ತಕ್ಷಣವೇ ಶಾಲೆ ಆರಂಭಿಸಿ: ಶಿಕ್ಷಣ ಸಚಿವರಿಗೆ ವಿಧಾನಪರಿಷತ್ ಸದಸ್ಯರ ಒಕ್ಕೊರಲ ಆಗ್ರಹ
Team Udayavani, Dec 2, 2020, 7:11 PM IST
ಬೆಂಗಳೂರು: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದಲ್ಲಿ ತಕ್ಷಣವೇ ಶಾಲಾರಂಭ ಮಾಡಬೇಕೆಂದು ವಿಧಾನಪರಿಷತ್ತಿನ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಸದಸ್ಯರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಸಮಗ್ರ ಶಿಕ್ಷಣ-ಕರ್ನಾಟಕ ಸಭಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಜ್ವಲಂತ ಸಮಸ್ಯೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸದಸ್ಯರು, ಶಾಲೆಗಳು ಪ್ರಾರಂಭವಾಗದೇ ಇರುವುದರಿಂದ ಗ್ರಾಮೀಣ ಪ್ರದೇಶದ ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕೆಯ ನಿರಂತರತೆ ತಪ್ಪಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ ಎಂದಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೊದಲ ಹಂತದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ತರಗತಿಗಳನ್ನು ಆರಂಭಿಸಬೇಕು. ಶಾಲೆಗಳನ್ನು ಆರಂಭಿಸುವುದರಿಂದ ಪ್ರಸ್ತುತ ಶಿಕ್ಷಣ ಇಲಾಖೆಯ ಮುಂದಿರುವ ಖಾಸಗಿ ಅನುದಾನರಹಿತ ಶಿಕ್ಷಕರ ಸಮಸ್ಯೆ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳು ಪರಿಹಾರ ದೊರೆತಂತಾಗುತ್ತದೆ ಎಂದು ವಿಧಾನಪರಿಷತ್ತಿನ ಸದಸ್ಯರು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಅಂತರ್ ಧರ್ಮೀಯ ವಿವಾಹ ಪ್ರೋತ್ಸಾಹ ನಿಯಮ ರದ್ದು ಮಾಡಲು ಉ.ಪ್ರ. ಸರ್ಕಾರ ಚಿಂತನೆ
ಬಹುಕಾಲ ಮಕ್ಕಳು ಶಾಲೆಯಿಂದ ದೂರ ಉಳಿಯುವುದರಿಂದ ಮಕ್ಕಳ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮಗಳು ಉಂಟಾಗುವುದರಿಂದ ಶಾಲೆಗಳನ್ನು ತಕ್ಷಣವೇ ಪ್ರಾರಂಭಿಸುವುದು ಉತ್ತಮ ಎಂದು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಎಂ ಎಲ್ ಸಿಗಳು ಒಕ್ಕೊರಲಿನಿಂದ ಒತ್ತಾಯ ಮಾಡಿದರು.
10 ಮತ್ತು 12ನೇ ತರಗತಿಗಳನ್ನು ಶೀಘ್ರವೇ ಆರಂಭಿಸಬೇಕು. ವಿದ್ಯಾಗಮದಂತಹ ಕಾರ್ಯಕ್ರಮ ನಿಲ್ಲಿಸಿದ್ದು ಸರ್ವಥಾ ಸರಿಯಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ನಿಜಕ್ಕೂ ತುಂಬಾ ತೊಂದರೆಯಾಗಿದೆ. ಈ ವಿದ್ಯಾಗಮ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಬೇಕೆಂದು ಒತ್ತಾಯಿಸಿದ ಸದಸ್ಯರು ಶಾಲಾರಂಭದ ನಂತರ ಉಳಿಕೆಯ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಪಠ್ಯ ಕಡಿತ ಮಾಡಬೇಕೆಂದು ಸಲಹೆ ನೀಡಿದರು.
ಸಾಮಾಜಿಕ ಅಂತರ ಕಾಪಾಡಿಕೊಂಡು ಪಾಳಿ ಆಧಾರದಲ್ಲಿ ತರಗತಿಗಳನ್ನು ನಡೆಸಬೇಕು. ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಾಧ್ಯಮಗಳ ವರದಿಯನ್ನು ಪಕ್ಕಕ್ಕಿಟ್ಟು ನಮ್ಮ ಮಕ್ಕಳ ಹಿತದೃಷ್ಟಿಯಿಂದ ನಾವು ಶಾಲೆಗಳನ್ನು ಆರಂಭಿಸುವುದು ಒಳ್ಳೆಯದು ಎಂದರು.
ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಸದಸ್ಯರು ಒಕ್ಕೊರಲಿನ ಅಭಿಪ್ರಾಯವನ್ನು ನಾನು ಗಮನಿಸಿದ್ದು, ಈ ಕುರಿತಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸುವ ಕುರಿತಂತೆ ನಿರ್ಣಯಕ್ಕೆ ಬರಲಾಗುವುದು ಎಂದು ಹೇಳಿದರು.
ಕೋವಿಡ್ ನಂತರ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಕಲಿಕಾ ನಿರಂತರತೆಗೆ ಕೈಗೊಂಡ ಕ್ರಮಗಳನ್ನು ವಿವರಿಸಿದ ಸುರೇಶ್ ಕುಮಾರ್, ಶಾಲೆ ಆರಂಭಗೊಂಡ ನಂತರ ಪಿಯು ತರಗತಿಗಳ ಪಠ್ಯವನ್ನು ಎನ್.ಸಿ.ಇ.ಆರ್.ಟಿ ನಿಗದಿಪಡಿಸಿದ ಪಠ್ಯಕ್ರಮಗಳಂತೆ ಕಡಿತ ಮಾಡಲಾಗಿದೆ ಎಂದರು.
ಈ ಬಾರಿ ಸರಳ ಶಿಕ್ಷಕಸ್ನೇಹಿ ವರ್ಗಾವಣೆ:
ಈಗಾಗಲೇ ಪ್ರಾರಂಭವಾಗಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಎದುರಿಸಲಾಗುತ್ತಿರುವ ಕೆಲವು ಪ್ರಾಯೋಗಿಕ ಸಮಸ್ಯೆಗಳನ್ನು ಸರಿಪಡಿಸುವುದಲ್ಲದೇ ಕಡ್ಡಾಯ, ಹೆಚ್ಚುವರಿ ವರ್ಗಾವಣೆಯಾದ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಈ ಬಾರಿ ವರ್ಗಾವಣೆ ಮಿತಿಯನ್ನು ಶೇ. 15ಕ್ಕೆ ಹೆಚ್ಚಿಸಿರುವುದರಿಂದ ಬಹುಪಾಲು ಶಿಕ್ಷಕರಿಗೆ ವರ್ಗಾವಣೆ ಅವಕಾಶಗಳಿವೆ ಎಂದು ಸಚಿವರು ಹೇಳಿದರು.
ಸಿಆರ್ ಪಿ ಬಿಆರ್ ಪಿಗಳಿಗೂ ಅವಕಾಶ
ಸಿ.ಆರ್.ಪಿ ಮತ್ತು ಬಿ.ಆರ್.ಪಿ ಶಿಕ್ಷಕರಿಗೆ ವರ್ಗಾವಣಾ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಡ್ಡಾಯ ವರ್ಗಾವಣಾ ವ್ಯಾಪ್ತಿಯಲ್ಲಿ ಬಂದ ಮುಖ್ಯೋಪಾಧ್ಯಾಯರಿಗೆ ಮತ್ತು ಪದವಿ ಪೂರ್ವ ಉಪನ್ಯಾಸಕರಿಗೂ ಈ ಬಾರಿ ಆದ್ಯತೆಯ ವರ್ಗಾವಣೆಗೆ ಅವಕಾಶ ನೀಡಲಾಗುವುದು ಎಂದು ಸಚಿವರು ಹೇಳಿದರು.
ಹೊಸದಾಗಿ ನೇಮಕಗೊಂಡ ವೃತ್ತಿನಿರತ ಪಿಯು ಉಪನ್ಯಾಸಕರಿಗೆ ನಿರಾಕ್ಷೇಪಣಾ ಪತ್ರ
ಹೊಸದಾಗಿ ನೇಮಕಗೊಂಡ ಸೇವಾ ನಿರತ ಪದವಿ ಪೂರ್ವ ಶಿಕ್ಷಣ ಉಪನ್ಯಾಸಕ ಅಭ್ಯರ್ಥಿಗಳ ಪೈಕಿ ಕೆಲವು ಅಭ್ಯರ್ಥಿಗಳು ನಿರಪೇಕ್ಷಣಾ ಪ್ರಮಾಣ ಪತ್ರಗಳನ್ನ ನೀಡಬೇಕೆಂದು ಆಗ್ರಹ ವ್ಯಕ್ತವಾಗಿದ್ದು, ಕೂಡಲೇ ಈ ಕುರಿತು ಕ್ರಮ ವಹಿಸಬೇಕೆಂದು ಸಚಿವರು ಪಿಯು ಇಲಾಖೆ ನಿರ್ದೇಶಕರಿಗೆ ಸೂಚಿಸಿದರು. ಆರ್ಥಿಕ ಮಿತವ್ಯಯದ ಹಿನ್ನೆಲೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಸ್ಥಗಿತಗೊಂಡಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.