ.
ಕುಸಿದ ಇಳುವರಿ:
ಮುಂಗಾರು ಮತ್ತು ಹಿಂಗಾರು ಸೇರಿಸಿ ಕಳೆದ ವರ್ಷ 43 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈ ವರ್ಷ ಅದು 40191 ಹೆ. ಇಳಿದಿದೆ. ಕಳೆದ ವರ್ಷ ಮುಂಗಾರಿನಲ್ಲಿ 1.52 ಲಕ್ಷ ಟನ್ ಹಾಗೂ ಹಿಂಗಾರಿನಲ್ಲಿ 0.2 ಲಕ್ಷ ಟನ್ ಭತ್ತದ ಇಳುವರಿ ಪಡೆಯಲಾಗಿತ್ತು. ಈ ವರ್ಷ ಮುಂಗಾರಿನಲ್ಲಿ 1.40 ಲಕ್ಷ ಟನ್ ಹಾಗೂ ಹಿಂಗಾರಿನಲ್ಲಿ 0.21 ಲಕ್ಷ ಮೆಟ್ರಿಕ್ ಇಳುವರಿ ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ಕಳೆದ ವರ್ಷ 1.72 ಲಕ್ಷ ಟನ್ ಭತ್ತದ ಉತ್ಪಾದನೆಯಾಗಿತ್ತು. ಈ ಬಾರಿ 1.61 ಲಕ್ಷ ಟನ್‌ಗೆ ಇಳಿಯುವ ಸಾಧ್ಯತೆಯಿದೆ. ಸುಮಾರು 11 ಲಕ್ಷ ಟನ್ ಇಳುವರಿ ಕಡಿಮೆಯಾಗಲಿದೆ ಎನ್ನುತ್ತದೆ ಕೃಷಿ ಇಲಾಖೆ ಲೆಕ್ಕಾಚಾರ.
ಅಕ್ಕಿ ಉತ್ಪಾದನೆಯ ಲೆಕ್ಕಾಚಾರ
ಭತ್ತದ ಒಟ್ಟು ಉತ್ಪಾದನೆಯ ಸರಿ ಸುಮಾರು ಶೇ.65ರಷ್ಟು ಅಕ್ಕಿಯಾಗಲಿದೆ. ಉಳಿದ ಶೇ.35ರಷ್ಟು ಕಚ್ಚಾ ರೂಪದಲ್ಲಿ ಸಿಗಲಿದ್ದು, ಪಶು ಆಹಾರಕ್ಕೆ ಹೆಚ್ಚು ಬಳಸಲಾಗುತ್ತದೆ. ಕಳೆದ ವರ್ಷದ ಒಟ್ಟು ಭತ್ತದ ಉತ್ಪಾದನೆಯಲ್ಲಿ 0.98 ಲಕ್ಷ ಟನ್ ಅಕ್ಕಿ ಲಭ್ಯವಾಗಿತ್ತು. ಈ ವರ್ಷದ ಅಂದಾಜಿನಲ್ಲಿ 91 ಲಕ್ಷ ಟನ್ ಅಕ್ಕಿ ದೊರೆಯಲಿದೆ. ಅಂದರೆ ಅಕ್ಕಿ ಉತ್ಪಾದನೆಯಲ್ಲೂ ಸರಿ ಸುಮಾರು 7 ಲಕ್ಷ ಟನ್ ಕಡಿಮೆಯಾಗಲಿದೆ.
ಬೇಕಿರುವ ಅಕ್ಕಿಯ ಪ್ರಮಾಣ
ಜಿಲ್ಲೆಯ ಒಟ್ಟು ಜನಸಂಖ್ಯೆ (ಈ ಹಿಂದೆ ನಡೆದ ಜನಗಣತಿ ಆಧಾರ) 11.77 ಲಕ್ಷ ಎಂದು ಅಂದಾಜಿಸಿದಲ್ಲಿ 1.51 ಲಕ್ಷ ಟನ್ ಅಕ್ಕಿ ಜಿಲ್ಲೆ ಬೇಕು. ಜಿಲ್ಲೆಯಲ್ಲಿ ಈ ವರ್ಷ 0.91 ಲಕ್ಷಟನ್ ಅಕ್ಕಿ ಮಾತ್ರ ಲಭ್ಯವಾಗಲಿದ್ದು, 60 ಲಕ್ಷ ಟನ್ ಅಕ್ಕಿಯ ಕೊರತೆ ಬೀಳಲಿದೆ. ಈ ಕೊರತೆಯನ್ನು ಸರಿದೂಗಿಸಲು ಹೊರ ರಾಜ್ಯಗಳ ಅಕ್ಕಿಗೆ ಅನಿವಾರ್ಯವಾಗಿ ಮೊರೆ ಹೋಗಬೇಕಾಗಿದೆ.
ಕೇರಳ, ಆಂಧ್ರದ ಅಕ್ಕಿ
ಕೇರಳ ಹಾಗೂ ಆಂಧ್ರ ಪ್ರದೇಶ, ತೆಲಂಗಾಣದ ಅಕ್ಕಿ ಹೆಚ್ಚಾಗಿ ಜಿಲ್ಲೆಗೆ ಬರುತ್ತದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲೂ ಇತ್ತೀಚೆಗೆ ಕುಚ್ಚಲು ಆಕ್ಕಿ ಬೆಳೆಯತೊಡಗಿದ್ದಾರೆ. ಪಡಿತರ ವ್ಯವಸ್ಥೆಯಡಿ ಹೊರ ರಾಜ್ಯದ ಕುಚ್ಚಲು ಅಕ್ಕಿಯನ್ನೇ ಈವರೆಗೂ ವಿತರಿಸುತ್ತಿದ್ದು, ಮುಂದೆಯೂ ಇದೇ ಮುಂದುವರಿಯಲಿದೆ ಎನ್ನುತ್ತಾರೆ ಆಹಾರ ಇಲಾಖೆಯ ಅಧಿಕಾರಿಗಳು.
ಬೆಳ್ತಿಗೆ ಅಕ್ಕಿಗೂ ಬೇಡಿಕೆ
ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿಯೇ ಬಿಸಿಯೂಟ ಇರುವುದರಿಂದ ಮಕ್ಕಳು ಮಧ್ಯಾಹ್ನದ ಹೊತ್ತು ಬೆಳ್ತಿಗೆ ಅಕ್ಕಿಯ ಊಟ ಮಾಡುತ್ತಾರೆ. ಹಾಗಾಗಿ ಮನೆಯಲ್ಲಿ ರಾತ್ರಿ ಊಟಕ್ಕೆ ಬೆಳ್ತಿಗೆ ಅಕ್ಕಿಯ ಅನ್ನವೇ ಬೇಕು ಎನ್ನುತ್ತಾರೆ. ಹೀಗಾಗಿ ಎರಡು ರೀತಿಯ ಅನ್ನ ನಿತ್ಯ ಮಾಡುವುದು ಕಷ್ಟವಾಗುವುದರಿಂದ ಮಕ್ಕಳಿಗೆ ಯಾವುದು ಬೇಕೋ ಅದಕ್ಕೆ ಮನೆಯ ಇನ್ನುಳಿದವರು ಹೊಂದಿಕೊಳ್ಳುತ್ತಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಬೆಳ್ತಿಗೆ ಅಕ್ಕಿಗೂ ಬೇಡಿಕೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಖಾಸಗಿ ರೈಸ್ ಮಿಲ್ ಮಾಲಕರೊಬ್ಬರು.
“ಸ್ಥಳೀಯ ಭತ್ತಕ್ಕೆ ಉತ್ತಮ ಬೆಲೆ ನೀಡಿ ಖರೀದಿಸಲು ಖಾಸಗಿ ರೈಸ್ ಮಿಲ್ ಮಾಲಕರಿಗೆ ಸೂಚನೆ ನೀಡಿದ್ದೇವೆ. ಕೊರತೆ ಸರಿದೂಗಿಸಲು ಹೊರ ರಾಜ್ಯದ ಅಕ್ಕಿಯನ್ನು ಪಡೆಯಬೇಕು. ಭತ್ತದ ಕೃಷಿಗೆ ಉತ್ತೇಜನ ನೀಡುವ ಕಾರ್ಯ ಇನ್ನಷ್ಟು ನಡೆಯಲಿದೆ.” -ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.