ಪ್ರಾಕೃತಿಕ ವಿಕೋಪ: ಪರಿಹಾರ ಹೆಚ್ಚಳಕ್ಕೆ ಪ್ರಯತ್ನ : ಶೋಭಾ ಕರಂದ್ಲಾಜೆ
Team Udayavani, Aug 21, 2021, 7:05 AM IST
ಉಡುಪಿ: ರೈತರು ಸಾಕಷ್ಟು ಶ್ರಮ ವಹಿಸಿ ಬೆಳೆಯುವ ಬೆಳೆಗಳು ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದರೆ ಅವರಿಗೆ ಕನಿಷ್ಠ ಅಸಲಿನಷ್ಟಾದರೂ ಪರಿಹಾರ ದೊರೆತರೆ ಉತ್ತಮ. ಪ್ರಸ್ತುತ ಇರುವ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮಾವಳಿಗಳು ಬಹಳ ಹಿಂದೆ ರಚಿಸಿದ್ದಾಗಿದೆ. ನಮ್ಮ ಸಂಪುಟ ದರ್ಜೆ ಸಚಿವರಲ್ಲಿ ಈ ವಿಷಯವನ್ನು ಪ್ರಸ್ತಾವಿಸಿ ಇದನ್ನು ಪರಿಷ್ಕರಿಸಲು ಪ್ರಯತ್ನಿಸುತ್ತೇನೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿ ಸ್ವಕ್ಷೇತ್ರಕ್ಕೆ ಆಗಮಿಸಿದ ಅವರು “ಉದಯವಾಣಿ’ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ವಿವಿಧ ವಿಷಯಗಳ ಕುರಿತಂತೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅವರ ಸಂದರ್ಶನ ಆಯ್ದ ಭಾಗ ಇಂತಿದೆ:
– ಕೃಷಿಕರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುವುದಿಲ್ಲವಲ್ಲ?
ಕೃಷಿಕರ ಉತ್ಪನ್ನಗಳ ಮೌಲ್ಯವರ್ಧನೆಯಾಗ ಬೇಕಾಗಿದೆ. ರಫ್ತು ಮಾಡಬೇಕಾದರೆ ಅದಕ್ಕೆ ತಕ್ಕಂತೆ ಗುಣಮಟ್ಟ ತರಬೇತಿ ಆಗಬೇಕಾಗಿದೆ. ಈಗ ಕೃಷಿ ಕಾಯಿದೆ ತಿದ್ದುಪಡಿ ಮಾಡಿದ ಬಳಿಕ ಮಂಡ್ಯದ ಬೆಲ್ಲ ಉತ್ಪಾದನೆಯ ಆಲೆಮನೆಗಳಿಗೆ ಮುಂಬಯಿ, ದಿಲ್ಲಿಯಿಂದ ಖರೀದಿಸುವವರು ಬರುತ್ತಿದ್ದಾರೆ. ಕೋಲಾರದಲ್ಲಿ ಕಷ್ಟಪಟ್ಟು ಉತ್ಪಾದಿಸುವ ತರಕಾರಿ ಬೆಳೆಗಾರರಿಗೂ ಕೆಚಪ್ ಫ್ಯಾಕ್ಟರಿಯವರಿಂದ ಬೇಡಿಕೆ ಬರುತ್ತಿದೆ. ಇವೆಲ್ಲವನ್ನು ನಾನು ಪ್ರವಾಸದ ವೇಳೆ ಸ್ವತಃ ಕಂಡಿದ್ದೇನೆ.
– ಶುದ್ಧ ಸಾವಯವ ಕೃಷಿಗೆ ಪ್ರೋತ್ಸಾಹ, ಸಾವಯವ ಕೃಷಿ ಹೆಸರಿನಲ್ಲಿ ನಡೆಯುವ ದಂಧೆಗೆ ಕಡಿವಾಣ ಬೇಕಲ್ಲ?
ಪರಂಪರಾಗತ ಕೃಷಿ ಮಿಷನ್‌ನಡಿ ಸಾವಯವ ಕೃಷಿಗೆ ಬೇಕಾದ ಸಾಲ ಸೌಲಭ್ಯ, ಸಬ್ಸಿಡಿಗಳನ್ನು ನೀಡಲಾಗುತ್ತಿದೆ. ನಕಲಿ ಗೊಬ್ಬರ ನಿಯಂತ್ರಿಸಲು ಪರೀಕ್ಷಾ ಲ್ಯಾಬ್‌ಗಳು ಆಗಿವೆ. ಇಂಥವರಿಗೆ ಸೂಕ್ತ ಶಿಕ್ಷೆ ವಿಧಿಸಲು ರಾಜ್ಯ ಸರಕಾರಗಳಿಗೆ ಸೂಚನೆ ಕೊಟ್ಟಿದ್ದೇವೆ. ಅಪರೂಪದ ದೇಸೀ ಬೀಜ ಮತ್ತು ಗೊಬ್ಬರ ಪೂರೈಸಲು ಕ್ರಮ ವಹಿಸಲಾಗುತ್ತಿದೆ. ಚೀನ, ಇಸ್ರೇಲ್‌ನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಕೊಡುವ ಬೆಳೆಗಳು ಇವೆ. ಇಂತಹ ತಂತ್ರಜ್ಞಾನಗಳನ್ನೂ ದೇಶದಲ್ಲಿ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ.
– ಜಿಡಿಪಿಯಲ್ಲಿ ಕೃಷಿ ಕ್ಷೇತ್ರದ ಪಾಲು ಹೇಗಿದೆ?
ಕಳೆದ ಆರು ವರ್ಷಗಳಲ್ಲಿ ಒಟ್ಟು ದೇಸೀ ಉತ್ಪನ್ನದಲ್ಲಿ (ಜಿಡಿಪಿ) ಕೃಷಿ ಕ್ಷೇತ್ರದ ಕೊಡುಗೆ ಶೇ.20.22ಕ್ಕೇರಿದೆ. 70 ವರ್ಷಗಳಲ್ಲಿ ಇದರ ಪ್ರಮಾಣ ಶೇ.13-14 ಇತ್ತು. ಕೃಷಿ ಕ್ಷೇತ್ರದ ಕೊಡುಗೆ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಜಾಸ್ತಿಯಾಗಿದೆ. ಆಹಾರ ರಫ್ತು ಕ್ಷೇತ್ರದಲ್ಲಿ ನಾವು 9ನೇ ಸ್ಥಾನದಲ್ಲಿದ್ದೇವೆಂದು ವಿಶ್ವಸಂಸ್ಥೆ ಘೋಷಿಸಿದೆ.
– ಉಡುಪಿ ಮಾದರಿಯಲ್ಲಿ ಇತರ ಕಡೆಗಳಲ್ಲಿ ಹಡಿಲು ಭೂಮಿ ಕೃಷಿ ನಡೆದಿದೆಯೆ?
ಕರ್ನಾಟಕದಲ್ಲಿ ಇದು ಮಾದರಿ. ಕೊರೊನಾ ಅವಧಿಯಲ್ಲಿ ಉತ್ತರಾಖಂಡ, ಮಣಿಪುರ ಮೊದಲಾದ ರಾಜ್ಯಗಳಲ್ಲಿ ಹಡಿಲು ಬಿಟ್ಟ ಭೂಮಿಯಲ್ಲಿ ಕೃಷಿ ಕಾರ್ಯ ನಡೆದಿದೆ. ಉಡುಪಿಯಲ್ಲಿ ನಡೆದಂತಹ ಈ ಪ್ರಯತ್ನ ವನ್ನು ಇಲ್ಲಿಗೆ ನಿಲ್ಲಿಸದೆ ಮುಂದುವರಿಸಬೇಕೆಂದು ತಿಳಿಸಿದ್ದೇನೆ. ಕನಿಷ್ಠ 10,000 ಕೃಷಿ ಉತ್ಪಾದನ ಸಂಘಗಳನ್ನು (ಎಫ್ಪಿಒ) ಸ್ಥಾಪಿಸಬೇಕೆಂಬುದು ಕೇಂದ್ರ ಸರಕಾರದ ಇಚ್ಛೆಯಾಗಿದೆ. ಇದನ್ನು ಕಂಪೆನಿ ಅಥವಾ ಸೊಸೈಟಿ ಕಾಯಿದೆಯಡಿ ನೋಂದಾಯಿಸ ಬೇಕು. ಆಹಾರ ಪ್ರಕ್ರಿಯೆ, ಗ್ರೇಡಿಂಗ್ ಇತ್ಯಾದಿ 25 ಯೋಜನೆಗಳನ್ನು ಈ ಸಂಘದಿಂದ ಮಾಡಬಹುದು. ಇದಕ್ಕೆ ಸರಕಾರ ಸಬ್ಸಿಡಿಯುಕ್ತ ಸಾಲವನ್ನು ಕೊಡಲಿದೆ. ಕೃಷಿ ಮೂಲ ಸೌಕರ್ಯ ಅಭಿವೃದ್ಧಿಯ ಈ ಉದ್ದೇಶ ಕ್ಕಾಗಿಯೇ 1 ಲ.ಕೋ.ರೂ. ಇರಿಸಿದೆ.
– ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ನಾಲ್ಕು ವರ್ಷಗಳಿಂದ ಬಂದಿಲ್ಲ ಎಂಬ ದೂರಿದೆಯಲ್ಲ?
ರೈತರೇ ಹೊಲದಲ್ಲಿ ಚಿತ್ರ ತೆಗೆದು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವ ಯೋಜನೆ ಇದು. ಒಂದು ವೇಳೆ ಸರಿಯಾಗದಿದ್ದರೆ ಎರಡು ತಿಂಗಳೊಳಗೆ ದೂರು ಸಲ್ಲಿಸಬೇಕು. ಈ ಅವಧಿಯಲ್ಲಿ ಆಗದಿದ್ದರೆ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಇನ್ನು ಮುಂದೆಯಾದರೂ ಇದನ್ನು ಆನ್‌ಲೈನ್‌ನಲ್ಲಿ ಸಮರ್ಪಕವಾಗಿ ಅಪ್‌ಲೋಡ್ ಮಾಡಬೇಕು.
– ಕಸ್ತೂರಿ ರಂಗನ್ ವರದಿಯಿಂದ ರೈತರು, ಆ ವ್ಯಾಪ್ತಿಯಲ್ಲಿರುವ ಜನಸಾಮಾನ್ಯರು ಆತಂಕಕ್ಕೆ ಈಡಾಗಿದ್ದಾರಲ್ಲ?
ಇಕೋ ಸೆನ್ಸೆಟಿವ್ ಝೋನ್ ಘೋಷಣೆಯಾಗಿದೆ. ವರದಿಯಿಂದ ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂಬುದು ಪ್ರಧಾನಿ ಯವರ ಇಚ್ಛೆಯಾಗಿದೆ. ಸದ್ಯ ವಿಷಯ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಜನರಿಗೆ ತೊಂದರೆಯಾಗದಂತೆ ವಾದ ಮಂಡಿಸ ಬೇಕೆಂದು ಸೂಚಿಸಿದಂತೆ ವಕೀಲರನ್ನು ನೇಮಿಸಲಾಗಿದೆ. ರಾಜ್ಯ ಸರಕಾರಗಳೂ ಸಮರ್ಥವಾದ ಮಂಡನೆ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಕೇರಳ ಸರಕಾರ ಉತ್ತಮ ರೀತಿಯಲ್ಲಿ ವಾದ ಮಂಡಿಸಿದೆ. ಸೂಕ್ಷ್ಮ ಪರಿಸರ ವಲಯ ಘೋಷಣೆಯಾಗಿದ್ದರೂ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡುವುದು ಸರಕಾರದ ಬದ್ಧತೆಯಾಗಿದೆ.
– ನೀವು ಹಿಂದೆ ಉಡುಪಿ- ಚಿಕ್ಕಮಗಳೂರಿನಲ್ಲಿ ಇಎಸ್‌ಐ ಆಸ್ಪತ್ರೆ ಆರಂಭಿಸುತ್ತೇನೆ ಎಂದು ಹೇಳಿದ್ದಿರಿ. ಮತ್ತೇನೂ ಆಗಲಿಲ್ಲ.
ಇಎಸ್‌ಐ ಆಸ್ಪತ್ರೆ ಆಗಬೇಕಾದರೆ ಜಿಲ್ಲೆಯಲ್ಲಿ ಕನಿಷ್ಠ 30,000 ಇಎಸ್‌ಐ ಸದಸ್ಯರು ಇರಬೇಕು ಎಂದಿದೆ. ಅಧಿಕಾರಿಗಳ ನಿರ್ಲಕ್ಷ್ಯವೋ, ಸಿಬಂದಿ ಕೊರತೆಯೋ ಎರಡೂ ಜಿಲ್ಲೆಗಳಲ್ಲಿ ಇಷ್ಟು ಸದಸ್ಯರ ನೋಂದಣಿಯಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ ಇಷ್ಟು ಗೇರುಬೀಜದ ಫ್ಯಾಕ್ಟರಿಗಳು, ಚಿಕ್ಕಮಗಳೂರಿನಲ್ಲಿ ಇಷ್ಟು ಕಾಫಿ ಸಂಸ್ಕರಿತ ಉದ್ಯಮಗಳು ಇರುವಾಗ ಏಕೆ ಸದಸ್ಯರ ನೋಂದಣಿಯಾಗುತ್ತಿಲ್ಲ ಎಂದು ಚಿಂತಿಸುತ್ತಿದ್ದೇನೆ. ಸಿಬಂದಿ ಕೊರತೆ ಇದ್ದರೆ ಒಂದು ತಿಂಗಳ ಮಟ್ಟಿಗಾದರೂ ಬೇರೆ ಇಲಾಖೆಗಳ ಸಿಬಂದಿಯನ್ನು ಎರವಲು ಪಡೆದು ನೋಂದಣಿ ಮಾಡಿಸಿ ಎಂದು ರಾಜ್ಯದ ಕಾರ್ಮಿಕ ಸಚಿವರಲ್ಲಿ ಹೇಳಿದ್ದೇನೆ. ಕಾರ್ಮಿಕ ಇಲಾಖೆ ಯಲ್ಲಿ ಅಪಾರ ಹಣವಿದೆ. ಸದುಪಯೋಗ ಮಾಡಲು ತಾಂತ್ರಿಕ ಸಮಸ್ಯೆಗಳಿವೆ. ಹೀಗಾಗಿ ಉಡುಪಿಯಲ್ಲಿ ಕೇವಲ ಇಎಸ್‌ಐ ಚಿಕಿತ್ಸಾಲಯಗಳಿವೆ.
– ಸಿಆರ್‌ಝಡ್ ವಲಯದ ರಿಯಾಯಿತಿ ಬೇಡಿಕೆ ಕುರಿತು ಅಭಿಪ್ರಾಯ?
ಸಿಆರ್‌ಝಡ್ ವಲಯದ ಮಿತಿಯನ್ನು ಕಿರಿದು ಗೊಳಿಸಬೇಕೆಂಬ ಮನವಿ ಇದೆ. ಆದರೆ ಈಗ ಸಮುದ್ರದಲ್ಲಿ ಆಗುತ್ತಿರುವ ಪ್ರಾಕೃತಿಕ ವಿದ್ಯಮಾನಗಳನ್ನು ಗಮನಿಸಿದಾಗ ನಾವು ಎಚ್ಚರಿಕೆಯ ಹೆಜ್ಜೆ ಇರಿಸಬೇಕಾಗಿದೆ. ಕೇವಲ ಒಂದು ದಿನ ಬಂದ ಚಂಡಮಾರುತವೂ ಅಪಾರ ಪ್ರಮಾಣದ ಹಾನಿ ಉಂಟುಮಾಡುತ್ತಿದೆ. ಆದ್ದರಿಂದ ಇದರ ಬಗ್ಗೆ ನಾವು ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ. ಜನಜೀವನದ ಹಿತದೃಷ್ಟಿಯಿಂದ ಕಿರಿದುಗೊಳಿಸುವುದು ತರವಲ್ಲ.
– ಬ್ಯಾಂಕ್‌ಗಳಲ್ಲಿ ಪ್ರಾದೇಶಿಕ ಭಾಷಿಕರನ್ನು ನೇಮಿಸುವ ಕುರಿತು ವಿತ್ತ ಸಚಿವರಿಗೆ ತಿಳಿಸಿದ್ದೀರಾ?
ಆಯಾ ರಾಜ್ಯದವರನ್ನೇ ಬ್ಯಾಂಕ್ ನೌಕರರಾಗಿ ಆಯ್ಕೆ ಮಾಡಬೇಕೆಂದು, ವಿಶೇಷವಾಗಿ ಗ್ರಾಮೀಣ ಭಾಗದ ಬ್ಯಾಂಕ್ ಶಾಖೆಗಳಲ್ಲಿ ನಿಯೋಜಿಸಬೇಕೆಂದು ಈ ಹಿಂದೆಯೇ ಹೇಳಿದ್ದೇನೆ. ಬ್ಯಾಂಕ್‌ಗಳು ವಿಲೀನಗೊಂಡ ಬಳಿಕ ಈ ಸಮಸ್ಯೆ ಜಾಸ್ತಿಯಾಗಿದೆ. ಮತ್ತೂಮ್ಮೆ ಸಚಿವರಲ್ಲಿ ಮನವಿ ಮಾಡುತ್ತೇನೆ.
– ಕೊರೊನಾ ಲಸಿಕೆ ಪೂರೈಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆಯೆ?
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸ್ವದೇಶೀ ಲಸಿಕೆಯನ್ನು ಕಂಡು ಹಿಡಿದು ಜನರಿಗೆ ಪೂರೈಸಲಾಗಿದೆ. ಈ ಹಿಂದೆ ಪೋಲಿಯೋ, ಕ್ಷಯ ಇತ್ಯಾದಿ ಕಾಯಿಲೆಗಳು ಬಂದಾಗ ವಿದೇಶಗಳಿಂದ ಲಸಿಕೆ ಬರಲು ಎರಡು ವರ್ಷ ಕಾಯಬೇಕಾಗಿತ್ತು. ಈಗ ಕೇವಲ ಹತ್ತು ತಿಂಗಳೊಳಗೆ ಇಲ್ಲೇ ಲಸಿಕೆ ತಯಾರಿಸಿ ಪೂರೈಸಿದೆವು. ಆದರೆ ಮೊದಲು ವಿಪಕ್ಷದವರು ಜನರಲ್ಲಿ ಭಯವನ್ನು ಸೃಷ್ಟಿಸಿದರು. 57 ಕೋಟಿ ಡೋಸ್ ಲಸಿಕೆಗಳನ್ನು ಈಗಾಗಲೇ ನೀಡಲಾಗಿದೆ. ಇಷ್ಟು ದೊಡ್ಡ ದೇಶದಲ್ಲಿ ಲಸಿಕೆ ಪೂರೈಸುವುದೂ ಒಂದು ಸವಾಲಾಗಿದೆ. 130 ಕೋಟಿ ಜನರಲ್ಲಿ 18 ವರ್ಷ ಮೀರಿದ 95 ಕೋಟಿ ಜನರಿಗೆ ನವೆಂಬರ್‌ನೊಳಗೆ ಲಸಿಕೆ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.