ರೋಹಿತ್ ಸಂಪೂರ್ಣ ಫಿಟ್ ; ವಿಂಡೀಸ್ ಸರಣಿಗೆ ಅವರೇ ನಾಯಕ
Team Udayavani, Jan 26, 2022, 10:30 PM IST
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಸಂಪೂರ್ಣ ಫಿಟ್‌ನೆಸ್‌ಗೆ ಮರಳಿದ್ದು, ವೆಸ್ಟ್ ಇಂಡೀಸ್ ಎದುರಿನ ತವರಿನ ಸರಣಿಗೆ ತಂಡವನ್ನು ಸೇರಿಕೊಳ್ಳಲಿರುವ ಸುದ್ದಿ ಬಿತ್ತರಗೊಂಡಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿರುವ ರೋಹಿತ್ ಶರ್ಮ, ಬುಧವಾರ ಅಪರಾಹ್ನ ಆಯ್ಕೆ ಸಮಿತಿಯವರನ್ನು ಭೇಟಿಯಾದರು. ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವರದಿ ಸಲ್ಲಿಸಿದರು.
ಫೆಬ್ರವರಿಯಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಲಾ 3 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಫೆ.6ರಂದು ಏಕದಿನ ಸರಣಿ, ಫೆ.16ರಂದು ಟಿ20 ಸರಣಿ ಆರಂಭವಾಗಲಿದೆ. ಈ ವಾರವೇ ಭಾರತ ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ವಿರಾಟ್ ಕೊಹ್ಲಿ ಅವರನ್ನು ಕೆಳಗಿಳಿಸಿದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ರೋಹಿತ್ ಶರ್ಮ ಅವರನ್ನು ಏಕದಿನ ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ ಗಾಯಾಳದ ಕಾರಣ ಅವರು ಈ ಪ್ರವಾಸದಿಂದ ಹೊರಗುಳಿದರು. ಒಂದು ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಕೆ.ಎಲ್.ರಾಹುಲ್ ಯಶಸ್ಸು ಕಾಣಲು ವಿಫಲರಾದರು.
ಪಾಂಡ್ಯ ಮರಳುವರೇ?: ಹಾರ್ಡ್ ಹಿಟ್ಟಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳುವರೇ ಎಂಬುದೊಂದು ಕುತೂಹಲ. ನೆಟ್ಸ್‌ನಲ್ಲಿ ಅವರು ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದುದು ಕಂಡುಬಂದಿದೆ. ಇವರ ಬದಲು 6ನೇ ಕ್ರಮಾಂಕದಲ್ಲಿ ಆಡಲಿಳಿದ ವೆಂಕಟೇಶ್ ಐಯ್ಯರ್ ಯಶಸ್ವಿಯಾಗಿರಲಿಲ್ಲ.
ಆದರೆ ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟದ್ದೇ ಹೊರತು ವಿಶ್ರಾಂತಿ ನೀಡಿದ್ದಲ್ಲ. ಇದು ಆಯ್ಕೆ ಮಂಡಳಿ ಅವರಿಗೆ ನೀಡಿದ ಎಚ್ಚರಿಕೆಯ ಸಂದೇಶ. ಆದರೆ ಪಾಂಡ್ಯ ಸುದೀರ್ಘ ಕಾಲ ತಂಡದಿಂದ ಹೊರಗುಳಿಸಲ್ಪಡಬೇಕಾದ ಆಟಗಾರನಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಅಲ್ಲವಾದರೆ ಅನಂತರದ ಶ್ರೀಲಂಕಾ ಎದುರಿನ ಸರಣಿಗೆ ಖಂಡಿತ ಮರಳಲಿದ್ದಾರೆ’ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.
ಇದನ್ನೂ ಓದಿ :ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.