ಧಾರ್ಮಿಕ ಸಮಾವೇಶ: ಮೂವರು ಮಹಿಳೆಯರಿಗೂ ಸೋಂಕು
ಕೋವಿಡ್ 19 ಪೀಡಿತರ ಸಂಖ್ಯೆ 151ಕ್ಕೆ ಏರಿಕೆ ವಾರದಲ್ಲಿ ಸರಿಸುಮಾರು ದುಪ್ಪಟ್ಟಾದ ಪ್ರಕರಣಗಳು
Team Udayavani, Apr 6, 2020, 6:30 AM IST
ಬೆಂಗಳೂರು: ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಮೂರು ಮಹಿಳೆಯರು ಮತ್ತು ಇಬ್ಬರು ಪುರುಷರ ಸಹಿತ ರಾಜ್ಯದಲ್ಲಿ ವಿವಿಧೆಡೆ ರವಿವಾರ ಏಳು ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ.
ರವಿವಾರ ಸೋಂಕು ದೃಢಪಟ್ಟವರ ಪೈಕಿ ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಬೆಳಗಾವಿ ಜಿಲ್ಲೆಯ ರಾಯ್‌ಬಾಗ್‌ನ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ, ಬಳ್ಳಾರಿ ನಗರದ ಒಬ್ಬ ಪುರುಷ ಮತ್ತು ಇತ್ತೀಚೆಗೆ ದುಬಾೖ ಪ್ರಯಾಣ ಹಿನ್ನೆಲೆ ಹೊಂದಿದ್ದ ಬೆಂಗಳೂರಿನ ದಂಪತಿ ಇದ್ದಾರೆ. ಇನ್ನು ನಿಜಾಮುದ್ದೀನ್ ಧರ್ಮ ಸಮಾವೇಶದಲ್ಲಿ ಭಾಗವಹಿಸಿದ್ದ ಪುರುಷರಲ್ಲಿ ಮಾತ್ರ ಇದುವರೆಗೂ ಸೋಂಕು ಕಾಣಿಸಿಕೊಂಡಿತ್ತು. ಆದರೆ ರವಿವಾರ ಮೂವರು ಮಹಿಳೆಯರಿಗೂ ಕೋವಿಡ್ 19 ಸೋಂಕು ತಗಲಿರುವುದು ದೃಢಪಟ್ಟಿದೆ. ರವಿವಾರ ಸೋಂಕು ದೃಢಪಟ್ಟವರ ಪೈಕಿ ಬೆಂಗಳೂರಿನ ದಂಪತಿಗೆ ಮತ್ತು ಬಳ್ಳಾರಿಯ ವ್ಯಕ್ತಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಹೀಗಾಗಿ ಅವರನ್ನು ಆಸ್ಪತ್ರೆಯಲ್ಲಿಟ್ಟು ಕ್ವಾರಂಟೈನ್ ಮಾಡಲಾಗಿದೆ.
ಆರೋಗ್ಯ ಇಲಾಖೆಯು ಈ ಎಲ್ಲ ಸೋಂಕಿತ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದು, ಅವರೆಲ್ಲರನ್ನೂ ಶಂಕಿತರು ಎಂದು ಗುರುತಿಸಿ ಮನೆ ಮತ್ತು ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಲಾಗಿದ್ದು ಕಡ್ಡಾಯವಾಗಿ ಎಲ್ಲರಿಗೂ ಸೋಂಕು ಪರೀಕ್ಷೆ ಮಾಡಲಿದೆ.
ಮತ್ತೂಬ್ಬರು ಗುಣಮುಖರಾಗಿ ಮನೆಗೆ
ಇತ್ತೀಚೆಗೆ ಸ್ಪೇನ್ ಪ್ರವಾಸ ಮುಗಿಸಿಕೊಂಡು ಬಂದು ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆ ನಗರದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರಿನ ಯುವಕ ಸಂಪೂರ್ಣ ಗುಣಮುಖನಾಗಿ ರವಿವಾರ ಮನೆಗೆ ತೆರಳಿದ್ದಾನೆ. ಈ ಮೂಲಕ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ ಒಟ್ಟಾರೆ ಸಂಖ್ಯೆ 12 ಆಗಿದ್ದು, ಈ ಪೈಕಿ ಬೆಂಗಳೂರಿನವರು 10 ಮಂದಿ ಮತ್ತು ಕಲಬುರಗಿಯ ಇಬ್ಬರು ಸೇರಿದ್ದಾರೆ.
ವಾರದಲ್ಲಿ ದುಪ್ಪಟ್ಟು – ಸೋಂಕಿತರ ಹೆಚ್ಚಳವಾಗಿದ್ದು ಇಲ್ಲಿ!
ನಿಜಾಮುದ್ದೀನ್ ಧಾರ್ಮಿಕ ಸಮಾವೇಶ ಮತ್ತು ಮೈಸೂರು ಔಷಧ ಕಂಪೆನಿ ಕೋವಿಡ್ 19 ಸೋಂಕಿತ ಪ್ರಕರಣಗಳಿಂದ ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಕಳೆದ ಒಂದು ವಾರದಲ್ಲಿ ಸರಿಸುಮಾರು ದುಪ್ಪಟ್ಟಾಗಿದೆ. ಕಳೆದ ರವಿವಾರ ಅಂತ್ಯಕ್ಕೆ (ಮಾ.29) 83 ಇದ್ದ ಸೋಂಕಿತರ ಸಂಖ್ಯೆ ಈ ರವಿವಾರದ ಅಂತ್ಯಕ್ಕೆ 151 ಏರಿಕೆಯಾಗಿದೆ. ಒಂದೇ ವಾರಲ್ಲಿ 68 ಮಂದಿ ಸೋಂಕಿತರಾಗಿದ್ದಾರೆ. ಈ 68 ಮಂದಿಯಲ್ಲಿ ಏಳು ಮಂದಿ ಮಾತ್ರ ವಿದೇಶ ಪ್ರಯಾಣ ಮಾಡಿದ್ದಾರೆ. ಉಳಿದಂತೆ 21 ಮಂದಿ ನಿಜಾಮುದ್ದೀನ್ ಧರ್ಮ ಸಮಾವೇಶದಲ್ಲಿ ಭಾಗವಹಿಸಿದ್ದವರು. 15 ಮಂದಿ ಮೈಸೂರಿನ ನಂಜನಗೂಡು ಔಷಧ ಕಂಪೆನಿ ಸಿಬಂದಿ ಮತ್ತು ಆ ಸಿಬಂದಿಯ ನೇರ ಸಂಪರ್ಕದಿಂದ ನಾಲ್ಕು ಮಂದಿ ಸೋಂಕು ತಗಲಿಸಿಕೊಂಡಿದ್ದಾರೆ. ಇನ್ನು ವಾರದ ಹಿಂದೆ ರಾಜ್ಯದ 11 ಜಿಲ್ಲೆಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಕೋವಿಡ್ 19 ಸೋಂಕು ಕಳೆದ ವಾರ ಹೊಸದಾಗಿ ಐದು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದು, ಸದ್ಯ ರಾಜ್ಯದ 16 ಜಿಲ್ಲೆಗಳಿಗೆ ವ್ಯಾಪಿಸಿದೆ.
ಕೋಳಿ, ಮೀನು ಮಾರಾಟ, ಸಾಗಾಟಕ್ಕೆ ವಿನಾಯಿತಿ
ಲಾಕ್‌ಡೌನ್‌ನಿಂದ ಕೋಳಿ, ಕುರಿ, ಮೇಕೆ, ಮೀನು ,ಮೊಟ್ಟೆ ಉತ್ಪಾದನೆ, ಸಾಗಣೆ, ಮಾರಾಟಕ್ಕೆ ವಿನಾಯಿತಿ ನೀಡಿ ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿ ಎ. ವಿ.ಇಬ್ರಾಹಿಂ ಎಲ್ಲ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಜತೆಗೆ ದ್ರವ ಸಾರಜನಕ ಮತ್ತು ವೀರ್ಯ ನಳಿಕೆ ಉತ್ಪಾದನೆ ಕೇಂದ್ರ, ಜಾನುವಾರು ಕ್ಷೇತ್ರದ ಆಹಾರ ಘಟಕಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಈ ಮಳಿಗೆಗಳು ಕಾರ್ಯ ನಿರ್ವಹಿಸಲು ಯಾವುದೇ ತೊಂದರೆ ಕೊಡಬಾರದು. ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸುತ್ತಿರುವ ಈ ವಲಯಗಳಿಗೆ ಸುಗಮ ಕಾರ್ಯ ನಿರ್ವಹಣೆಗೆ ಅವಕಾಶ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇತರ ಅಂಕಿ ಅಂಶ
– ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಸೋಂಕು ತಗಲಿಸಿಕೊಂಡ ಕರ್ನಾಟಕವರು -21
– ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಪರ್ಕದಿಂದ ಅವಲೋಕನದಲ್ಲಿರುವವರು – 30,509. ಈ ಪೈಕಿ ಸೋಂಕಿತನ ಪ್ರಾಥಮಿಕ ಸಂಪರ್ಕಿತರು – 1,469, ದ್ವಿತೀಯ ಸಂಪರ್ಕಿತರು – 5,165.
– ಆಸ್ಪತ್ರೆಗೆ ರವಿವಾರ ದಾಖಲಾದ ಕೋವಿಡ್ 19 ಶಂಕಿತರು – 56, ಬಿಡುಗಡೆಯಾದವರು – 90, ಸದ್ಯ ಆಸ್ಪತ್ರೆಯಲ್ಲಿರುವ ಶಂಕಿತರು ಒಟ್ಟ – 406.
– ರವಿವಾರ ನೆಗೆಟಿವ್ ಬಂದ ವರದಿಗಳು – 471, ಪಾಸಿಟಿವ್ ಬಂದ ವರದಿಗಳು – 7 (ಈವರೆಗೂ ಒಟ್ಟಾರೆ ನೆಗೆಟಿವ್ – 5037, ಪಾಸಿಟಿವ್ – 151)
– ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು – 135
ತಬ್ಲೀಘಿಗಳಿಗೆ ವಕ್ಫ್ ಮಂಡಳಿ ಮನವಿ
ಬೆಂಗಳೂರು: ದಿಲ್ಲಿಯ ಮರ್ಕಜ್ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಮಾರ್ಚ್ ತಿಂಗಳಲ್ಲಿ ಕರ್ನಾಟಕದಿಂದ ಭಾಗವಹಿಸಿ ವಾಪಸ್ ಬಂದವರು ಸ್ವಯಂಪ್ರೇರಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮನವಿ ಮಾಡಿಕೊಂಡಿದೆ.
ಈ ಸಂಬಂಧ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸಾವುದ್ದೀನ್ ಜೆ. ಗಡ್ಯಾಳ್ ತಬ್ಲೀಘ… ಜಮಾತ್‌ನ ಸದಸ್ಯರಲ್ಲಿ ಮನವಿ ಮಾಡಿ ಪತ್ರ ಬರೆದಿದ್ದಾರೆ.ದಿಲ್ಲಿಯ ಮರ್ಕಜ್ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ತಮ್ಮ ಮತ್ತು ಸಮಾಜದ ಹಿತದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ಆರೋಗ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 080-29711171 ಗೆ ಸಂಪರ್ಕಿಸಬೇಕು ಮತ್ತು ತತ್‌ಕ್ಷಣ ಹತ್ತಿರ ಸರಕಾರಿ ಜಿಲ್ಲೆ ಅಥವಾ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಈ ವಿಚಾರದಲ್ಲಿ ಸಂಬಂಧಪಟ್ಟ ಜಿಲ್ಲಾ ವಕ್ಫ್ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಸಹಕರಿಸಬೇಕು. ಹೆಚ್ಚಿನ ಮಾಹಿತಿಗೆ 080-46848600, 080-66692000 ಮತ್ತು 9745697456 ಅಥವಾ ಆರೋಗ್ಯ ಸಹಾಯವಾಣಿ 104ನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಆ್ಯಂಟಿಬಾಡಿ ಆಧಾರಿತ ಪರೀಕ್ಷೆ
ವಲಸಿಗರು ಅಥವಾ ಗುಂಪಿನಲ್ಲಿ ವಾಸಿಸುತ್ತಿರುವರಲ್ಲಿ ಕೆಮ್ಮು, ಜ್ವರ ಕಾಣಿಸಿಕೊಂಡಲ್ಲಿ ಅವರಿಗೆ ಆ್ಯಂಟಿಬಾಡಿ ಆಧಾರಿತ ರಕ್ತಪರೀಕ್ಷೆ ಮಾಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್)ಸಲಹೆ ನೀಡಿದೆ. ಈ ಪರೀಕ್ಷೆಯು ಕೋವಿಡ್ 19 ಸೋಂಕಿನ ತ್ವರಿತಗತಿ ಪತ್ತೆಗೆ ಸಹಕಾರಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.