ಸದ್ಬಳಕೆಯಾಗಲಿ ರಾಜ್ಯದ ನದಿಗಳ ನೀರು
Team Udayavani, Feb 8, 2021, 6:10 AM IST
ನೀರು ಮತ್ತು ಮಣ್ಣು ಜಗತ್ತಿನ ಶ್ರೇಷ್ಠ ಸಂಪನ್ಮೂಲ. ನೈಸರ್ಗಿಕವಾಗಿ ದೊರೆಯುವುದನ್ನು ಹೊರತುಪಡಿಸಿ, ಮಾನವನ ಅವಿಷ್ಕಾರದಿಂದ ಅಥವಾ ಬುದ್ಧಿಶಕ್ತಿಯಿಂದ ಇದನ್ನು ಸೃಷ್ಟಿಸಲು ಸಾಧ್ಯವಿಲ್ಲ. ಹೀಗಾಗಿ ನೀರು ಮತ್ತು ಮಣ್ಣಿನ ಸದ್ಬಳಕೆ ನಮ್ಮ ಧ್ಯೇಯವಾಗಬೇಕು.
ಭೂಮಿಯ ಮೇಲ್ಮೆ„ ಶೇ.71ರಷ್ಟು ನೀರಿನಿಂದ ಆವೃತವಾಗಿದ್ದರೂ ಮನುಷ್ಯನ ಅಗತ್ಯಕ್ಕೆ ದೊರೆಯುವ ಸಿಹಿನೀರಿನ ಪ್ರಮಾಣ ಅತ್ಯಂತ ಕಡಿಮೆ. ಭೂಮಿಯ ಮೇಲೆ ದೊರೆಯುವ ಒಟ್ಟು ನೀರಿನಲ್ಲಿ ಶೇ.97ರಷ್ಟು ಸಮುದ್ರದಲ್ಲಿರುವುದರಿಂದ ಅದು ಲವಣಯುಕ್ತ ವಾಗಿದೆ. ಉಳಿದ ಶೇ.3ರಷ್ಟು ಮಾತ್ರ ಸಿಹಿನೀರಿನ ಲಭ್ಯತೆ ಇದೆ. ಇದರಲ್ಲಿ ಶೇ.2.7ರಷ್ಟು ಮಂಜುಗಡ್ಡೆ ಮತ್ತು ಹವೆಯ ರೂಪದಲ್ಲಿ ದೊರೆಯುತ್ತದೆ. ಹೀಗಾಗಿ ಮಾನವನ ಬಳಕೆಗೆ ದೊರೆಯುವ ನೀರಿನ ಪ್ರಮಾಣ ಕೇವಲ ಶೇ 0.3ರಷ್ಟು. ಇದರಲ್ಲಿ ಶೇ.0.2 ನೀರು ಕೃಷಿಗೆ ಬಳಕೆಯಾಗುತ್ತಿದೆ. ಉಳಿದ ಶೇ. 0.1ರಷ್ಟು ನೀರು ಕುಡಿಯುವುದಕ್ಕೆ, ಕೈಗಾರಿಕೆ ಸೇರಿದಂತೆ ಇತರ ಎಲ್ಲ ಬಳಕೆಗೆ ಲಭ್ಯವಿದೆ.
ಈ ಶೇ. 0.3ನೀರು ಜಗತ್ತಿನಾದ್ಯಂತ ಸರಿಸಮಾನವಾಗಿ ಹಂಚಿಕೆಯಾ ಗಿಲ್ಲ. ಶೇ. 0.3 ನೀರಿನಲ್ಲಿಯ ಶೇ.20ರಷ್ಟು ನೀರು ಬ್ರೆಜಿಲ್‌ನಲ್ಲಿ ದೊರೆಯುತ್ತದೆ. ಆದರೆ ಬ್ರೆಜಿಲ್ ಜಾಗತಿಕ ಜನಸಂಖ್ಯೆಯ ಶೇ.0.3ರಷ್ಟನ್ನು ಮಾತ್ರ ಹೊಂದಿದೆ. ಜಗತ್ತಿನ ಒಟ್ಟು ಜನಸಂಖ್ಯೆಯ ಶೇ. 17ರಷ್ಟನ್ನು ಭಾರತ ಹೊಂದಿದೆ ಇಲ್ಲಿ ದೊರೆಯುವ ನೀರಿನ ಪ್ರಮಾಣ ಕೇವಲ ಶೇ.4ರಷ್ಟು ಮಾತ್ರ. ಚೀನ ಶೇ.6ರಷ್ಟು ಪ್ರಮಾಣ ಹೊಂದಿದ್ದರೆ ಜಾಗತಿಕವಾಗಿ ಚೀನದ ಜನಸಂಖ್ಯೆ ಪ್ರಮಾಣ ಶೇ.17ರಷ್ಟಿದೆ. ಭಾರತದ ನೀರಿನ ಕೊರತೆಗಾಗಿ ಅಮೆಜಾನ್ ನದಿಯನ್ನಂತೂ ಭಾರತದತ್ತ ತಿರುಗಿಸಲು ಸಾಧ್ಯವಿಲ್ಲ. ಆದರೆ ಕರ್ನಾಟಕದ ನೀರಿನ ಕೊರತೆ ತಪ್ಪಿಸಲು ಪಶ್ಚಿಮ ಘಟ್ಟಗಳ ನದಿಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ.
ರಾಜ್ಯದ ಪಶ್ಚಿಮ ಘಟ್ಟಗಳು ಅಪಾರ ಜಲರಾಶಿಯನ್ನು ಹೊಂದಿವೆ. ಕರ್ನಾಟಕದ ನೀರಾವರಿ ವ್ಯವಸ್ಥೆಯನ್ನು ಪೂರ್ವಾಭಿ ಮುಖವಾಗಿ ಹರಿಯುವ ಕೃಷ್ಣಾ, ಕಾವೇರಿ, ಗೋದಾವರಿ, ಉತ್ತರ ಪೆನ್ನಾರ, ದಕ್ಷಿಣ ಪೆನ್ನಾರ್, ಪಾಲಾರ್ ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ನದಿ ಕಣಿವೆ ಎಂದು 7 ಕಣಿವೆಗಳಾಗಿ ವಿಂಗಡಿಸಲಾಗಿದೆ. ಈ ಎಲ್ಲ ಮೂಲಗಳಿಂದ ಕರ್ನಾಟಕಕ್ಕೆ 3,475.24 ಟಿಎಂಸಿ ಅಡಿ ನೀರಿನ ಲಭ್ಯವಿದೆ. ಇದರಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಪಾಲು ಬರೋಬ್ಬರಿ 1,998.83 ಟಿಎಂಸಿ. ರಾಜ್ಯದ ಶೇ.60 ನೀರಿನ ಪಾಲನ್ನು ಹೊಂದಿರುವ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಸ್ಥಳೀಯ ಕುಡಿಯುವ ನೀರು ಹಾಗೂ ಜಲ ವಿದ್ಯುತ್ ಉತ್ಪಾದನೆಗಷ್ಟೆ ಬಳಕೆಯಾಗಿ ನೇರವಾಗಿ ಸಮುದ್ರ ಸೇರುತ್ತವೆ. ವಾರ್ಷಿಕ ಮಳೆ ಬೀಳುವ ಪ್ರಮಾಣದಲ್ಲಿ ಕರ್ನಾಟಕವನ್ನು ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಎಂದು ಪ್ರಮುಖ 3 ವಲಯಗಳಾಗಿ ವಿಂಗಡಿಸಲಾಗಿದೆ. ಸಹಜ ವಾಗಿಯೇ ಕರಾವಳಿ ಅತೀ ಹೆಚ್ಚು ಅಂದರೆ ವಾರ್ಷಿಕ 3,456 ಎಂ.ಎಂ. ಮಳೆಯನ್ನು ಪಡೆ ಯು ತ್ತವೆ. ದಕ್ಷಿಣ ಒಳನಾಡು 1,286 ಎಂ.ಎಂ. ಮಳೆಯನ್ನು ಪಡೆದರೆ ಉತ್ತರ ಒಳನಾಡು ಕೇವಲ 731 ಎಂ.ಎಂ. ಮಳೆಯನ್ನು ಪಡೆಯುತ್ತದೆ.
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ನದಿ ಕಣಿವೆಗಳು ಅಂತಾರಾಜ್ಯ ನದಿ ನೀರಿನ ವಿಷಯ ನ್ಯಾಯಮಂಡಳಿಯ ವ್ಯಾಪ್ತಿಯ ಲ್ಲಿವೆ. ಇದರಿಂದ ಭವಿಷ್ಯದ ನೀರಿನ ನಿರ್ವಹಣೆ ಕಷ್ಟವಾ ಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣ ಹಾಗೂ ಮಳೆಯ ಹೊಯ್ದಾಟ ಭವಿಷ್ಯದ ನೀರಿನ ಆವಶ್ಯಕತೆಯನ್ನು ನೀಗಿಸಲು ಹೊಸ ನೀರಿನ ಮೂಲಗಳನ್ನು ಹುಡುಕುವ ಗಂಭೀರತೆಯನ್ನು ಸೃಷ್ಟಿಯಾಗಿದೆ.
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಾದ ಕಾಳಿ, ಅಘನಾಶಿನಿ, ಬೆಡ್ತಿ, ಶರಾವತಿ, ನೇತ್ರಾವತಿ ನದಿಗಳನ್ನು ಜಲವಿದ್ಯುತ್ ಜತೆಗೆ ಕರ್ನಾಟಕ ಕುಡಿಯುವ ನೀರು, ಕೆರೆ ತುಂಬಲು ಹಾಗೂ ಕೃಷಿ ಅಭಿವೃದ್ದಿಗೆ ಬಳಸಿಕೊಳ್ಳಬಹುದು.
ಕರ್ನಾಟಕದ 36,753 ಕೆರೆಗಳು 6,84,518 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಿವೆ. ಇವುಗಳಲ್ಲಿಯ ಬಯಲುಸೀಮೆಯ ಬಹುತೇಕ ಕೆರೆಗಳು ಅವಸಾನದ ಅಂಚಿನಲ್ಲಿವೆ. ಈ ಕೆರೆಗಳ ಪುನಃಶ್ಚೇತನ ಆಗದಿದ್ದಲ್ಲಿ ಅಂತರ್ಜ ಲಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಪ್ರಮುಖವಾಗಿ ಉ.ಕ.ದಲ್ಲಿ ಬಹಳಷ್ಟು ಕೃಷಿ ಯೋಗ್ಯ ಭೂಮಿ ನೀರಾವರಿ ಕೊರತೆಯನ್ನು ಎದುರಿಸುತ್ತಿದೆ. ಬಯಲುಸೀಮೆಯ ಜಲಾಶಯ ಗಳು ಪದೇ ಪದೆ ನೀರಿನ ಕೊರತೆಯನ್ನು ಅನುಭವಿಸುತ್ತಿವೆ. ಹೀಗಾಗಿ ಪಶ್ಚಿಮಾಭಿ ಮುಖವಾಗಿ ಹರಿಯುವ ಕೆಲವು ನದಿಗಳನ್ನು ಸದ್ಬಳಕೆ ಮಾಡಿಕೊಂಡು ಪೂರ್ವಾಭಿಮುಖವಾಗಿ ಹರಿಯುವ ನದಿಗಳ ಕಣಿವೆಗಳನ್ನು ಸಮೃದ್ಧಗೊಳಿಸಿದರೆ, ಭವಿಷ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ವಿಶೇಷವಾಗಿ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ವಿಜಯನಗರಗಳನ್ನು ಸಮೃದ್ಧವಾಗಿಸಬಹುದು.
ಕಾಳಿ ನದಿಗೆ ಸೂಪಾ, ಬೊಮ್ಮನಹಳ್ಳಿ, ಕೊಡಸಳ್ಳಿ, ಕದ್ರಾ ಎಂದು 4 ಜಲಾಶಯಗಳನ್ನು ಕಟ್ಟಲಾಗಿದ್ದು, ಈ ಮೂಲಕ 1250 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಜಲವಿದ್ಯುತ್ ಹೊರತುಪಡಿಸಿ ಕಾಳಿ ನದಿ ಎಲ್ಲಿಯೂ ಕೃಷಿ ಕಾರ್ಯಗಳಿಗೆ ಬಳಕೆಯಾಗುವುದಿಲ್ಲ. ಈ ನೀರಿನಲ್ಲಿಯ 25 ಟಿಎಂಸಿ ನೀರನ್ನು 2 ಸರಳ ಮಾರ್ಗಗಳ ಮೂಲಕ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಿಗೆ ಹರಿಸಬಹುದು. ಪಶ್ಚಿಮ ಘಟ್ಟದ ಸಂಪದ್ಭರಿತ ನದಿಗಳಲ್ಲಿ ಒಂದಾದ ಅಘನಾಶಿನಿ ನದಿಗೆ 4 ಕಡೆ ತಡೆಗೋಡೆ ನಿರ್ಮಿಸಿ ಲಿಫ್ಟಿಂಗ್ ಮಾಡುವ ಮೂಲಕ ವಾರ್ಷಿಕ 9.19 ಟಿಎಂಸಿ ಅಡಿ ನೀರನ್ನು ಶಿರಸಿ, ಸಿದ್ದಾಪುರ ತಾಲೂಕಿನ 14 ಸಾವಿರ ಹೆಕ್ಟೇರ್ ಪ್ರದೇಶದ ನೀರಾವರಿಗಾಗಿ ಬಳಕೆ ಮಾಡಿಕೊಳ್ಳಬಹದು. ಪಶ್ಚಿಮಾಭಿಮುಖವಾಗಿ ಹರಿಯುವ ಬೆಡ್ತಿ ನದಿಯ 8.57 ಟಿಎಂಸಿ ನೀರನ್ನು ತುಂಗಭದ್ರಾ ನದಿಯ ಉಪ ನದಿಯಾದ ವರದಾಗೆ ಸೇರಿಸಿದರೆ ತುಂಗಭದ್ರಾ ಎಡದಂಡೆ ಕಾಲುವೆ ಜಲಾನಯನ ಪ್ರದೇಶದ ನೀರಿನ ಕೊರತೆ ತಪ್ಪಿಸಬಹುದು.
ಮಧ್ಯ ಕರ್ನಾಟಕದ ಹಾಗೂ ಪೂರ್ವಭಾಗದ ಜಿಲ್ಲೆಗಳ ಕುಡಿಯುವ ನೀರಿನ ಬವಣೆ ತಪ್ಪಿಸಲು ಹಾಗೂ ಕೆರೆ ತುಂಬಿ ಸುವ ಮೂಲಕ ಅಂತರ್ಜಲ ವೃದ್ಧಿಸಬೇಕು.
ಶರಾವತಿಯನ್ನು ಕನ್ನಡ ನಾಡಿನ ಭಾಗೀರಥಿ ಎಂದು ಕರೆಯುತ್ತಾರೆ. ಶರಾವತಿಯ ಅಪಾರ ಜಲಸಂಪತ್ತು ಕರುನಾಡಿಗೆ ಬೆಳಕು ನೀಡುವು ದರ ಜತೆಗೆ ಬಯಲು ಸೀಮೆಯ ತುಂಗಭದ್ರಾ ಜಲಾನಯನ ಪ್ರದೇಶದ ಜನರ ಬದುಕನ್ನು ಬೆಳಗಲು ಸಾಧ್ಯವಿದೆ. ಶರಾವತಿ ಹರಿಯುವ ಅನತಿ ದೂರದಲ್ಲಿಯೇ ಸಾಗರ ತಾಲೂಕಿನಲ್ಲಿ ಹುಟ್ಟುವ ವರದಾ ನದಿಗೆ ಕೇವಲ ಅರ್ಧ ಕಿ.ಮೀ. ಅಂತರದಲ್ಲಿ ಲಿಂಗನಮಕ್ಕಿ ಜಲಾಶಯದಿಂದ ಸಮುದ್ರ ಮಟ್ಟದಿಂದ 510 ಮೀ.ನಿಂದ 570 ಮೀ. ಎತ್ತರ ದವರೆಗೆ ಲಿಫ್ಟ್ ಮಾಡಿ ಶರಾವತಿಯ ನೀರನ್ನು ವರದಾ ನದಿಗೆ ಹರಿಸಬಹುದು. ವರದಾ ನದಿಯು ಮುಂದೆ ತುಂಗ ಭದ್ರೆಯನ್ನು ಸೇರುವುದರಿಂದ ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬಹುದು.
ಕಾಳಿ, ಅಘನಾಶಿನಿ, ಶರಾವತಿ, ಬೆಡ್ತಿ ಸೇರಿದಂತೆ ಪಶ್ಚಿಮಘಟ್ಟದ 13 ಪ್ರಮುಖ ನದಿಗಳು ಕರ್ನಾಟಕ ದಲ್ಲಿಯೇ ಹುಟ್ಟಿ ಕರ್ನಾಟಕ ಕರಾವಳಿ ವ್ಯಾಪ್ತಿಯಲ್ಲಿಯೇ ಸಮುದ್ರ ಸೇರುತ್ತವೆ. ನೀರು ರಾಜ್ಯದ ಪರಮೊತ್ಛ ಸಂಪನ್ಮೂಲ. ಹೀಗಾಗಿ ನಮ್ಮ ರಾಜ್ಯದ ನೀರನ್ನು ಬಳಕೆ ಮಾಡಿಕೊಳ್ಳಲು ನಮಗೆ ಪೂರ್ಣ ಅಧಿಕಾರವಿದೆ. ಭವಿಷ್ಯದ ಹಿತದೃಷ್ಟಿಯಿಂದ ಯೋಚಿಸಿದಾಗ 2048- 49 ರ ವರೆಗೆ ಕರ್ನಾಟಕದ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದ ಕುಡಿಯುವ ನೀರಿಗಾಗಿಯೇ 240 ಟಿಎಂಸಿ ಅಡಿ ನೀರು ಬೇಕು ಎಂದು ಅಂದಾಜಿಸಲಾಗಿದೆ. ಕೃಷಿ, ಕೈಗಾರಿಕೆ ಇತರ ಬಳಕೆ ಎಲ್ಲ ಸೇರಿ 2760 ಟಿಎಂಸಿಯ ಷ್ಟಾಗುತ್ತದೆ. ಹೀಗಾಗಿ 2050ರ ವೇಳೆಗೆ ಕರ್ನಾಟಕಕ್ಕೆ 3,000 ಟಿಎಂಸಿ ನೀರಿನ ಆವಶ್ಯಕತೆ ಇದೆ. ಈಗ ರಾಜ್ಯದಲ್ಲಿ ಉಪಯೋಗವಾಗುತ್ತಿರುವ 1,235.75 ಟಿಎಂಸಿಗೆ ಹೋಲಿಸಿದರೆ 1,764.25 ಟಿಎಂಸಿ ನೀರಿನ ಕೊರತೆ ಎದುರಾಗುತ್ತದೆ. ಭವಿಷ್ಯದ ಆವಶ್ಯಕತೆಗಾಗಿ ಈಗಲೇ ಜಾಗೃತರಾಗೊಣ.
ಅನ್ನಮಾಪಃ ಅಮೃತಮಾಪಃ ಸ್ವರಾಡಮಾಪ: ವಿರಾಡಮಾಪಃ ನೀರೆಂದರೆ ಅನ್ನ, ನೀರೆಂದರೆ ಅಮೃತ, ನೀರೆಂದರೆ ಅಂತಃಸ್ತೇಜ, ನೀರೆಂದರೆ ವಿರಾಟ ಚೇತನ, ನೀರೆಂದರೆ ಬೆಳಕು ಎಂಬ ಉಪನಿಷತ್ತಿನ ಈ ಸಾಲುಗಳು ನಮ್ಮ ಧ್ಯೇಯಮಂತ್ರವಾಗಬೇಕು. ಈ ಅಮೃತವನ್ನು ಮುಂದಿನ ತಲೆಮಾರಿಗೆ ಸಮೃದ್ಧವಾಗಿ, ಶುದ್ಧವಾಗಿ ಉಳಿಸಿಕೊಡುವ ಮಹತ್ತರವಾದ ಜವಾಬ್ದಾರಿ ನಮ್ಮ ಪೀಳಿಗೆಯ ಹೆಗಲಿಗಿದೆ.
– ಸಂಗಮೇಶ ನಿರಾಣಿ, ಅಧ್ಯಕ್ಷರು, ಉ.ಕ. ಸಮಗ್ರ ನೀರಾವರಿ ಹೋರಾಟ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.