ವಿದೇಶೀ ವಿದ್ಯಾರ್ಥಿಗಳು ಆಯುರ್ವೇದದತ್ತ ಒಲವು: ಸೊನೊವಾಲ್
ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ "ರತ್ನಶ್ರೀ' ಆರೋಗ್ಯಧಾಮ ಉದ್ಘಾಟನೆ
Team Udayavani, Sep 26, 2021, 6:50 AM IST
ಉಡುಪಿ : ಭಾರತದ ಆಯುರ್ವೇದ ವೈದ್ಯ ಪದ್ಧತಿಯನ್ನು ಈಗ ಹೆಚ್ಚು ಹೆಚ್ಚು ವಿದೇಶೀ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಕೇಂದ್ರ ಬಂದರು, ನೌಕಾ ಯಾನ ಮತ್ತು ಜಲ ಸಾರಿಗೆ ಹಾಗೂ ಆಯುಷ್ ಸಚಿವ ಸರ್ಬಾನಂದ ಸೊನೊವಾಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಶನಿವಾರ ಉದ್ಯಾವರ ಕುತ್ಪಾಡಿಯ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಆವರಣ ದಲ್ಲಿ ನೂತನವಾಗಿ ನಿರ್ಮಿಸಲಾದ “ರತ್ನಶ್ರೀ’ ಆರೋಗ್ಯಧಾಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದೇಶೀ ವಿದ್ಯಾರ್ಥಿಗಳೂ ಈ ಕಾಲೇಜಿನಲ್ಲಿ ಓದುತ್ತಿರುವುದು ಆಯುರ್ವೇದದ ಮಹತ್ವವನ್ನು ಸಾರುತ್ತದೆ ಎಂದರು.
ಪುರಾತನವಾದ ಈ ವೈದ್ಯ ಪದ್ಧತಿಗೆ ಪ್ರಮಾಣೀಕರಣ (ವ್ಯಾಲಿಡೇಶನ್) ಮತ್ತು ವಿಶ್ವಾಸಾರ್ಹತೆ ಲಭಿಸಲು ವೈಜ್ಞಾನಿಕ ಅಧ್ಯಯನ, ಸಂಶೋಧನೆಗಳು ನಡೆಯಬೇಕಾಗಿವೆ. ಉಜ್ವಲ ಭಾರತಕ್ಕೆ ಸಾಂಪ್ರದಾಯಿಕ, ಪುರಾತನ ಮತ್ತು ವೈಜ್ಞಾನಿಕ ದೃಷ್ಟಿಕೋನದ ಆಯುರ್ವೇದ ಪೂರಕವಾಗಲಿದೆ ಎಂದರು.
ಆಯುರ್ವೇದವನ್ನು ಜನಪ್ರಿಯ ಗೊಳಿಸಲು ಕೇಂದ್ರ ಸರಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 2014ರಲ್ಲಿ ಆಯುಷ್ ಸಚಿವಾಲಯವನ್ನು ತೆರೆದ ಬಳಿಕ ಇಲಾಖೆಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲಾಗಿದೆ. ಇದರಲ್ಲಿ ಯೋಗ, ಆಯುರ್ವೇದ, ಸಿದ್ಧ, ಯುನಾನಿ, ಹೋಮಿಯೋಪತಿ ವಿಭಾಗಗಳಿದ್ದು, ಪ್ರಧಾನಿ ಮೋದಿ ಸರಕಾರದ ಮುಖ್ಯ ಗುರಿ ಜನರ ಆರೋಗ್ಯವನ್ನು ಸುಧಾರಿಸುವುದು. ಇದಕ್ಕಾಗಿ ಆಯುಷ್ ಇಲಾಖೆ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದರು.
ಈಗ ಆರೋಗ್ಯಕ್ಕೆ ಅಗತ್ಯವಾದ ನೈಸರ್ಗಿಕ ಆಹಾರಧಾನ್ಯಗಳಿಗೆ ಬೇಡಿಕೆ ಇದೆ. ಯಾವುದೇ ಅಡ್ಡಪರಿಣಾಮ ಗಳಿಲ್ಲದೆ ಕಾಯಿಲೆಗಳನ್ನು ನಿರ್ಮೂಲನ ಗೊಳಿಸಲು ದೇಶದ ಆಯುರ್ವೇದ ವೈದ್ಯ ಪದ್ಧತಿ ಜಾಗತಿಕವಾಗಿ ವಿಸ್ತರಣೆಗೊಂಡಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸರಸ್ವತಿ ವಿಗ್ರಹ ಹಾಗೂ ಶೃಂಗಾರ (ಆಸ್ತೆಟಿಕ್ ಮೆಡಿಸಿನ್) ವಿಭಾಗವನ್ನು ಸಚಿವೆ ಶೋಭಾ ಕರಂದ್ಲಾಜೆ, ಡಿಲಕ್ಸ್ ವಾರ್ಡನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಂಚಕರ್ಮ ಕೇಂದ್ರವನ್ನು ಶಾಸಕ ರಘುಪತಿ ಭಟ್, ಸ್ಪೆಷಲ್ ವಾರ್ಡನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ| ಮಮತಾ ಕೆ.ವಿ. ಸ್ವಾಗತಿಸಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ನಾಗರಾಜ್ ಎಸ್. ವಂದಿಸಿದರು. ಸಹ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ರವೀಂದ್ರ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.
ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಹಾಸನ ಎಸ್.ಡಿ.ಎಂ. ಆಯುರ್ವೆದ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಸನ್ನ ನರಸಿಂಹ ರಾವ್ ಉಪಸ್ಥಿತರಿದ್ದರು.
ಆಯುರ್ವೇದ ಮೊದಲ ಆಯ್ಕೆ: ಡಾ| ಹೆಗ್ಗಡೆ
ಹಿಂದೆ ಆಯುರ್ವೇದ ಔಷಧ ಕೊನೆಯ ಆಯ್ಕೆ ಆಗಿರುತ್ತಿತ್ತು. ಇಂದು ಕಾಲ ಬದಲಾಗಿದೆ, ಆಯುರ್ವೇದವೇ ಮೊದಲ ಆಯ್ಕೆ ಆಗುತ್ತಿದೆ, ಚಿಕಿತ್ಸೆಯೂ ಫಲಕಾರಿಯಾಗುತ್ತಿದೆ. ವಿಶ್ವಮಾನ್ಯತೆ ಕೂಡ ದೊರೆಯುತ್ತಿದೆ ಎಂದು ಉಜಿರೆ ಎಸ್‌ಡಿಎಂ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
“ರತ್ನಶ್ರೀ’ ಆರೋಗ್ಯಧಾಮದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಸುಶ್ರುತ 121 ರೀತಿಯ ಶಸ್ತ್ರಚಿಕಿತ್ಸಾ ಪರಿಕರಗಳನ್ನು ಕಂಡುಹಿಡಿದಿದ್ದ. ಈ ದೇಸೀ ವೈದ್ಯ ಶೈಲಿ ಬೌದ್ಧರ ಮೂಲಕ ವಿದೇಶಗಳಿಗೆ ಹೋಗಿ ಚಿಕಿತ್ಸೆಯ ಜತೆ ಭಕ್ತಿ, ಧ್ಯಾನವೂ ಸೇರಿತು. ದೈಹಿಕ ಸುಧಾರಣೆಗೆ ಮಾನಸಿಕ ತಯಾರಿಯೂ ಬೇಕೆಂಬ ಚಿಂತನೆ ಇಲ್ಲಿದೆ. ಆದ್ದರಿಂದ ಆಯುರ್ವೇದದಲ್ಲಿ ರೋಗಿಗಳನ್ನು “ಸಾಧಕರು’ ಎಂದು ಕರೆಯುತ್ತಾರೆ. ಕಾಯಿಲೆ ಬರಬಾರದೆಂಬುದು ಸಾಧನೆಗೆ ಮುಖ್ಯ. ಈ ದೃಷ್ಟಿಯಲ್ಲಿ ಆಯುರ್ವೇದ ಬೆಳೆದುಬಂತು ಎಂದರು.
ಕೊರೊನಾಕ್ಕೂ ಔಷಧ
ಕೊರೊನಾ ಕಾಲಘಟ್ಟದಲ್ಲಿ ಆಯುರ್ವೇದದಲ್ಲಿ ಔಷಧಗಳನ್ನು ಎಲ್ಲರೂ ಕೇಳುತ್ತಿದ್ದರು. ಆದರೆ ವೈಜ್ಞಾನಿಕವಾಗಿ ಪುರಾವೆ ಕೊಡುವುದು ಕಷ್ಟವಾಯಿತು. ಖಾಸಗಿಯಾಗಿ ಅನೇಕರು ಆಯುರ್ವೇದ ಔಷಧ ಪಡೆದುಕೊಂಡರು. ಬಹಿರಂಗವಾಗಿ ಹೇಳುವುದು ಸಾಧ್ಯವಾಗಲಿಲ್ಲ. ಹೀಗೆ ಕೊರೊನಾದಿಂದ ಕ್ಯಾನ್ಸರ್‌ವರೆಗೆ ಆಯುರ್ವೇದದಲ್ಲಿ ಔಷಧಗಳಿವೆ ಎಂದು ಡಾ| ಹೆಗ್ಗಡೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.