ಸಿಗ್ನಲ್ ಲೈಟ್‌ಗಳು: ಪಾದಚಾರಿಗಳಿಗೆ ಸದಾ ರೆಡ್ !ಸಿಗ್ನಲ್‌ಗಳ ಬಳಿ ರಸ್ತೆ ದಾಟುವುದೇ ಸವಾಲು
Team Udayavani, Feb 6, 2022, 1:33 PM IST
ಮಹಾನಗರ : ಮೂಲ ಸೌಕರ್ಯಗಳ ಜತೆ ನಗರ ಸ್ಮಾರ್ಟ್ ಸಿಟಿಯಾಗುತ್ತಿದ್ದರೂ ಪ್ರಮುಖ ಜಂಕ್ಷನ್‌ಗಳು ಪಾದಚಾರಿಗಳಿಗೆ ಅಪಾಯ ಮುಕ್ತ ವಾಗಿಲ್ಲ. ಹಾಗಾಗಿ ಇಲ್ಲಿಯ ಸಿಗ್ನಲ್ ಲೈಟ್‌ಗಳು ಪಾದಚಾರಿಗಳಿಗೆ ಸದಾ ರೆಡ್ (ಅಪಾಯ) ಲೈಟನ್ನೇ ತೋರಿಸುತ್ತಿರುವಂತೆ ಭಾಸವಾಗುತ್ತಿದೆ.
ಪಿವಿಎಸ್ ವೃತ್ತ, ಲಾಲ್‌ಬಾಗ್, ಅಂಬೇಡ್ಕರ್ (ಜ್ಯೋತಿ) ವೃತ್ತ ಗಳಲ್ಲಿರುವ ಜಂಕ್ಷನ್‌ಗಳಲ್ಲಿ ವಾಹನಗಳ ಸಂಚಾರಕ್ಕೆ ಆದ್ಯತೆ ನೀಡಿ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಆದರೆ ಪಾದಚಾರಿ ಗಳು ಸುರಕ್ಷಿತವಾಗಿ ರಸ್ತೆ ದಾಟಲು ಸಮರ್ಪಕ ಸಿಗ್ನಲ್‌ಲೈಟ್‌ಗಳೇ ಇಲ್ಲ. ಪಾದಚಾರಿಗಳು ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದುಕೊಂಡು ಅಪಾಯಕಾರಿಯಾಗಿ ರಸ್ತೆ ದಾಟುತ್ತಿದ್ದಾರೆ. ಅನೇಕ ಮಂದಿ ಅದೃಷ್ಟವಶಾತ್ ಕೂದಳೆಲೆಯ ಅಂತರ ದಲ್ಲಿ ವಾಹನಗಳು ಢಿಕ್ಕಿಯಾಗು ವುದರಿಂದ ತಪ್ಪಿಸಿಕೊಂಡಿದ್ದಾರೆ.
ಪಿವಿಎಸ್ ವೃತ್ತದಲ್ಲಿ 5 ದಿಕ್ಕುಗಳಿಂದ ವಾಹನಗಳು ಬಂದು ಸಂಧಿಸುತ್ತವೆ. ವಾಹನ ಸಂದಣಿ ಮತ್ತು ಪಾದಚಾರಿಗಳ ಓಡಾಟವೂ ಹೆಚ್ಚು. ಸುಗಮ ಸಂಚಾರಕ್ಕೆ ಅನು ಕೂಲವಾಗುವಂತೆ ಸಿಗ್ನಲ್ ಲೈಟ್ ಕಾರ್ಯನಿರ್ವಹಿಸುತ್ತಿದೆ.
ಲಾಲ್‌ಬಾಗ್ ಜಂಕ್ಷನ್ ಒಂದೇ ಲೈಟ್
ಲಾಲ್‌ಬಾಗ್ ಜಂಕ್ಷನ್ ಇತ್ತೀಚೆಗೆ ಅಗಲಗೊಂಡಿದ್ದರೂ ಪಾದಚಾರಿಗಳು ರಸ್ತೆ ದಾಟಲು ವ್ಯವಸ್ಥೆ ಮಾಡಿಲ್ಲ. ಝೀಬ್ರಾ ಕ್ರಾಸಿಂಗ್ ಕೆಲವಡೆ ಅಸ್ಪಷ್ಟವಾಗಿ ಕಾಣಿಸುತ್ತಿದೆ. ಇನ್ನು ಕೆಲವೆಡೆ ಅದರ ಕುರುಹು ಕೂಡ ಇಲ್ಲ. ಅಳಿದುಳಿದ ಕ್ರಾಸಿಂಗ್ ಮಾರ್ಕ್ ಮೇಲೆ ನಡೆದರೂ ಸುರಕ್ಷಿತವಲ್ಲ. ಯಾಕೆಂದರರೆ ಇಡೀ ಜಂಕ್ಷನ್‌ಗೆ ಇರುವುದು ಏಕೈಕ ಪಾದಚಾರಿಗಳ ಸಿಗ್ನಲ್ ಲೈಟ್. ಅದು ಹೆಸರಿಗೆ ಮಾತ್ರವೇ ಇದೆಯಷ್ಟೇ; ಉಪ ಯೋಗಕ್ಕೆ ಬರುತ್ತಿಲ್ಲ. ಈ ಜಂಕ್ಷನ್‌ನಲ್ಲಿ 2 ಫ್ರೀ ಲೆಫ್ಟ್ಗಳಿದ್ದು, ಸುರಕ್ಷಿತವಾಗಿ ರಸ್ತೆ ದಾಟುವುದೇ ಪಾದಚಾರಿಗಳಿಗೆ ದೊಡ್ಡ ಸವಾಲು.
ಜ್ಯೋತಿ ವೃತ್ತ ಸಿಗ್ನಲ್ ಬಂದ್
ಅಂಬೇಡ್ಕರ್ ವೃತ್ತ (ಜ್ಯೋತಿ ಸರ್ಕಲ್)ದಲ್ಲಿ ಸದ್ಯ ಪಾದಚಾರಿಗಳಿಗೆ ಮಾತ್ರವಲ್ಲ, ವಾಹನಗಳಿಗೂ ಸಿಗ್ನಲ್ ಲೈಟ್ ಇಲ್ಲ. ಕೈ ಸನ್ನೆಯಲ್ಲೇ ಸಂಚಾರ ಪೊಲೀಸರು ವಾಹನ ಸಂಚಾರ ನಿಯಂತ್ರಿಸುತ್ತಿದ್ದಾರೆ. ವಾಹನಗಳ ನಡುವೆ ಪಾದಚಾರಿಗಳು ಎಲ್ಲೆಂದರಲ್ಲಿ ಪ್ರಾಣಭೀತಿಯಲ್ಲಿ ಓಡಾಡುತ್ತಿದ್ದಾರೆ. ಈ ಜಂಕ್ಷನ್‌ಗೆ ತಾಗಿಕೊಂಡಂತೆ ಆಸ್ಪತ್ರೆ ಕೂಡ ಇದ್ದು ಇಲ್ಲಿಯೂ ಅಂದಾಜಿಗೆ ಎಂಬಂತೆ ರಸ್ತೆ ದಾಟುವಂತಾಗಿದೆ!
ಹಂಪನಕಟ್ಟೆ ಹೊಸ ಸಿಗ್ನಲ್‌ನಲ್ಲೂ ತೊಡಕು
ಹಂಪನಕಟ್ಟೆಯ ಜಂಕ್ಷನ್‌ಅನ್ನು ಅಭಿವೃದ್ಧಿ ಗೊಳಿಸಿ ಹೊಸದಾಗಿ ಸಿಗ್ನಲ್ ವ್ಯವಸ್ಥೆ ಅಳ ವಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡ ಲಾಗಿದೆ. ಜತೆಗೆ ಪಾದಚಾರಿಗಳ ಅನುಕೂಲ ಕ್ಕಾಗಿ ಝೀಬ್ರಾ ಕ್ರಾಸ್‌ಗಳನ್ನು ಹಾಕಲಾಗಿದೆ. ಅಗತ್ಯವಿರುವಷ್ಟು ಪಾದಚಾರಿಗಳ ಸಿಗ್ನಲ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ಆದರೆ ಹೆಚ್ಚು ಜನ ರಸ್ತೆ ದಾಟುವ ಸ್ಥಳವಾದ ವೆನಾÉಕ್ ಆಸ್ಪತ್ರೆ ಕಟ್ಟಡ ಕಡೆಯಿಂದ ಐಡಿಯಲ್ ಐಸ್‌ಕ್ರೀಂ, ಕೆ.ಎಸ್. ರಾವ್ ರಸ್ತೆ ಕಡೆಗೆ ಬರುವಲ್ಲಿನ ಸಿಗ್ನಲ್ ಅಳವಡಿಕೆ ಅಸಮರ್ಪಕವಾಗಿದೆ. ಝೀಬ್ರಾ ಕ್ರಾಸ್ ಒಂದು ಕಡೆ, ಪಾದಚಾರಿ ಗಳ ಸಿಗ್ನಲ್ ಲೈಟ್ ಇನ್ನೊಂದು ಕಡೆ ಆಗಿರು ವುದರಿಂದ ನಡೆದಾಡುವವರಿಗೆ ಸಿಗ್ನಲ್ ಲೈಟ್ ಕಾಣದಾಗಿದೆ. ಹಂಪನಕಟ್ಟೆಯ ಬಾವಿ ಕಡೆಯಿಂದ ಮತ್ತೂಂದು ಕಡೆಗೆ ಹೋಗಲು ರಸ್ತೆ ದಾಟುವಲ್ಲಿ ರಸ್ತೆ ವಿಭಾಜಕ ಇದ್ದು ತೊಂದರೆಯಾಗಿದೆ. ಉಳಿದಂತೆ ಇಲ್ಲಿ ಪಾದಚಾರಿಗಳ ಸುರಕ್ಷೆಗೆ ಪೂರಕ ವ್ಯವಸ್ಥೆ ಗಳನ್ನು ಅಳವಡಿಸಲಾಗಿದೆ.
ಬೀಪ್ ಶಬ್ದವೂ ಬೇಕು
ಹಂಪನಕಟ್ಟೆಯಲ್ಲಿ ಪಾದಚಾರಿಗಳಿಗಾಗಿ ಅಳವಡಿಸಿರುವ ಸಿಗ್ನಲ್ ಲೈಟ್‌ಗಳ ನಿರ್ವಹಣೆ ಸಮರ್ಪಕವಾಗಬೇಕು. ಪಿವಿಎಸ್, ಲಾಲ್‌ಬಾಗ್ ಮೊದಲಾದೆಡೆ ಪಾದಚಾರಿಗಳಿಗಾಗಿ ಸಿಗ್ನಲ್ ಲೈಟ್ ಅಳವಡಿಸಬೇಕು. ಪಾದಚಾರಿಗಳ ಸಿಗ್ನಲ್ ಲೈಟ್‌ನ ಜತೆಗೆ ಸುರಕ್ಷಿತ ಸಂಚಾರ ಮಾಡಲು ಬೀಪ್ ಶಬ್ದ ಮೊಳಗಬೇಕು ಎಂಬುದು ಪಾದಚಾರಿಗಳ ಆಗ್ರಹ.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.