Rhinoplasty: ರಿನೊಪ್ಲಾಸ್ಟಿ
Team Udayavani, Jul 15, 2024, 10:30 AM IST
ಸೆಲೆಬ್ರಿಟಿಗಳು ತಮ್ಮ ಮೂಗಿನ ಮೇಲೆ ಈ ಸರ್ಜರಿಗಳನ್ನು ಮಾಡಿಸಿಕೊಳ್ಳುವ ಸುದ್ದಿಯನ್ನು ಆಗಾಗ ನಾವು ಕೇಳಿರುತ್ತೇವೆ ಮತ್ತು ಅವರ ಸೌಂದರ್ಯದಲ್ಲಿ ಅದು ತರುವ ಅಪಾರ ಬದಲಾವಣೆಯನ್ನು ಗಮನಿಸಿರುತ್ತೇವೆ. ಕೆಲವೊಮ್ಮೆ ಅವರ ಮುಖದ ಸೌಂದರ್ಯವಷ್ಟೇ ನಮ್ಮನ್ನು ಸೆಳೆದಿರುತ್ತದೆ; ಆದರೆ ಅವರು ಏನು ಮಾಡಿಸಿಕೊಂಡಿದ್ದಾರೆ, ಅಂತಹ ಸೌಂದರ್ಯಕ್ಕೆ ಏನು ಕಾರಣ ಎಂಬುದು ನಮಗೆ ತಿಳಿಯುವುದಿಲ್ಲ. ಮೂಗು ನಮ್ಮ ಮುಖದ ಕೇಂದ್ರ ಭಾಗದಲ್ಲಿ, ಪ್ರಾಮುಖ್ಯ ಸ್ಥಾನದಲ್ಲಿದ್ದು, ನಮ್ಮ ರೂಪಕ್ಕೆ ಅಪಾರ ಕೊಡುಗೆಯನ್ನು ನೀಡುತ್ತದೆ.
ನಮ್ಮ ಮೂಗಿನ ಆಕಾರವು ನಮ್ಮ ಸೌಂದರ್ಯಕ್ಕೆ ಘನತೆ, ಗಂಭೀರತೆಗಳನ್ನು ತಂದುಕೊಡುತ್ತದೆ. ಆದರೆ ಮೂಗಿನ ಆಕಾರ, ಸ್ವರೂಪದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ, ಗಾಯ, ಕಳಂಕ ಉಂಟಾದರೂ ಎದ್ದುಕಾಣುತ್ತದೆ. ಇದು ನಮ್ಮ ಸೌಂದರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ನಮ್ಮ ಆತ್ಮವಿಶ್ವಾಸ ಮತ್ತು ಮನೋಬಲಕ್ಕೆ ಘಾಸಿ ಉಂಟು ಮಾಡಬಲ್ಲುದು.
“ನೋಸ್ ಜಾಬ್’ ಅಥವಾ “ನಾಸಿಕ ಕಾರ್ಯ’ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ರಿನೊಪ್ಲಾಸ್ಟಿಯು ಸೌಂದರ್ಯವರ್ಧಕ ಅಥವಾ ಮೂಗಿನ ಕಾರ್ಯಚಟುವಟಿಕೆಗಳನ್ನು ಸರಿಪಡಿಸುವ ಉದ್ದೇಶದಿಂದ ಮೂಗಿನ ಆಕಾರ-ಸ್ವರೂಪಗಳ ಪರಿವರ್ತನೆಗಾಗಿ ಕೈಗೊಳ್ಳುವ ಶಸ್ತ್ರಚಿಕಿತ್ಸೆಯಾಗಿದೆ. ವ್ಯಕ್ತಿಯೊಬ್ಬರು ರಿನೊಪ್ಲಾಸ್ಟಿಗೆ ಒಳಗಾಗಲು ಬಯಸಿದಲ್ಲಿ ಏನನ್ನು ನಿರೀಕ್ಷಿಸಬಹುದು, ಅದರ ಪ್ರಯೋಜನಗಳು, ಏನನ್ನೆಲ್ಲ ಪರಿಗಣಿಸಲಾಗುತ್ತದೆ ಮತ್ತು ರಿನೊಪ್ಲಾಸ್ಟಿ ಸಂಭಾವ್ಯ ಫಲಿತಾಂಶಗಳ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ.
ರಿನೊಪ್ಲಾಸ್ಟಿಯು ಒಂದು ಶಸ್ತ್ರಚಿಕಿತ್ಸೆಯಾಗಿದ್ದು, ಸಂರಚನಾತ್ಮಕ ಅಸಹಜತೆಗಳು, ಗಾತ್ರ, ಆಕಾರ ಮತ್ತು, ಸಮ್ಮಿತಿ (ಸಿಮೆಟ್ರಿ)ಗಳ ಸಹಿತ ಮೂಗಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಇದರ ಮೂಲಕ ಸರಿಪಡಿಸಬಹುದಾಗಿದೆ. ಮೂಗಿನ ಸೌಂದರ್ಯವರ್ಧನೆಯಿಂದ ತೊಡಗಿ ಉಸಿರಾಟ ಚಟುವಟಿಕೆಯನ್ನು ಉತ್ತಮಪಡಿಸುವುದರ ತನಕ ಪ್ರತೀ ವ್ಯಕ್ತಿಯ ನಿರ್ದಿಷ್ಟ ಅಗತ್ಯ ಮತ್ತು ಆವಶ್ಯಕತೆಗಳನ್ನು ಆಧರಿಸಿ ವ್ಯಕ್ತಿನಿರ್ದಿಷ್ಟ ಪರಿಹಾರಗಳನ್ನು ರಿನೊಪ್ಲಾಸ್ಟಿ ಒದಗಿಸುತ್ತದೆ.
ರಿನೊಪ್ಲಾಸ್ಟಿಗೆ ಒಳಗಾಗುವುದಕ್ಕೆ ಮುನ್ನ ಪ್ರತಿಯೊಬ್ಬರೂ ತಮ್ಮ ತಮ್ಮ ಆವಶ್ಯಕತೆಗಳು, ಕಾಳಜಿಗಳು, ಆತಂಕ, ಉದ್ದೇಶ ಮತ್ತು ವೈದ್ಯಕೀಯ ಹಿನ್ನೆಲೆಗಳ ಸಹಿತ ಎಲ್ಲ ವಿಷಯಗಳ ಬಗ್ಗೆ ಪ್ಲಾಸ್ಟಿಕ್ ಸರ್ಜನ್ ಜತೆಗೆ ವಿವರವಾದ ಸಮಾಲೋಚನೆಯನ್ನು ನಡೆಸಬೇಕು. ವ್ಯಕ್ತಿಯು ಈ ಶಸ್ತ್ರಚಿಕಿತ್ಸೆಯನ್ನು ಯಾಕೆ ಮಾಡಿಸಿಕೊಳ್ಳಲು ಬಯಸುತ್ತಾರೆ ಮತ್ತು ಅದರಿಂದ ಅವರು ಹೊಂದಿರುವ ನಿರೀಕ್ಷೆಗಳು ಏನೇನು ಎಂಬ ಬಗ್ಗೆ ವಿಸ್ತೃತವಾದ ಚರ್ಚೆಯನ್ನು ನಡೆಸಲಾಗುತ್ತದೆ.
ಶಸ್ತ್ರಚಿಕಿತ್ಸಾ ತಜ್ಞರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಈ ಸಮಾಲೋಚನೆ-ಚರ್ಚೆಯು ಬಹಳ ಪ್ರಮುಖವಾದ ಭಾಗವಾಗಿರುತ್ತದೆ. ಇದರ ಜತೆಗೆ ರಿನೊಪ್ಲಾಸ್ಟಿ ಮಾಡಿಸಿಕೊಳ್ಳಲು ಬಯಸುವ ವ್ಯಕ್ತಿಯ ಮುಖದ ಆಕಾರ, ಸ್ವರೂಪ, ಉಂಟಾಗಿರುವ ವೈಕಲ್ಯ, ಚರ್ಮದ ಗುಣಮಟ್ಟ ಮತ್ತು ಕೆಲವೊಮ್ಮೆ ಜನಾಂಗೀಯತೆಯೂ ಮೂಗಿನ ಮೇಲೆ ಯಾವ ಬದಲಾವಣೆಗಳನ್ನು ಮಾಡಬೇಕು ಎಂಬುದನ್ನು ನಿರ್ಧರಿಸುವಲ್ಲಿ ಪಾತ್ರ ವಹಿಸಬಹುದಾಗಿದೆ.
ರೋಗಿಯ ಆದ್ಯತೆಗಳು ಮತ್ತು ಶಸ್ತ್ರಚಿಕಿತ್ಸೆಯ ಸಂಕೀರ್ಣತೆಯನ್ನು ಆಧರಿಸಿ ಸಾಮಾನ್ಯ ಅರಿವಳಿಕೆ ಅಥವಾ ನಿದ್ದೆಯ ಜತೆಗೆ ಸ್ಥಳೀಯ ಅರಿವಳಿಕೆಯ ಮೂಲಕ ರಿನೊಪ್ಲಾಸ್ಟಿಯನ್ನು ಕೈಗೊಳ್ಳಬಹುದಾಗಿದೆ.
ಈ ಶಸ್ತ್ರಚಿಕಿತ್ಸೆಯ ವೇಳೆ ಸಾಮಾನ್ಯವಾಗಿ ಮೂಗಿನ ಹೊಳ್ಳೆಗಳ ಒಳಗಿನಿಂದ ಅಥವಾ ಕೊಲುಮೆಲ್ಲಾ (ಮೂಗಿನ ಹೊಳ್ಳೆಗಳ ನಡುವಣ ಅಂಗಾಂಶ ಪಟ್ಟಿ)ದ ಉದ್ದಕ್ಕೆ ಮೂಗಿನ ಚರ್ಮವನ್ನು ಸರ್ಜನ್ ಜಾಗರೂಕವಾಗಿ ಯೋಜಿಸಿದ ರೀತಿಯಲ್ಲಿ ತೆರೆಯುತ್ತಾರೆ. ಇವುಗಳ ಮೂಲಕ ಅಂತರ್ಗತ ಎಲುಬು, ಮೂಗಿನ ತುದಿಭಾಗದ ಮೃದು ಕಾರ್ಟಿಲೇಜ್ ಮತ್ತು ಇತರ ಮೃದು ಅಂಗಾಂಶಗಳನ್ನು ಅಗತ್ಯ ಸೌಂದರ್ಯಾತ್ಮಕ ಅಥವಾ ಕ್ರಿಯಾತ್ಮಕ ಫಲಿತಾಂಶವನ್ನು ಸಾಧಿಸಲು ಕತ್ತರಿಸುವುದು, ಕಿರಿದುಗೊಳಿಸುವುದು, ಬದಲಾಯಿಸುವುದು ಇತ್ಯಾದಿಗಳನ್ನು ನಡೆಸಲಾಗುತ್ತದೆ.
ಕೆಲವೊಮ್ಮೆ ಹೆಚ್ಚುವರಿ ತಂತ್ರಗಳಾದ ಎದೆಗೂಡು ಅಥವಾ ಕಿವಿಯ ಕಾರ್ಟಿಲೇಜ್ ಅಳವಡಿಕೆ ಅಥವಾ ಅಗತ್ಯವಾದರೆ ಕೃತಕ ಫಿಲ್ಲರ್ ಗಳು ಮತ್ತು ಇಂಪ್ಲಾಂಟ್‌ಗಳನ್ನು ಕೂಡ ಉಪಯೋಗಿಸಬಹುದಾಗಿದೆ. ಇವುಗಳಿಂದ ಅಂತಿಮ ಫಲಿತಾಂಶವು ಇನ್ನಷ್ಟು ಉತ್ತಮವಾಗಬಹುದಾಗಿದೆ ಮತ್ತು ಮೂಗಿನ ಅಂತಿಮ ಸ್ವರೂಪವು ದೀರ್ಘಕಾಲೀನ ಸ್ಥಿರತೆಯನ್ನು ಪಡೆದುಕೊಳ್ಳಬಹುದಾಗಿದೆ.
ಗುಣ ಹೊಂದುವಿಕೆ ಮತ್ತು ಫಲಿತಾಂಶಗಳು
ರಿನೊಪ್ಲಾಸ್ಟಿಯ ಬಳಿಕ ಇದಕ್ಕೆ ಒಳಗಾದವರು ಮೂಗಿನ ಭಾಗದಲ್ಲಿ ಸ್ವಲ್ಪ ಊತ, ಗಾಯ, ಕಿರಿಕಿರಿಯನ್ನು ಅನುಭವಿಸಬಹುದು. ರಿನೊಪ್ಲಾಸ್ಟಿಯು ನಿರ್ದಿಷ್ಟವಾಗಿ ಕ್ರಿಯಾತ್ಮಕ ಸರಿಪಡಿಸುವಿಕೆಯನ್ನು ಒಳಗೊಂಡಿದ್ದರೆ ತಾತ್ಕಾಲಿಕವಾಗಿ ಮೂಗು ಕಟ್ಟುವುದು, ಉಸಿರಾಟಕ್ಕೆ ತೊಂದರೆ ಕೂಡ ಉಂಟಾಗಬಹುದು. ರಿನೊಪ್ಲಾಸ್ಟಿಗೆ ಒಳಗಾದವರು ತಲೆಯ ಭಾಗ ಸ್ವಲ್ಪ ಮೇಲೆ ಇರಿಸಿಕೊಂಡು ವಿಶ್ರಾಂತಿ ಪಡೆಯುವುದು, ಶ್ರಮದಾಯಕ ಕೆಲಸಗಳಿಂದ ದೂರವಿರುವುದು ಮತ್ತು ಸರ್ಜನ್ ಶಿಫಾರಸು ಮಾಡಿಸುವ ಶಸ್ತ್ರಚಿಕಿತ್ಸೆಯ ಬಳಿಕದ ಆರೈಕೆಯ ಸೂಚನೆಗಳನ್ನು ಪಾಲಿಸುವುದು ಅಗತ್ಯ.
ಆರಂಭಿಕ ಊತವು ಕೆಲವು ವಾರಗಳಲ್ಲಿ ಕಡಿಮೆಯಾಗುತ್ತದೆ. ರಿನೊಪ್ಲಾಸ್ಟಿಯ ನಿರೀಕ್ಷಿತ ಅಂತಿಮ ಫಲಿತಾಂಶಗಳು ಎದ್ದುಕಾಣಲು ಕೆಲವು ತಿಂಗಳುಗಳಿಂದ ಹಿಡಿದು ವರ್ಷದ ವರೆಗೆ ಅವಧಿ ತಗಲಬಹುದಾಗಿದೆ. ಊತವು ಕಡಿಮೆಯಾಗಿ ಅಂಗಾಂಶಗಳು ಸರಿಜೋಡಣೆಯಾಗುತ್ತ ಹೋದಂತೆ ವ್ಯಕ್ತಿಗಳು ತಮ್ಮ ಮೂಗಿನ ಸೌಂದರ್ಯ ಹೆಚ್ಚು ಪರಿಷ್ಕೃತ ಮತ್ತು ಸಮತೋಲಿತವಾಗಿರುವುದನ್ನು ಗಮನಿಸಬಹುದಾಗಿದೆ. ಮುಖದ ಸಮಗ್ರ ಸಾಮರಸ್ಯಕ್ಕೆ ಪೂರಕವಾಗಿದ್ದು ವ್ಯಕ್ತಿಯ ಆತ್ಮ ವಿಶ್ವಾಸ ಮತ್ತು ಸ್ವಪ್ರತಿಷ್ಠೆಗಳನ್ನು ಹೆಚ್ಚಿಸುವ ಸಹಜ ಸಮೀಪವಾದ ಫಲಿತಾಂಶಗಳನ್ನು ಸಾಧಿಸುವುದು ರಿನೊಪ್ಲಾಸ್ಟಿಯ ಗುರಿಯಾಗಿದೆ.
ಅಪಾಯಗಳು ಮತ್ತು ಪರಿಗಣನೆಗಳು
ಯಾವುದೇ ಶಸ್ತ್ರಚಿಕಿತ್ಸೆಯಂತೆಯೇ, ರಿನೊಪ್ಲಾಸ್ಟಿಯಲ್ಲಿ ಕೂಡ ಕೆಲವು ಅಪಾಯಗಳು ಮತ್ತು ಸಂಭಾವ್ಯ ಸಂಕೀರ್ಣ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇರುತ್ತವೆ. ಇವುಗಳಲ್ಲಿ ಸೋಂಕು, ರಕ್ತಸ್ರಾವ, ಅರಿವಳಿಕೆಗೆ ಪ್ರತಿಕೂಲ ಪರಿಣಾಮ, ಅಸಮ್ಮಿತಿ, ಉಸಿರಾಟದ ತೊಂದರೆಗಳು ಮತ್ತು ಸೌಂದರ್ಯಾತ್ಮಕ ಫಲಿತಾಂಶದ ಬಗ್ಗೆ ವ್ಯಕ್ತಿಗೆ ಅಸಂತೃಪ್ತಿ ಸೇರಿವೆ. ರಿನೊಪ್ಲಾಸ್ಟಿಗೆ ಒಳಗಾಗಲು ಬಯಸುವವರು ಈ ಅಪಾಯಗಳ ಬಗ್ಗೆ ತಮ್ಮ ಸರ್ಜನ್ ಜತೆಗೆ ಸವಿವರವಾಗಿ ಚರ್ಚಿಸುವ ಮೂಲಕ ರಿನೊಪ್ಲಾಸ್ಟಿಯ ಬಗ್ಗೆ ವಾಸ್ತವ ನಿರೀಕ್ಷೆಗಳನ್ನು ಹೊಂದಲು ಸಾಧ್ಯವಿದೆ.
ಅಪಾಯಗಳನ್ನು ಕನಿಷ್ಠ ಮಟ್ಟಕ್ಕಿಳಿಸಲು ಮತ್ತು ಗರಿಷ್ಠ ಉತ್ತಮ ಫಲಿತಾಂಶ ಪಡೆಯುವುದಕ್ಕಾಗಿ ರಿನೊಪ್ಲಾಸ್ಟಿಯಲ್ಲಿ ಸಾಕಷ್ಟು ಪರಿಣತಿ, ಅನುಭವ ಹೊಂದಿರುವ ನುರಿತ ಸರ್ಜನ್‌ರನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಇದರ ಜತೆಗೆ ವ್ಯಕ್ತಿಗಳು ಧೂಮಪಾನದಿಂದ ದೂರವಿರಬೇಕು ಮಾತ್ರವಲ್ಲದೆ ಸುಗಮ ಮತ್ತು ಯಶಸ್ವಿ ಗುಣ ಮತ್ತು ಫಲಿತಾಂಶವನ್ನು ಹೊಂದಲು ತಮ್ಮ ಸರ್ಜನ್ ಸೂಚಿಸಿರುವ ಶಸ್ತ್ರಕ್ರಿಯೆಗೆ ಮುಂಚಿನ ಮತ್ತು ಶಸ್ತ್ರಕ್ರಿಯೆಯ ಬಳಿಕದ ಸಲಹೆ-ಸೂಚನೆಗಳನ್ನು ಯಥಾವತ್ ಪಾಲಿಸಬೇಕು.
ಪ್ಲಾಸ್ಟಿಕ್ ಸರ್ಜನ್ ಒಬ್ಬರ ಪಾಲಿಗೆ ರಿನೊಪ್ಲಾಸ್ಟಿಯು ಅತ್ಯಂತ ಕಠಿನ ಶಸ್ತ್ರಕ್ರಿಯೆ ಎಂದು ಪರಿಗಣಿತವಾಗಿದೆ. ಇದು ಮೂಗಿನ ಸೌಂದರ್ಯಾತ್ಮಕ ಸ್ವರೂಪ ಮತ್ತು ಕ್ರಿಯಾತ್ಮಕ ಅಂಶಗಳನ್ನು ಉತ್ತಮಪಡಿಸುವ ಸಾಧ್ಯತೆಗಳನ್ನು ರಿನೊಪ್ಲಾಸ್ಟಿ ಹೊಂದಿದೆ. ರಿನೊಪ್ಲಾಸ್ಟಿಯ ಸಂಕೀರ್ಣತೆ ಮತ್ತು ಜಟಿಲತೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ವ್ಯಕ್ತಿಗಳು ತಾವು ಬಯಸಿದ ಸೌಂದರ್ಯವನ್ನು ಸಾಧಿಸಿ ತಮ್ಮ ಆತ್ಮವಿಶ್ವಾಸ, ಘನತೆ ಮತ್ತು ಕಲ್ಯಾಣವನ್ನು ವೃದ್ಧಿಸಿಕೊಳ್ಳಲು ಸಾಧ್ಯವಿದೆ.
ಅಲ್ಪ ಪ್ರಮಾಣದ್ದು ಅಥವಾ ದೊಡ್ಡ ಮಟ್ಟದ ಬದಲಾವಣೆ ಆಗಿರಲಿ; ಪ್ರತೀ ವ್ಯಕ್ತಿಯ ವಿಭಿನ್ನ ದೈಹಿಕ ಸ್ವರೂಪ ಮತ್ತು ನಿರೀಕ್ಷೆಗಳಿಗೆ ತಕ್ಕುದಾದ ವ್ಯಕ್ತಿನಿರ್ದಿಷ್ಟ ಪರಿಹಾರಗಳನ್ನು ರಿನೊಪ್ಲಾಸ್ಟಿಯು ಒದಗಿಸಿಕೊಡಬಲ್ಲುದಾಗಿದೆ. ರಿನೊಪ್ಲಾಸ್ಟಿ ಮಾಡಿಸಿಕೊಳ್ಳಲು ಬಯಸುವವರು ನುರಿತ ಮತ್ತು ಪರಿಣತ ಪ್ಲಾಸ್ಟಿಕ್ ಸರ್ಜನ್ ಜತೆಗೆ ಸಮಾಲೋಚನೆಯನ್ನು ನಡೆಸುವ ಮೂಲಕ ತಮಗಿರುವ ಆಯ್ಕೆಗಳನ್ನು ಪರಿಶೀಲಿಸಬಹುದಾಗಿದೆಯಲ್ಲದೆ ಹೆಚ್ಚು ಸಾಮರಸ್ಯಯುಕ್ತ ಹಾಗೂ ಸಮತೋಲಿತ ಮುಖ ಸೌಂದರ್ಯವನ್ನು ಗಳಿಸಿಕೊಳ್ಳುವತ್ತ ಮುನ್ನಡೆಯಬಹುದಾಗಿದೆ.
ಮಣಿಪಾಲ ಕೆಎಂಸಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ ಉತ್ಕೃಷ್ಟ ರಿನೊಪ್ಲಾಸ್ಟಿ ನಡೆಸಬಲ್ಲ ನುರಿತ ಸರ್ಜನ್ ಮತ್ತು ಪೂರಕ ವೈದ್ಯಕೀಯ ಸಿಬಂದಿಯ ತಂಡವು ಲಭ್ಯವಿದೆ. ಹೆಚ್ಚುವರಿ ಮಾಹಿತಿಗೆ ಕೆಎಂಸಿ ಆಸ್ಪತ್ರೆ, ಮಣಿಪಾಲದ ಪ್ಲಾಸ್ಟಿಕ್ ಸರ್ಜರಿ ವಿಭಾಗವನ್ನು ಸಂಪರ್ಕಿಸಬಹುದು ಮತ್ತು ಡಾ| ರಾಮದಾಸ್ ಪೈ ಬ್ಲಾಕ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಬಹುದು.
-ಡಾ| ಜೋಸೆಫ್ ಥಾಮಸ್
ಪ್ರೊಫೆಸರ್ ಮತ್ತು ಹೆಡ್ ಪ್ಲಾಸ್ಟಿಕ್ ಸರ್ಜರಿ ವಿಭಾಗ
ಕೆಎಂಸಿ, ಮಾಹೆ, ಮಣಿಪಾಲ
-ಡಾ| ಹರ್ಷವರ್ಧನ್ ಶೆಟ್ಟಿ
ಅಸಿಸ್ಟೆಂಟ್ ಪ್ರೊಫೆಸರ್,
ಪ್ಲಾಸ್ಟಿಕ್ ಸರ್ಜರಿ ವಿಭಾಗ
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪ್ಲಾಸ್ಟಿಕ್ ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.