ಸಿದ್ದರಾಮಯ್ಯ ಕೊಡಗು ಚಲೋ ರದ್ದು; ಅಲ್ಪಸಂಖ್ಯಾತ ನಾಯಕ ಹೈಕಮಾಂಡ್ ಗೆ ಬರೆದ ಪತ್ರದಲ್ಲೇನಿದೆ?
ದಿ. ಗುಂಡುರಾವ್ ಅವರ ಮೇಲೂ ಸೋಮವಾರಪೇಟೆಯಲ್ಲಿ ದುಷ್ಕರ್ಮಿಗಳು ಕಲ್ಲು ತೂರಿದ್ದರು
Team Udayavani, Aug 24, 2022, 3:16 PM IST
ಮೊಟ್ಟೆ ಪ್ರಕರಣವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಮಡಿಕೇರಿ ಚಲೋ ಪಾದಯಾತ್ರೆಗೆ ಕರೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತ ಸಮುದಾಯದ ಯುವ ಮುಖಂಡರೊಬ್ಬರು ಬರೆದ ಪತ್ರವೇ ಈಗ ಹಿನ್ನಡೆಯನ್ನುಂಟು ಮಾಡಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎ.ಹುಸೇನ್ ಎಂಬುವರು ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಮಡಿಕೇರಿ ಚಲೋ ಪಾದಯಾತ್ರೆಯಿಂದ ಪಕ್ಷದ ಮೇಲೆ ಆಗಬಹುದಾದ ದುಷ್ಪರಿಣಾಮದ ಬಗ್ಗೆ ವಿವರಿಸಿದ ಹಿನ್ನೆಲೆಯಲ್ಲಿ ಪಾದಯಾತ್ರೆ ನಿಲ್ಲಿಸುವಂತೆ ತುರ್ತು ಆದೇಶವನ್ನು ವರಿಷ್ಠರು ಸಂದೇಶ ರವಾನಿಸಿದ್ದರು. ಇದು ಸಿದ್ದರಾಮಯ್ಯ ಅವರಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.
ಕಾಂಗ್ರೆಸ್ ಮೂಲಗಳಿಂದ ಲಭ್ಯವಾದ ಮಾಹಿತಿ ಪ್ರಕಾರ ಹುಸೇನ್ ಅವರು ಬರೆದ ಪತ್ರದ ಸಾರಾಂಶ ಹೀಗಿದೆ….
ದೇಶವ್ಯಾಪಿ ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಕೋಮು ಧ್ರುವೀಕರಣ ರಾಜಕೀಯದಿಂದ ಕರ್ನಾಟಕವೂ ಹೊರತಾಗಿಲ್ಲ ಎಂಬುದು ತಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಸಾರ್ವಜನಿಕ ಜೀವನದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಸನ್ಮಾನ, ಅಪಮಾನ, ಅವಮಾನ ಹಾಗೂ ವೈಭವೀಕರಣ ಅವಿಭಾಜ್ಯ ಅಂಗ. ರಾಜಕೀಯ ಬದುಕಿನಲ್ಲಿ ಅದು ಬೇಡವೆಂದರೂ ಲಭಿಸುವ ಬುತ್ತಿ. ಅದನ್ನು ಸ್ವೀಕರಿಸುವಾಗ ಹಾಗೂ ತಿರಸ್ಕರಿಸುವಾಗ ವಿವೇಚನೆ ಮುಖ್ಯವಾಗಿರಬೇಕೆ ವಿನಾ ಉದ್ವೇಗವೇ ಪ್ರಧಾನವಾಗಬಾರದು.
ಅಮೆರಿಕಾದಂಥ ಜಗತ್ತಿನ ಪ್ರಗತಿಪರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡ ಬರಾಕ್ ಒಬಾಮ, ಡೊನಾಲ್ಡ್ ಟ್ರಂಫ್, ಜೋ ಬೈಡನ್ ಅವರಂಥವರಿಗೆ ಇಂಥ ಸಾರ್ವಜನಿಕ ಹಲ್ಲೆ ಹಾಗೂ ಅಪಮಾನ ತಪ್ಪಿಲ್ಲ. ಭಾರತದಲ್ಲೂ ಅಂತಹ ಘಟನೆಗಳು ಬೇಕಾದಷ್ಟು ನಡೆದಿದೆ. ಕೊಡಗು ಜಿಲ್ಲೆಯಲ್ಲೇ ಹುಟ್ಟಿ ಬೆಳೆದು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿದ ಕಾಂಗ್ರೆಸ್ ನಾಯಕ ದಿ. ಗುಂಡುರಾವ್ ಅವರ ಮೇಲೂ ಸೋಮವಾರಪೇಟೆಯಲ್ಲಿ ದುಷ್ಕರ್ಮಿಗಳು ಕಲ್ಲು ತೂರಿದ್ದರು ಎಂಬ ವಿಚಾರವನ್ನು ಹಿರಿಯರೊಬ್ಬರು ನನ್ನ ಬಳಿ ಪ್ರಸ್ತಾಪಿಸಿದ್ದರು. ಅದೇ ರೀತಿ ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಅವರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿತ್ತು. ರಾಜಕೀಯ ಬದುಕಿನಲ್ಲಿ ಉತ್ತುಂಗ ಸ್ಥಾನವನ್ನು ಅಲಂಕರಿಸಿದ ಧರ್ಮಸಿಂಗ್, ಗುಂಡುರಾಯರು, ರಾಮಕೃಷ್ಣ ಹೆಗಡೆಯಂಥವರಿಗೇ ಸಾರ್ವಜನಿಕ ಜೀವನದ ಸನ್ಮಾನ, ಅಪಮಾನ, ಅವಮಾನದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಆದರೆ ಅವರು ಅಂಥ ಘಟನೆಗಳಿಗೆ ಹೇಗೆ ಜಾಣ್ಮೆಯಿಂದ ಪ್ರತಿಕ್ರಿಯಿಸಿದರು ಎಂಬುದನ್ನೂ ನಾವು ಅವಗಾಹಿಸಬೇಕು. ಸಾರ್ವಜನಿಕ ಆಗ್ರಹಕ್ಕೆ ತುತ್ತಾದ ವ್ಯಕ್ತಿಗಳು ಅದನ್ನು ಹೇಗೆ ಸ್ವೀಕರಿಸಿ ಪ್ರತಿಸ್ಪಂದಿಸಿದ್ದಾರೆ ಎಂಬುದು ಮಾತ್ರ ನಮಗೆ ಮುಖ್ಯವಾಗುತ್ತದೆ.
ಮಾನ್ಯರೇ, ಕೊಡಗು ಜಿಲ್ಲೆಯಲ್ಲಿ ಆದ ಮಳೆ ಹಾನಿ ಪರಿಶೀಲನೆಗೆ ತೆರಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ದುಷ್ಕರ್ಮಿಗಳು ಮೊಟ್ಟೆ ಎಸೆದು ಅಪಮಾನ ಮಾಡಿರುವುದು ಸರ್ವಥಾ ಖಂಡನೀಯ. ಪ್ರತಿಭಟನೆಗೆ ಹಿಂಸಾತ್ಮಕ ಮಾರ್ಗ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದೇ ನಾನು ಭಾವಿಸುತ್ತೇನೆ. ಆದರೆ ಅದಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಕಾಂಗ್ರೆಸ್ ಪಕ್ಷ ಇದೇ ತಿಂಗಳು 26ನೇ ತಾರೀಕಿನಂದು ಆಯೋಜಿಸಿರುವ ಮಡಿಕೇರಿ ಚಲೋ ಪಾದಯಾತ್ರೆ ಉತ್ತರವಾಗಲಾರದು ಎಂಬುದು ನನ್ನ ಬಲವಾದ ಪ್ರತಿಪಾದನೆಯಾಗಿದೆ.
ಏಕೆಂದರೆ ಇದರಿಂದ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಯುವ ಬದಲು, ಬಿಜೆಪಿಯ ಕೋಮು ಪ್ರಚೋದಿತ ರಾಜಕಾರಣಕ್ಕೆ ಇನ್ನಷ್ಟು ಹೆಚ್ಚಿನ ಅವಕಾಶವನ್ನು ಒದಗಿಸಬಹುದು ಎಂಬ ಆತಂಕ ನನ್ನನ್ನು ಕಾಡುತ್ತಿದೆ. ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ದಾಳಿಗೆ ಗುರಿಯಾಗುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯಾದ ನನಗೆ ಕೊಡಗಿನ ರಾಜಕೀಯ ಸ್ಥಿತಿಗತಿ ಹಾಗೂ ಅದು ರಾಜ್ಯದ ಇತರೆ ಭಾಗಗಳ ಮೇಲಿನ ಅಲ್ಪಸಂಖ್ಯಾತ ಸಮುದಾಯದ ಮೇಲೆ ಬೀರುವ ಪರಿಣಾಮ ಎಂಥದ್ದು ಎಂಬುದರ ಗಾಢ ಅನುಭವ ನನಗಿದೆ. ಈ ಹಿಂದೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕೊಡಗು ಜಿಲ್ಲಾ ಉಸ್ತುವಾರಿಯಾಗಿಯೂ ಒಂಬತ್ತು ವರ್ಷ ಕೆಲಸ ಮಾಡಿರುವ ನನಗೆ ಇಲ್ಲಿನ ಸೂಕ್ಷ್ಮತೆಗಳ ಅರಿವಿದೆ ಎಂದು ಅತ್ಯಂತ ವಿನಮ್ರತೆಯಿಂದ ತಮ್ಮಲ್ಲಿ ನಿವೇದನೆ ಮಾಡಿಕೊಳ್ಳುತ್ತೇನೆ.
ಈ ಹಿಂದೆ ನಮ್ಮದೇ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುವಾಗ ಟಿಪ್ಪು ಜಯಂತಿ ಆಚರಣೆಗೆ ಸರಕಾರಿ ಆದೇಶ ಮಾಡಿದ್ದು ಸರಿಯಷ್ಟೇ. ಆ ಆದೇಶದ ತರುವಾಯ ಅಲ್ಪಸಂಖ್ಯಾತ ಸಮುದಾಯ ರಾಜಕೀಯ ಟೀಕೆಗೆ ಹಾಗೂ ದಾಳಿಗೆ ಹಿಂದೆಂದೂ ಕಾಣದ ರೀತಿಯಲ್ಲಿ ತುತ್ತಾಯಿತು. ಅದರ ಮೊದಲ ಝಲಕ್ ಪ್ರಕಟವಾಗಿದ್ದು ಕೂಡಾ ಕೊಡಗು ಜಿಲ್ಲೆಯಲ್ಲಿ. ಟಿಪ್ಪು ಜಯಂತಿ ಆದೇಶ ವಿರೋಧಿಸಿ ಕೊಡಗಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಟ್ಟಪ್ಪ ಎಂಬ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟರು. ಆದರೆ ಇದೊಂದು ಕೊಲೆ ಎಂದು ನಂತರ ಬಿಜೆಪಿ ಬಿಂಬಿಸಿದ್ದರಿಂದ ಕರ್ನಾಟಕದ ಇಡಿ ಮುಸ್ಲಿಂ ಸಮುದಾಯ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಯಿತು.
ಏನು ತಪ್ಪು ಮಾಡದ ಮುಸ್ಲಿಂ ವ್ಯಕ್ತಿಗಳನ್ನು ಇಡಿ ಕರ್ನಾಟಕದ ಜನತೆ ಅನುಮಾನದಿಂದ ನೋಡುವಂತಾಯಿತು. ಅದೇ ಜಿಲ್ಲೆಯಲ್ಲಿ ಈಗ ನಡೆಯಬಾರದಂಥ ಘಟನೆ ಸಂಭವಿಸಿಬಿಟ್ಟಿದೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಲು ಪಕ್ಷದವತಿಯಿಂದ ಲಕ್ಷಾಂತರ ಜನರನ್ನು ಸೇರಿಸಿ ಪಾದಯಾತ್ರೆ ನಡೆಸಿದರೆ ಬೆಂಗಳೂರಿನಿಂದ ಕೊಡಗು ಜಿಲ್ಲೆಯವರೆಗೆ ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವ ಅಪಾಯ ಹೆಚ್ಚಿದೆ. ಸಾಮರಸ್ಯ ಕೆಡಿಸುವ ವ್ಯಕ್ತಿಗಳು ಎಲ್ಲ ಪಕ್ಷ ಹಾಗೂ ಧರ್ಮದಲ್ಲೂ ಇದ್ದಾರೆ. ಕಾಂಗ್ರೆಸ್ ಸರಕಾರ ಅಸ್ಥಿತ್ವದಲ್ಲಿದ್ದಾಗಲೇ ನಾವು ಇಂಥ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ವೈಫಲ್ಯ ಕಂಡಿದ್ದೇವೆ. ಈಗ ಇಡಿ ಆಡಳಿತ ವ್ಯವಸ್ಥೆಯೇ ಬಿಜೆಪಿಯ ಕೈಯಲ್ಲಿ ಇರುವಾಗ ನಾವು ಯಾವುದೇ ನಿರ್ಧಾರವನ್ನಾದರೂ ಹತ್ತು ಬಾರಿ ಯೋಚಿಸಿ ತೆಗೆದುಕೊಳ್ಳಬೇಕಾಗುತ್ತದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಕೊಡಗು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ರಾಷ್ಟ್ರ ಹಾಗೂ ರಾಜ್ಯಕ್ಕೆ ಪ್ರವಾಸೋದ್ಯಮದಿಂದ ಬರುವ ಆದಾಯ ಹೆಚ್ಚಿದೆ. ಹೀಗಾಗಿ ಇಂಥ ಸ್ಥಳಗಳು ಕೋಮು ದ್ವೇಷದ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗದಿರಲಿ, ಅಲ್ಪಸಂಖ್ಯಾತ ಸಮುದಾಯ ಮತ್ತೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂಥ ಸನ್ನಿವೇಶ ನಿರ್ಮಾಣವಾಗದೇ ಇರಲಿ ಎಂಬುದಷ್ಟೇ ನನ್ನ ಕಳಕಳಿ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ನಡೆದ ಮೊಟ್ಟೆ ಎಸೆತ ಪ್ರಕರಣಕ್ಕೆ ನಾವು ಮಡಿಕೇರಿ ಚಲೋದಂಥ ಪಾದಯಾತ್ರೆಯ ಮೂಲಕ ಪ್ರತಿಕ್ರಿಯೆ ನೀಡಿದರೆ ಅದರಿಂದ ಕಾಂಗ್ರೆಸ್ ಸಂಘಟನೆಯ ಮೇಲೆ ಹಾಗೂ ಚುನಾವಣಾ ದೃಷ್ಟಿಯಿಂದ ಅಡ್ಡಪರಿಣಾಮವುಂಟಾಗುವ ಸಾಧ್ಯತೆ ಹೆಚ್ಚು. ಎಲ್ಲದಕ್ಕಿಂತ ಹೆಚ್ಚಾಗಿ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಜನರು ಇದರಿಂದ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ. ಬಿಜೆಪಿಯ ಮತಕ್ರೋಢಿಕರಣ ರಾಜಕೀಯ ಯಜ್ಞಕ್ಕೆ ಇದರಿಂದ ತುಪ್ಪ ಸುರಿದಂತಾಗುತ್ತದೆ. ಹೀಗಾಗಿ ಉದ್ದೇಶಿತ ಅಥವಾ ಚರ್ಚಿತ ಮಡಿಕೇರಿ ಚಲೋ ಪಾದಯಾತ್ರೆಯನ್ನು ಕೈ ಬಿಟ್ಟು, ಅದರ ಬದಲಿಗೆ ಜಾಗೃತಿ ಸಮಾವೇಶ ಆಯೋಜಿಸೋಣ. ಆ ಸಭೆಯಲ್ಲಿ ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಕೊಟ್ಟ ಕೊಡುಗೆಯನ್ನು ಬಿಚ್ಚಿಡೋಣ. ಕೋಮು ಸೌಹಾರ್ದತೆ ಹಾಗೂ ಅಭಿವೃದ್ಧಿ ಆಧರಿತ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಜನತೆಗೆ ವಿವರಿಸೋಣ. ತಕ್ಷಣದ ಪ್ರತಿಕ್ರಿಯೆಯ ಬದಲು ವಿವೇಚನೆಯಿಂದ ಹೆಜ್ಜೆ ಇಡುವುದೇ ಸೂಕ್ತ ಎಂಬುದು ನನ್ನ ಭಾವನೆಯಾಗಿದ್ದು, ಹಿರಿಯರಾದ ತಾವು ಸೂಕ್ತ ಹಾಗೂ ಕಾಲ ಸಮ್ಮತ ನಿರ್ಧಾರ ತೆಗೆದುಕೊಳ್ಳುತ್ತೀರಿ ಎಂದು ನಂಬಿದ್ದೇನೆ ಎಂದು ಹುಸೇನ್ ಪತ್ರದಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.