ರಾಜ್ಯಾದ್ಯಂತ ಕಾಂಗ್ರೆಸ್ ಪರ ಗಾಳಿ… ಪುಟ್ಟಣ್ಣ ಕಾಂಗ್ರೆಸ್ ಸೇರಿರುವುದೇ ಸಾಕ್ಷಿ: ಸಿದ್ದು
Team Udayavani, Mar 10, 2023, 7:37 AM IST
ಬೆಂಗಳೂರು: ರಾಜ್ಯಾದ್ಯಂತ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದ್ದು, ಬಿಜೆಪಿ ಹಿರಿಯ ಮುಖಂಡ ಪುಟ್ಟಣ್ಣ ಅವರು 4 ವರ್ಷದ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿರುವುದೇ ಸಾಕ್ಷಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪುಟ್ಟಣ್ಣ ಅವರನ್ನು ಕಾಂಗ್ರೆಸ್‌ಗೆ ಸ್ವಾಗತಿಸಿ ಮಾತನಾಡಿದ ಅವರು, 4 ಬಾರಿ ಪರಿಷತ್ ಸದಸ್ಯರಾಗಿ, ಉಪಸಭಾಪತಿಯಾಗಿರುವ ಪುಟ್ಟಣ್ಣ ಅತ್ಯಂತ ಹಿರಿಯ ಹಾಗೂ ಅನುಭವಿ. ಶಿಕ್ಷಕರು, ಪದವೀಧರರು ಸೇರಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ನಿರಂತರ ಹೋರಾಟ ಮಾಡಿದವರು ಎಂದು ಹೇಳಿದರು.
ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುಜೇìವಾಲಾ ಮಾತನಾಡಿ, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಪುಟ್ಟಣ್ಣ ಅವರು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಲು ಬಯಸಿರುವ ಅವರ ನಿರ್ಧಾರದಿಂದ ನಮಗೆ ಸಂತೋಷವಾಗಿದೆ ಎಂದು ತಿಳಿಸಿದರು.
ಮತ್ತಷ್ಟು ಶಕ್ತಿ ಬಂದಿದೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಪುಟ್ಟಣ್ಣ ಅವರು ಹಿರಿಯ ರಾಜಕಾರಣಿಯಾಗಿದ್ದು, ಅವರ ಅನುಭವ ಬಳಸಿಕೊಳ್ಳುತ್ತೇವೆ. ನಮಗೆ ಮತ್ತಷ್ಟು ಶಕ್ತಿ ಬಂದಿದೆ ಎಂದರು. ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ ರಾಜ್ಯಾದ್ಯಂತ ಶಿಕ್ಷಕ ಮತ್ತು ಪದವೀಧರ ಸಮೂಹದ ಜತೆ ಉತ್ತಮ ಸಂಪರ್ಕ ಹೊಂದಿರುವ ಪುಟ್ಟಣ್ಣ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಳ್ಳುತ್ತಿದ್ದೇವೆ ಎಂದರು.
ಸ್ಪಂದಿಸದ ಸರಕಾರ
ಪುಟ್ಟಣ್ಣ ಮಾತನಾಡಿ, ನಾನು ಬಿಜೆಪಿ ಪರಿಷತ್ ಸದಸ್ಯನಾಗಿದ್ದೆ. ಆದರೆ, ಶಿಕ್ಷಕರ, ಪದವೀಧರ ಸೇರಿ ಶಿಕ್ಷಣ ವಲಯದ ಸಮಸ್ಯೆಗಳಿಗೆ ಸರಕಾರದಿಂದ ಸ್ಪಂದನೆ ಸಿಗಲಿಲ್ಲ. ನಿವೃತ್ತ ಶಿಕ್ಷಕರು ಸ್ವಾತಂತ್ರ್ಯ ಉದ್ಯಾನದಲ್ಲಿ 142 ದಿನ ಧರಣಿ ನಡೆಸಿ ಮೂವರು ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಪ್ರಾಣ ಕಳೆದುಕೊಂಡರು. ಆದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಡಿ.ಕೆ. ಶಿವಕುಮಾರ್ ಅವರಿಗೆ ಮಧ್ಯರಾತ್ರಿ ಮನವಿ ಮಾಡಿ ಸ್ಥಳಕ್ಕೆ ಕರೆಯಿಸಿ ಅವರ ಮನವೊಲಿಸಿ ಧರಣಿ ನಿಲ್ಲಿಸಲಾಯಿತು ಎಂದರು.
ಆಕಾಂಕ್ಷಿಗಳ ಧರಣಿ
ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿ ರಾಜಾಜಿನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿ ಕಚೇರಿ ಮುಂದೆ ಧರಣಿ ನಡೆಸಿದರು. ಈ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಪುಟ್ಟಣ್ಣ ಅವರು ಬಿಜೆಪಿಯ ವಿಧಾನ ಪರಿಷತ್ ಸದಸ್ಯರು. ಚುನಾವಣೆಯಲ್ಲಿ ಅವರ ವಿರುದ್ಧ ನಮ್ಮ ಅಭ್ಯರ್ಥಿ ಕಣಕ್ಕಿಳಿಸಿದ್ದರೂ ಸಾವಿರ ಮತಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ವಾಸ್ತವ. ರಾಜಾಜಿನಗರ, ಚನ್ನಪಟ್ಟಣ, ಬಸವನಗುಡಿ, ರಾಮನಗರ ಸೇರಿ ಹಲವೆಡೆ ಅಕ್ರೋಶ ವ್ಯಕ್ತವಾಗಬಹುದು. ಇವರ ಸೇರ್ಪಡೆಯಿಂದ ತಮಗೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಆಕ್ರೋಶ ಸಹಜ. ನಾವು ಎಲ್ಲ ಸರಿಪಡಿಸುತ್ತೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.