ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ ಕಲಿಸಿತು ಜೀವನ ಪಾಠ…
Team Udayavani, Mar 22, 2020, 6:45 AM IST
ಅಲ್ಲೆಲ್ಲೋ ಮರೆಯಲ್ಲಿ ನಿಂತು ಹೂಂಕರಿಸುತ್ತಿರುವ ಕೋವಿಡ್- 19 ಕಾಟಕ್ಕೆ ಇಡೀ ಜಗತ್ತು ತತ್ತರಿಸಿದೆ. ಎಲ್ಲರಿಗೂ ಭಯ, ದಿಗಿಲು, ಆತಂಕ. ಮುಂದೇನು ಮಾಡಬೇಕೆಂದೇ ತೋಚದಂಥ ಪರಿಸ್ಥಿತಿ. ಸಂಕಟಗಳೇ ಸಾಲುಗಟ್ಟಿ ನಿಂತಿರುವ ಈ ಸಂದರ್ಭದಲ್ಲಿ, ಸವಾಲುಗಳನ್ನು ಮೆಟ್ಟಿ ನಿಂತವರ ಕಥೆಯೊಂದನ್ನು ಓದಬೇಕು. ಆ ನೆಪದಲ್ಲಾದರೂ ಕೋವಿಡ್- 19 ಕಾಟದಿಂದ ಕ್ಷಣಕಾಲ ಮುಕ್ತಿ ಪಡೆಯಬೇಕು ಅಂದುಕೊಂಡಾಗಲೇ, ಅಪರಂಜಿಯಂಥ ಕಥೆಯೊಂದು ಕೈ ಜಗ್ಗಿತು…
ಈಕೆಯ ಹೆಸರು ಮಾರಿಸಲ್ ಅಪಾಟೆನ್. ಇದನ್ನು ಮೇರಿಸೆಲ್ ಅಪಾಟೆನ್ ಎಂದು ಓದಿಕೊಂಡರೂ ನಡೆಯುತ್ತದೆ. ಈಕೆ ಇರುವುದು ಫಿಲಿಪ್ಪೀನ್ಸ್ ರಾಷ್ಟ್ರದ ಮನಿಲಾ ನಗರದಲ್ಲಿ. ಮಾರ್ಲೋ ನೇವಿಗೇಶನ್ ಎಂಬ ಸ್ಟಾರ್ ಹೋಟೆಲಿನಲ್ಲಿ ಈಕೆ ಹೆಡ್ ಕುಕ್ ಆಗಿ ಕೆಲಸ ಮಾಡುತ್ತಾಳೆ. ಹೆಂಗಸು ಅಂದಮೇಲೆ ಆಕೆಗೆ ತೀರಾ ಸಹಜ ಎಂಬಂತೆ ಅಡುಗೆಯ ಕಲೆ ಒಲಿದಿರುತ್ತದೆ. ಹೀಗಿರುವಾಗ ಇಪ್ಪತ್ತೆರಡು ವರ್ಷದ ಹುಡುಗಿಯೊಬ್ಬಳು ಚೀಫ್ ಕುಕ್ ಆಗಿರುವುದರಲ್ಲಿ ವಿಶೇಷವೇನು ಬಂತು ಅಂದಿರಾ?
ಇಲ್ಲಿ ಒಂದು ವಿಶೇಷ ಖಂಡಿತ ಇದೆ. ಏನೆಂದರೆ, ಅಪಾಟೆನ್‌ಗೆ ಎರಡೂ ಮುಂಗೈಗಳಿಲ್ಲ. ಅಂದರೆ, ಈಕೆ ಮೋಟುಕೈ ಸುಂದರಿ. ಅಡುಗೆ ಮನೆಯ ಕೆಲಸ ಅಂದಮೇಲೆ ಅಲ್ಲಿ ಕೈಗಳದ್ದೇ ದರ್ಬಾರು. ತರಕಾರಿ ಹೆಚ್ಚುವುದು, ಪಾತ್ರೆಗಳನ್ನು ಇಳಿಸುವುದು, ಅದರ ಮೇಲೆ ಪ್ಲೇಟ್ ಮುಚ್ಚುವುದು, ಸ್ಟವ್ ಹೊತ್ತಿಸುವುದು, ಅಡುಗೆ ಒಂದು ಹದಕ್ಕೆ ಬಂದ ಮೇಲೆ ಪಾತ್ರೆಯೊಳಗೆ ಸೌಟು ಹಾಕಿ ತಿರುಗಿಸುವುದು, ಉಪ್ಪು-ಸಪ್ಪೆ-ಖಾರ ಸರಿಯಾಗಿದೆಯಾ ಎಂದು ಟೇಸ್ಟ್ ನೋಡುವುದು… ಇಂಥ ಹತ್ತಾರು ಕೆಲಸಗಳಿಗೆ ಮುಂಗೈನ ನೆರವು ಬೇಕೇಬೇಕು. ಆದರೆ, ಈ ಹುಡುಗಿ ಅಪಾಟೆನ್, ಅಂಗೈಗಳು ಇಲ್ಲದಿದ್ದರೂ ಈ ಎಲ್ಲ ಕೆಲಸವನ್ನೂ ಮಾಡುತ್ತಾಳೆ.
ಎಡಗೈನ ತೋಳಿನ ಮಧ್ಯೆ ಚಾಕು ಸಿಕ್ಕಿಸಿಕೊಂಡು, ಟೇಬಲ್ ಮೇಲೆ ತರಕಾರಿಯನ್ನೂ, (ಅಗತ್ಯ ಬಂದಾಗ ಮಾಂಸವನ್ನೂ) ಗುಡ್ಡೆ ಹಾಕಿಕೊಂಡು ಚಕಚಕನೆ ಕತ್ತರಿಸುತ್ತಾಳೆ! ಪಾತ್ರೆಯನ್ನು ಎತ್ತಿ ಇಡಲು, ಸ್ಟವ್ ಮೇಲಿಂದ ಕೆಳಗೆ ಇಳಿಸಲು, ಸಾಸ್, ಕೆಚಪ್ ತುಂಬಿರುವ ಬಾಟಲಿಗಳ ಬಿರಡೆ ತೆಗೆಯಲು ಮಾತ್ರ ಈಕೆ ಬೇರೆಯವರ ಸಹಾಯ ಕೇಳುತ್ತಾಳೆ. ಇಷ್ಟು ಹೊರತುಪಡಿಸಿದರೆ, ಬೇರಿನ್ಯಾವ ಕೆಲಸಕ್ಕೂ ಈಕೆ ಬೇರೆಯವರ ಸಹಾಯ ಕೇಳುವುದಿಲ್ಲ.
ಈ ದೈಹಿಕ ವೈಕಲ್ಯ ಅಪಾಟೆನ್‌ಗೆ ಹುಟ್ಟಿನಿಂದಲೇ ಬಂದದ್ದಲ್ಲ. ಇದು ಕೇಡಿಗರ ಪಾತಕದಿಂದ ಆದದ್ದು. ಆ ದುರಂತಗಾಥೆಯ ಕಥೆ ಹೀಗೆ: ಫಿಲಿಪ್ಪೀನ್ಸ್ ದೇಶದ ಎರಡನೇ ದೊಡ್ಡ ನಗರ ಮಿಂಟಾನೋ. ಅಮ್ಮ, ಚಿಕ್ಕಪ್ಪ ಹಾಗೂ ಉಳಿದ ಕುಟುಂಬ ವರ್ಗದೊಂದಿಗೆ ಅಪಾಟೆನ್ ವಾಸವಾಗಿದ್ದುದ್ದು ಇದೇ ಮಿಂಟಾನೋ ನಗರಕ್ಕೆ ಸಮೀಪವಿರುವ ಒಂದು ಹಳ್ಳಿಯಲ್ಲಿ. ಅಪಾಟೆನ್‌ಗೆ ತಂದೆ ಇರಲಿಲ್ಲ. ತಾಯಿಯ ಒಡೆತನದಲ್ಲಿ ಒಂದು ಫಾರ್ಮ್ ಹೌಸ್ ಇತ್ತು. ಅಲ್ಲಿ ಬೆಳೆದ ತರಕಾರಿಯನ್ನು ಪೇಟೆಯಲ್ಲಿ ಮಾರುತ್ತಾ ಈ ಕುಟುಂಬ ನೆಮ್ಮದಿಯಾಗಿತ್ತು. ಹಣಕಾಸಿನ ವ್ಯವಹಾರ ಹಾಗೂ ಫಾರ್ಮ್ಹೌಸ್‌ನ ಉಸ್ತುವಾರಿಯನ್ನು ಅಪಾಟೆನ್‌ಳ ಚಿಕ್ಕಪ್ಪ ನೋಡಿಕೊಳ್ಳುತ್ತಿದ್ದ.
ದೇಶ ಯಾವುದಾದರೇನು? ಕೆಟ್ಟ ಮನಸ್ಸಿನ ಜನ ಎಲ್ಲ ಕಡೆಯೂ ಇರುತ್ತಾರೆ. ಫಿಲಿಪ್ಪೀನ್ಸ್ ಅದಕ್ಕೆ ಹೊರತಾಗಿರಲಿಲ್ಲ. ಯಜಮಾನನಿಲ್ಲದ ಮನೆ ಎಂಬುದು ಗ್ಯಾರಂಟಿಯಾಗಿತ್ತಲ್ಲ; ಆ ಕಾರಣ ಜೊತೆಗಿಟ್ಟುಕೊಂಡೇ ನೆರೆಹೊರೆಯಲ್ಲಿದ್ದ ಖದೀಮರು ಅಪಾಟೆನ್‌ಳ ತಾಯಿಗೆ ಬೆದರಿಕೆ ಹಾಕಲು ಶುರುಮಾಡಿದರು. ಕಡಿಮೆ ಬೆಲೆಯ ಪ್ರಸ್ತಾಪ ಮುಂದಿಟ್ಟು -“ಇಷ್ಟು ಕೊಡ್ತೇವೆ, ಫಾರ್ಮ್ಹೌಸ್ ಮಾರಿಬಿಡು’ ಎಂದರು. ಇಡೀ ಕುಟುಂಬಕ್ಕೆ ಆಧಾರವಾಗಿರುವುದೇ ಫಾರ್ಮ್ಹೌಸ್‌ನ ಉತ್ಪನ್ನ.
ಅದನ್ನು ಮಾರಾಟ ಮಾಡಿ ಹೋಗುವುದಾದರೂ ಎಲ್ಲಿಗೆ ಎಂದು ಯೋಚಿಸಿದ ಅಪಾಟೆನ್‌ಳ ತಾಯಿ- “ಯಾವುದೇ ಕಾರಣಕ್ಕೂ ತೋಟ ಮಾರುವುದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದಳು. ಈ ಸಂದರ್ಭದಲ್ಲಿ ಕುಟುಂಬದ ನೆರವಿಗೆ ಬಂದ ಅಪಾಟೆನ್‌ಳ ಚಿಕ್ಕಪ್ಪ, ತೋಟದ ಮೇಲೆ ಕಣ್ಣು ಹಾಕಿದ್ದ ಖದೀಮರ ಮುಂದೆ ನಿಂತು- ನಮ್ಮ ಜಮೀನಿನ ತಂಟೆಗೆ ಬರಬೇಡಿ. ಇಷ್ಟು ಹೇಳಿದ ಮೇಲೂ ನೀವು ಮುಂದುವರಿದರೆ ಪರಿಸ್ಥಿತಿ ಚನ್ನಾಗಿರೋದಿಲ್ಲ ಅಂದುಬಿಟ್ಟ.
ಈ ಮಾತು ಕೇಳಿದ ದಿನದಿಂದಲೇ ಕೇಡಿಗರ ವಕ್ರದೃಷ್ಟಿ ಅಪಾಟೆನ್‌ಳ ಚಿಕ್ಕಪ್ಪನ ಮೇಲೆ ಬಿತ್ತು. ಅಪಾಟೆನ್‌ಳ ಕುಟುಂಬದ ಆಸ್ತಿ ಹೊಡೆಯಬೇಕೆಂದರೆ ಮೊದಲು ಇವನನ್ನೇ ಬಲಿಹಾಕಬೇಕು ಎಂದು ನಿರ್ಧರಿಸಿ ಅದಕ್ಕಾಗಿ ಸಂಚು ಮಾಡಿದರು.
ಅದು 2000ನೇ ಇಸವಿಯ ಸೆಪ್ಟೆಂಬರ್ 25ರ ಸೋಮವಾರ. ಅಪಾಟೆನ್‌ಗೆ ಆಗ ಹನ್ನೊಂದು ವರ್ಷ. ಮರುದಿನವೇ ಆಕೆಯ ಹುಟ್ಟುಹಬ್ಬವಿತ್ತು. ಆ ಖುಷಿಯಲ್ಲಿ ಚಿಕ್ಕಪ್ಪನೊಂದಿಗೆ ಅದೂ ಇದೂ ಮಾತಾಡುತ್ತಾ ಜಮೀನಿಗೆ ಸಮೀಪವಿದ್ದ ಹೊಳೆಯ ಹಾದಿಯಲ್ಲಿ ನಡೆದು ಹೋಗುತ್ತಿದ್ದಳು ಅಪಾಟೆನ್. ಆಗಲೇ ದುಷ್ಟರ ಗುಂಪು ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡಿತು. ಅಪಾಟೆನ್‌ಳ ಚಿಕ್ಕಪ್ಪನಿಗೆ ಕಂಡಕಂಡಲ್ಲಿ ಇರಿಯಿತು. ಈ ಅನಿರೀಕ್ಷಿತ ಆಕ್ರಮಣದಿಂದ ಕಂಗಾಲಾದ ಅಪಾಟೆನ್- ನಂಗೇನೂ ಮಾಡಬೇಡೀ, ನನ್ನನ್ನು ಕೊಲ್ಲಬೇಡೀ ಎಂದು ಬೇಡಿಕೊಂಡಳು. ಕೈ ಮುಗಿದಳು, ಕಾಲು ಹಿಡಿದಳು.
ಈ ಹುಡುಗಿಯ ಬೇಡಿಕೆಗೆ ಅವರು ಕಿವಿಯಾಗಲಿಲ್ಲ. ಪಾಪ, ಹೆಣ್ಣುಮಗು ಎಂದು ಸುಮ್ಮನಾಗಲಿಲ್ಲ. ಕೊರಳಿಗೆ ಗುರಿಯಿಟ್ಟು ಹೊಡೆದರು. ಅದರಿಂದ ತಪ್ಪಿಸಿಕೊಳ್ಳಲು ಈಕೆ ಕೈಯನ್ನು ಅಡ್ಡ ಹಿಡಿದಳು. ಪರಿಣಾಮ, ಬಲವಾದ ಪೆಟ್ಟು ಕೈಗಳಿಗೇ ಬಿತ್ತು. ಅಷ್ಟೇ, ಈ ಹುಡುಗಿ ಮೂಛೆì ತಪ್ಪಿ ಬಿದ್ದುಹೋದಳು. ಆಕೆಯ ಚಿಕ್ಕಪ್ಪ ಸ್ಥಳದಲ್ಲೇ ಸತ್ತುಹೋಗಿದ್ದ. ಮಿಸುಕಾಡದೆ ಬಿದ್ದಿದ್ದ ಈ ಹುಡುಗಿಯೂ ಸತ್ತುಹೋಗಿದ್ದಾಳೆ ಎಂದು ಭಾವಿಸಿದ ಹಂತಕರು ಕೆಲಸ ಮುಗಿಸಿದ ಖುಷಿಯಲ್ಲಿ ಕಾಲುಕಿತ್ತರು.
ಅದೆಷ್ಟೋ ಹೊತ್ತಿನ ಬಳಿಕ ಅಪಾಟೆನ್‌ಗೆ ಎಚ್ಚರಾಯಿತು. ಕಣ್ತೆರೆದರೆ- ಎದುರಿಗೇ ಚಿಕ್ಕಪ್ಪನ ಶವ ಕಾಣಿಸಿತು. ನೆಲದೊಂದಿಗೆ ಬೆರೆತುಹೋಗಿದ್ದ ರಕ್ತ, ಎಂಥದೋ ಕಮಟು ವಾಸನೆ ಹೊರಡಿಸುತ್ತಿತ್ತು. ಕೈಗಳನ್ನು ನೆಲಕ್ಕೆ ಊರಿ, ಎದ್ದು ನಿಲ್ಲಲು ಪ್ರಯತ್ನಿಸಿದಳು ಅಪಾಟೆನ್. ಆಗಲೇ ಅವಳಿಗೆ ಎದೆಯೊಡೆಯುವಂಥ ಸಂಗತಿ ಗೊತ್ತಾಯಿತು. ಏನೆಂದರೆ- ಆಕೆಯ ಎರಡೂ ಮುಂಗೈಗಳು ನೇತಾಡುತ್ತಿದ್ದವು. ಚರ್ಮದ ಒಂದು ಭಾಗ ಮಾತ್ರ ಹರಿದುಹೋಗದೆ ಉಳಿದಿದ್ದರಿಂದ ಅವು ತುಂಡಾಗಿ ಬೀಳದೆ ಉಳಿದುಕೊಂಡಿದ್ದವು. ಹೀಗೆ ನೇತಾಡುತ್ತಿದ್ದ ಕೈಗಳೊಂದಿಗೆ ಚೀರಾಡುತ್ತಾ ಅದು ಹೇಗೋ ಮನೆ ತಲುಪಿಕೊಂಡಳು.
ಮಗಳ ಈ ಅವಸ್ಥೆಯನ್ನು ಕಂಡ ಅಪಾಟೆನ್‌ಳ ತಾಯಿಗೆ ಆಘಾತದಲ್ಲಿ ಮಾತೇ ನಿಂತುಹೋದವು. ಕಡೆಗೆ, ನೆರೆಹೊರೆಯವರೆಲ್ಲ ಸೇರಿಕೊಂಡು ಈಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ದೇಹದ ತುಂಬೆಲ್ಲ ಮಚ್ಚಿನೇಟು ಬಿದ್ದಿದ್ದ ಅಪಾಟೆನ್‌ಳನ್ನು ಕಂಡಾಕ್ಷಣ- ಈಕೆ ಬದುಕೋದಿಲ್ಲ, ಆದರೆ ನಮ್ಮ ಪ್ರಯತ್ನ ಮಾಡ್ತೇವೆ. ಒಂದು ವೇಳೆ ಈಕೆಯ ಜೀವ ಉಳಿದರೆ ಅದು ಜಗತ್ತಿನ ಎಂಟನೆಯ ಪವಾಡ ಅಷ್ಟೆ ಎಂದು ಹೇಳಿಯೇ ಚಿಕಿತ್ಸೆಗೆ ಮುಂದಾಯಿತು ವೈದ್ಯರ ತಂಡ.
ಮುಂದೆ ನಡೆದದ್ದೆಲ್ಲ ಪವಾಡವೇ.
ಏಕೆಂದರೆ, ಬದುಕುವುದಿಲ್ಲ ಎಂಬಂಥ ಸ್ಥಿತಿಯಲ್ಲಿದ್ದ ಅಪಾಟೆನ್ ಬದುಕಿಕೊಂಡಳು. ದುರಂತ ನಡೆದ ಹನ್ನೆರಡು ಗಂಟೆಗೂ ಹೆಚ್ಚು ಕಾಲ, ಚಿಕಿತ್ಸೆ ನೀಡದ ಕಾರಣಕ್ಕೆ, ತುಂಡಾಗಿದ್ದ ಭಾಗವನ್ನು ಮರುಜೋಡಿಸುವ ಸಾಧ್ಯತೆಯೇ ಇರಲಿಲ್ಲ. ಪರಿಣಾಮ, ನೇತಾಡುತ್ತಿದ್ದ ಮುಂಗೈನ ಭಾಗಗಳನ್ನು ವೈದ್ಯರು ಕತ್ತರಿಸಿಹಾಕಿದರು. ಆಸ್ಪತ್ರೆಯ ಬಿಲ್ ಕೊಡುವ ಶಕ್ತಿ ಕೂಡ ಅಪಾಟೆನ್‌ಳ ಕುಟುಂಬಕ್ಕೆ ಇರಲಿಲ್ಲ. ಇಂಥ ಸಂದರ್ಭದಲ್ಲಿ ಪಾದ್ರಿಯೊಬ್ಬರು ನೆರವಿಗೆ ಬಂದರು, ಅಷ್ಟೇ ಅಲ್ಲ; ಅಪಾಟೆನ್‌ಳ ಮೇಲೆ ದೌರ್ಜನ್ಯ ಎಸಗಿದ್ದ ಪಾತಕಿಗಳ ವಿರುದ್ಧವೂ ಕಾನೂನು ಸಮರ ಹೂಡಿದರು. ಮುಂದೆ, ಕೇಡಿಗರಿಗೆಲ್ಲ ಜೀವಾವಧಿ ಶಿಕ್ಷೆಯಾಯಿತು.
ಹೀಗೆ, ಬದುಕು ಮತ್ತೆ ಹಳಿಯ ಮೇಲೆ ಬರುವ ವೇಳೆಗೆ ನಾಲ್ಕು ವರ್ಷ ಕಳೆದುಹೋಗಿದ್ದವು. ಮನೇಲಿದ್ದುಕೊಂಡು ಮಾಡುವುದೇನು ಎಂದುಕೊಂಡು ಅಪಾಟೆನ್ ಮತ್ತೆ ಶಾಲೆಗೆ ಹೋದಳು. ದುರಂತವೆಂದರೆ- ಮೋಟುಕೈಗಳ ಈ ಹುಡುಗಿಯನ್ನು ಸಹಪಾಠಿಗಳು ಪ್ರೀತಿಯಿಂದ ಸ್ವಾಗತಿಸಲಿಲ್ಲ. ಎಲ್ಲರೂ ಇವಳ ಅಂಗವೈಕಲ್ಯದ ಬಗ್ಗೆ ಗೇಲಿ ಮಾಡುವವರೇ. ಇದರಿಂದ ಘಾಸಿಗೊಂಡ ಅಪಾಟೆನ್ ಬಿಕ್ಕಳಿಸುತ್ತಲೇ ಮನೆಗೆ ಬಂದು, ಅಮ್ಮನ ಮುಂದೆ ನಿಂತು ಹೇಳಿದಳು: ಏನಾದ್ರೂ ಸಾಧನೆ ಮಾಡಲಿ ಅಂತಾನೇ ದೇವರು ನನ್ನನ್ನು ಬದುಕಿಸಿದ್ದಾನೆ ನಿಜ. ಆದರೆ ನೊಂದವಳನ್ನು ಸಮಾಧಾನಿಸುವ ಮನಸ್ಸುಗಳು ಶಾಲೆಯೊಳಗಿಲ್ಲ. ಹಾಗಾಗಿ, ನಾಳೆಯಿಂದ ನಾನು ಶಾಲೆಗೆ ಹೋಗಲ್ಲ…
ಈ ಸಂದರ್ಭದಲ್ಲಿ ಮತ್ತೆ ಅಪಾಟೆನ್‌ಳ ನೆರವಿಗೆ ಬಂದದ್ದು ಪಾದ್ರಿ ಲೆಡೆಸ್ಮಾ. ಆತ ಮನಿಲಾದಲ್ಲಿದ್ದ ಅಂಗವಿಕಲರ ಶಾಲೆಗೆ ಈ ಹುಡುಗಿಯನ್ನು ದಾಖಲಿಸಿದ. ಅಲ್ಲಿ ಈ ಹುಡುಗಿ ಜಗತ್ತನ್ನೇ ಮರೆತು ಓದಿದಳು. ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಡಿಸ್ಟಿಂಕ್ಷನ್ ಬಂದಳು. ಕರಕುಶಲ ತರಬೇತಿಯಲ್ಲಿ ಚಿನ್ನದ ಪದಕ ಪಡೆದುಕೊಂಡಳು. ಕೈಗಳೇ ಇಲ್ಲದ ಈ ಹುಡುಗಿಯ ಸಾಧನೆ ಎಲ್ಲೆಡೆ ಸುದ್ದಿಯಾಯಿತು. ಪತ್ರಿಕೆಗಳು ಈಕೆಯ ವಿಶೇಷ ಸಂದರ್ಶನ ಪ್ರಕಟಿಸಿದವು. ಟಿವಿ ಚಾನೆಲ್‌ಗಳು ಈ ಮೋಟುಕೈ ಹುಡುಗಿಯ ಸಾಹಸವನ್ನು ಸೆರೆಹಿಡಿದು ಪ್ರಸಾರ ಮಾಡಿದವು. ಅಪಾಟೆನ್‌ಳ ಸಾಮರ್ಥ್ಯ ವೀಕ್ಷಿಸಿ ಬೆರಗಾದ ಶಾಂಗ್ರಿಲಾ ಹೋಟೆಲಿನ ಆಡಳಿತ ಮಂಡಳಿ, ತಕ್ಷಣವೇ ಈಕೆಯನ್ನು ಸಂಪರ್ಕಿಸಿ- ನಮ್ಮಲ್ಲಿ ಕೆಲಸಕ್ಕೆ ಬರಿ¤àರಾ? ಯಾವ ಕೆಲಸ ಮಾಡ್ತೀರಿ ಎಂದು ಪ್ರಶ್ನೆ ಹಾಕಿತು. ಈ ಹುಡುಗಿ- “ಸವಾಲುಗಳನ್ನು ಎದುರಿಸಲಿಕ್ಕೆ ನನಗಿಷ್ಟ. ಕೊಡೋದಿದ್ರೆ ಚೀಫ್ ಕುಕ್ ಕೆಲಸವನ್ನೇ ಕೊಡಿ’ ಅಂದಳಂತೆ. ಆ ನಂತರದ್ದೆಲ್ಲಾ ಗೆಲುವಿನ ಕಥೆಯೇ. ಈಕೆಯ ಯಶೋಗಾಥೆ ಸಿನಿಮಾಕ್ಕೂ ಸ್ಫೂರ್ತಿಯಾಗಿದೆ!
ಅಪಾಟೆನ್‌ಳ ಕಥೆ ಸಿಕ್ಕಿದ್ದು ಇಂಟರ್‌ನೆಟ್‌ನಲ್ಲಿ. ಹೆಚ್ಚಿನ ವಿವರ ಹುಡುಕಿ ಫೇಸ್‌ಬುಕ್‌ಗೆ ಹೋದಾಗ, ಈಕೆಯ ಫ್ರೆಂಡ್ ಆಗುವ ಸುಯೋಗವೂ ಒದಗಿ ಬಂತು. ಯಾವಾಗಲೋ ಒಮ್ಮೆ ಚಾಟ್‌ಗೆ ಬರುತ್ತಾಳೆ ಅಪಾಟೆನ್. ಮೋಟುಕೈಗಳಲ್ಲಿ ಈಕೆ ಅದು ಹೇಗೆ ಕಂಪ್ಯೂಟರ್‌ನ ಕೀಲಿಮಣೆ ಒತ್ತುತ್ತಾಳ್ಳೋ ಎಂಬ ಬೆರಗಿನಲ್ಲಿಯೇ ನಾನು “ಹಲೋ’ ಎನ್ನುತ್ತೇನೆ. ಅಪಾಟೆನ್‌ಳ ಸಾಹಸವನ್ನೆಲ್ಲ ನೋಡಬೇಕೆಂದಿದ್ದರೆ ಗೂಗಲ್‌ನಲ್ಲಿ, ಯೂಟ್ಯೂಬ್‌ನಲ್ಲಿ Maricel Apaten ಎಂದು ಟೈಪ್ ಮಾಡಿ ನೋಡಿ. ನಂಬಲಾಗದಂಥ ವಿಸ್ಮಯವೊಂದು ಕಣ್ಮುಂದೆ ತೆರೆದುಕೊಳ್ಳುತ್ತದೆ. ಕ್ರಮೇಣ ಅದು ಮನಸಿಗೂ ಹತ್ತಿರಾಗುತ್ತದೆ…
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.