ಬಾಲಿಶತನದ ಪ್ರತಿಕ್ರಿಯೆ ಬಿಟ್ಟು ಬಿಜೆಪಿಯವರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ: ಎಚ್ ಡಿಕೆ
Team Udayavani, Jan 11, 2020, 3:39 PM IST
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಶುಕ್ರವಾರ ಮಂಗಳೂರು ಗಲಭೆಯ ಕುರಿತ ಸಿಡಿ ಬಿಡುಗಡೆ ಮಾಡಿದ್ದರು. ಇದರ ಬಗ್ಗೆ ಬಿಜೆಪಿಯ ನಾಯಕರು ನೀಡಿರುವ ಪ್ರತಿಕ್ರಿಯೆಗಳಿಗೆ ಕುಮಾರಸ್ವಾಮಿಯವರು ತಿರುಗೇಟು ನೀಡಿದ್ದು ಸರಣಿ ಟ್ವಿಟ್ ಗಳನ್ನು ಮಾಡಿ ಬಿಜೆಪಿಯ ಮೇಲೆ ಹರಿಹಾಯ್ದಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ ಗಳು ಈ ಕೆಳಗಿನಂತಿವೆ.
1 “ಅದಕ್ಕೆಲ್ಲಾ ಅರ್ಥ ಇದ್ಯೇನ್ರೀ, ಅದೆಲ್ಲಾ ಕಟ್ ಆಂಡ್ ಪೇಸ್ಟ್ ವೀಡಿಯೋ” ಎಂದಿದ್ದಾರೆ ಸಿಎಂ. ಸಿ.ಡಿ. ಬಿಡುಗಡೆ ವೇಳೆಯೇ ಇಂತಹ ಬಾಲಿಶತನದ ಪ್ರತಿಕ್ರಿಯೆ ಬಿಟ್ಟು ಮತ್ತೇನು ಬಿಜೆಪಿ ನಾಯಕರಿಂದ ನಿರೀಕ್ಷಿಸಲು ಸಾಧ್ಯ? ಎಂದಿದ್ದೆ. ಅದನ್ನು ರುಜುವಾತುಪಡಿಸಿದಿರಿ.
2 ಸಿ.ಡಿ.ಯ ಸತ್ಯಾಸತ್ಯತೆ ಬಗ್ಗೆ ತಜ್ಞರಿಂದ ವರದಿ ತರಿಸಿಕೊಳ್ಳುವ ಧೈರ್ಯ ನಿಮಗಿದೆಯೇ? ಅದಕ್ಕೂ ಮಿಗಿಲಾಗಿ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ. ನಾನು ಬಿಡುಗಡೆ ಮಾಡಿರುವ ‘ಸಿಡಿ’ಯನ್ನು ನೀವು ಸೃಷ್ಟಿಸಿಕೊಂಡಂತೆ ‘ಕಟ್ ಅಂಡ್ ಪೇಸ್ಟ್’ ಬಿಜೆಪಿ ಸರ್ಕಾರ ಎಂದುಕೊಂಡಿರಾ?
3 ಉಪ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಸ್ಥಿಮಿತ ಕಳೆದುಕೊಂಡ ಕುಮಾರಸ್ವಾಮಿ ಮಂಗಳೂರು ಗಲಭೆ ವಿಡಿಯೊ ಬಿಡುಗಡೆ ಮಾಡಿದ್ದಾರೆ ಎಂದು ಡಿಸಿಎಂ ಲಕ್ಮಣ ಸವದಿ ಆರೋಪಿಸಿದ್ದಾರೆ. ಸರಿ. ಹಾಗಾದರೆ ಸವದಿ ಅದ್ಯಾವ ಸ್ಥಿಮಿತ ಕಳೆದುಕೊಂಡು ಸದನದಲ್ಲಿ ನೀಲಿ ಚಿತ್ರ ನೋಡಿದರು? ಈ ಬಾರಿ ಅವರು ಯಾವ ಚುನಾವಣೆ ಗೆದ್ದಿದ್ದಾರೆ? ಸ್ಥಿಮಿತ ಉಳಿದಿದೆಯೇ?
4 ಪೊಲೀಸರು ಗಲಭೆ ಮಾಡುವುದಿಲ್ಲ, ನಿಯಂತ್ರಿಸುತ್ತಾರೆ. ಕುಮಾರಸ್ವಾಮಿ ಕಾಲದಲ್ಲೂ ಅದೇ ಪೋಲೀಸರೇ ಇದ್ದರು ಎಂದಿದ್ದಾರೆ ಗೃಹ ಸಚಿವ. ಬೊಮ್ಮಾಯಿ ಅವರೇ ಅದು ನನ್ನ ಕಾಲ. ಶಾಂತಿ- ಸುವ್ಯವಸ್ಥೆಗಷ್ಟೇ ಪೊಲೀಸರ ಸೇವೆ ಪಡೆಯುತ್ತಿದ್ದೆವು. ಇದು ನಿಮ್ಮ ಕಾಲ. ಗಲಭೆ, ಗುಂಡೇಟಿಗೆ ನೀವು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದೀರಿ.
5 ನನ್ನ ಕಾಲದಲ್ಲೂ ಇದೇ ಪೊಲೀಸರಿದ್ದರು. ಹೌದು. ಆದರೆ ನನ್ನ ಕಾಲದಲ್ಲಿ ಗಲಭೆಗಳು ಯಾಕೆ ಆಗಲಿಲ್ಲ? ಗೋಲಿಬಾರ್ಗಳು ಯಾಕೆ ಆಗಲಿಲ್ಲ? ಇದಕ್ಕೆ ನೀವು ಉತ್ತರಿಸುವಿರಾ?
6 ಗಲಭೆಯ ಸಿ.ಡಿ. ಬಿಡುಗಡೆ ಮಾಡಿದ್ದಕ್ಕೆ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ. ಸಿ.ಡಿ. ಹಲವರಿಗೆ ರಾಜಕೀಯ ಅಸ್ತಿತ್ವದ ಸ್ವತ್ತು ಎಂದಿದ್ದಾರೆ. ಬಿಜೆಪಿಯಲ್ಲಿ ಸದ್ದು ಮಾಡಿದ ಸಿ.ಡಿ.ಗಳ ಸಂಖ್ಯೆ ಒಂದೆರಡೇ? ಎಲ್ಲ ಸಿ.ಡಿ.ಗಳು ಬಯಲಾದರೆ ಬಿಜೆಪಿಗರು ಬೆತ್ತಲಾಗುತ್ತಾರಷ್ಟೇ. ಸಿ.ಡಿ.ಗಳು ಬಿಜೆಪಿಯ ಸ್ವತ್ತು. ಸಿಡಿ ಬಗ್ಗೆ ಮಾತಾಡುವಾಗ ಸದಾನಂದಗೌಡ ಎಚ್ಚರವಾಗಿರಲಿ.
7 ಮಂಗಳೂರು ಶಾಂತಿಯಿಂದಿದೆ, ಮರಳಿ ಗಲಭೆ ಎಬ್ಬಿಸಿ ಅಲ್ಲಿ ಅಸ್ತಿತ್ವವೇ ಇಲ್ಲದ ತಮ್ಮ ಪಕ್ಷಕ್ಕೆ ನೆಲೆ ಕಲ್ಪಿಸಲು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ ಎಂದು ಸೋದರಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಂಗಳೂರಿನ ಭಿನ್ನ ಧ್ವನಿಗಳ ಕೊರಳು ಬಿಗಿ ಹಿಡಿದು, ಉಸಿರುಗಟ್ಟಿಸಿ, ಸದ್ದು ಬಾರದಂತೆ ಮಾಡಿರುವುದು ನಿಮ್ಮ ಪ್ರಕಾರ ‘ಶಾಂತಿ’ಯೇ?
8 ಮೆಕ್ಕಾಕ್ಕೆ ಹೋದಾಗ ಮುಸಲ್ಮಾನರು ಸೈತಾನನಿಗೆ ಕಲ್ಲು ಹೊಡೆಯುತ್ತಾರೆ. ಪೊಲೀಸರ ಮೇಲೆ ಕಲ್ಲು ತೂರಲು ಅವರೇನು ಸೈತಾನರೇ ಎಂದು ಸೋದರಿ ಶೋಭಾ ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಪೊಲೀಸರು ಕಲ್ಲು ತೂರಾಟ ಮಾಡಿದರಲ್ಲ… ಹೋರಾಟಗಾರರೇನು ಸೈತಾನರೇ? ಉತ್ತರಿಸುವಿರಾ ಶೋಭಾ ಅವರೇ?
9 ಮಂಗಳೂರಿನಲ್ಲಿ ನಾನು ರಾಜಕಾರಣ ಮಾಡಬೇಕಿಲ್ಲ. ಅಲ್ಲಿ ರಾಜಕಾರಣ ಮಾಡುತ್ತಿರುವುದು ನೀವು. ಅಲ್ಲಿ ಕೋಮು ಗಲಭೆ ಉಂಟು ಮಾಡುತ್ತಿರುವುದು ನೀವು. ವಾಣಿಜ್ಯ ನಗರಿಯಾಗಬೇಕಿದ್ದ ಮಂಗಳೂರು ಕೋಮು ರಾಜಕಾರಣದ ಕಣವಾಗಿದ್ದು ಬಿಜೆಪಿಯಿಂದ.
10 ಸಮುದ್ರ ತೀರದ ಜಗತ್ತಿನ ಹಲವು ಪ್ರದೇಶಗಳು ವಾಣಿಜ್ಯ ನಗರಿಗಳಾಗಿವೆ. ಅಷ್ಟೇ ಏಕೆ, ಮುಂಬೈ, ಚೆನ್ನೈ, ಕೊಚ್ಚಿ ನಮ್ಮ ದೇಶದ ಉದಾಹರಣೆಗಳು. ಮಂಗಳೂರಿಗೂ ಅಂಥದ್ದೇ ಅವಕಾಶಗಳಿದ್ದವು, ಇದೆ. ದೇಶಕ್ಕೆ ದೊಡ್ಡ ಬ್ಯಾಂಕ್ಗಳನ್ನು ಕೊಟ್ಟದ್ದು ಇದೇ ಕರಾವಳಿ. ಆದರೆ ನಿಮ್ಮ ಚಿಲ್ಲರೆ ರಾಜಕಾರಣ ಮಂಗಳೂರಿನ ವಾಣಿಜ್ಯಿಕ್ಕೆ ಬೆಳವಣಿಗೆಗೆ ಅಡ್ಡಗಾಲಾಗಿದೆ.
11 ಮಂಗಳೂರು ಶಾಂತವಾದರೆ ಅದು ವಾಣಿಜ್ಯಿಕವಾಗಿ ಬೆಳವಣಿಗೆಯಾಗುತ್ತದೆ. ದೇಶಕ್ಕೆ ಮಾದರಿಯಾಗುವ ತನ್ನ ಐತಿಹಾಸಿಕ ಗುಣವನ್ನು ಮುಂದುವರಿಸಿ ಕೊಂಡು ಹೋಗುತ್ತದೆ. ಶಾಂತಿ ಸ್ಥಾಪನೆಯಾಗಬೇಕಿದ್ದರೆ ಬಿಜೆಪಿ ತೆಪ್ಪಗಿರಬೇಕಷ್ಟೇ.
12 ಮಂಗಳೂರಿನಲ್ಲಿ ನಾನು ರಾಜಕಾರಣ ಮಾಡಬಾರದು ಎನ್ನುತ್ತಾರೆ ಸೋದರಿ ಶೋಭಾ. ಆದರೆ, ರಾಜಕೀಯ ಪಕ್ಷವೊಂದರ ಶಾಸಕಾಂಗ ಪಕ್ಷದ ನಾಯಕನಾದ ನಾನು ಮಂಗಳೂರಲ್ಲಿ ಏಕೆ ರಾಜಕಾರಣ ಮಾಡಬಾರದು? ಹಾಗೇನಾದರೂ ನನಗೆ ನಿರ್ಬಂಧವಿದೆಯೇ? ಮಂಗಳೂರಲ್ಲಿ ನಾನೂ ರಾಜಕಾರಣ ಮಾಡುತ್ತೇನೆ. ಆದರೆ ಬಿಜೆಪಿಯಂತಲ್ಲ. ಸಾತ್ವಿಕವಾಗಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.