Desi Swara:”ರಿಚ್ಮಂಡ್’- ಸಸ್ಯ ಸೌಂದರ್ಯಗಳೊಂದಿಗೆ ಕಂಗೊಳಿಸುವ ಪ್ರವಾಸಿಗರ ಕೇಂದ್ರ
ರಾಯಲ್ ಪಾರ್ಕ್
Team Udayavani, Feb 3, 2024, 11:27 AM IST
ಪ್ರಪಂಚದಲ್ಲಿಯೇ ಒಂದು ಶ್ರೀಮಂತ ವಾಣಿಜ್ಯ ಕೇಂದ್ರವೆಂದು ಹೆಸರುವಾಸಿಯಾಗಿರುವ ಲಂಡನ್ ಬಹಳ ದುಬಾರಿ ನಗರ. ಪ್ರತೀ ಅಂಗುಲ ನೆಲಕ್ಕೂ ಚಿನ್ನದಷ್ಟು ಬೆಲೆ. ಒಂದು ತಿಂಗಳು ಪೂರಾ ಲಂಡನ್‌ನಲ್ಲೇ ಇದ್ದರೂ ನೋಡುವಂತ ಸ್ಥಳಗಳು, ಮ್ಯೂಸಿಯಂಗಳು, ಲೈಬ್ರರಿಗಳು, ಸ್ಮಾರಕಗಳು, ಚಾರಿತ್ರಿಕ ಕಟ್ಟಡಗಳು, ಥಿಯೇಟರ್‌ಗಳು, ಮನರಂಜನಾ ಕ್ಷೇತ್ರಗಳು, ಚರ್ಚ್‌ಗಳು, ಆಧುನಿಕ ಕಟ್ಟಡಗಳು, ಅರಮನೆಗಳು, ಸಾಮಂತರ ಪುಟ್ಟ ಅರಮನೆಗಳು, ಭೂತ ಕಾಡುವ ಮಂದಿರಗಳು, ಉದ್ಯಾನವನಗಳು, ಮೃಗಾಲಯಗಳು, ರಾಯಲ್ ಪಾರ್ಕ್‌ಗಳು ಹೀಗೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಆದರೆ ಈ ನಗರವೊಂದರಲ್ಲೇ ಸುಮಾರು 5,000 ಎಕ್ರೆಗಳಷ್ಟು ಜಾಗವನ್ನು ರಾಜಮನೆತನಕ್ಕೆ ಸಂಬಂಧವಿರುವ ರಾಯಲ್ ಪಾರ್ಕ್‌ಗಳನ್ನಾಗಿ ಉಳಿಸಿಕೊಂಡಿದ್ದಾರೆ ಎಂದರೆ ಆಶ್ಚರ್ಯವಾಗದಿರಲು ಸಾಧ್ಯವೇ?
ಲಂಡನ್ ನಗರಿಯಲ್ಲೇ ಒಟ್ಟು ಎಂಟು ರಾಯಲ್ ಪಾರ್ಕ್‌ಗಳಿವೆ. ಹೈಡ್ ಪಾರ್ಕ್, ಕೆನ್ಸಿಂಗ್ಟನ್ ಗಾರ್ಡರ್ನ್, ಬುಶಿ ಪಾರ್ಕ್, ಸೇಂಟ್ ಜೇಮ್ಸ್ ಪಾರ್ಕ್, ಗ್ರೀನ್ ಪಾರ್ಕ್, ರೀಜೆಂಟ್ಸ್ ಪಾರ್ಕ್, ಗ್ರೀನಿಕ್ ಪಾರ್ಕ್ ಮತ್ತು ರೀಜೆಂಟ್ಸ್ ಪಾರ್ಕ್ ಈ ಎಂಟು ಪಾರ್ಕ್‌ಗಳು. ಇವೆಲ್ಲ ರಾಜ ಮನೆತನಕ್ಕೆ ಸೇರಿದ ಉದ್ಯಾನವನಗಳು. ಇವುಗಳಲ್ಲಿ ಅತೀ ದೊಡ್ಡ ಉದ್ಯಾನವನ ಎಂದರೆ ಅದು ರಿಚ್ಮಂಡ್ ಪಾರ್ಕ್. ಇದು ಎಷ್ಟು ದೊಡ್ಡದೆಂದರೆ ಮಿಕ್ಕ ಏಳು ಪಾರ್ಕ್‌ಗಳನ್ನೂ ಒಟ್ಟಿಗೆ ಇಡಬಹುದಾದಷ್ಟು ವಿಶಾಲವಾದ ಉದ್ಯಾನವನ. ನಗರದ ನಡುವೆಯೇ ಇರುವ ಇದೊಂದೇ ಪಾರ್ಕ್ 25,00 ಎಕ್ರೆಗಳಷ್ಟು ದೊಡ್ಡದು !
ರಿಚ್ಮಂಡ್ ಪಾರ್ಕ್‌ನಲ್ಲಿ ಸುಮಾರು 600 ಜಿಂಕೆಗಳು ಕೂಡ ಇವೆ. ಇದನ್ನು ಸಂರಕ್ಷಿತ ಪಾರ್ಕ್‌ನ್ನಾಗಿ ಘೋಷಿಸಿರುವುದರಿಂದ ಇವುಗಳಿಗೆ ಪೂರ್ತಿ ರಕ್ಷಣೆಯಿದೆ. ರಾಷ್ಟ್ರ ಮಟ್ಟದ ಪ್ರಾಕೃತಿಕ ಧಾಮವೆಂದು ಕರೆಯಲ್ಪಟ್ಟಿದೆ. ಯೂರೋಪಿನ ಲೆಕ್ಕದಲ್ಲೂ ಇದು ವಿಶೇಷ ಸಂರಕ್ಷಿತ ನಿಸರ್ಗಧಾಮವೆಂದು ಹೆಸರು ಪಡೆದಿದೆ.
ಇಂಗ್ಲೆಂಡಿನ ಪ್ರತೀ ಚಾರಿತ್ರಕ ಜಾಗಕ್ಕೂ ಒಂದಲ್ಲ ಒಂದು ರೀತಿಯ ಕಪ್ಪು ನೆರಳಿದೆ. ಮೆಚ್ಚತಕ್ಕ ಮಾತೆಂದರೆ ಅದನ್ನು ಬಹು ಖಚಿತವಾಗಿ ದಾಖಲಾತಿಗಳ ಮೂಲಕ ರಕ್ಷಿಸಿ ಇಟ್ಟು ವಿನಯದಿಂದ ಅದನ್ನು ಒಪ್ಪಿಕೊಳ್ಳುವ ಇಂಗ್ಲಿಷರು ತಮ್ಮ ಕರಾಳ ಚರಿತ್ರೆಯನ್ನು ನೇರವಾಗಿ ಹೇಳಿಕೊಳ್ಳುವುದು. ಇದೇ ಕಾರಣಕ್ಕೆ ತಮ್ಮ ಲೋಲುಪ ರಾಜ -ರಾಣಿಯರ ಆಡಳಿತ ಕಾಲದಿಂದ ಪಾರಾಗಿ ಇಂದಿನ ಮುಕ್ತ ಇಂಗ್ಲೆಂಡಿನ ಜಗತ್ತನ್ನು ತಲುಪಿದ ಪರಿಗಾಗಿ ಇವರು ಪ್ರಶಂಸೆಯನ್ನೂ ಗಳಿಸಿಕೊಳ್ಳುತ್ತಾರೆ.
ರಿಚ್ಮಂಡ್ ಪಾರ್ಕ್ ಸುಂದರವಾದ ಹಸುರು ಉದ್ಯಾನವನ. ಇದು ಹೂಗಳು, ತೊರೆಗಳು, ಕಾಲುವೆಗಳು, ಕೊಳಗಲು, ಬೃಹದಾಕಾರದ ಓಕ್ ಮರಗಳು, ಜಿಂಕೆಗಳಿಂದ ತುಂಬಿದೆ. ಇಲ್ಲಿ ಚರಿತ್ರೆ, ಆಧುನಿಕ ಸವಲತ್ತುಗಳು, ಚಟುವಟಿಕೆಗಳು ಎಲ್ಲವೂ ಇವೆ. ಆದರೆ ಚಾರಿತ್ರಕವಾಗಿ ಈ ಜಾಗ ಯಾವತ್ತೂ ಹೀಗೆಯೇ ಇರಲಿಲ್ಲ.
ರಿಚ್ಮಂಡ್ ಪಾರ್ಕ್‌ನ ಮೊದಲ ಹೆಸರು ಮೇನರ್ ಆಫ್ ಶೀನ್ ಎಂದಾಗಿತ್ತು. 1272-1307ರಲ್ಲಿ ಲಂಡನ್ನಿನ ದೊರೆಯಾದ ಎಡ್ವರ್ಡ್‌ನಿಗೆ ಸೇರಿದ ಜಾಗವಾಗಿತ್ತು. ಲಂಡನ್ನಿನ ಅರಮನೆಯಿಂದ ಈ ಜಾಗ ದೂರದಲ್ಲಿತ್ತು. 1625ರಲ್ಲಿ ಚಾರ್ಲ್ಸ್ ಎಂಬ ದೊರೆ ಪ್ಲೇಗ್ ರೋಗದಿಂದ ದೂರಾಗಲು ಲಂಡನ್ ನಗರವನ್ನು ತೊರೆದು ಹತ್ತಿರವೇ ಇದ್ದ ರಿಚ್ಮಂಡ್ ಅರಮನೆಗೆ ವಾಸಕ್ಕೆ ಬಂದನಂತೆ. ಈಗ ರಿಚ್ಮಂಡ್ ಎನ್ನುವುದು ಲಂಡನ್ನಿನ ಒಂದು ಭಾಗವಾಗುವಷ್ಟು ಲಂಡನ್ ಮಹಾನಗರಿ ಬೆಳೆದುಹೋಗಿದೆ.
ರಿಚ್ಮಂಡ್ ಅರಮನೆಗೆ ಹೊಂದಿಕೊಂಡಂತೆ ಬೃಹದಾಕಾರದ ಮರಗಳಿಂದ, ಬಯಲುಗಳಿಂದ ತುಂಬಿದ್ದ ಮೇನರ್ ಆಫ್ ಶೀನ್ ಆ ಕಾಲದಲ್ಲಿ ದನಗಾಹಿಗಳಿಂದ ಮಾತ್ರ ಬಳಕೆಯಲ್ಲಿದ್ದ ಜಾಗ. ಚಾರ್ಲ್ಸ್ ಎಂಬ ದೊರೆ ಇವರನ್ನೆಲ್ಲ ಆ ಜಾಗದಿಂದ ಹೊರದಬ್ಬಿ ಸುಮಾರು 2,000 ಜಿಂಕೆಗಳನ್ನು ಈ ಜಾಗಕ್ಕೆ ಬಿಟ್ಟು ಅವು ಓಡಿಹೋಗದಂತೆ ಸುತ್ತಲೂ 8 ಮೈಲು ಗೋಡೆಗಳನ್ನು ಕಟ್ಟಿಸಿ, ಈ ಜಾಗವನ್ನು ಆತನ ವಿನೋದದ ಬೇಟೆಗೆ ಬಳಸತೊಡಗಿದ. ಇದರಿಂದ ಕುಪಿತರಾದ ಜನ ಇವನ ಮೇಲೆ ದಂಗೆಯೆದ್ದು ಈ ಜಾಗಕ್ಕೆ ಸಾರ್ವಜನಿಕರ ಹಕ್ಕೂ ಇದೆ ಎಂದು ದಾವಾ ಹೂಡಿ ಗೆದ್ದರು.
ಈ ಪ್ರದೇಶಕ್ಕೆ ತಮ್ಮ ಪ್ರವೇಶದ ಹಕ್ಕನ್ನು ಕಾದುಕೊಂಡರು. ಈತ ಹಲವರಿಗೆ ಪರಿಹಾರ ಧನವನ್ನೂ ಕೊಡಬೇಕಾಯಿತು. ಇವನ ಅನಂತರದ 17ನೇ ಶತಮಾನದ ಎರಡನೇ ಚಾರ್ಲ್ಸ್ ಈ ಜಾಗದ ಮೇಲೆ ಹಣ ಸುರಿದು ಕೊಳ, ತೊರೆಗಳನ್ನು ನಿರ್ಮಿಸಿದ. 18ನೇ ಶತಮಾನದ ವೇಳೆಗೆ ಇದು ರಾಜ ಮನೆತನದ ಸಂಭಾಳಿಕೆಯಲ್ಲಿದ್ದ ಹೆಮ್ಮೆಯ ಜಾಗವಾಗಿ ಪರಿವರ್ತಿತವಾಯ್ತು. 16ನೇ ಶತಮಾನದಲ್ಲಿ ಕಟ್ಟಿಸಿದ್ದ ಗೋಡೆಗಳ ತುಣುಕುಗಳನ್ನು ಇವತ್ತಿಗೂ ನೋಡಬಹುದು.
ರಿಚ್ಮಂಡ್ ಪಾರ್ಕ್‌ನ ಸುತ್ತಲೂ ನಗರ ಬೆಳೆಯಿತಾದರು ಪಾರ್ಕ್‌ನ್ನು ಬಹುತೇಕ ಹಾಗೆಯೇ ಉಳಿಸಿಕೊಂಡಿದ್ದಾರೆ. ಇಲ್ಲಿನ ಹೂ-ಗಿಡ-ಮರ ಬಳ್ಳಿಗಳು, ಕೊಳ, ತೊರೆ, ಜರಿಗಳು, ದಿಬ್ಬ, ಹಳ್ಳ, ತಿಟ್ಟುಗಳು ಇಂದಿನ ಎಲ್ಲ ಆಧುನಿಕ ಸವಲತ್ತುಗಳೊಂಡಿಗೆ ರಾರಾಜಿಸುತ್ತದೆ. 1847ರಲ್ಲಿ ಅಂದಿನ ಪ್ರಧಾನಿ ತನ್ನ ನಿವಾಸವನ್ನು ಇಲ್ಲಿನ “ಪೆಂಬ್ರೊಕ್ ಲಾಡ್ಜ್’ ಗೆ ಬದಯಿಸಿಕೊಂಡು ತನ್ನ ನಿವಾಸ ಸ್ಥಾನವಾಗಿಸಿಕೊಂಡ. ಇವತ್ತು ಅದು ಇಂಗ್ಲೆಂಡಿನ ಒಂದು ದುಬಾರಿ ರೆಸ್ಟೋರೆಂಟ್ ಆಗಿದೆ. 13 ಎಕ್ರೆ ಜಾಗದಲ್ಲಿರುವ ಈ ಕಟ್ಟಡದ ಆಸು ಪಾಸಿನಲ್ಲಿ 200 ಕಾರುಗಳನ್ನು ನಿಲ್ಲಿಸಲು ಜಾಗ ಮಾಡಿದ್ದಾರೆ. ಇಲ್ಲಿ ಹಲವು ಮದುವೆಗಳೂ ನಡೆಯುತ್ತವೆ.
ರಿಚ್ಮಂಡ್ ಪಾರ್ಕ್‌ನಲ್ಲಿ 1830ರಲ್ಲಿ ನೆಟ್ಟು ಬೆಳೆಸಲಾದ ಇಸಬೆಲ್ಲ ಪ್ಲಾಂಟೇಷನ್ ಇದೆ. ವರ್ಷದ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಲ್ಲಿ ಹೂ ಬನ ತನ್ನ ಬಹುದೇಶಿಯ ಸಸ್ಯ ಸೌಂದರ್ಯದಿಂದ ಕಂಗೊಳಿಸುತ್ತದೆ. 1953ರಿಂದಲೂ ಈ ಜಾಗಕ್ಕೆ ಸಾರ್ವಜನಿಕರು ಈ ಸೌಂದರ್ಯವನ್ನು ಆಸ್ವಾದಿಸಲು ಬರುತ್ತಿದ್ದಾರೆ.
ಇಲ್ಲಿ ಕಿಂಗ್ ಹೆನ್ರಿ ದಿಬ್ಬವೂ ಇದೆ. ಈ ಹೆನ್ರಿ ಇಂಗ್ಲೆಂಡಿನ ಕುಖ್ಯಾತ ದೊರೆ. ಈತ ಒಬ್ಬರಾದ ಮೇಲೆ ಇನ್ನೊಬ್ಬರಂತೆ 6 ಜನರನ್ನು ಮದುವೆಯಾದವ. 1536 ಮೇ 19ರಂದು ಆತ ಈ ದಿಬ್ಬದ ಮೇಲೆ ನಿಂತು, ಲಂಡನ್ ಟವರ್ ಎನ್ನುವ ಜೈಲಿನಿಂದ ಹಾರಿಸುವ ಸಿಡಿಮದ್ದಿನ ಸಿಗ್ನಲ್‌ಗೆ ಕಾದಿದ್ದನಂತೆ. ಈ ಪಟಾಕಿಯ ಅರ್ಥ ಆತನ ಹೆಂಡತಿ ಆನ್ ಳ ತಲೆಕಡಿದು ಮುಗಿಸಿದ್ದನ್ನು ಖಾತರಿ ಪಡಿಸುವ ಸಂಕೇತವಾಗಿದ್ದುದೇ ದುರಂತ. ಸಾವಿರ ದಿನಗಳ ದುರಂತದ ರಾಣಿ ಎಂತಲೇ ಜನರ ಕನಿಕರಕ್ಕೊಳಗಾಗಿರುವ ಆನ್‌ಳನ್ನು ಈತ ಪ್ರೀತಿಸಿಯೇ ಮದುವೆಯಾಗಿದ್ದ. ಮೂರು ವರ್ಷಗಳಲ್ಲಿ ಈತನ ಗಮನ ಮತ್ತೊಬ್ಬ ಹೆಂಗಸಿನ ಮೇಲೆ ಬಿತ್ತು. ಆದರೆ ಡೈವೋರ್ಸಿಗೆ ಚರ್ಚಿನ ಒಪ್ಪಿಗೆಯಿಲ್ಲದ ಕಾರಣ ಈತ ತನ್ನ ಸ್ವಂತ ಹೆಂಡತಿಯ ಮೇಲೆಯೇ ಇಲ್ಲ ಸಲ್ಲದ ದೇಶ ದ್ರೋಹದ ಆರೋಪ ಹೊರಿಸಿದ. ಅವಳ ತಲೆಕಡಿಸಿ ತನ್ನ ಪ್ರೇಯಸಿ ಲೇಡಿ ಜೇನ್ ಸಿರ್ಮೋಳನ್ನು ಮದುವೆಯಾದ. ಈ ದೊರೆಯ ನೈತಿಕ ಬಾಹಿರ್ಯದ ಬಗ್ಗೆ ಹಲವು ಕಥೆಗಳಿವೆ. ಆ ದಿನ ಆತ ಊರಿನಲ್ಲಿಯೇ ಇರಲಿಲ್ಲ ಎಂದು ಹೇಳುವವರೂ ಇದ್ದಾರೆ.
ರಿಚ್ಮಂಡ್ ಪಾರ್ಕ್‌ನಲ್ಲಿ ವೈಟ್ ಲಾಡ್ಜ್ ಎಂದು ಹೆಸರಿದ್ದ ಮತ್ತೊಂದು ಚಾರಿತ್ರಿಕ ಕಟ್ಟಡವಿದೆ. ಇದನ್ನು ರಾಯಲ್ ಸ್ಕೂಲ್ ಆಫ್ ಬ್ಯಾಲೆಯಾಗಿ ಈಗ ಉಪಯೋಗಿಸುತ್ತಿದ್ದಾರೆ. ರಿಚ್ಮಂಡ್ ಪಾರ್ಕ್‌ನಲ್ಲಿ ನಿಂತು ಲಂಡನ್ನಿನ ಪವಿತ್ರ ಚರ್ಚ್ “ಸೇಂಟ್ ಪಾಲ್ ಕ್ಯಥಿಡ್ರಿಲ್’ ನ್ನು ವೀಕ್ಷಿಸಲು ಸಾಧ್ಯವಿದೆ. ಈ ನೋಟವನ್ನು ನೂರಾರು ವರ್ಷಗಳಿಂದ ರಕ್ಷಿಸುತ್ತ ಈ ಉದ್ದಕ್ಕೂ ಮರ ಗಿಡಗಳು ಬೆಳೆದು ಚರ್ಚ್‌ನ್ನು ಮರೆಯಾಗಿಸದಂತೆ ನೋಡಿಕೊಳ್ಳಲಾಗಿದೆ. ಈ ತಡೆಯಿಲ್ಲದ ನೋಟದ ಮೊದಲನ್ನು ಸಾಂಕೇತಿಕವಾಗಿ “ದಿ ವೇ’ ಎನ್ನುವ ಜೋಡಿ ಗೇಟುಗಳ ಮೂಲಕ ಶುರು ಮಾಡಬಹುದು. 10 ಮೈಲಿ ದೂರವನ್ನು ನೋಡಲು ಟೆಲಿಸ್ಕೋಪ್‌ಗಳನ್ನು ಅಳವಡಿಸಿದ್ದಾರೆ.
ರಿಚ್ಮಂಡ್ ಪಾರ್ಕ್‌ನ್ನು ಪೂರ್ತಿಯಾಗಿ ನಡೆದು ನೋಡಲು ಸಾಧ್ಯವಿಲ್ಲ. ಇಲ್ಲಿ ಮಿನಿ ಬಸ್ ವ್ಯವಸ್ಥೆಯಿದೆ. ಕ್ರಿಸ್ಮಸ್ ಸಂದರ್ಭದ ಚಳಿಯಲ್ಲಿ ಕಂಬಳಿ ಹೊದ್ದು ತಿರುಗಾಡಲು ಕುದುರೆ ಸಾರೋಟಿನ ವ್ಯವಸ್ಥೆಯಿದೆ. ಇದೊಂದು ರೀತಿಯಲ್ಲಿ ಕಳೆದು ಹೋದ ಚಾರಿತ್ರಿಕ ದಿನಗಳ ಮರುಕಳಿಕೆಗಾಗಿ ಮಾಡಿರುವ ವ್ಯವಸ್ಥೆ. ನೈಸರ್ಗಿಕ ಗಾಳಿ ಸವಿಯುತ್ತ ನಡೆದಾಡಲು ಮಣ್ಣಿನ ಮಾರ್ಗಗಳಿವೆ. ಬೇಸಗೆಯ ದಿನಗಳಲ್ಲಿ ಸೈಕಲ್ ಸವಾರಿಗೆ ಅನುಕೂಲವಿದೆ. ಗಾಲ್ಫ್ ಕೋರ್ಸ್, ಪವರ್ ಕೈಟಿಂಗ್ ( ಗಾಳಿ ಪಟ), ರಗ್ಬಿ ಆಟ ಮತ್ತಿತರ ಆಟಗಳಾಡಲು ಅನುಕೂಲಗಳಿವೆ. ಪಕ್ಷಿ ವೀಕ್ಷಣೆಗೆ ಅನುಕೂಲಗಳಿವೆ.
*ಡಾ| ಪ್ರೇಮಲತಾ ಬಿ., ಲಿಂಕನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.