Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
ಉಪಚುನಾವಣೆ ಕ್ಷೇತ್ರ ಸಮೀಕ್ಷೆ-ಸಂಡೂರು: ಕಾಂಗ್ರೆಸ್‌ನ "ಕುಟುಂಬ ರಾಜಕೀಯ' ಬಿಜೆಪಿಗೆ ಅಸ್ತ್ರ, ಮತ್ತೆ ಮುನ್ನೆಲೆಗೆ ಬಂದ ಗಣಿ ವಿವಾದ
Team Udayavani, Nov 11, 2024, 10:25 AM IST
ಬಳ್ಳಾರಿ: ಗಣಿಬಾಧಿತ ಸಂಡೂರು ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆ ಕಣ ಕಾವೇರಿದೆ. ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಉಭಯ ಪಕ್ಷಗಳ ಸಚಿವರು, ಶಾಸಕರು, ಮುಖಂಡರು ಕ್ಷೇತ್ರದಲ್ಲೇ ಬಿಡಾರ ಹೂಡಿ ಮತಬೇಟೆ ನಡೆಸಿದ್ದಾರೆ. ಕಾಂಗ್ರೆಸ್ ಕ್ಷೇತ್ರ ಉಳಿಸಿಕೊಳ್ಳುವ ತವಕದಲ್ಲಿದ್ದರೆ, ಬಿಜೆಪಿ ಕ್ಷೇತ್ರವನ್ನು ಕಸಿದುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.
ಕಾಂಗ್ರೆಸ್ ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದೆ ಎಂಬುದೇ ಬಿಜೆಪಿಗೆ ಅಸ್ತ್ರವಾದರೆ, ಕಾಂಗ್ರೆಸ್‌ಗೆ ಬಿಜೆಪಿ ಅಭ್ಯರ್ಥಿ ಸ್ಥಳೀಯರಲ್ಲ, ಹೊರಗಿನವರು ಎಂಬುದು ಪ್ರತ್ಯಸ್ತ್ರವಾಗಿದೆ. ಸಂಡೂರು ಎಸ್‌ಟಿ ಮೀಸಲು ಕ್ಷೇತ್ರದಿಂದ 2008ರಿಂದ 2023ರವರೆಗೆ ಸತತ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಿ ಸಂಸದ ಈ. ತುಕಾರಾಂ, 2023ರ ಲೋಕಸಭೆ ಚುನಾವಣೆಗೆ ಸ್ಪ ರ್ಧಿಸಿ ಗೆಲ್ಲುವ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಸಂಡೂರು ಕ್ಷೇತ್ರಕ್ಕೆ ಪುನಃ ಉಪಚುನಾವಣೆ ಎದುರಾಗಿದೆ.
ಉಪಚುನಾವಣೆಯಲ್ಲಿ ಸಂಸದ ಈ. ತುಕಾರಾಂ ಪತ್ನಿ ಅನ್ನಪೂರ್ಣ ಕಾಂಗ್ರೆಸ್‌ನಿಂದ ಸ್ಪ ರ್ಧಿಸಿದ್ದರೆ, ಬಿಜೆಪಿಯಿಂದ ನೆರೆಯ ಕೂಡ್ಲಿಗಿ ಮೂಲದ ಬಂಗಾರು ಹನುಮಂತು ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಿರುವ ಕಾಂಗ್ರೆಸ್‌ಗೆ ಈ ಬಾರಿಯೂ ಮತದಾರ ಕೈ ಬಿಡಲ್ಲ ಎಂಬ ವಿಶ್ವಾಸವಿದ್ದರೆ, ಸಂಡೂರಲ್ಲಿ ಕಮಲ ಅರಳಿಸಬೇಕೆಂಬ 2 ದಶಕಗಳ ಪ್ರಯತ್ನಕ್ಕೆ ಈ ಬಾರಿ ಜಯ ಸಿಗಲಿದೆ ಎಂಬ ಕಾತರ ಕೇಸರಿ ಪಡೆಯದ್ದು.
ಅಭ್ಯರ್ಥಿಗಳ ಸಾಮರ್ಥ್ಯ
ಸಂಡೂರು ಕ್ಷೇತ್ರದಲ್ಲಿ ಆರಂಭದಿಂದಲೂ ಸ್ಥಳೀಯರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮತದಾರರು ಸಹ ಸ್ಥಳೀಯರಿಗೆ ಮನ್ನಣೆ ನೀಡುತ್ತಲೇ ಬಂದಿದ್ದರಿಂದ ಹೊರಗಿನಿಂದ ಬಂದು ಸ್ಪರ್ಧಿಸಿದ್ದ ಅಭ್ಯರ್ಥಿಗಳಾರೂ ಕ್ಷೇತ್ರದಲ್ಲಿ ಯಶಸ್ಸು ಕಂಡಿಲ್ಲ. ಹೀಗಾಗಿ ಸ್ಥಳೀಯರು’ ಎಂಬುದೇ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಗೆ ಬಹುದೊಡ್ಡ ಬಲ. ಜತೆಗೆ ಕಳೆದ 2 ದಶಕಗಳಲ್ಲಿ ಪತಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಸಂಡೂರು ಕಾಂಗ್ರೆಸ್ ಭದ್ರಕೋಟೆ ಎಂಬ ಮಾತು ಕಾಂಗ್ರೆಸ್ ಅಭ್ಯರ್ಥಿಗೆ ಶ್ರೀರಕ್ಷೆಯಾಗಿದೆ.
ರೆಡ್ಡಿ, ರಾಮುಲು ಬಲ
ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಈ ಕ್ಷೇತ್ರದಲ್ಲಿ 2ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 2023ರಲ್ಲಿ ಕೂಡ್ಲಿಗಿ ಟಿಕೆಟ್‌ಗಾಗಿ ಪ್ರಯತ್ನಿಸಿದರೂ ಸಿಗಲಿಲ್ಲ. ಇದೀಗ ಪುನಃ ಸಂಡೂರು ಉಪಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡು ಕಣಕ್ಕಿಳಿದಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಸಂಡೂರು ಕ್ಷೇತ್ರದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿ ಹಲವಾರು ಮುಖಂಡರು ಅವರ ಪರ ಪ್ರಚಾರ ನಡೆಸುತ್ತಿದ್ದಾರೆ. ಜತೆಗೆ ಕ್ಷೇತ್ರದ 2 ದಶಕಗಳ ರಾಜಕೀಯ ಮೀಸಲಾತಿಯನ್ನು ಒಂದೇ ಕುಟುಂಬಕ್ಕೆ ನೀಡಿರುವುದು ಮತದಾರರ ಮೇಲೆ ಪರಿಣಾಮ ಬೀರಿದರೆ ಮಾತ್ರ ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಗಣಿ-ಮೀಸಲಾತಿಯೇ ಪ್ರಮುಖ ವಿಷಯ
ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು, ಅವರ ಹೆಸರು ಹೇಳದೇ ಪರೋಕ್ಷವಾಗಿ 2008ರಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ವಿಷಯ ಕಾಂಗ್ರೆಸ್ ಪುನಃ ಪ್ರಸ್ತಾಪಿಸುತ್ತಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಪ್ರಚಾರ ಮಾಡುತ್ತಿರುವ ಶಾಸಕರು, ಮುಖಂಡರು, ಕಾಂಗ್ರೆಸ್ 2 ದಶಕಗಳ ಕಾಲ ಎಂಪಿ-ಎಂಎಲ್‌ಎ ಟಿಕೆಟ್ ಹಾಗೂ ರಾಜಕೀಯ ಮೀಸಲಾತಿಯನ್ನು ಒಂದೇ ಕುಟುಂಬಕ್ಕೆ ನೀಡಿದೆ. ನಾಲ್ಕು ಬಾರಿ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಇಲ್ಲ. ಇಲ್ಲಿನ ಡಿಎಂಎಫ್, ಕೆಎಂಇಆರ್‌ಸಿ ಅನುದಾನಗಳನ್ನೆಲ್ಲ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದು, ಬದಲಾವಣೆಗಾಗಿ ಬಿಜೆಪಿಗೆ ಮತ ನೀಡುವಂತೆ ಮತದಾರರ ಮನವೊಲಿಸುವಲ್ಲಿ ತೊಡಗಿದ್ದಾರೆ.
ಜಾತಿ ಲೆಕ್ಕಾಚಾರ ಹೇಗಿದೆ?
ಸಂಡೂರು ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಎಸ್‌ಟಿ ಸಮುದಾಯದ ಅತೀ ಹೆಚ್ಚು 65 ಸಾವಿರ, ಎಸ್‌ಸಿ 40 ಸಾವಿರ, ಲಿಂಗಾಯತ 35 ಸಾವಿರ, ಕುರುಬ 30 ಸಾವಿರ, ಮುಸ್ಲಿಂ 10 ಸಾವಿರ, ಇತರೆ ಸಮುದಾಯಗಳು 40 ಸಾವಿರ ಸೇರಿ ಒಟ್ಟು 2,36,047 ಮತಗಳಿವೆ. ಇದರಲ್ಲಿ ಅತೀ ಹೆಚ್ಚು ಎಸ್‌ಟಿ ಸಮುದಾಯದ ಮತಗಳು ನಿರ್ಣಾಯಕವೆನಿಸಿದರೂ, ಮೀಸಲು ಕ್ಷೇತ್ರವಾದ್ದರಿಂದ ವಿಭಜನೆಯಾಗುವ ಸಾಧ್ಯತೆಯಿದೆ.
ಮೌನ ವಹಿಸಿರುವ ಜೆಡಿಎಸ್
ಕ್ಷೇತ್ರದಲ್ಲಿ ಭದ್ರವಾಗಿದ್ದ ಕಾಂಗ್ರೆಸ್ ಕೋಟೆಯನ್ನು ಮೊದಲು ಭೇದಿಸಿದ್ದು ಜೆಡಿಎಸ್. 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಹಾಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆದ್ದು ಮೊದಲ ಬಾರಿಗೆ ಕಾಂಗ್ರೆಸ್‌ಗೆ ಸೋಲುಣಿಸಿದ್ದರು. 2008ರಲ್ಲಿ ಲಾಡ್ ಪುನಃ ಕಾಂಗ್ರೆಸ್ ಸೇರುವ ಮೂಲಕ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಭದ್ರಕೋಟೆ ಮುಂದುವರಿದಿತ್ತು. ಆದರೆ, ಸದ್ಯ ಉಪ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಪಕ್ಷ ಜೆಡಿಎಸ್ ಮೌನಕ್ಕೆ ಶರಣಾದಂತಿದೆ. ಬಿಜೆಪಿ ವರಿಷ್ಠರು ಪ್ರಚಾರಕ್ಕೆ ಬಂದಾಗಲಷ್ಟೇ ಅವರೊಂದಿಗೆ ಆ ಪಕ್ಷದ ನಾಯಕರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಭ್ಯರ್ಥಿಗಳ ಸಾಮರ್ಥ್ಯ
ಅನ್ನಪೂರ್ಣ ಕಾಂಗ್ರೆಸ್ ಅಭ್ಯರ್ಥಿ
– ಸ್ಥಳೀಯರು ಎನ್ನುವ ಅಂಶ
– ಸಂಸದ, ಪತಿ ತುಕರಾಂ ಅವರ ಅಭಿವೃದ್ಧಿ ಕೆಲಸಗಳು
– ಸಂಡೂರು ಕ್ಷೇತ್ರ ಸದಾ ಕೈ ಭದ್ರಕೋಟೆ
– ಸಚಿವ ಸಂತೋಷ್‌ಲಾಡ್‌ಗಿರುವ ಜನಬೆಂಬಲ
– ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದು
ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿ
-ಏಳೆಂಟು ವರ್ಷಗಳಿಂದ ಕ್ಷೇತ್ರದೊಂದಿಗೆ ನಿರಂತರ ಸಂಪರ್ಕ
– ಜನಾರ್ದನ ರೆಡ್ಡಿ, ಶ್ರೀರಾಮುಲು ಒಗ್ಗೂಡಿ ಪ್ರಚಾರ ಮಾಡುತ್ತಿರುವುದು
– ಕೈ ಭದ್ರಕೋಟೆಯಲ್ಲೂ ಕಮಲ ಪಕ್ಷದ ಬಲಿಷ್ಠ ಸಂಘಟನೆ
– 2018ರಲ್ಲಿ ಸೋತಿರುವ ಅನುಕಂಪ
– ರಾಜಕೀಯ ಮೀಸಲಾತಿ ಒಂದೇ ಕುಟುಂಬಕ್ಕೆ ಬಳಕೆ ವಿರುದ್ಧದ ಅಲೆ
– ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
John Michael D’Cunh ಟೀಕೆ;ಜೋಶಿ ತತ್ ಕ್ಷಣ ರಾಜೀನಾಮೆ ನೀಡಲಿ: ಎಚ್.ಕೆ. ಪಾಟೀಲ್
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Salman Khan; ಬಾಲಿವುಡ್ ನಟನಿಗೆ ಬೆದರಿಕೆ ಹಾಕಿದ್ದ ಗೀತ ರಚನೆಕಾರ ರಾಯಚೂರಿನಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.