ಸಿಎಂ ಅಸ್ತ್ರ ಬಿಟ್ಟು ಪಲ್ಸ್ ನೋಡಿದ್ರಾ ಸಿದ್ದರಾಮಯ್ಯ?
Team Udayavani, Jun 28, 2021, 6:55 AM IST
ಅಧಿಕಾರದಲ್ಲಿರುವ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ – ಮುಂದುವರಿಕೆ ಕುರಿತು ಪರ-ವಿರುದ್ಧ ಚರ್ಚೆ ನಡುವೆ ಬ್ರೇಕ್ ಎಂಬಂತೆ ಅಧಿಕಾರವೇ ಇಲ್ಲದ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರ ಪ್ರಸ್ತಾವ ರಾಜಕೀಯವಾಗಿ ಕುತೂಹಲ ಮೂಡಿಸಿದೆ. ಅದರ ಹಿಂದಿನ ಮರ್ಮ ಬೇರೆಯದೇ ಇದೆ ಎಂಬುದು ರಹಸ್ಯವೇನಲ್ಲ. ಎರಡು ವರ್ಷಗಳ ಅನಂತರ ಎದುರಾಗುವ ವಿಧಾನಸಭೆ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿದರೆ ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿ ಆಗಬೇಕು ಎಂಬುದು ಆಗ ಮಾಡುವ ತೀರ್ಮಾನ ಎಂಬುದು ಶಾಸಕರಿಗೆ ತಿಳಿಯದ ವಿಚಾರವೇನಲ್ಲ. ಆದರೂ ತಮ್ಮ ನಾಯಕನ ಪರ ಇದ್ದಕ್ಕಿದ್ದಂತೆ “ಬ್ಯಾಟಿಂಗ್’ ಆರಂಭದ ಹಿಂದೆ ನಾನಾ ಲೆಕ್ಕಾಚಾರಗಳೂ ಅಡಗಿರುವುದು ಸುಳ್ಳಲ್ಲ.
ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರ ಪ್ರಸ್ತಾಪವಾಗಿದ್ದರಿಂದ ಆಕಾಂಕ್ಷಿಗಳು ಯಾರ್ಯಾರು, ಅಂತಿಮವಾಗಿ ಯಾರೆಲ್ಲರ ನಡುವೆ ಪೈಪೋಟಿ ಎದುರಾಗಬಹುದು. ಅವರ ಸಾಮರ್ಥ್ಯ ಎಷ್ಟು, ಹಿಂದಿನ ಪ್ರೇರಕ “ಶಕ್ತಿ’ ಯಾವುದು ಎಂಬೆಲ್ಲ ಅಂಶಗಳ ಬಗ್ಗೆ ಒಂದು ರೀತಿಯ ಸ್ಪಷ್ಟ ಚಿತ್ರಣ ಸಿಕ್ಕಿದೆ. ಇದರ ಮೇಲೆ ಪಿಚ್‌ನಲ್ಲಿ ರಾಜಕೀಯವಾಗಿ ಯಾವ ರೀತಿ ಗೇಮ್ ಆಡಬಹುದು ಎಂಬ ವರಸೆ ಶುರು ಆಗಬಹುದು. ಸಿದ್ದರಾಮಯ್ಯ ಅವರು ಶಾಸಕರು ಅಥವಾ ಪಕ್ಷದ ಮುಖಂಡರ ಪಲ್ಸ್ ನೋಡಲು ಮುಂದಿನ ಮುಖ್ಯಮಂತ್ರಿ ವಿಚಾರ ಬೆಂಬಲಿಗರ ಮೂಲಕ ತೇಲಿಬಿಟ್ಟಿರಬಹುದು ಎಂಬ ವಿಶ್ಲೇಷಣೆಗಳೂ ಇವೆ.
ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡಿದ್ದು ಐದಾರು ಶಾಸಕರಾದರೂ ಆಂತರಿಕವಾಗಿ ಬಹುತೇಕ ಶಾಸಕರು ಹಾಗೂ ನಾಯಕರು ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಸಿದ್ದರಾಮಯ್ಯ,ಡಿ.ಕೆ. ಶಿವಕುಮಾರ್, ಡಾ| ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಅವರ ಜತೆ ಚರ್ಚೆ ಮಾಡಿರುವುದು ಗುಟ್ಟೇನಲ್ಲ.
ನಾಯಕತ್ವ ವಿಚಾರ ಬಂದಾಗಲೆಲ್ಲ ಶಾಸಕರ ಅಭಿಪ್ರಾಯ ಮುಖ್ಯ ಎಂಬುದು ಸಾಮಾನ್ಯವಾದರೂ ಈ ಹಿಂದೆ ಗುಂಡೂರಾವ್, ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಲಿ ಮುಖ್ಯಮಂತ್ರಿಯಾದಾಗ ಯಾವ ರೀತಿಯ ಆಯ್ಕೆ ನಡೆಯಿತು ಎಂಬುದು ಗೊತ್ತಿರುವ ವಿಚಾರ. ಹೀಗಾಗಿಯೇ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂಬ ಮಾತೂ ಸೇರಿಸಲಾಗುತ್ತದೆ. ಕೆಲವೊಮ್ಮೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂಬ ಒಂದು ಸಾಲಿನ ನಿರ್ಣಯ ಕೈಗೊಳ್ಳುವ ಸೂಚನೆಯೂ ಹೈಕಮಾಂಡ್‌ನಿಂದಲೇ ಬಂದಿರು ತ್ತದೆ. ಲಕೋಟೆ ಸಂದೇಶದ ಮೂಲಕವೂ ಮುಖ್ಯಮಂತ್ರಿ ಆಯ್ಕೆಯೂ ಆಗುತ್ತದೆ. ಒಮ್ಮೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಇದ್ದಾಗ ಶಾಸಕರ ಸಹಿತ ಅವರ ಬೆನ್ನ ಹಿಂದೆ ಸಮುದಾಯದ ಬಲ ಇದ್ದಾಗ ಹೈಕಮಾಂಡ್‌ಗೂ ಬೇರೆ ದಾರಿ ಇಲ್ಲದಂತಾಗಬಹುದು. ಎಸ್.ಎಂ.ಕೃಷ್ಣ ಹಾಗೂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ನೋಡಿದಾಗ ಅದು ಸ್ಪಷ್ಟಗೊಳ್ಳುತ್ತದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ|ಜಿ. ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ಗೊತ್ತಿ ರುವ ವಿಚಾರ. ಆದರೆ ಆ ಕನಸು ನನಸಾಗಬೇಕಾದರೆ ಪಕ್ಷ ಅಧಿಕಾರಕ್ಕೆ ಬರಬೇಕು. ಇವರೇ ಮುಖ್ಯಮಂತ್ರಿ ಅಭ್ಯ ರ್ಥಿ ಎಂದು ಘೋಷಣೆಯಾದರೆ ಅಲ್ಲಿಂದಲೇ ಕಾಲೆಳೆ ಯುವಿಕೆ ಪ್ರಾರಂಭವಾಗುತ್ತದೆ. ಹೀಗಾಗಿ ಸಾಮೂಹಿಕ ನಾಯಕತ್ವ ಎಂಬ ಮಂತ್ರ ಜಪಿಸುವುದು ಅನಿವಾರ್ಯ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಯಾರು ಇರುತ್ತಾರೋ ಅವರೂ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತದೆ. ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರು ಇರುವುದರಿಂದ ಮಾಜಿ ಮುಖ್ಯ ಮಂತ್ರಿಯೂ ಆಗಿರುವುದರಿಂದ ಅವರೂ ಮುಖ್ಯಮಂತ್ರಿ ಅಭ್ಯರ್ಥಿಯಂತೆಯೇ. ಜತೆಗೆ ಬಹಿರಂಗವಾಗಿ ಹೇಳಿಕೊಂಡವರಷ್ಟೇ ಅಲ್ಲದೆ ಸಿಕ್ಕರೆ ನಮಗೂ ಒಂದು ಚಾನ್ಸ್ ಇರಲಿ ಅಥವಾ ಸಿಗಬಹುದು ಎಂಬ ನಿರೀಕ್ಷೆಯಲ್ಲೂ ಕೆಲವರಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಆಡಳಿತ ಪಕ್ಷ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿಪಕ್ಷ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಲಿಂಗಾಯಿತ ಸಮುದಾಯ ಬೆಂಬಲವಿದೆ. ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರಿಗೂ ಮುಖ್ಯಮಂತ್ರಿ ಅವಕಾಶ ಸಿಗಬಹುದು ಎಂಬ ಆಶಾಭಾವ ಸಹಜವಾಗಿ ಆ ಸಮುದಾಯದಲ್ಲಿದೆ. 1994ರಲ್ಲಿ ಎಚ್.ಡಿ. ದೇವೇಗೌಡ ಹಾಗೂ 1999 ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯ ಮಂತ್ರಿ ಯಾಗಲು ಸಮುದಾ ಯ ಪೂರ್ಣ ಪ್ರಮಾಣದಲ್ಲಿ ಕೈ ಹಿಡಿದಿದ್ದು ಕಾರಣ ಎಂಬುದು ಇತಿಹಾಸ. ಅದೇ ರೀತಿಯ ನಿರೀಕ್ಷೆಯನ್ನು 2023 ರ ವಿಧಾನಸಭೆ ಚುನಾವಣೆ ಬಗ್ಗೆ ಡಿ.ಕೆ.ಶಿವಕುಮಾರ್ ಇಟ್ಟುಕೊಂಡಿದ್ದಾರೆ. ಅಲ್ಪಸಂಖ್ಯಾಕರ ಮತ ಪೂರ್ಣ ಪ್ರಮಾಣದಲ್ಲಿ ಕೈ ಹಿಡಿದು ದಲಿತ ಹಾಗೂ ಹಿಂದುಳಿದ ಮತಗಳು ಆದಷ್ಟೂ ಹೆಚ್ಚು ಸೆಳೆದರೆ ತಮ್ಮ ಮುಖ್ಯಮಂತ್ರಿ ಪಟ್ಟದ ಕನಸು ನನಸಾಗಬಹುದು ಎಂಬ ಆಸೆ ಅವರದು. ಆ ನಿಟ್ಟಿನಲ್ಲಿಯೇ ತಮ್ಮದೇ ಆದ ತಂತ್ರಗಾರಿಕೆ ಮಾಡುತ್ತಿದ್ದಾರೆ.
ರಾಜಕಾರಣ ಸಾಕಾಗಿ ಹೋಗಿದೆ, ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿ, ಭರ್ತಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ಸಿದ್ದರಾಮಯ್ಯ ಅವರಿಗೂ ಎರಡನೇ ಬಾರಿ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಚಿಗುರೊಡೆದಿದೆ. ಅವರ ಜತೆ ಇರುವ ಶಾಸಕರು ಆ ಕನಸಿಗೆ ನಿಮ್ಮನ್ನು ಬಿಟ್ಟರೆ ಇಲ್ಲ ಎಂಬಂತೆ ನೀರೆರೆಯುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟಿರೆ ಪ್ರಭಾವಿ ನಾಯಕರು ಯಾರಿದ್ದಾರೆ ಎಂಬ ವಾದ ಮುಂದಿಡುತ್ತಾರೆ.
ಆದರೆ ಕಾಂಗ್ರೆಸ್‌ನಲ್ಲಿ ಜನತಾ ಪರಿವಾರದಿಂದ ಬಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು, ಮೂಲ ಕಾಂಗ್ರೆಸಿಗರಾದ ನಾವ್ಯಾಕೆ ಮುಖ್ಯಮಂತ್ರಿ ಯಾಗಬಾರದು. ಒಮ್ಮೆ ಅಧಿಕಾರ ಅನುಭವಿಸಿರುವ ಅವರು ಬೇರೆಯವರಿಗೆ ಬಿಟ್ಟು ಕೊಡುವ ಔದಾರ್ಯ ತೋರಲಿ. ಪಕ್ಷ ಅಧಿಕಾರಕ್ಕೆ ತಂದು ಮತ್ತೂಬ್ಬ ನಾಯಕರಿಗೆ ಅವಕಾಶ ಕೊಡಿಸಲಿ ಎಂಬ ವಾದ ಮಂಡಿಸುವವರು ಇದ್ದಾ ರೆ. ಇಲ್ಲಿ ಆಸೆ ಇಟ್ಟುಕೊಂಡವರು ಪಕ್ಷಕ್ಕಾಗಿ “ತ್ಯಾಗಿ’ ಆದ ರೆ ಮಾತ್ರ ಪಕ್ಷ ಅಧಿಕಾರದ ಪಟ್ಟದವರೆಗೂ ಬರಲು ಸಾಧ್ಯ. ಅಂತಹ “ತ್ಯಾಗ’ಮಯಿಗಳು ಯಾರೂ ಕಾಣಿಸುತ್ತಿಲ್ಲ.
ದಲಿತ ಸಿಎಂ
ಮುಂದಿನ ಮುಖ್ಯಮಂತ್ರಿ ಪ್ರಸ್ತಾವದ ಸಂದರ್ಭದಲ್ಲೇ ಕೆ.ಎಚ್. ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಡಾ|ಜಿ. ಪರಮೇಶ್ವರ್ ಗುಪ್ತ ಸಮಾಲೋಚನೆ ಹಿಂದೆ ಬೇರೆಯದೇ ಕಾರ್ಯತಂತ್ರವೂ ಇಲ್ಲದಿಲ್ಲ. ಚುನಾವಣೆ ಹತ್ತಿರ ವಾಗುತ್ತಿದ್ದಂತೆ ಮತ್ತೆ ದಲಿತ ಸಿಎಂ ಕೂಗು ಕಾಂಗ್ರೆಸ್‌ನಲ್ಲಿ ಕೇಳಿಬರಬಹುದು. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಬಹುದಿತ್ತಾದರೂ ಅವಕಾಶ ಸಿಗಲಿಲ್ಲ, ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುವುದನ್ನು ವ್ಯವಸ್ಥಿತವಾಗಿ ತಪ್ಪಿಸಲಾಯಿತು ಎಂಬ ಅಪವಾದ ಕಾಂಗ್ರೆಸ್ ಮೇಲೆ ಇದೆ. ಬಿಎಸ್‌ಪಿಯ ಶಾಸಕ ಎನ್.ಮಹೇಶ್, ನೇರವಾಗಿಯೇ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗ ಬೇಕು ಎಂದು ಹೇಳಿರುವುದನ್ನು ಇಲ್ಲಿ ಗಮನಿಸಬಹುದು. ಜತೆಗೆ ಪೂರ್ವಾಶ್ರಮದ ಕಾಂಗ್ರೆಸ್ ನಾಯಕ ಎಚ್.ವಿಶ್ವನಾಥ್, ಸಿದ್ದರಾಮಯ್ಯ ಕೋಟಾ ಮುಗಿದಿದೆ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಸಿಗಬೇಕು ಎಂದು “ಗೂಗ್ಲಿ’ ಎಸೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಎಂದು ಬಂದಾಗ ಬಿಜೆಪಿಯಲ್ಲಿರುವ ಶ್ರೀನಿವಾಸಪ್ರಸಾದ್, ಎಚ್.ವಿಶ್ವನಾಥ್ ಸೇರಿದಂತೆ ಪೂರ್ವಾಶ್ರಮದವರೆಲ್ಲÉ ಚುರುಕಾಗುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಪ್ರಬಲರಾಗಿ ಡಿ.ಕೆ.ಶಿವಕುಮಾರ್ ಶಕ್ತಿ ಕಡಿಮೆ ಆಗುತ್ತಿದೆ ಎಂಬಂತಹ ಬೆಳವಣಿಗೆಗಳು ಸಹಜವಾಗಿ ಜೆಡಿಎಸ್‌ಗೆ ನವಚೈತನ್ಯ ತುಂಬುತ್ತವೆ. ಬಿಜೆಪಿಗೆ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಭರವಸೆ ಮೂಡಿಸುವುದು ಕಾಂಗ್ರೆಸ್‌ನ ಒಳಜಗಳ ಎಂಬ “ಟಾನಿಕ್’ ಎಂಬುದು ಕಾಂಗ್ರೆಸ್ ಹೈಕಮಾಂಡ್‌ಗೂ ಗೊತ್ತಿಲ್ಲದ್ದೆೇನಲ್ಲ.
– ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.