![Karkala: ಕಫ ಉಲ್ಬಣ… ಮೂರು ತಿಂಗಳ ಮಗು ಸಾ*ವು](https://www.udayavani.com/wp-content/uploads/2025/02/baby-1-415x250.jpg)
![Karkala: ಕಫ ಉಲ್ಬಣ… ಮೂರು ತಿಂಗಳ ಮಗು ಸಾ*ವು](https://www.udayavani.com/wp-content/uploads/2025/02/baby-1-415x250.jpg)
Team Udayavani, Jan 29, 2025, 7:50 AM IST
ಮಂಗಳೂರು: ಹೊಸ ವಾಹನ ಖರೀದಿಸಿ ಸುತ್ತಾಡುವವರಿಗೆ ಈಗ ತಲೆನೋವು ಎದುರಾಗಿದೆ. ಹೊಸ ವಾಹನ ಹೊಸ ಬಂದು ತಿಂಗಳು ಹಲವು ಆದರೂ ರಾಜ್ಯದ ಹಲವು ಮಂದಿಗೆ ಸ್ಮಾರ್ಟ್ ಕಾರ್ಡ್ ಇನ್ನೂ ದೊರಕಿಲ್ಲ.
ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು, ಬೀದರ್, ಪುತ್ತೂರು ಸೇರಿದಂತೆ ಮತ್ತಿತರ ಕಡೆಗಳಲ್ಲಿ ವಾಹನದ ನೋಂದಣಿ ಪತ್ರ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ನಿರಂತರ ವಿಳಂಬವಾಗುತ್ತಿದ್ದು, ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಹೊಸ ವಾಹನಗಳನ್ನು ಎರಡು ಮೂರು ತಿಂಗಳು ಕಳೆದರೂ ರಸ್ತೆಗಿಳಿಸಲು ಹಿಂಜರಿಕೆ ಪಡುತ್ತಿದ್ದಾರೆ. ಸ್ಮಾರ್ಟ್‌ಕಾರ್ಡ್ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಪೊಲೀಸರು ತಪಾಸಣೆ ವೇಳೆ ವಾಹನಗಳ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದು ಹಲವು ಸವಾರರಿಗೆ ನೋಂದಣಿ ಪತ್ರವಿಲ್ಲದ ಕಾರಣ ದಂಡ ವಿಧಿಸಲಾಗಿದೆ ಎಂಬುವುದು ಮಾಲಕರ ಆರೋಪ!
ಕಳೆದ ಒಂದೆರಡು ವರ್ಷಗಳಿಂದ ಈ ಸಮಸ್ಯೆ ಉಲ್ಬಣಗೊಂಡಿದ್ದು, ಇಲಾಖೆಯಿಂದ ಸಮರ್ಪಕ ಉತ್ತರ ವಾಹನ ಮಾಲಕರಿಗೆ ಸಿಗುತ್ತಿಲ್ಲ. ದಾಖಲೆಗಳನ್ನು ವರ್ಗಾಯಿಸಲಾಗುತ್ತಿದೆ. ತಾಂತ್ರಿಕ ಸಮಸ್ಯೆ ಕಾರಣ ನೀಡುತ್ತ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತಿದ್ದಾರೆ. ವಾಹನ ತಪಾಸಣೆ ವೇಳೆ ಆರ್‌ಸಿ ಸಿಕ್ಕಿಲ್ಲ ಎನ್ನುವ ಮಾತನ್ನು ತನಿಖಾ ಸಿಬಂದಿ ಒಪ್ಪುವುದಿಲ್ಲ. ಅದರಲ್ಲೂ ಕರಾವಳಿ ಅಂತಾರಾಜ್ಯ ವ್ಯಾಪ್ತಿಗೆ ಸಮೀಪವಾಗಿರುವ ಕಾರಣದಿಂದ ಕೇರಳ ಪೊಲೀಸರು ವಾಹನದ ನೋಂದಣಿ ಪತ್ರವಿಲ್ಲದೆ ಸಂಚಾರ ನಡೆಸಲು ಅನುಮತಿಸುತ್ತಿಲ್ಲ ಎನ್ನಲಾಗಿದೆ. ದಂಡ ಪಾವತಿಸಲು ಹಿಂದೇಟು ಹಾಕುವ ವಾಹನ ಮಾಲಕರು ವಾಹನಗಳ ಡೀಲರ್‌ಗಳ ಬಳಿ ಬಂದು ತಗಾದೆ ಎತ್ತುತ್ತಿದ್ದಾರೆ.
ಖಾಸಗಿ ಸಂಸ್ಥೆಯ ಗುತ್ತಿಗೆ ಮುಗಿದಿದ್ದೇ ಕಾರಣ
ರೋಸ್ಮಾಟ ಎನ್ನುವ ಖಾಸಗಿ ಸಂಸ್ಥೆಗೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಅವರಿಗೆ ನೀಡಲಾಗಿದ್ದ ಅವಧಿ ಮುಗಿದ ಹಿನ್ನೆಲೆ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ತಾತ್ಕಾಲಿಕವಾಗಿ ಕೆಲವು ತಿಂಗಳುಗಳಿಗೆ ಹೆಚ್ಚುವರಿ ಅವಕಾಶ ನೀಡಲಾಗಿದೆ. ಆದರೆ ಸರಕಾರ ಮುಂಚಿತವಾಗಿ ಕ್ರಮ ವಹಿಸದಿರುವುದೇ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ಸಾಫ್ಟ್‌ವೇರ್ ವರ್ಗಾವಣೆ ವೇಳೆ ಸಮಸ್ಯೆ
ಕಳೆದ ವರ್ಷ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ವಿಳಂಬ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ರೋಸ್ಮಾಟ ಸಂಸ್ಥೆಯನ್ನು ಬೊಟ್ಟುಮಾಡಲಾಗಿತ್ತು. ಸಾಫ್ಟ್‌ವೇರ್ ವರ್ಗಾವಣೆಯಿಂದಾಗಿ ವಿಳಂಬವಾಗುತ್ತಿದೆ ಎನ್ನುವ ಮಾತುಗಳು ಅಧಿಕಾರಿಗಳಿಂದ ಬಂದಿತ್ತು. ಕೆಲವೊಂದು ಕಾರ್ಡ್‌ಗಳ ಮಾಹಿತಿ ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ಸ್ಮಾರ್ಟ್‌ಕಾರ್ಡ್ ವಿತರಣೆ ವಿಳಂಬವಾಗುತ್ತಿದೆ ಎನ್ನಲಾಗಿತ್ತು. ಆದರೆ ಈ ಸಮಸ್ಯೆ ವರ್ಷ ಕಳೆದರೂ ಪರಿಹಾರವಾಗಿಲ್ಲ.
ಮೊಬೈಲ್ ಸಂದೇಶ ಬರುತ್ತೆ;
ಹೊಸ ವಾಹನ ಖರೀದಿಸಿ ಮೂರ್‍ನಾಲ್ಕು ತಿಂಗಳ ಬಳಿಕ ಸ್ಮಾರ್ಟ್‌ಕಾರ್ಡ್‌ಗಳನ್ನು ಪೋಸ್ಟಲ್ ಮೂಲಕ ರವಾನಿಸಲಾಗಿದೆ ಎಂದು ಮೊಬೈಲ್‌ಗೆ ಸಂದೇಶ ಬರುತ್ತದೆ. ಆದರೆ ಹಲವು ದಿನ ಕಳೆದರೂ ಕಾರ್ಡ್ ಕೈ ಸೇರುತ್ತಿಲ್ಲ. ಅನೇಕ ಸವಾರರಿಗೆ ಇಂತಹ ಅನುಭವಗಳಾಗಿವೆ. ಮಂಗಳೂರಿನ ಸವಾರರೊಬ್ಬರು ಹೇಳಿದ ಪ್ರಕಾರ ಮೊಬೈಲ್ ಸಂದೇಶದ ಬಳಿಕ ಅಂಚೆ ಕಚೇರಿ, ವಾಹನದ ಶೋರೂಂ ಹಾಗೂ ಆರ್‌ಟಿಒ ಕಚೇರಿ ಅಲೆದಾಡಿದರೂ ಕಾರ್ಡ್ ಸಿಕ್ಕಿಲ್ಲ.
ಡಿಜಿ ಲಾಕರ್‌ನಲ್ಲಿವೆ ದಾಖಲೆಗಳು
ಚಿಪ್ ಕಾರ್ಡ್‌ಗಳ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗುತ್ತಿಲ್ಲ. ಪ್ರತೀ ತಿಂಗಳು ಸಾವಿರಾರು ಕಾರ್ಡ್‌ಗಳ ವಿತರಣೆಯ ಜವಾಬ್ದಾರಿ ಇದ್ದು, ವಿಳಂಬವಾಗುತ್ತಿದೆ. ಉಳಿದಂತೆ ಎಲ್ಲ ದಾಖಲೆಗಳನ್ನು ಡಿಜಿ ಲಾಕರ್ ಮೂಲಕ ಡೌನ್‌ಲೋಡ್ ಮಾಡಬಹುದು.
ಕಾರ್ಡ್‌ಗಳ ಕೊರತೆಯಿಂದ ವಿಳಂಬ
ತಮಗೆ ಎದುರಾಗಿರುವ ಸಮಸ್ಯೆಯ ಬಗ್ಗೆ ಸವಾರರೊಬ್ಬರು ಸ್ಥಳೀಯ ಆರ್‌ಟಿಒ ಕಚೇರಿಗೆ ದೂರು ನೀಡಿದ್ದು, ಚಿಪ್ ಹೊಂದಿರುವ ಕಾರ್ಡ್‌ಗಳ ಕೊರತೆಯಿಂದ ವಿಳಂಬವಾಗುತ್ತಿದೆ ಎಂದಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು ಯಾವುದೇ ಸಮಸ್ಯೆಗಳಿಲ್ಲ ಎನ್ನುತ್ತಿದ್ದಾರೆ. ತಂತ್ರಜ್ಞಾನ ಇಷ್ಟೊಂದು ಮುಂದುವರಿದ ಸಮಯದಲ್ಲಿ ಕಾರ್ಡ್ ವಿತರಣೆಗೆ ವಿಳಂಬ ಮಾಡುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಕೆಲವು ಬಾರಿ ತಾಂತ್ರಿಕ ಕಾರಣಗಳಿಂದಾಗಿ ಸಣ್ಣಪುಟ್ಟ ಗೊಂದಲಗಳಾಗುತ್ತದೆ. ರಾಜ್ಯದ ಎಲ್ಲ ಕಡೆ ಸಮಸ್ಯೆ ಇಲ್ಲ. ಕೆಲವೊಂದು ಆರ್‌ಟಿಒ ವ್ಯಾಪ್ತಿಯಲ್ಲಿ ಸಮಸ್ಯೆಗಳಿದ್ದು ಅವುಗಳನ್ನು ಸ್ಥಳೀಯವಾಗಿಯೇ ಬಗೆಹರಿಸಬೇಕಾಗುತ್ತದೆ.
– ಯೋಗೀಶ್ ಎ. ಎಂ. ರಾಜ್ಯ ಸಾರಿಗೆ ಆಯುಕ್ತರು
ಹೊಸ ಕಾರು ಖರೀದಿಸಿ ಎರಡು ತಿಂಗಳು ಕಳೆದಿದ್ದು, ಸ್ಮಾರ್ಟ್‌ಕಾರ್ಡ್ ಬಂದಿಲ್ಲ. ಯಾರಲ್ಲೂ ಕೇಳಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ. ಪೋಸ್ಟ್ ಮೂಲಕ ಮನೆಗೆ ಬರುವುದಾಗಿ ಇಲಾಖೆಯವರು ತಿಳಿಸಿದ್ದು, ಇನ್ನೂ ಕೈ ಸೇರಿಲ್ಲ. ಪ್ರಯಾಣದ ಸಂದರ್ಭದಲ್ಲಿ ಅನಗತ್ಯ ಗೊಂದಲವಾಗುತ್ತಿದೆ. ದೂರ ಪ್ರಯಾಣಿಸಲು ಆತಂಕವಾಗುತ್ತಿದೆ. – ಲೋಕೇಶ್, ಕಾರು ಮಾಲಕರು, ಮಂಗಳೂರು
– ಸಂತೋಷ್ ಮೊಂತೇರೊ
You seem to have an Ad Blocker on.
To continue reading, please turn it off or whitelist Udayavani.