ಆರ್‌ಟಿಇ ಮೀಸಲು ಸೀಟು ಅರ್ಧಕ್ಕರ್ಧ ಬಾಕಿ!
ನಿರೀಕ್ಷೆಯಂತೆ ಖಾಸಗಿ ಶಾಲೆಗಳಲ್ಲಿ ಸೀಟು ಸಿಗದಿರುವುದು ಕಾರಣ
Team Udayavani, May 9, 2022, 7:30 AM IST
ಉಡುಪಿ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ ಶೇ. 25ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂಬ ನಿಯಮಕ್ಕೆ ಅನುಸಾರವಾಗಿ ನಿರ್ದಿಷ್ಟ ಶಾಲೆಗಳಲ್ಲಿ ಕಾದಿರಿಸಿರುವ ಸೀಟುಗಳನ್ನು ಭರ್ತಿ ಮಾಡುವುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸವಾಲಾಗಿದೆ.
ಸರಕಾರ ತನ್ನ ಆರ್ಥಿಕ ಹೊರೆ ಇಳಿಸುವ ಉದ್ದೇಶದಿಂದ ನಿಯಮಗಳಿಗೆ ತಂದಿರುವ ತಿದ್ದುಪಡಿಯೇ ಇದಕ್ಕೆ ಕಾರಣ. ಇದರಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಮೂಲ ಆಶಯವೇ ಭಂಗವಾಗಿದೆ.
ದಕ್ಷಿಣ ಕನ್ನಡದಲ್ಲಿ 479 ಮತ್ತು ಉಡುಪಿ ಜಿಲ್ಲೆಯಲ್ಲಿ 57 ಸೀಟುಗಳು ಲಭ್ಯವಿವೆ. 2022-23ನೇ ಸಾಲಿನ ಪ್ರವೇಶಕ್ಕೆ ಸಂಬಂಧಿಸಿ ಮೊದಲ ಸುತ್ತಿನ ಸೀಟು ಹಂಚಿಕೆ ಪೂರ್ಣಗೊಂಡಿದೆ. ದ.ಕ.ದಲ್ಲಿ ಕೇವಲ 59 ಮತ್ತು ಉಡುಪಿ ಯಲ್ಲಿ 27 ಸೀಟುಗಳು ಹಂಚಿಕೆಯಾಗಿದ್ದು, ಕ್ರಮವಾಗಿ 38 ಮತ್ತು 26 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಆರ್‌ಟಿಇಯಡಿ ಅರ್ಜಿ ಸಲ್ಲಿಸುವ ಹೆತ್ತವರ ಸಂಖ್ಯೆಯೇ ಕಡಿಮೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್‌ಟಿಇ ಸೀಟು ಮೀಸಲಿರಿಸಿರುವ ಶಾಲೆಗಳಲ್ಲಿ ಸೌಲಭ್ಯದ ಕೊರತೆ ಅಥವಾ ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವ ಶಾಲೆಗಳೇ ಹೆಚ್ಚಿವೆ. ಹೀಗಾಗಿ ಸೀಟು ಲಭ್ಯವಾದರೂ ಹೆತ್ತವರು ಮಕ್ಕಳನ್ನು ದಾಖಲಿಸಲು ಹೋಗು ತ್ತಿಲ್ಲ. ಆರ್‌ಟಿಇ ಅಡಿಯಲ್ಲಿ ಸೀಟು ಲಭಿಸಿರುವ ಬಗ್ಗೆ ಇಲಾಖೆಯಿಂದ ಮೊಬೈಲ್ ಸಂದೇಶ ಕಳುಹಿಸಲಾಗುತ್ತದೆ. ಇಲಾಖೆ ಅಧಿಕಾರಿಗಳು ಕರೆ ಮಾಡಿಯೂ ತಿಳಿಸುತ್ತಾರೆ. ಆದರೂ ಮಕ್ಕಳನ್ನು ಅಲ್ಲಿಗೆ ಸೇರಿಸುತ್ತಿಲ್ಲ.
ನಿಯಮ ಬದಲಾವಣೆ ಕಾರಣ
ಈ ಹಿಂದೆ ಎಲ್ಲ ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂಬ ನಿಯಮ ಇತ್ತು. ಸರಕಾರ ಮೂರು ವರ್ಷಗಳಿಂದ ಈಚೆಗೆ ಕಾಯ್ದೆಯ 12 (1)ಬಿ ಮತ್ತು 12 (1)ಸಿಯಲ್ಲಿ ಮಾರ್ಪಾಡು ಮಾಡಿತ್ತು. ಹೊಸ ನಿಯಮದಂತೆ ಎಲ್ಲೆಲ್ಲಿ ಸರಕಾರಿ ಅಥವಾ ಅನುದಾನಿತ ಶಾಲೆಗಳು ಇವೆಯೋ ಅಲ್ಲಿಗೇ ಮೊದಲ ಆದ್ಯತೆಯಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಮಕ್ಕಳನ್ನು ಸೇರಿಸಬೇಕು. ಸರಕಾರಿ ಮತ್ತು ಅನುದಾನಿತ ಶಾಲೆಗಳು ಇಲ್ಲದ ಕಡೆ ಮಾತ್ರ ಖಾಸಗಿ ಶಾಲೆಗಳಿಗೆ ದಾಖಲಾತಿಗೆ ಅವಕಾಶ ನೀಡಲಾಗಿದೆ. ಆರ್‌ಟಿಇ ಅಡಿ ಖಾಸಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳ ಶುಲ್ಕವನ್ನು ಸರಕಾರವೇ ಭರಿಸುತ್ತಿತ್ತು. ವರ್ಷದಿಂದ ವರ್ಷಕ್ಕೆ ಆರ್ಥಿಕ ಹೊರೆ ಹೆಚ್ಚಾದ ಕಾರಣ ನಿಯಮದಲ್ಲಿ ತಿದ್ದುಪಡಿ ತರಲಾಗಿತ್ತು.
ಆರ್‌ಟಿಇ ಅಡಿಯಲ್ಲಿ ಪ್ರಾಥಮಿಕ ಶಾಲೆ (1ನೇ ತರಗತಿ) ಮತ್ತು ಪೂರ್ವ ಪ್ರಾಥಮಿಕ ಶಾಲೆ(ಎಲ್‌ಕೆಜಿ)ಗೆ ಮಕ್ಕಳನ್ನು ಸೇರಿಸಲು ಅವಕಾಶ ಇದೆ. ಅಂದರೆ ಯಾವ ಶಾಲೆಯಲ್ಲಿ ಎಲ್‌ಕೆಜಿಯಿಂದಲೇ ಶಿಕ್ಷಣ ಆರಂಭವಾಗಲಿದೆಯೋ ಅಲ್ಲಿ ಎಲ್‌ಕೆಜಿಯಿಂದ ಮಾತ್ರ ಸೇರಿಸಲು ಸಾಧ್ಯ. ಎಲ್‌ಕೆಜಿ ಇಲ್ಲದ ಕಡೆಗಳಲ್ಲಿ ಒಂದನೇ ತರಗತಿಯಿಂದ ಸೇರಿಸಬಹುದಾಗಿದೆ.
ಹಿಂದೆ ಹೇಗಿತ್ತು?
2012 -13ನೇ ಸಾಲಿನಿಂದ ರಾಜ್ಯದಲ್ಲಿ ಆರ್‌ಟಿಇ ಮೀಸಲಾತಿ ಸೀಟು ನೀಡುವ ಪ್ರಕ್ರಿಯೆ ಆರಂಭವಾಗಿತ್ತು. ಆರಂಭದ ವರ್ಷದಲ್ಲಿ ಬಹುತೇಕ ಎಲ್ಲ ಖಾಸಗಿ ಶಾಲೆಗಳಲ್ಲೂ ಶೇ. 25ರಷ್ಟು ಮೀಸಲಾತಿ ಸೀಟು ಇದ್ದುದರಿಂದ ಅರ್ಹ ಹೆತ್ತವರ ಮಕ್ಕಳು ಇದರ ಫಲಾನುಭವ ಪಡೆದಿದ್ದಾರೆ. ಕಾಯ್ದೆ ತಿದ್ದುಪಡಿಗೆ ಮುನ್ನ ಉಡುಪಿಯಲ್ಲಿ ಪ್ರತೀ ವರ್ಷ ಸರಾಸರಿ 1,200 ಮತ್ತು ದಕ್ಷಿಣ ಕನ್ನಡದಲ್ಲಿ ಸರಾಸರಿ 2,300 ಮಕ್ಕಳು ಇದರ ಅನುಕೂಲ ಪಡೆಯುತ್ತಿದ್ದರು. ಆಗ ಆರ್‌ಟಿಇ ಸೀಟಿಗಾಗಿ ಜನಪ್ರತಿನಿಧಿಗಳಿಂದ ಒತ್ತಡ ಹೆಚ್ಚಿತ್ತು.
ಮುಂದಿನ ಶೈಕ್ಷಣಿಕ ವರ್ಷಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸೀಟು ಪಡೆದ ಮಕ್ಕಳ ಹೆತ್ತವರಿಗೆ ಮಾಹಿತಿ ನೀಡಿದ್ದೇವೆ. ಎರಡನೇ ಸುತ್ತಿನಲ್ಲಿ ಇನ್ನಷ್ಟು ಸೀಟು ಭರ್ತಿಯಾಗುವ ಸಾಧ್ಯತೆಯಿದೆ.
– ಸುಧಾಕರ, ಗೋವಿಂದ ಮಡಿವಾಳ, ಡಿಡಿಪಿಐ, ದ.ಕ., ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.