2023 Recap: ಸ್ವಾಮಿನಾಥನ್, ಸಿಲ್ವೆಸ್ಟರ್ ಸೇರಿ ಭಾರತದ 10 ಮಂದಿ ಗಣ್ಯರು ಅಗಲಿದ ವರ್ಷ
Team Udayavani, Dec 27, 2023, 4:30 PM IST
ನವದೆಹಲಿ: 2023ರಲ್ಲಿ ಭಾರತವು ಹಲವು ಗಣ್ಯ ವ್ಯಕ್ತಿಗಳನ್ನು ಕಳೆದುಕೊಂಡಿದ್ದು, ಈ ನಿಟ್ಟಿನಲ್ಲಿ ಕೆಲವು ಸ್ಫೂರ್ತಿದಾಯಕ ಪ್ರಮುಖ ವ್ಯಕ್ತಿಗಳ ಕಿರು ಚಿತ್ರಣ ಇಲ್ಲಿದೆ.
1)ಎಂ.ಎಸ್.ಸ್ವಾಮಿನಾಥನ್:
ಎಂ.ಎಸ್. ಭಾರತದ ಖ್ಯಾತ ಕೃಷಿ ವಿಜ್ಞಾನಿ ಮತ್ತು ಭಾರತದ ಹಸಿರು ಕ್ರಾಂತಿಯ ಹಿಂದಿನ ಪ್ರೇರಕ ಶಕ್ತಿಯಾಗಿದ್ದ ಸ್ವಾಮಿನಾಥನ್ ಅವರು 2023ರ ಸೆಪ್ಟೆಂಬರ್ 28ರಂದು ವಿಧಿವಶರಾಗಿದ್ದರು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದಿಂದ “ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ” ಎಂದು ಕರೆಯಲ್ಪಡುವ 1960 ಮತ್ತು 1970 ರ ದಶಕದಲ್ಲಿ ಸ್ವಾಮಿನಾಥನ್ ಅವರ ಅದ್ಭುತ ಕೆಲಸವು ಭಾರತೀಯ ಕೃಷಿಯಲ್ಲಿ ಕ್ರಾಂತಿಯನ್ನುಂಟುಮಾಡಿತ್ತು, ದೇಶವು ವ್ಯಾಪಕವಾದ ಕ್ಷಾಮವನ್ನು ನಿವಾರಿಸಲು ಮತ್ತು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ನೆರವಾಗಿತ್ತು.
ಅವರ ಕೊಡುಗೆಗಳನ್ನು ಗುರುತಿಸಿ, ಸ್ವಾಮಿನಾಥನ್ ಅವರಿಗೆ 1987 ರಲ್ಲಿ ಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ನೀಡಲಾಯಿತು. ಅವರು ಬಹುಮಾನದ ಹಣವನ್ನು ಚೆನ್ನೈನಲ್ಲಿ ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲು ಬಳಸಿದರು, ಸುಸ್ಥಿರ ಮತ್ತು ಅಂತರ್ಗತ ಕೃಷಿ ಪದ್ಧತಿಗಳಿಗೆ ಅವರ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದರು. 1971 ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1986 ರಲ್ಲಿ ಆಲ್ಬರ್ಟ್ ಐನ್‌ಸ್ಟೈನ್ ವರ್ಲ್ಡ್ ಸೈನ್ಸ್ ಪ್ರಶಸ್ತಿ ಸ್ವಾಮಿನಾಥನ್ ಮುಡಿಗೇರಿತ್ತು.
2)ರಾಘವನ್ ಅಯ್ಯರ್:
ಭಾರತೀಯ ಮೂಲದ ಅಮೆರಿಕದ ಖ್ಯಾತ ಬಾಣಸಿಗ, ಲೇಖಕ ರಾಘವನ್ ರಾಮಚಂದ್ರನ್ ಅಯ್ಯರ್ ಅವರು ಭಾರತದಲ್ಲಿ ಜನಿಸಿದ್ದರು. ಅಮೆರಿಕದಲ್ಲಿ ನೆಲೆಸಿದ್ದ ರಾಘವನ್ ಅವರು ಭಾರತೀಯ ಅಡುಗೆಗಳನ್ನು ಹೇಗೆ ಮಾಡಬೇಕು ಎಂದು ಅಮೆರಿಕನ್ನರಿಗೆ ಕಲಿಸಿದ್ದರು. ಹಲವಾರು ಅಡುಗೆ ತಯಾರಿ ಸಂಬಂಧಿ ಪುಸ್ತಕಗಳನ್ನು ಬರೆದಿದ್ದ ರಾಘವನ್ ಅವರ ಕೊನೆಯ ಪುಸ್ತಕ ಆನ್ ದಿ ಕರಿ ಟ್ರಯಲ್ ಆಗಿದೆ.
1961ರ ಏಪ್ರಿಲ್ 21ರಂದು ತಮಿಳುನಾಡಿನ ಚಿದಂಬರಂನಲ್ಲಿ ರಾಘವನ್ ಅಯ್ಯರ್ ಜನಿಸಿದ್ದರು. ಅವರು ಯುವಕರಾಗಿದ್ದಾಗಲೇ ಮುಂಬೈಗೆ ತೆರಳಿದ್ದು, ನಂತರ ಅಮೆರಿಕದಲ್ಲಿ ವಾಸ್ತವ್ಯ ಹೂಡಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಘವನ್(61ವರ್ಷ) ಅವರು 2023ರ ಮಾರ್ಚ್ 31ರಂದು ಕ್ಯಾಲಿಫೋರ್ನಿಯಾದಲ್ಲಿ ಕೊನೆಯುಸಿರೆಳೆದಿದ್ದರು.
3)ಬಾಲಕೃಷ್ಣ ದೋಷಿ:
ಆಧುನಿಕತಾವಾದಿ, ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ವಿಠಲ ದಾಸ್ ದೋಷಿ ಅವರು 1927ರ ಆಗಸ್ಟ್ 26ರಂದು ಜನಿಸಿದ್ದರು. ಭಾರತದ ಪ್ರಮುಖ ವಾಸ್ತುಶಿಲ್ಪಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಕಾರ್ಬುಸಿಯರ್ ಮತ್ತು ಲೂಯಿಸ್ ಕಾನ್ ಅವರ ಜೊತೆ ಕೆಲಸ ಮಾಡಿದ್ದ ಬಾಲಕೃಷ್ಣ ಅವರು ಭಾರತದ ಆಧುನಿಕತಾವಾದಿ ಮತ್ತು ಶಿಷ್ಟ ವಾಸ್ತುಶಿಲ್ಪದ ಪ್ರವರ್ತಕರಾಗಿದ್ದರು.
ಗುಜರಾತ್ ನ ಅಹಮದಾಬಾದ್ ನಲ್ಲಿರುವ ಭಿಮಾನಗರ ಹೌಸಿಂಗ್ ಸೊಸೈಟಿಯು ಬಿವಿ ದೋಷಿಯವರ ಪ್ರಸಿದ್ಧ ಯೋಜನೆಗಳಲ್ಲಿ ಒಂದಾಗಿದೆ. 1955ರಲ್ಲಿ ದೋಷಿ ಅವರು ಕಮಲಾ ಪಾರಿಖ್ ಅವರನ್ನು ವಿವಾಹವಾದರು. ದಂಪತಿಗೆ ಮೂವರು ಹೆಣ್ಣುಮಕ್ಕಳು. ತೇಜಲ್, ರಾಧಿಕಾ ಮತ್ತು ಮನೀಶಾ. ದೋಷಿ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿದ್ದವು.
4)ಶರದ್ ಯಾದವ್:
ಶರದ್ ಯಾದವ್ ಅವರು ಮಾಜಿ ಕೇಂದ್ರ ಸಚಿವರಾಗಿ, ಹಿರಿಯ ಸಾಮಾಜಿಕ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ್ದು, ಇವರು 2023ರ ಜನವರಿ 12ರಂದು ವಿಧಿವಶರಾಗಿದ್ದರು. ಶರದ್ ಯಾದವ್ ಅವರು ಜನತಾ ದಳ ಯುನೈಟೆಡ್ ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಯಾದವ್ 2017ರಲ್ಲಿ ಜೆಡಿಯು ಪಕ್ಷವನ್ನು ತೊರೆದಿದ್ದರು.
2018ರಲ್ಲಿ ಯಾದವ್ ಅವರು ಲೋಕ್ ತಾಂತ್ರಿಕ್ ಜನತಾ ದಳ್ ಪಕ್ಷವನ್ನು ಸ್ಥಾಪಿಸಿದ್ದರು. ಇದು ಚುನಾವಣೆಯಲ್ಲಿ ಯಾವುದೇ ಗಣನೀಯ ಸಾಧನೆ ಮಾಡದೇ 2022ರಲ್ಲಿ ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳದ ಜೊತೆ ಎಲ್ ಜೆಡಿ ಪಕ್ಷವನ್ನು ವಿಲೀನಗೊಳಿಸಲಾಗಿತ್ತು.
1947ರ ಜುಲೈ1ರಂದು ಯಾದವ್ ಅವರು ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯ ಅಖ್ಮೌ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ್ದರು. 1974ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ಯಾದವ್ ಒಟ್ಟು ಏಳು ಬಾರಿ ಲೋಕಸಭಾ ಸಂಸದರಾಗಿ, ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
5)ಸತೀಶ್ ಚಂದ್ರ ಕೌಶಿಕ್:
ಸತೀಶ್ ಚಂದ್ರ ಕೌಶಿಕ್ ಅವರು ಭಾರತೀಯ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರರಾಗಿ ಗುರುತಿಸಿಕೊಂಡಿದ್ದರು. ಕೌಶಿಕ್ ಅವರು 2023ರ ಮಾರ್ಚ್ 9ರಂದು ಹೃದಯಾಘಾತದಿಂದ ನಿಧನರಾಗಿದ್ದರು.
ಹಾಸ್ಯ ನಟನೆಯ ಮೂಲಕ ಜನಪ್ರಿಯರಾಗಿದ್ದ ಕೌಶಿಕ್, ಪಪ್ಪು ಪೇಜರ್, ದೀವಾನಾ ಮಸ್ತಾನಾ, ಕ್ಯಾಲೆಂಡರ್, ಮಿ.ಇಂಡಿಯಾ ಸಿನಿಮಾದಲ್ಲಿ ಅದ್ಭುತ ಹಾಸ್ಯನಟನಾಗಿ ಮಿಂಚಿದ್ದರು. ಹಮ್ ಆಪ್ಕೆ ದಿಲ್ ಮೇ ರೆಹತೇ ಹೈನಾ ಕೌಶಿಕ್ ಅವರು ಮೊದಲ ಹಿಟ್ ಸಿನಿಮಾವಾಗಿದೆ. ಕೌಶಿಕ್ ಅವರು ಶ್ರೀದೇವಿ ನಟನೆಯ ರೂಪ್ ಕಿ ರಾಣಿ, ಚಾರೋಂಕಾ ರಾಜಾ ಮತ್ತು ಪ್ರೇಮ್ ಸಿನಿಮಾವನ್ನು ನಿರ್ದೇಶಿಸಿದ್ದರು.
6) ಸಲೀಂ ದುರಾನಿ:
ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಎಡಗೈ ಬೌಲರ್ ಹಾಗೂ ಬ್ಯಾಟ್ಸ್ ಮನ್ ಆಗಿದ್ದು, 2023ರ ಏಪ್ರಿಲ್ 2ರಂದು ಜಾಮ್ ನಗರದಲ್ಲಿ ಸಾವನ್ನಪ್ಪಿದ್ದರು. ಸಲೀಂ ಅಝೀಝ್ ದುರಾನಿ ಅಫ್ಘಾನ್ ಮೂಲದ ಭಾರತೀಯ ಕ್ರಿಕೆಟಿಗ.
1934ರಲ್ಲಿ ಡಿಸೆಂಬರ್ 11ರಂದು ಪಾಕಿಸ್ತಾನದ ಖೈಬರ್ ಪಾಸ್ ನಲ್ಲಿ ಜನಿಸಿದ್ದರು. 1960ರಿಂದ 1973ರವರೆಗೆ ಸಲೀಂ ಅಝೀಝ್ 29 ಟೆಸ್ಟ್ ಪಂದ್ಯಾಟವಾಡಿದ್ದರು. ಆಲ್ ರೌಂಡರ್ ದುರಾನಿ ಎಡಗೈ ಬೌಲರ್ ಮತ್ತು ಬ್ಯಾಟ್ಸ್ ಮನ್ ಆಗಿ ಮಿಂಚಿದ್ದರು.
7)ಬಿಷನ್ ಸಿಂಗ್ ಬೇಡಿ:
ಬಿಷನ್ ಸಿಂಗ್ ಬೇಡಿ ಅವರು ಭಾರತದ ಮಾಜಿ ಕ್ರಿಕೆಟಿಗ. ಭಾರತ ತಂಡದ ಮಾಜಿ ಕಪ್ತಾನ. ಲೆಜೆಂಡರಿ ಸ್ಪಿನ್ನರ್ ಆಗಿದ್ದ ಬೇಡಿ 77ನೇ ವಯಸ್ಸಿನಲ್ಲಿ (2023ರ ಅಕ್ಟೋಬರ್ 23) ನಿಧನರಾದರು. ಬಿಶನ್ ಸಿಂಗ್ ಬೇಡಿ ಅವರು 1966ರಿಂದ 1979ರವರೆಗೆ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಬೇಡಿ ಅವರು ಮೂಲತಃ ಪಂಜಾಬ್ ನ ಅಮೃತಸರದವರು. ಕ್ರಿಕೆಟ್ ಜೀವನದಲ್ಲಿ ಬೇಡಿ ಅವರು 67 ಟೆಸ್ಟ್ ಪಂದ್ಯವಾಡಿದ್ದರು. ಸಾಂಪ್ರದಾಯಿಕ ಎಡಗೈ ಸ್ಪಿನ್ ಬೌಲರ್ ಆಗಿದ್ದ ಬೇಡಿ ಅವರು ಒಟ್ಟು 266 ವಿಕೆಟ್ ಗಳನ್ನು ಉರುಳಿಸಿದ್ದರು.
8) ಸಿಲ್ವೆಸ್ಟರ್ ಡಕುನ್ಹಾ:
ಪ್ರಸಿದ್ಧ ಜಾಹೀರಾತು ತಜ್ಞ ಸಿಲ್ವೆಸ್ಟರ್ ಡಕುನ್ಹಾ ಅವರು ಅಮುಲ್ ನ ಅಟರ್ಲಿ-ಬಟರ್ಲಿ ಹುಡುಗಿಯ ಸೃಷ್ಟಿಕರ್ತರಾಗಿದ್ದಾರೆ. ಅಮುಲ್ ಗರ್ಲ್ ಸೃಷ್ಟಿಕರ್ತ ಸಿಲ್ವೆಸ್ಟರ್ ಅವರು 2023ರ ಜೂನ್ 21ರಂದು ಮುಂಬೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. 1960ರಿಂದಲೇ ಅಮೂಲ್ ಕಂಪನಿ ಜೊತೆ ಸಂಪರ್ಕ ಹೊಂದಿದ್ದ ಸಿಲ್ವೆಸ್ಟರ್ ಅವರು, ಈ ಕಂಪನಿಯ ಜಾಹೀರಾತು ತಂಡದ ನಿರ್ಣಾಯಕ ಸದಸ್ಯರಲ್ಲಿ ಒಬ್ಬರಾಗಿದ್ದರು.
ಕಲಾವಿದ ಸಿಲ್ವೆಸ್ಟರ್ ಡಕುನ್ಹಾ ಅವರು ತಮ್ಮ ಪತ್ನಿ ನಿಶಾ ಅವರೊಂದಿಗೆ 1966ರಲ್ಲಿ ಅಮುಲ್ ಗಾಗಿ ಪ್ರಖ್ಯಾತ Utterly Butterly” ಅಭಿಯಾನಕ್ಕೆ ಚಾಲನೆ ನೀಡಿದ್ದರು. ನಂತರ ಇದು ವಿಶ್ವಾದ್ಯಂತ ಅಮುಲ್ ಬೇಬಿಯಾಗಿ ಪ್ರಸಿದ್ಧ ಪಡೆದಿತ್ತು.
9) ಪ್ರಕಾಶ್ ಸಿಂಗ್ ಬಾದಲ್:
ಹಿರಿಯ ರಾಜಕಾರಣಿ ಪ್ರಕಾಶ್ ಸಿಂಗ್ ಬಾದಲ್ ಅವರು ಶಿರೋಮಣಿ ಅಕಾಲಿ ದಳದ ಸ್ಥಾಪಕರಾಗಿದ್ದರು. ಸಿಂಗ್ (95ವರ್ಷ) ಅವರು 2023ರ ಏಪ್ರಿಲ್ 25ರಂದು ನಿಧನರಾಗಿದ್ದರು. ಬಾದಲ್ ಅವರು 1927ರ ಡಿಸೆಂಬರ್ 8ರಂದು ಪಂಜಾಬ್ ನ ಅಬುಲ್ ಖುರಾನಾ ನಗರದಲ್ಲಿ ಜನಿಸಿದ್ದರು. ಬರೋಬ್ಬರಿ ಐದು ದಶಕಕ್ಕಿಂತಲೂ ಹೆಚ್ಚು ರಾಜಕೀಯ ಅನುಭವ ಹೊಂದಿದ್ದ ಬಾದಲ್ ಐದು ಬಾರಿ ಪಂಜಾಬ್ ಮುಖ್ಯಮಂತ್ರಿ ಗಾದಿಗೆ ಏರಿದ್ದರು.
1957ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗುವ ಮೂಲಕ ಕೇವಲ 29ನೇ ವಯಸ್ಸಿಗೆ ಪಂಜಾಬ್ ವಿಧಾನಸಭೆ ಪ್ರವೇಶಿಸಿದ್ದರು.
10)ಉಮ್ಮನ್ ಚಾಂಡಿ:
ಉಮ್ಮನ್ ಚಾಂಡಿ ಕೇರಳ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದರು. ಚಾಂಡಿ ದೀರ್ಘಕಾಲದ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 2023ರ ಜುಲೈ 18ರಂದು ನಿಧನರಾಗಿದ್ದರು.
ಚಾಂಡಿ ಅವರು 2004ರಿಂದ 2006ರವರೆಗೆ ಹಾಗೂ 2011ರಿಂದ 2016ರವರೆಗೆ ಕೇರಳ ಮುಖ್ಯಮಂತ್ರಿಯಾಗಿದ್ದರು. ತಮ್ಮ 27ನೇ ವಯಸ್ಸಿನಲ್ಲಿ ಚಾಂಡಿ ಅವರು 1970ನೇ ಇಸವಿಯಲ್ಲಿ ಕೇರಳ ವಿಧಾನಸಭೆ ಪ್ರವೇಶಿಸಿದ್ದರು. ದೀರ್ಘ ಕಾಲದ ರಾಜಕೀಯ ಜೀವನದಲ್ಲಿ ಉಮ್ಮನ್ ಚಾಂಡಿ ಅವರು 11 ಬಾರಿ ಗೆಲುವು ಸಾಧಿಸಿದ್ದರು. ಚಾಂಡಿ ಅವರು ವಿಪಕ್ಷ ನಾಯಕನಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.