ರಾಜ್ಯ ಪೊಲೀಸರಿಗೆ ವೇತನ ಹೆಚ್ಚಳದ ಸಿಹಿ
ಔರಾದ್ಕರ್ ವರದಿ ಜಾರಿಗೊಳಿಸಿ ಆದೇಶ
Team Udayavani, Oct 20, 2019, 6:15 AM IST
ಬೆಂಗಳೂರು: ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದ ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ.
ಪೊಲೀಸ್ ಅಧಿಕಾರಿ, ಸಿಬಂದಿ ವೇತನ ಶ್ರೇಣಿ ಪರಿ ಷ್ಕರಣೆ ಸಂಬಂಧ ಎಡಿಜಿಪಿ ರಾಘವೇಂದ್ರ ಔರಾದ್ಕರ್ ಅಧ್ಯಕ್ಷತೆಯ ಸಮಿತಿ ಸರಕಾರಕ್ಕೆ ಸಲ್ಲಿಸಿರುವ ವರದಿ ಆಧಾರದಲ್ಲಿಯೇ ಪೊಲೀಸ್ ಸಿಬಂದಿಯ ವೇತನ ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ವೇತನ ಪರಿಷ್ಕರಣೆಯು 2019ರ ಆಗಸ್ಟ್ 1ರಿಂದಲೇ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಹೊಸದಾಗಿ ಪೊಲೀಸ್ ಇಲಾಖೆಗೆ ಸೇರುವ ಕಾನ್‌ಸ್ಟೆಬಲ್‌ಗೆ ಎಲ್ಲ ಭತ್ತೆ ಸೇರಿ 30,427 ರೂ. ಬದಲಿಗೆ 34,267 ರೂ. ಸಿಗಲಿದೆ. ಪರಿಷ್ಕೃತ ವೇತನ ಶ್ರೇಣಿಯ ಪ್ರಕಾರ ಹಾಲಿ ಸೇವೆಯಲ್ಲಿರುವ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ 23,500-47,650, ಮುಖ್ಯಪೇದೆ- 27,650-52,650, ಸಹಾಯಕ ಸಬ್ ಇನ್‌ಸ್ಪೆಕ್ಟರ್-30,350-58,250, ಪೊಲೀಸ್ ಇನ್‌ಸ್ಪೆಕ್ಟರ್- 43,100-83,100, ಎಸ್‌ಪಿ (ಐಪಿಎಸ್‌ಯೇತರ)- 70,850- 1,07,100 ಪರಿಷ್ಕೃತ ವೇತನ ಪಡೆಯಲಿದ್ದಾರೆ.
ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿಗೆ ದೀಪಾವಳಿ ಹಬ್ಬದ ಉಡುಗೊರೆ ಮತ್ತು ಪೊಲೀಸ್ ಹುತಾತ್ಮ ದಿನದ ಮುನ್ನದಿನ ತತ್‌ಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿಯನ್ನು ವರದಿಯಂತೆ ಅನುಷ್ಠಾನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯ ಸರಕಾರ ಔರಾದ್ಕರ್ ವರದಿಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬಂದಿಯ ವೇತನ ಶ್ರೇಣಿ ಉನ್ನತೀಕರಣಗೊಳಿಸುವ ಎಲ್ಲ ಶಿಫಾರಸುಗಳನ್ನು ಅಂಗೀಕರಿಸಿರುತ್ತದೆ. ವರದಿಯ ಶಿಫಾರಸಿನಂತೆ ಸಂಪೂರ್ಣವಾಗಿ ವೇತನ ಶ್ರೇಣಿಯನ್ನು ಉನ್ನತೀಕರಣ ಮಾಡುವ ಮೂಲಕ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬಂದಿಯ ಕ್ಷೇಮಕ್ಕೆ ಸರಕಾರ ಆದ್ಯತೆ ನೀಡುತ್ತದೆ ಎಂದು ಸಿಎಂ ಹೇಳಿದ್ದಾರೆ.
ವರದಿಯಲ್ಲೇನಿತ್ತು?
ಕೆಳ ಹಂತದ ಸಿಬಂದಿಗೆ ಶೇ. 30ರಷ್ಟು ವೇತನ ಹೆಚ್ಚಳ ಮಾಡುವುದು, ಆಡರ್ಲಿ ಪದ್ಧತಿ ರದ್ದುಗೊಳಿಸುವುದು, ಕಡ್ಡಾಯವಾಗಿ ವಾರದ ರಜೆ ನೀಡುವುದು ಹಾಗೂ ದಿನದ ಕೆಲಸದ ಅವಧಿಯನ್ನು 8 ಗಂಟೆಗಳಿಗೆ ಇಳಿಸುವುದು ಸಹಿತ ಇಲಾಖೆಯ ಇತರ ಅಧಿಕಾರಿಗಳು ಪಡೆಯುವ ವೇತನದ ಸಮಾನಾಂತರ ಹುದ್ದೆಯ ವೇತನ ಪಡೆಯಬೇಕೆಂದು ಔರಾದ್ಕರ್ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.