ರಂಗೇರುತ್ತಿದೆ ಚಿಂಚೋಳಿ ಅಖಾಡ
Team Udayavani, May 8, 2019, 3:08 AM IST
ಕಲಬುರಗಿ: ಚಿಂಚೋಳಿ ಕ್ಷೇತ್ರದಲ್ಲಿ ಗೆದ್ದ ಪಕ್ಷವೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುತ್ತದೆ ಎಂಬ ಇತಿಹಾಸದ ಜತೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿಗೆ ಪ್ರತಿಷ್ಠೆ ಕಣವಾಗಿರುವ ಚಿಂಚೋಳಿ ಕ್ಷೇತ್ರದ ಚುನಾವಣೆ ತೀವ್ರ ಗಮನ ಸೆಳೆದಿದ್ದು, ಗೆಲುವಿಗಾಗಿ ತಂತ್ರ-ಪ್ರತಿತಂತ್ರಗಳು ಜೋರಾಗಿ ನಡೆದಿವೆ.
ಲೋಕಸಭಾ ಚುನಾವಣೆ ಮರುದಿನದಿಂದಲೇ ಬಿಜೆಪಿಯ ಉಸ್ತುವಾರಿಗಳಾದ ಎನ್.ರವಿಕುಮಾರ್, ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಇತರರು ಕ್ಷೇತ್ರದಲ್ಲೇ ಠಿಕಾಣಿ ಹೂಡಿ ತಂತ್ರಗಳನ್ನು ರೂಪಿಸುತ್ತಿದ್ದರೆ; ಕಾಂಗ್ರೆಸ್ ಆರಂಭದಲ್ಲಿ ವೇಗ ಹೆಚ್ಚಿಸಿಕೊಳ್ಳದೇ ಈಗ ಅಖಾಡಕ್ಕೆ ಧುಮುಕಿದ್ದು, ಮತದಾರನ ಮನ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
ಬಸವ ಜಯಂತಿ ಮುನ್ನಾ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಕಾರ್ಯಕರ್ತರು ಹಾಗೂ ಸ್ವಾಮೀಜಿಗಳ ಸಭೆ ನಡೆಸಿದ್ದಲ್ಲದೇ ಭಾರೀ ಬಹಿರಂಗ ಪ್ರಚಾರ ಸಭೆ ಮೂಲಕ ಚುನಾವಣಾ ಕಹಳೆ ಮೊಳಗಿಸಿದ್ದಾರೆ.
ಅದೇ ದಿನ ಡಿಸಿಎಂ ಡಾ.ಜಿ.ಪರಮೇಶ್ವರ್, ಲೋಕಸಭೆ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹಾಗೂ ಇತರ ನಾಯಕರು ಜಿಪಂ ಕೇಂದ್ರ ಸ್ಥಾನದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ್ದಾರೆ.
ಕ್ಷೇತ್ರದ ಉಸ್ತುವಾರಿ ಗೃಹ ಸಚಿವ ಎಂ.ಬಿ.ಪಾಟೀಲ್, ಮೇ 10ರಂದು ಆಗಮಿಸಿ ಪ್ರಚಾರ ನಡೆಸಲಿದ್ದಾರೆ. ಮಾಜಿ ಸಿಎಂ ಸಿದ್ಧರಾಮಯ್ಯ ಸಹ ಮೇ 10ರಿಂದ 3 ದಿನ ಕ್ಷೇತ್ರದಲ್ಲಿ ಠಿಕಾಣಿ ಹೂಡಲಿದ್ದಾರೆ. ಈಗಾಗಲೇ ಒಂದು ದಿನ ಪ್ರಚಾರ ನಡೆಸಿ ಹೋಗಿರುವ ಯಡಿಯೂರಪ್ಪ ಮತ್ತೆ ಮೇ 14 ಹಾಗೂ 15ರಂದು ಎರಡು ದಿನ ಕ್ಷೇತ್ರದಲ್ಲೇ ಠಿಕಾಣಿ ಹೂಡಲಿದ್ದಾರೆ.
ಸಿಎಂ ಅನುಮಾನ?: ಉಪಚುನಾವಣೆ ಹಿನ್ನೆಲೆಯಲ್ಲಿ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಚಿಂಚೋಳಿ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡ್ತಾರೋ ಇಲ್ಲವೋ ಎಂಬುದು ಈಗ ಚರ್ಚೆಯಾಗುತ್ತಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಬಾರದ ಕುಮಾರಸ್ವಾಮಿ ಚಿಂಚೋಳಿಗೆ ಬರುವರೇ ಎಂಬುದಕ್ಕೆ ಯಾರಿಂದಲೂ ಉತ್ತರವಿಲ್ಲ.
ಬಹಿರಂಗ ಪ್ರಚಾರ ಮುಕ್ತಾಯಕ್ಕೆ ಇನ್ನು 9 ದಿನ ಮಾತ್ರ ಬಾಕಿಯುಳಿದಿದ್ದರೂ ಸಿಎಂ ಪ್ರಚಾರಕ್ಕೆ ಬರುವ ಕುರಿತು ದಿನಾಂಕ ಹಾಗೂ ಸಮಯ ನಿಗದಿಯಾಗಿಲ್ಲ. ಮೂಲಗಳ ಪ್ರಕಾರ ಕಾಂಗ್ರೆಸ್‌ನವರು ಪ್ರಚಾರಕ್ಕೆ ಸಿಎಂ ಅವರನ್ನು ಕರೆದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಅವರ ಆಗಮನ ಅನುಮಾನ ಎಂದು ಹೇಳಲಾಗುತ್ತಿದೆ. ಚಿಂಚೋಳಿ ಕ್ಷೇತ್ರದಲ್ಲಿ ಜೆಡಿಎಸ್ ಈ ಹಿಂದೆ ಎರಡು ಸಲ ಗೆದ್ದಿದೆ.
ಅಭಿವೃದ್ಧಿ ಚರ್ಚೆ ಗೌಣ: ಚಿಂಚೋಳಿ ಉಪಚುನಾವಣೆಯಲ್ಲೀಗ ಪಕ್ಷದ್ರೋಹ, ಅಧಿಕಾರದ ವ್ಯಾಮೋಹ ಮತ್ತು ತಕ್ಕಪಾಠ ಕಲಿಸಿ ಎಂಬ ಮಾತುಗಳು ಹಾಗೂ ಟೀಕೆಗಳೇ ಪ್ರಮುಖವಾಗಿ ಕೇಳಿಬರುತ್ತಿದೆ. ಸ್ವಾಭಿಮಾನ ಹಾಗೂ ಪ್ರಜಾಪ್ರಭುತ್ವದ ಅಳಿವಿನ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಎಲ್ಲೂ ಕ್ಷೇತ್ರದ ಹಿಂದುಳಿವಿಕೆ, ಅನಕ್ಷರತೆ, ಬಡತನ ಹಾಗೂ ನಿರುದ್ಯೋಗದಂತಹ ಸಮಸ್ಯೆಗಳು ಪ್ರಸ್ತಾಪವಾಗುತ್ತಿಲ್ಲ.
ಸಮುದಾಯ ಮುಖಂಡರ ಸಭೆ: ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ, ಲಂಬಾಣಿ, ಎಸ್ಸಿ ಹಾಗೂ ಕೋಲಿ ಸಮಾಜದ ಮತಗಳನ್ನು ಸೆಳೆಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತೆರೆಮರೆಯಲ್ಲಿ ಕಸರತ್ತುಗಳನ್ನು ನಡೆಸುತ್ತಿವೆ. ಯಡಿಯೂರಪ್ಪ ಅವರು ಈಗಾಗಲೇ ಸ್ವಾಮೀಜಿಗಳ ಸಭೆ ನಡೆಸಿದ್ದರೆ; ಕಾಂಗ್ರೆಸ್ ಕೂಡ ಆಯಾ ಸಮುದಾಯದ ಮುಖಂಡರ ಸಭೆಗಳನ್ನು ನಡೆಸುತ್ತಿದೆ.
* ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.