ಡಿಕೆಶಿ ಬಿಟ್ಟು ಸಿದ್ದು ಜತೆ ರಾಹುಲ್ ಪ್ರತ್ಯೇಕ ಮಾತುಕತೆ : ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ
ಅವಧಿಪೂರ್ವ ಚುನಾವಣೆ ಸಾಧ್ಯತೆಗಳ ಬಗ್ಗೆಯೂ ಸಮಾಲೋಚನೆ
Team Udayavani, Jul 21, 2021, 6:36 PM IST
ಬೆಂಗಳೂರು: ರಾಜ್ಯ ರಾಜಕೀಯ ವಿದ್ಯಮಾನಗಳ ವಿಚಾರವಾಗಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಪ್ರತ್ಯೇಕ ಮಾತುಕತೆ ನಡೆಸಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾದರೆ ಕಾಂಗ್ರೆಸ್ ಯಾವ ರೀತಿಯ ಹೆಜ್ಜೆ ಇಡಬಹುದು. ಮುಂದಿನ ಕಾರ್ಯತಂತ್ರ ಹಾಗೂ ಆಪರೇಷನ್ ಕಮಲ ಕಾರ್ಯಾಚರಣೆಯಡಿ ಬಿಜೆಪಿ ಸೇರಿ ಸಚಿವರಾಗಿರುವವರ ಮನಸ್ಥಿತಿ ಮತ್ತಿತರ ವಿಷಯಗಳ ಬಗ್ಗೆ ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದಿರುವುದ ಕುತೂಹಲಕ್ಕೆ ಕಾರಣವಾಗಿದೆ.
ಯಡಿಯೂರಪ್ಪ ಬದಲಾವಣೆಯಾದರೆ ಆರು ತಿಂಗಳ ನಂತರ ವಿಧಾನಸಭೆಗೆ ಅವಧಿ ಪೂರ್ವ ಚುನಾವಣೆ ನಡೆದರೂ ಆಶ್ಚರ್ಯವಿಲ್ಲ ಎಂಬ ವ್ಯಾಖ್ಯಾನಗಳು ದೆಹಲಿ ಮಟ್ಟದಲ್ಲಿ ಹರಿದಾಡುತ್ತಿದ್ದು ಆ ಕುರಿತು ರಾಹುಲ್‌ಗಾಂಧಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರು ರಾಹುಲ್‌ಗಾಂಧಿಯವರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರ ಹಾಗೂ ಸಮುದಾಯವಾರು ವಿಶ್ವಾಸಗಳಿಸಲು ತಮ್ಮ ಕಾರ್ಯಯೋಜನೆಗಳ ಬಗ್ಗೆಯೂ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಜತೆಗೆ ಕೆಲವು ನಾಯಕರ ವಿರುದ್ಧ ದೂರು ಸಹ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್‌ನ ಕೆಲವು ನಾಯಕರು ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದು ಇದು ಪಕ್ಷದ ಮೇಲೆ ಚುನಾವಣೆ ಸಂದರ್ಭದಲ್ಲಿ ಪರಿಣಾಮ ಬೀರಬಹುದು. ಫಲಿತಾಂಶದ ಲೆಕ್ಕಾಚಾರ ಬದಲಿಸಬಹುದು. ಹೀಗಾಗಿ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ನಮ್ಮ ಕಾರ್ಯತಂತ ಇರಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಕೆಲವೊಂದು ಉದಾಹರಣೆ ಸಹ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ :ಯಡಿಯೂರಪ್ಪ ಮುಂದುವರೆಯಲಿ: ಕುಮಾರಸ್ವಾಮಿ
ಇದೇ ಸಂದರ್ಭದಲ್ಲಿ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಹಿಂದುಳಿದ, ಅಲ್ಪಸಂಖ್ಯಾತರ, ಮಹಿಳಾ ಹಾಗೂ ಎಸ್‌ಸಿ ಘಟಕಗಳಿಗೆ ಅಧ್ಯಕ್ಷರ ನೇಮಕ ಕುರಿತು ರಾಹುಲ್‌ಗಾಂಧಿಯವರಿಗೆ ಪಟ್ಟಿ ಕೊಟ್ಟು ಬಂದಿದ್ದಾರೆ. ತಮ್ಮ ಆಪ್ತರು ಹಾಗೂ ಬೆಂಬಲಿಗರ ಹಿತ ಕಾಯುವ ಅನಿವಾರ್ಯತೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ತಳಮಳ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುಜೇìವಾಲಾ ಸಮ್ಮುಖದಲ್ಲಿ ಮಾತುಕತೆಯ ನಂತರ ಸಿದ್ದರಾಮಯ್ಯ ಅವರ ಜತೆ ಪ್ರತ್ಯೇಕವಾಗಿ ಮಾತನಾಡಿರುವುದು ರಾಜ್ಯ ಕಾಂಗ್ರೆಸ್ ವಲಯದಲ್ಲಿ ತಳಮಳ ಸೃಷ್ಟಿಸಿದೆ.
ಸಿದ್ದರಾಮಯ್ಯ ಅವರ ಜತೆ ರಾಹುಲ್‌ಗಾಂಧಿ ಪ್ರತ್ಯೇಕ ಮಾತುಕತೆ ಕುರಿತು ಹಿರಿಯ ನಾಯಕರೂ ತಲೆಬಿಸಿ ಮಾಡಿಕೊಂಡಿದ್ದು ಮುಂದಿನ ಸಿಎಂ ಹೇಳಿಕೆ ವಿಚಾರವಾಗಿ ಹೈಕಮಾಂಡ್‌ವರೆಗೂ ಸಿದ್ದರಾಮಯ್ಯ ವಿರುದ್ಧ ಹಿರಿಯ ನಾಯಕರು ದೂರು ಕೊಟ್ಟು ಬಂದಿದ್ದರು. ಇದೀಗ ರಾಹುಲ್‌ಗಾಂಧಿ, ಸಿದ್ದರಾಮಯ್ಯ ಜತೆ ಪ್ರತ್ಯೇಕ ಮಾತುಕತೆ ನಡೆಸಿರುವುದರಿಂದ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಬಹುದು ಎಂದು ಹೇಳಲಾಗಿದೆ.
ರಾಹುಲ್‌ಗಾಂಧಿ ಭೇಟಿಯ ನಂತರ ಕೆ.ಸಿ.ವೇಣುಗೋಪಾಲ್, ದಿಗ್ವಿಜಯ್‌ಸಿಂಗ್, ಎ.ಕೆ.ಆ್ಯಂಟನಿ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಿದ್ದರಾಮಯ್ಯ ಪ್ರತ್ಯೇಕವಾಗಿಯೇ ಮಾತುಕತೆ ನಡೆಸಿದ್ದಾರೆ. ರಾಹುಲ್‌ಗಾಂಧಿಯವರ ಸೂಚನೆ ಮೇರೆಗೆ ಈ ಭೇಟಿ ನಡೆದಿದೆ ಎಂದು ಹೇಳಲಾಗಿದ್ದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿವೆ.
ಎಂಬಿಪಿ ಟ್ವೀಟ್ ಗೊತ್ತಿತ್ತು
*ಈ ಮಧ್ಯೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿರುವ ಬಿ.ಎಸ್.ಯಡಿಯೂರಪ್ಪ ಪರ ಎಂ.ಬಿ.ಪಾಟೀಲ್ ಅವರ ಟ್ವೀಟ್ ವಿಚಾರ ಸಿದ್ದರಾಮಯ್ಯ ಅವರಿಗೆ ಗೊತ್ತಿತ್ತು. ಸಮುದಾಯವಾಗಿ ನಾವು ಅವರ ಜತೆ ನಿಲ್ಲಲೇಬೇಕಿದೆ. ಇದು ಭವಿಷ್ಯದಲ್ಲಿ ನಮಗೂ ಒಳ್ಳೆಯದು ಎಂದು ಎಂ.ಬಿ.ಪಾಟೀಲ್ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿಯೇ ಟ್ವೀಟ್ ಮಾಡಿದ್ದರು ಎಂಬ ಮಾತುಗಳು ಕೇಳಿರುತ್ತಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.