ಸೋನಿಯಾ-ರಾಹುಲ್ ಕೊರಳಿಗೆ ಹೆರಾಲ್ಡ್ ಉರುಳು?
Team Udayavani, Jun 2, 2022, 6:05 AM IST
ಒಂದಷ್ಟು ದಿನಗಳ ಕಾಲ ತಣ್ಣಗಾಗಿದ್ದ ನ್ಯಾಶನಲ್ ಹೆರಾಲ್ಡ್ ಪ್ರಕರಣ ಮತ್ತೆ ಸದ್ದಾಗುತ್ತಿದೆ. ಜಾರಿ ನಿರ್ದೇಶನಾಲಯ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಸಮನ್ಸ್ ನೀಡಿದೆ. ಈ ಸಮನ್ಸ್ ಬಗ್ಗೆ ಕಾಂಗ್ರೆಸ್ ಟೀಕೆ ವ್ಯಕ್ತಪಡಿಸಿದೆ. ಹಾಗಾದರೆ ಏನಿದು ನ್ಯಾಶನಲ್ ಹೆರಾಲ್ಡ್ ಪ್ರಕರಣ? ಸೋನಿಯಾ ಮತ್ತು ರಾಹುಲ್ ಪಾತ್ರವೇನು? ಈ ಕುರಿತ ಒಂದು ನೋಟ ಇಲ್ಲಿದೆ…
ಏನಿದು ನ್ಯಾಶನಲ್ ಹೆರಾಲ್ಡ್ ಪ್ರಕರಣ?
2012ರಲ್ಲಿ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ದಾಖಲಿಸಿದ್ದ ಕೇಸ್ ಇದು. ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂ ಅವರು ಆರಂಭಿಸಿದ್ದ ನ್ಯಾಶನಲ್ ಹೆರಾಲ್ಡ್ ಅನ್ನು ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮೂಲಕ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಖರೀದಿಸಿದ್ದರು. ಈ ಖರೀದಿ ವೇಳೆ ಭಾರೀ ಪ್ರಮಾಣದ ಅವ್ಯವಹಾರವಾಗಿದೆ ಎಂಬುದು ಸುಬ್ರಹ್ಮಣ್ಯನ್‌ಸ್ವಾಮಿ ಅವರ ಆರೋಪ.
ಇವರು ನೀಡಿರುವ ದೂರಿನಲ್ಲಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಕೇವಲ 50 ಲಕ್ಷ ರೂ.ಗಳಿಗೆ ಖರೀದಿ ಮಾಡಲಾಗಿದೆ. ಆದರೆ ಈ ಪತ್ರಿಕೆಯ ಪ್ರಕಾಶಕ ಮತ್ತು ಮುದ್ರಕರಾಗಿದ್ದ ದಿ ಅಸೋಸಿಯೇಟೆಡ್ ಜರ್ನಲ್(ಎಜೆಎಲ್) ಈ ಪತ್ರಿಕೆ ಮೇಲೆ 90.25 ಕೋಟಿ ರೂ. ಸಾಲ ಮಾಡಿತ್ತು. ಇದನ್ನು ತೀರಿಸಲಾಗದೇ ಒದ್ದಾಡುತ್ತಿತ್ತು. ಆದರೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಿರ್ದೇಶಕರಾಗಿರುವ ಯಂಗ್ ಇಂಡಿಯಾ ಪಬ್ಲಿಕೇಶನ್ ಮೂಲಕ ಈ ಪತ್ರಿಕೆಯನ್ನು 50 ಲಕ್ಷ ರೂ.ಗಳಿಗೆ ಖರೀದಿಸಿ ಉಳಿದ ಸಾಲವನ್ನು ಮನ್ನಾ ಮಾಡಲಾಗಿದೆ.
ಅಲ್ಲದೆ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯೂ ದೇಶದ ಬೇರೆ ಬೇರೆ ಕಡೆಗಳಲ್ಲಿ 2,000 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಇದನ್ನು ಗಾಂಧಿ ಕುಟುಂಬ ತಮ್ಮ ಸುಪರ್ದಿಗೆ ಪಡೆದಿದೆ ಎಂದು ಆರೋಪಿಸಿದ್ದಾರೆ.
ಯಾರ ಮೇಲೆ ಆರೋಪ?
ಗಾಂಧಿ ಕುಟುಂಬದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್‌ನ ಹಿಂದಿನ ಖಜಾಂಚಿ ಮೋತಿಲಾಲ್ ವೋರಾ, ಪ್ರಧಾನ ಕಾರ್ಯದರ್ಶಿಯಾಗಿದ್ದ ದಿ| ಆಸ್ಕರ್ ಫೆರ್ನಾಂಡಿಸ್, ಪತ್ರಕರ್ತ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಅವರ ಹೆಸರೂ ದೂರಿನಲ್ಲಿ ಇದೆ.
ಏನಿದು ದಿ ಅಸೋಸಿಯೇಟೆಡ್ ಜರ್ನಲ್?
1937ರಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ನ್ಯಾಶನಲ್ ಹೆರಾಲ್ಡ್ ಪತ್ರಿಕೆ ಶುರು ಮಾಡಿದ್ದರು. ಇದರ ಮುದ್ರಕರು ದಿ ಅಸೋಸಿಯೇಟೆಡ್ ಜರ್ನಲ್. ನೆಹರೂ ಅವರ ಜತೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸುತ್ತಿದ್ದ ಸುಮಾರು 5,000 ಮಂದಿ ಈ ಪತ್ರಿಕೆಯ ಇತರ ಪಾಲುದಾರರಾಗಿದ್ದರು. 2010ರ ವೇಳೆಗೆ ಈ ಪತ್ರಿಕೆಯ ಪಾಲುದಾರರ ಸಂಖ್ಯೆ 1,000ಕ್ಕೆ ಕುಸಿಯಿತು. ಆದರೆ 90 ಕೋಟಿ ರೂ. ಗೂ ಹೆಚ್ಚು ಸಾಲವಿದ್ದುದರಿಂದ ಪತ್ರಿಕೆಯನ್ನು 2008ರಲ್ಲೇ ಮುಚ್ಚಲಾಯಿತು.
ಯಂಗ್ ಇಂಡಿಯನ್ ಏನು?
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಶೇ.76ರಷ್ಟು ಪಾಲುದಾರಿಕೆ ಹೊಂದಿರುವ ಖಾಸಗಿ ಸಂಸ್ಥೆ. ಉಳಿದ ಶೇ.24ರಷ್ಟು ಷೇರನ್ನು ಆಸ್ಕರ್ ಫರ್ನಾಂಡೀಸ್ ಮತ್ತು ಮೋತಿಲಾಲ್ ವೋರಾ ಅವರು ಹೊಂದಿದ್ದರು.
ಕಾಂಗ್ರೆಸ್ ಸಂಬಂಧವೇನು?
ಸದ್ಯ ಈ ಪತ್ರಿಕೆ ಮುದ್ರಣ ರೂಪದಲ್ಲಿ ಬರುತ್ತಿಲ್ಲ. ಆದರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟಕ್ಕಾಗಿ ಸಹಕಾರ ಮಾಡಿದ ನಿಟ್ಟಿನಲ್ಲಿ ಪತ್ರಿಕೆಯನ್ನು ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಅಸೋಸಿಯೇಟೆಡ್ ಜರ್ನಲ್‌ಗೆ ಅನುಕೂಲ ಮಾಡಿಕೊಡಲು ಕಾಂಗ್ರೆಸ್‌ನಿಂದಲೇ 90 ಕೋಟಿ ರೂ. ಬಡ್ಡಿರಹಿತ ಸಾಲವನ್ನಾಗಿ ನೀಡಲಾಗಿತ್ತು.
ಹಗರಣವೇನಾಗಿದೆ?
ಸುಬ್ರಹ್ಮಣಿಯನ್ ಸ್ವಾಮಿ ಪ್ರಕಾರ, ಇದು 2,000 ಕೋಟಿ ರೂ.ಗಳ ಹಗರಣ. 2010ರಲ್ಲಿ ಕಾಂಗ್ರೆಸ್, ಎಜೆಎಲ್‌ಗೆ 90 ಕೋಟಿ ರೂ. ಸಾಲವನ್ನೇನೋ ನೀಡಿತ್ತು. ಆದರೆ ಅದು ವಾಪಸ್ ನೀಡಲು ಆಗಲಿಲ್ಲ. ಹೀಗಾಗಿ ಎಲ್ಲ ಹಣವನ್ನು ಸೋನಿಯಾ ಮತ್ತು ರಾಹುಲ್ ನೇತೃತ್ವದ ಯಂಗ್ ಇಂಡಿಯಾಗೆ ವರ್ಗಾವಣೆ ಮಾಡಿತು. ಇದಕ್ಕೆ ಬದಲಾಗಿ, ಯಂಗ್ ಇಂಡಿಯಾ ಕಡೆಯಿಂದ ಎಜಿಎಲ್‌ಗೆ 50 ಲಕ್ಷ ರೂ. ನೀಡಲಾಯಿತು. ಆದರೆ ಸ್ವಾಮಿ ಅವರು ಹೇಳುವುದು, ಕೇವಲ 50 ಲಕ್ಷ ರೂ. ಕೊಟ್ಟು ಇಡೀ ನ್ಯಾಶನಲ್ ಹೆರಾಲ್ಡ್ ಅನ್ನು ಖರೀದಿಸಲಾಗಿದೆ. ಆದರೆ ಇದು ಸಾರ್ವಜನಿಕ ಆಸ್ತಿ. ಇದನ್ನು ರಿಯಲ್ ಎಸ್ಟೇಟ್ ಆಸ್ತಿಯಂತೆ ಪರಿಗಣಿಸಲಾಗಿದೆ. ಅಲ್ಲದೆ, ಎಜೆಎಲ್‌ಗೆ ಕಾಂಗ್ರೆಸ್ ವತಿಯಿಂದ ವಾಣಿಜ್ಯ ಆಸ್ತಿಗೆ ಸಾಲ ನೀಡುವಂತಿರಲಿಲ್ಲ. ಆದರೂ ಕೊಡಲಾಗಿತ್ತು. ಈ ಆಸ್ತಿಯ ಮೌಲ್ಯವೇ 2,000 ಕೋಟಿ ರೂ.ನಷ್ಟಿದೆ.
ಕೋರ್ಟ್ ಏನು ಹೇಳಿದೆ?
ಮೊದಲಿಗೆ 2014ರಲ್ಲಿ ಗಾಂಧಿ ಕುಟುಂಬಕ್ಕೆ ಕೋರ್ಟ್ ಸಮನ್ಸ್ ನೀಡಿತ್ತು. ಅಲ್ಲದೆ, ಯಂಗ್ ಇಂಡಿಯಾ ವಿರುದ್ಧ ಸಾರ್ವಜನಿಕರ ಹಣವನ್ನು ಖಾಸಗಿ ಬಳಕೆಗಾಗಿ ಉಪಯೋಗಿಸಿಕೊಳ್ಳಲಾಗಿದೆ ಎಂದು ಮೆಟ್ರೋಪಾಲಿಟನ್ ಕೋರ್ಟ್ ಹೇಳಿತ್ತು. ಜತೆಗೆ ಈ ಆರೋಪಗಳನ್ನು ಪ್ರಶ್ನಿಸುವ ಹಕ್ಕು ಗಾಂಧಿ ಕುಟುಂಬಕ್ಕಿದೆ ಎಂದೂ ಹೇಳಿತ್ತು. ಈ ಸಮನ್ಸ್ ಪ್ರಶ್ನಿಸಿ ಕಾಂಗ್ರೆಸ್ ನಾಯಕರು, ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಅದು ಸ್ಥಳೀಯ ಕೋರ್ಟ್ ನೀಡಿದ್ದ ಸಮನ್ಸ್‌ಗೆ ತಡೆ ನೀಡಿತ್ತು. 2016ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಾಗಿ, ಅದು ಸೋನಿಯಾ ಮತ್ತು ರಾಹುಲ್ ಗಾಂಧಿಯವರಿಗೆ ಈ ಪ್ರಕರಣ ಕುರಿತಂತೆ ವಿಚಾರಣೆ ಎದುರಿಸುವಂತೆ ಸೂಚಿಸಿತ್ತು. ಆದರೆ ಕೋರ್ಟ್‌ಗೆ ಖುದ್ದು ಹಾಜರಾಗಬೇಕಿಲ್ಲ ಎಂದೂ ಹೇಳಿತ್ತು.
ಎಜೆಎಲ್ ಆಸ್ತಿ ಎಲ್ಲೆಲ್ಲಿದೆ?
ದಿಲ್ಲಿ, ಮುಂಬಯಿ, ಪಾಟ್ನಾ ಮತ್ತು ಪಂಚಕುಲದಲ್ಲಿ ಎಜೆಎಲ್ ಆಸ್ತಿ ಇದೆ. ಇದರ ಮೌಲ್ಯ ಸುಮಾರು 2 ಸಾವಿರ ಕೋಟಿ ರೂ.
ಇ.ಡಿ. ತನಿಖೆ ಎಲ್ಲಿವರೆಗೆ ಸಾಗಿದೆ?
2014ರಲ್ಲೇ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದೆ. 2015ರ ಆಗಸ್ಟ್‌ನಲ್ಲಿ ಈ ಪ್ರಕರಣದ ತನಿಖೆಯನ್ನು ಮತ್ತೆ ಆರಂಭಿಸಲಾಗಿತ್ತು. ಆ ವರ್ಷವೇ ಪಟಿಯಾಲಾ ಕೋರ್ಟ್‌ನಿಂದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಜಾಮೀನು ಪಡೆದಿದ್ದಾರೆ. ತನಿಖೆ ಮುಂದುವರಿದಿದ್ದು, 2020ರಲ್ಲಿ ಮುಂಬಯಿಯ ಬಾಂದ್ರಾದಲ್ಲಿರುವ 9 ಅಂತಸ್ತುಗಳ ಕಟ್ಟಡದ ಆಂಶಿಕ ಭಾಗವನ್ನು ಇ.ಡಿ. ತನ್ನ ವಶಕ್ಕೆ ತೆಗೆದುಕೊಂಡಿದೆ. ಇದರ ಮೌಲ್ಯವೇ 120 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.