ಶಿರಾಡಿ ರಸ್ತೆ: ಆಡಳಿತ ವ್ಯವಸ್ಥೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ
Team Udayavani, Feb 5, 2022, 6:00 AM IST
ಬೆಂಗಳೂರು-ಮಂಗಳೂರು ನಡುವಣ ರಾಷ್ಟ್ರೀಯ ಹೆದ್ದಾರಿ-75 ಇದೀಗ ಮತ್ತೆ ಸುದ್ದಿಯಲ್ಲಿದೆ. ಕಳೆದೆರಡು ದಶಕಗಳ ಅವಧಿಯಲ್ಲಿ ಹಂತ ಹಂತವಾಗಿ ಹೆದ್ದಾರಿಯ ಚತುಷ್ಪಥ ಕಾಮಗಾರಿಯನ್ನು ಕೈಗೆತ್ತಿಕೊಂಡರೂ ಇಡೀ ಯೋಜನೆಯನ್ನು ದಡ ಸೇರಿಸಲು ಹೆದ್ದಾರಿ ಇಲಾಖೆ ಇನ್ನೂ ಹೆಣಗಾಡುತ್ತಿದೆ.
ಈಗ ಸಕಲೇಶಪುರ- ಬಿ.ಸಿ.ರೋಡ್ ನಡುವಿನ ಹೆದ್ದಾರಿಯ ಚತುಷ್ಪಥ ಕಾಮಗಾರಿ ಹತ್ತು ಹಲವು ಅಡಚಣೆ ಗಳೊಂದಿಗೆ ಕುಂಟುತ್ತಾ ಸಾಗುತ್ತಿದೆ. ಚತುಷ್ಪಥ ಕಾಮಗಾರಿಯನ್ನು ಹೊಸ ಗುತ್ತಿಗೆದಾರರು ವಹಿಸಿ ಕೊಂಡ ಬಳಿಕ ಒಂದಿಷ್ಟು ವೇಗ ಲಭಿಸಿದೆ. ಇದರ ನಡುವೆ ಶಿರಾಡಿ ಘಾಟಿ ಯಲ್ಲಿ ಕಾಮಗಾರಿ ನಡೆಸಲು ಕನಿಷ್ಠ ಆರು ತಿಂಗಳುಗಳ ಕಾಲ ಈ ರಸ್ತೆ ಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಬೇಕೆಂಬ ಪ್ರಸ್ತಾವ ವನ್ನು ಗುತ್ತಿಗೆದಾರರು ಮುಂದಿಟ್ಟಿದ್ದಾರೆ. ಈ ಪ್ರಸ್ತಾವನೆಗೆ ಸಾರ್ವ ಜನಿಕರು ಮತ್ತು ಉದ್ಯಮ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸುವುದೇ ಆದ ಲ್ಲಿ ಸೂಕ್ತ ಪರ್ಯಾಯ ವ್ಯವಸ್ಥೆಯ ಬೇಡಿಕೆ ಕೇಳಿಬಂದಿದೆ. ರಾಜ್ಯದ ಒಳ ನಾಡು ಮತ್ತು ಮಲೆನಾಡು ಪ್ರದೇಶಗಳು ಆಮದು, ರಫ್ತು ವ್ಯವಹಾರಕ್ಕೆ ಮಂಗ ಳೂರು ಬಂದರನ್ನೇ ಅವಲಂಬಿಸಿರುವುದರಿಂದ ಶಿರಾಡಿ ಘಾಟಿ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದಲ್ಲಿ ರಾಜ್ಯದ ಆರ್ಥಿಕತೆಗೆ ಬಲುದೊಡ್ಡ ಹೊಡೆತ ಬೀಳಲಿದೆ. ಅಷ್ಟು ಮಾತ್ರವಲ್ಲದೆ ಕೃಷಿ, ಸಾರಿಗೆ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕ ಈ ವಲಯಗಳದ್ದಾಗಿದೆ.
ಆದರೆ ಘಾಟಿ ರಸ್ತೆಯಾಗಿರುವುದರಿಂದ ಕಾಮಗಾರಿ ನಡೆಸುವ ವೇಳೆ ಹೆದ್ದಾರಿ ಯನ್ನು ಇತರೆಡೆಗಳಂತೆ ಆಂಶಿಕವಾಗಿ ಸಂಚಾರಕ್ಕೆ ಮುಕ್ತಗೊಳಿಸು ವುದು ಕಷ್ಟಸಾಧ್ಯ. ಕಲ್ಲುಬಂಡೆಗಳಿಂದ ಕೂಡಿದ ದುರ್ಗಮ ಮತ್ತು ಕಡಿದಾದ ಬೆಟ್ಟಗುಡ್ಡಗಳನ್ನು ಹೊಂದಿರುವ ಪ್ರದೇಶವಾದ್ದರಿಂದ ಬೃಹತ್ ಯಂತ್ರೋಪಕ ರಣಗಳನ್ನು ಬಳಸಿ ಕಾಮಗಾರಿ ನಡೆಸುವ ವೇಳೆ ಯಾವುದೇ ಸಣ್ಣ ಅನಾಹುತ ಸಂಭವಿಸಿದರೂ ಅದರ ಪರಿಣಾಮವನ್ನು ಊಹಿಸಲಸಾಧ್ಯ.
ಈ ಹೆದ್ದಾರಿಗೆ ಪರ್ಯಾಯವಾಗಿ ಹಲವು ಘಾಟಿ ರಸ್ತೆಗಳಿವೆಯಾದರೂ ಇವೆಲ್ಲವೂ ತೀರಾ ಕಿರಿದಾಗಿವೆ. ಇನ್ನು ಮಳೆಗಾಲದಲ್ಲಂತೂ ಈ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದೇ ತೀರಾ ಅಪಾಯಕಾರಿ ಎಂಬ ಪರಿಸ್ಥಿತಿ ಇದೆ. ವಸ್ತುಸ್ಥಿತಿ ಹೀಗಿರುವಾಗ ಇದ್ಯಾವುದನ್ನೂ ಪರಿಗಣಿಸದೆ ಶಿರಾಡಿ ಘಾಟಿ ರಸ್ತೆಯನ್ನು ಮುಚ್ಚಿ ಚತುಷ್ಪಥ ಹೆದ್ದಾರಿ ನಿರ್ಮಿಸಲು ಮುಂದಾಗಿರುವ ಹೆದ್ದಾರಿ ಪ್ರಾಧಿಕಾರ ಮತ್ತು ಸರಕಾರದ ನಿರ್ಧಾರ ತೀವ್ರ ಟೀಕೆಗೆ ಗುರಿಯಾಗಿದೆ. ಇಡೀ ಯೋಜನೆ ವರ್ಷಗಳಿಂದ ಕುಂಟುತ್ತಾ ಸಾಗಿದ್ದರೂ ಮತ್ತು ಪ್ರತೀ ಮಳೆಗಾಲದಲ್ಲಿಯೂ ಶಿರಾಡಿ ಘಾಟಿ ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದ್ದರೂ ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಈಗ ಏಕಾಏಕಿಯಾಗಿ ಕಾಮಗಾರಿಯ ನೆಪದಲ್ಲಿ ಶಿರಾಡಿ ಘಾಟಿ ರಸ್ತೆ ಯನ್ನು ಮುಚ್ಚಿದ್ದೇ ಆದಲ್ಲಿ ಕರಾವಳಿ ಜಿಲ್ಲೆಗಳ ಜನಜೀವನದ ಮೇಲೆ ನೇರ ಪರಿಣಾಮ ಬೀರಲಿದೆ.
ಹಾಲಿ ಪರ್ಯಾಯ ರಸ್ತೆಗಳನ್ನು ಒಂದಿಷ್ಟು ಅಭಿವೃದ್ಧಿಪಡಿಸಿ ಸಂಚಾರ ಯೋಗ್ಯವಾಗಿಸುವುದರ ಜತೆಯಲ್ಲಿ ಮಂಗ ಳೂರು-ಬೆಂಗಳೂರು ನಡುವೆ ಸರಕು ಸಾಗಣೆ ರೈಲು ಮತ್ತು ಪ್ರಯಾಣಿಕ ರೈಲುಗಳ ಓಡಾಟವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಂಡಲ್ಲಿ ಈ ಸಮ ಸ್ಯೆಗೆ ಅಲ್ಪಮಟ್ಟಿನ ಪರಿಹಾರವಾದರೂ ಲಭಿಸೀತು. ಇದೇ ವೇಳೆ ಇನ್ನಾ ದರೂ ಹಾಲಿ ಇರುವ ಘಾಟಿ ರಸ್ತೆಗಳ ಅಭಿವೃದ್ಧಿ ಮತ್ತು ಈ ಎಲ್ಲ ರಸ್ತೆಗಳಿ ಗಿಂತ ಕಡಿಮೆ ದೂರದ ಮತ್ತು ಹೆಚ್ಚಿನ ವೆಚ್ಚ ಬಯಸದ ಶಿಶಿಲ-ಭೈರಾಪುರ- ಮೂಡಿಗೆರೆ ರಸ್ತೆ ನಿರ್ಮಾಣಕ್ಕೆ ಸರಕಾರ ಮುಂದಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.