ಕಲ್ಲು ಸಕ್ಕರೆ: ಗೆಳೆಯನ ರೂಪದಲ್ಲಿ ದೇವರು ನೆರವಿಗೆ ಬಂದಿದ್ದ!
Team Udayavani, Apr 23, 2023, 8:06 AM IST
ದಿಲ್ಲಿಯಲ್ಲಿರುವ ಅಂಚಲ್ ಶರ್ಮ ವಾರದ ಹಿಂದೆ ಫೋನ್ ಮಾಡಿ- ‘ಸರ್, ಆನಂದ್ ಮಿಶ್ರಾ ಎಂಬ ಐಪಿಎಸ್ ಅಧಿಕಾರಿ ಇದ್ದಾರೆ. ಡೆಪ್ಯುಟಿ ಸೂಪರಿಂಟೆಂಡೆಂಟ್ ಆಗಿರುವ ಅವರು ಅಸಹಾಯಕರ ಪಾಲಿನ ಅಣ್ಣಯ್ಯ. ಕೊಳೆಗೇರಿಯ ಮಕ್ಕಳ ಪಾಲಿನ ಆಪ್ತಬಂಧು. ಕ್ಯಾನ್ಸರ್ ಗೆದ್ದವರು ಎಂಬ ಹೆಗ್ಗಳಿಕೆಯೂ ಅವರದ್ದು. ಅವರ ಜತೆಗೊಮ್ಮೆ ಮಾತಾಡಿ, ನಿಮಗೊಂದು ಸ್ಟೋರಿ ಸಿಗಬಹುದು, ಅಂದು ನಂಬರ್ ಕೊಟ್ಟರು. ಎರಡು ದಿನಗಳ ಅನಂತರ ಮಾತಿಗೆ ಸಿಕ್ಕ ಆನಂದ್ ಮಿಶ್ರಾ, ತೆರೆದಿಟ್ಟ ಹೋರಾಟದ ಬದುಕಿನ ಕಥೆ ಇಲ್ಲಿದೆ, ಓದಿಕೊಳ್ಳಿ:
***
ಉತ್ತರಪ್ರದೇಶ ರಾಜ್ಯದ ಬುಂದೇಲಖಂಡ್ ಜಿಲ್ಲೆಗೆ ಸೇರಿದ್ದ ಒಂದು ಪುಟ್ಟ ಹಳ್ಳಿ ನಮ್ಮೂರು. ಅಪ್ಪ, ಪುಟ್ಟ ಅಂಗಡಿ ಇಟ್ಕೊಂಡಿದ್ರು. ನಾವು ನಾಲ್ಕು ಜನ ಮಕ್ಕಳು. ಮನೆಯಲ್ಲಿ ಬಡತನವಿತ್ತು. ಅದು ಗೊತ್ತಾಗದಂತೆ ನಮ್ಮನ್ನು ಬೆಳೆಸಿದರು. ಚೆನ್ನಾಗಿ ಓದಿಸಿದರು. ಪತ್ನಿ, ಇಬ್ಬರು ಮಕ್ಕಳ ಚಿಕ್ಕ ಕುಟುಂಬ ನನ್ನದು. ಹೆಂಡತಿಯೂ ಪೊಲೀಸ್ ಆಫೀಸರ್. ಆಕೆಗೆ ಮಥುರಾದಲ್ಲಿ ನೌಕರಿ. ಮಕ್ಕಳೊಂದಿಗೆ ಆಕೆ ಅಲ್ಲಿದ್ದಳು. ನಾನು ದಿಲ್ಲಿಯಲ್ಲಿದ್ದೆ.
ಅದು 2020ರ ಮಾರ್ಚ್ ತಿಂಗಳು. ಕೊರೊನಾ ಹಾವಳಿಗೆ ಇಡೀ ದೇಶವೇ ತತ್ತರಿಸಿ ಹೋಗಿದ್ದ ಸಂದರ್ಭ ಅದು. ಪೊಲೀಸ್ ಇಲಾಖೆಯ ಸಿಬಂದಿ ವಿಪರೀತ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಅದು. ಆಗಲೇ ಅದೊಮ್ಮೆ ಕತ್ತಿನ ಬಳಿ ಏನೋ ಸಣ್ಣ ಗಂಟು ಆಗಿದ್ದಂತೆ ಕಾಣಿಸಿತು. ಬಹುಶಃ ಸೊಳ್ಳೆ ಕಚ್ಚಿದ್ದಕ್ಕೆ ಆಗಿರುವ ಗುಳ್ಳೆ ಇದು ಅಂದುಕೊಂಡು ನಿರ್ಲಕ್ಷಿಸಿದೆ. ತಿಂಗಳು ಕಳೆದ ಅನಂತರವೂ ಆ ಗಂಟು ಹಾಗೇ ಉಳಿಯಿತು. ಸ್ವಲ್ಪ ದೊಡ್ಡದಾದಂ ತೆಯೂ ಕಾಣಿಸಿತು. ತತ್‌ಕ್ಷಣ ಫ್ಯಾಮಿಲಿ ಡಾಕ್ಟರ್‌ಗೆ ವಿಷಯ ತಿಳಿಸಿದೆ. ಅವರು ಐದಾರು ಬಗೆಯ ಟೆಸ್ಟ್ ಬರೆದುಕೊಟ್ಟು ಅವುಗಳ ರಿಪೋರ್ಟ್ ತರಲು ಹೇಳಿದರು. ರಿಪೋರ್ಟ್ ನೋಡಿದ ವೈದ್ಯರು “ಸಣ್ಣ ಗುಳ್ಳೆ ಆಗಿದೆ ಅಷ್ಟೇ, ಚಿಂತಿಸುವ ಅಗತ್ಯವಿಲ್ಲ’ ಅಂದರು. ಡಾಕ್ಟರ್ ಮಾತು ಕೇಳಿ ರಿಲ್ಯಾಕ್ಸ್ ಆದೆ.
ಇದಾಗಿ ಮೂರು ದಿನ ಕಳೆದಿತ್ತಷ್ಟೆ. ಅವತ್ತು ಇದ್ದಕ್ಕಿದ್ದಂತೆ ಒಂದು ಫೋನ್ ಬಂತು. ಆ ತುದಿಯಲ್ಲಿದ್ದವನು ನನ್ನ ಹೈಸ್ಕೂಲ್ ಸಹಪಾಠಿ. 1999ರ ಅನಂತರ ಅವನನ್ನು ನೋಡಿಯೇ ಇರಲಿಲ್ಲ. ಅವನು ಡಾಕ್ಟರ್ ಆಗಿದ್ದಾನೆ ಅಂತ ಗೆಳೆಯರು ಹೇಳಿದ್ದರು. ಅಂಥವನು ಫ್ರೆಂಡ್ ಹತ್ರ ನಂಬರ್ ತಗೊಂಡು ದಿಢೀರ್ ಕಾಲ್ ಮಾಡಿದ್ದ. ದಿಲ್ಲಿಯ ರಾಜೀವ ಗಾಂಧಿ ಆಸ್ಪತ್ರೆಯಲ್ಲಿ ಇದ್ದೇನೆ. ಇಎನ್‌ಟಿ ವಿಭಾಗದ ಸರ್ಜನ್ ಆಗಿದ್ದೇನೆ ಅಂದ! ಕುಶಲೋಪರಿಯ ಬಳಿಕ ಅವನಿಗೆ ನನ್ನ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿದೆ. ಎಲ್ಲ ರಿಪೋರ್ಟ್ ತರಿಸಿಕೊಂಡು ನೋಡಿ ತತ್‌ಕ್ಷಣ ಕಾಲ್ ಮಾಡಿ ಹೇಳಿದ: “ಎರಡು ಗಂಟುಗಳು ಕಾಣಿಸ್ತಿವೆ. ದೊಡ್ಡ ಗಂಟಿನ ಬಗ್ಗೆ ಮಾತ್ರ ರಿಪೋರ್ಟ್ ಇದೆ. ಚಿಕ್ಕ ಗಂಟಿನ ಬಗ್ಗೆ ಇಲ್ಲ. ಅದರ ಚೆಕಪ್ ಆಗಬೇಕು. ನಮ್ಮಲ್ಲಿಯೇ ವ್ಯವಸ್ಥೆ ಮಾಡಿಸ್ತೇನೆ, ಇಲ್ಲಿಗೇ ಬಂದುಬಿಡು… “ಅಲ್ಲಿಗೆ ಹೋಗಿ ಚೆಕ್ ಮಾಡಿಸಿದಾಗ, ನನಗೆ ಥೈರಾಯಿಡ್ ಕ್ಯಾನ್ಸರ್ ಇದೆ ಅಂತ ಗೊತ್ತಾಯ್ತು!
ಈ ವಿಷಯ ತಿಳಿದಾಗ ಶಾಕ್ ಆಯ್ತು. ನಂಬಿಕೆಯೇ ಬರಲಿಲ್ಲ. ಕಾರಣ ಯಾವ ಸಮಸ್ಯೆಯೂ ನನ್ನನ್ನು ಕಾಡಿರಲಿಲ್ಲ. ಮಿಗಿಲಾಗಿ, ತುಂಬಾ ಶಿಸ್ತಿನ ಬದುಕು ನನ್ನದಾಗಿತ್ತು. ಅಂಥವನಿಗೆ ಕ್ಯಾನ್ಸರ್ ಬರಲು ಹೇಗೆ ಸಾಧ್ಯ? ಅಂದುಕೊಂಡೆ. ಮೆಡಿಕಲ್ ರಿಪೋರ್ಟ್ ತಪ್ಪಿರಬಹುದು ಎಂಬ ಅನುಮಾನದಿಂದ ಎಐಐಎಮ್‌ಎಸ್ ಆಸ್ಪತ್ರೆಯಲ್ಲಿ ಮತ್ತೂಮ್ಮೆ ಚೆಕ್ ಮಾಡಿಸಿದೆ. ಅಲ್ಲಿಯೂ ಪಾಸಿಟಿವ್ ರಿಪೋರ್ಟ್ ಬಂತು. “ಥೈರಾಯಿಡ್ ಕ್ಯಾನ್ಸರ್ ಬರಲು ಇಂಥದೇ ಎಂಬ ಕಾರಣಗಳಿಲ್ಲ. ಆಪರೇಶನ್ ಮಾಡುವುದೇ ಪರಿಹಾರದ ದಾರಿ. ಅಂದರು ಡಾಕ್ಟರ್. ಕೋವಿಡ್‌ನ ಕಾರಣಕ್ಕೆ ಆಗ ಯಾವ ಆಸ್ಪತ್ರೆಯಲ್ಲೂ ಆಪರೇಶನ್ ಮಾಡ್ತಾ ಇರಲಿಲ್ಲ. ಕೇವಲ ವಿವಿಐಪಿಗಳಿಗೆ ಮಾತ್ರ ಆಪರೇಶನ್ ಮಾಡ್ತಾ ಇದ್ರು. ಈಗ ಮಾಡುವುದೇನು ಅಂತ ಸ್ವಲ್ಪ ಹೊತ್ತು ಯೋಚಿಸಿ, ಮತ್ತೆ ನನ್ನ ಡಾಕ್ಟರ್ ಗೆಳೆಯನಿಗೆ ಎಲ್ಲ ವಿಷ್ಯ ತಿಳಿಸಿದೆ. ಅವನು-ಇಲ್ಲೇ ಆಪರೇಶನ್‌ಗೆ ವ್ಯವಸ್ಥೆ ಮಾಡಿಸ್ತೇವೆ, ಬಂದುಬಿಡು’ ಅಂದ. ದೇವರು ಆ ಗೆಳೆಯನ ರೂಪದಲ್ಲಿ ನನ್ನ ನೆರವಿಗೆ ಬಂದಿದ್ದ!
ಈ ವೇಳೆಗೆ ನಾನು ನೌಕರಿಗೆ ಸೇರಿ 10 ವರ್ಷ ಕಳೆದಿತ್ತು. ಹೆಂಡತಿಗೂ ನೌಕರಿ ಇದ್ದುದರಿಂದ ಹಣದ ಸಮಸ್ಯೆ ಇರಲಿಲ್ಲ. ಕ್ಯಾನ್ಸರ್ ಇದೆ ಅಂತ ಗೊತ್ತಾದಾಗ ನನಗೂ ವಿಪರೀತ ಭಯವಾಗಲಿಲ್ಲ. ಥೈರಾಯಿಡ್ ಕ್ಯಾನ್ಸರ್ ಇದೆ ಅಂತ ಗೊತ್ತಾಗಿದ್ದು ಎಪ್ರಿಲ್ 4 ರಂದು. ಅದೇ ತಿಂಗಳ 24ರಂದು ಆಪರೇಶನ್‌ಗೆ ದಿನ ಫಿಕÕ… ಮಾಡಿದ್ರು. ಅಕಸ್ಮಾತ್ ಏನಾದ್ರೂ ಹೆಚ್ಚು ಕಡಿಮೆ ಆಗಿಬಿಟ್ರೆ ಅನ್ನಿಸಿದಾಗ ಹೆಂಡತಿಗೆ ಮತ್ತು ಬೆಂಗಳೂರಿನಲ್ಲಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿರುವ ನಮ್ಮ ದೊಡ್ಡಣ್ಣನಿಗೆ ವಿಷಯ ತಿಳಿಸಿದೆ. ವಿಷಯ ಕೇಳಿದ ತತ್‌ಕ್ಷಣ ನನ್ನ ಹೆಂಡತಿಗೂ ಶಾಕ್ ಆಯಿತು. ತತ್‌ಕ್ಷಣ ಫೋನ್ ಕಟ್ ಮಾಡಿಬಿಟ್ಲು. ಸ್ವಲ್ಪ ಹೊತ್ತಿನ ಅನಂತರ ಕಾಲ್ ಮಾಡಿ-“ಹೆದರಬೇಡಿ, ನಿಮ್ಮ ಜತೆಗೆ ನಾವಿತೇìವೆ. ಏನು ಬಂದ್ರೂ ಫೇಸ್ ಮಾಡೋಣ. ನಾನು ರಜೆ ಹಾಕಿ ಮಕ್ಕಳನ್ನು ಕರ್ಕೊಂಡು ಬಂದು ಬಿಡ್ತೇನೆ’ ಅಂದಳು. “ನೀವು ಬರೋದು ಬೇಡ. ಕೋವಿಡ್ ಅಪಾಯಕಾರಿ ಸ್ಟೇಜ್ ತಲುಪಿದೆ ಅಂದು ಕಾಲ್ ಕಟ್ ಮಾಡಿದೆ!
ಆಪರೇಶನ್‌ಗೆ 20 ದಿನ ಬಾಕಿಯಿತ್ತು. ಆಪರೇಶನ್ ಆದಮೇಲೆ ರಜೆ ತಗೊಳ್ಳಲೇಬೇಕಿತ್ತು. ಹಾಗಾಗಿ ಅದಕ್ಕೂ ಮೊದಲು ರಜೆ ಕೇಳಲಿಲ್ಲ. ಎ. 23ರಂದೂ ರಾತ್ರಿಪಾಳಿ ಮಾಡಿದೆ. ಕಾರಣ, ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಜಾಗ ಅತೀಸೂಕ್ಷ್ಮಪ್ರದೇಶವಾಗಿತ್ತು. ಆಪರೇಶನ್‌ಗೆ ಹೋಗುವಾಗ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ- “15 ದಿನ ರಜೆ ಬೇಕು ಸರ್..’ ಅಂದು, ಸಂಕ್ಷಿಪ್ತವಾಗಿ ವಿಷಯ ತಿಳಿಸಿದೆ. ಆಗ ನನ್ನ ಸೀನಿಯರ್ಸ್-“ಇವತ್ತು ಆಪರೇಶನ್ ಅಂತೀರ, ನಿನ್ನೆ ನೈಟ್ ಶಿಫ್ಟ್ ಮಾಡಿದ್ದೀರಾ, ನಿಮಗೆ ಬುದ್ಧಿ ಬೇಡವಾ?’ ಅಂತೆಲ್ಲ ಬೈದು, ರಜೆ ಕೊಟ್ಟರು.
ಆಪರೇಶನ್ ಯಶಸ್ವಿಯಾಯಿತು. ಬೆಳಗ್ಗೆ ಎದ್ದು ನೋಡುತ್ತೇನೆ, ಎಲ್ಲ ಪತ್ರಿಕೆಗಳಲ್ಲೂ ಮುಖಪುಟದಲ್ಲೇ ನನ್ನ ಸುದ್ದಿ! ಆಸ್ಪತ್ರೆಯ ಪಿಆರ್‌ಓ ಸುದ್ದಿಯನ್ನು ಲೀಕ್ ಮಾಡಿಬಿಟ್ಟಿದ್ದ. ಥೈರಾಯಿಡ್ ಗ್ರಂಥಿಯನ್ನು ತೆಗೆಯಲಾಗಿತ್ತು. ಹಾಗಾಗಿ ನನಗೆ ಮಾತಾಡಲು ಆಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಹೆಂಡತಿ ವೀಡಿಯೋ ಕಾಲ್ ಮಾಡಿದಳು. ಅವಳೊಂದಿಗೆ ವಾರಗಟ್ಟಲೆ ಸಂಜ್ಞೆಯಲ್ಲೇ ಮಾತುಕತೆ! ಆಪರೇಶನ್ ಆಗುವವರೆಗೂ ಏನೂ ಚಿಂತೆ ಇರಲಿಲ್ಲ. ಅನಂತರವೇ ಕಷ್ಟಗಳು ಜತೆಯಾದವು. ರಾತ್ರಿ ಹೊತ್ತು ನಿದ್ರೆ ಬರುತ್ತಿರಲಿಲ್ಲ. ಹಗಲಿನಲ್ಲಿ ಸಮಯ ಹೋಗುತ್ತಿರಲಿಲ್ಲ. ಕೋವಿಡ್ ಕಾರಣಕ್ಕೆ ಮಾತಿಗೂ ಜನ ಸಿಗುತ್ತಿರಲಿಲ್ಲ. ಎಷ್ಟು ದಿನ ಹೀಗೆ ಇರಬೇಕು ಅಂತ ಯೋಚಿಸಿಯೇ ಡಿಪ್ರಶನ್‌ಗೆ ಹೋಗಿಬಿಟ್ಟೆ. ಹೀಗಿದ್ಧಾಗಲೇ ನನ್ನ ಹೆಂಡತಿ ಇದ್ದಕ್ಕಿದ್ದಂತೆ ಮಕ್ಕಳೊಡನೆ ಬಂದುಬಿಟ್ಟಳು. ಮನಸ್ಸು ತಡೆಯಲಿಲ್ಲ, ಬಂದುಬಿಟ್ಟೆ ಅಂದಳು. ನನಗಾಗಿ ಹಂಬಲಿಸುವವರು, ನನ್ನ ಮೇಲೆ ಡಿಪೆಂಡ್ ಆಗಿರುವವರು ಇದ್ಧಾರೆ ಅನ್ನಿಸಿದಾಗ ಮನುಷ್ಯನಿಗೆ ತುಂಬಾ ಖುಷಿ ಆಗುತ್ತೆ. ಹೆಂಡತಿ, ಮಕ್ಕಳನ್ನು ಕಂಡಾಗ ನನಗೂ ಹಾಗೇ ಅನ್ನಿಸ್ತು. ಅದನ್ನು ತೋರಗೊಡದೆ, ಈ ಕೋವಿಡ್ ಕಾಲದಲ್ಲಿ ಯಾಕೆ ಬಂದೆ ಅಂತೆಲ್ಲ ಜೋರು ಮಾಡಿದೆ. ಹೆಂಡತಿ ಮೂರು ದಿನವಿದ್ದು ಕರ್ತವ್ಯಕ್ಕೆ ವಾಪಸಾದಳು.
ರಜೆ ಮುಗಿಯುತ್ತಿದ್ದಂತೆ ಡ್ನೂಟಿಗೆ ಹಾಜರಾದೆ. ನನ್ನ ಹಿರಿಯ ಅಧಿಕಾರಿಗಳು ಬೈದರು. ನಾನು ನನ್ನ ಕಷ್ಟ ಹೇಳಿಕೊಂಡೆ. “ನೀವು ವರ್ಕ್ ಫ್ರೇಮ್ ಹೋಂ ತಗೊಳ್ಳಿ’ ಅಂದರು. ಒಪ್ಪಿಕೊಂಡೆ. ಆರು ತಿಂಗಳ ಅನಂತರ ನನ್ನನ್ನು ಚೆಕ್ ಮಾಡಿದ ವೈದ್ಯರು, ಕ್ಯಾನ್ಸರ್ ಕಣಗಳು ನಾಶವಾಗಿವೆ, ನೀವು ಕ್ಯಾನ್ಸರ್ ಗೆದ್ದಿದ್ದೀರಿ ಅಂದರು.
ಚಿಕ್ಕಂದಿನಿಂದ ನನಗೆ, ಮುಂದೊಂದು ದಿನ ನಾನು ದಿಢೀರ್ ಫೇಮಸ್ ಆಗಬೇಕು, ವಿಐಪಿಗಳನ್ನು ಭೇಟಿ ಮಾಡಬೇಕು. ಪತ್ರಿಕೆಗಳಲ್ಲಿ ನನ್ನ ಸುದ್ದಿ ಬರೋದನ್ನು ನೋಡಬೇಕು ಅಂತೆಲ್ಲ ಆಸೆಯಿತ್ತು. ಕ್ಯಾನ್ಸರ್ ಗೆದ್ದ ಕಾರಣಕ್ಕೆ, ನನ್ನ ಕನಸು ನನಸಾಯಿತು! ಪೇದೆಯಿಂದ ಕಮಿಷನರ್‌ವರೆಗೂ ನನ್ನ ಹೆಸರು ಗೊತ್ತಾಗಿ ಹೋಯಿತು. ನನ್ನ ಪಾಲಿನ ಹೀರೋಗಳಂತಿದ್ದ ಹಲವರು ತಾವಾವ ಗಿಯೇ ಕಾಲ್ ಮಾಡಿ, ಶುಭ ಕೋರಿದರು. ಸ್ವಾರಸ್ಯದ ಸಂಗತಿ ಮತ್ತೂಂದಿದೆ: ಅಸ್ಸಾಂನಲ್ಲಿ ನನ್ನದೇ ಹೆಸರಿನ ಸೀನಿಯರ್ ಐಪಿಎಸ್ ಅಧಿಕಾರಿಯೊಬ್ಬರು ಕಾಲ್ ಮಾಡಿ- “ನಿಮಗೆ ಬರಬೇ ಕಿದ್ದ ಅದೆಷ್ಟೋ ಕಾಲ್ ನನಗೆ ಬಂದಿವೆ. ಎಲ್ಲರೂ ಧೈರ್ಯ ಹೇಳಿದ್ಧಾರೆ. ಅನುಕಂಪ ತೋರಿಸಿದ್ಧಾರೆ. ಅದನ್ನೆಲ್ಲ ಕೇಳಿ ಎಂಜಾಯ್ ಮಾಡಿದ್ದೇನೆ. ನಾನು ಅವನಲ್ಲ ಎಂದು ಯಾರಿಗೂ ಹೇಳಿಲ್ಲ! ಎಫ್ಎಂ ರೇಡಿಯೋದವರು ಸಂದರ್ಶನ ಕೇಳಿದರು. ಆದರೆ ಅದನ್ನು ನಾನು ಕೊಡಲು ಆಗಲ್ಲ, ನೀವೇ ಬರಬೇಕು…’ ಅಂದರು.
ಕ್ಯಾನ್ಸರ್‌ನ ಕಾರಣದಿಂದ ನನಗೆ ಬದುಕು ಅಂದ್ರೆ ಏನೆಂದು ಅರ್ಥವಾಯಿತು. ಒತ್ತಡದ ಜೀವನಶೈಲಿಯಿಂದಲೂ ಕಾಯಿಲೆ ಬರ್ತದೆ ಎಂಬ ಸೂಕ್ಷ್ಮ ತಿಳಿಯಿತು. ಬದುಕಿರುವಷ್ಟು ದಿನ ನಾಲ್ಕು ಮಂದಿಗೆ ಸಹಾಯ ಮಾಡಬೇಕು ಎಂಬ ಆಸೆ ನನ್ನದು. ಅದರಲ್ಲೂ ಕ್ಯಾನ್ಸರ್ ರೋಗಿಗಳಿಗೆ ಯಾವುದೇ ಸಹಾಯ ಮಾಡಲೂ ನಾನು ರೆಡಿ. ಯಾವುದೇ ಕಾಯಿಲೆ ಬಂದರೂ ಕುಗ್ಗಬೇಡಿ, ಧೈರ್ಯದಿಂದ ಎದುರಿಸಿ ಅನ್ನುವುದೇ ಕ್ಯಾನ್ಸರ್ ಗೆದ್ದವನಾಗಿ ನನ್ನ ಸಂದೇಶ ಅನ್ನುತ್ತಾ ತಮ್ಮ ಹೋರಾಟದ ಬದುಕಿನ ಕಥೆಗೆ ಫುಲ್ ಸ್ಟಾಪ್ ಹಾಕಿದರು ಆನಂದ್ ಮಿಶ್ರಾ.
ಕಷ್ಟದಲ್ಲಿರುವವರಿಗೆ ನೆರವಾಗಲು, ನೊಂದವರಿಗೆ ನೆರಳಾಗಿ ನಿಲ್ಲಲು ನಾನು ಸದಾ ರೆಡಿ ಅನ್ನುವ ಈ ತಾಯಿಮನಸ್ಸಿನ ಅಧಿಕಾರಿಗೆ ಅಭಿನಂದನೆ ಹೇಳಲು- mailto:[email protected].
~ ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.