ತವರಿಗೆ ಕಾಲಿಟ್ಟ ವಿದ್ಯಾರ್ಥಿಗಳ ಕಣ್ಣಲ್ಲಿ ಧನ್ಯತಾಭಾವ
Team Udayavani, Mar 7, 2022, 6:50 AM IST
ಯುದ್ಧಪೀಡಿತ ಉಕ್ರೇನ್‌ನಲ್ಲಿ ಕ್ಷಿಪಣಿ, ಬಾಂಬ್ ದಾಳಿಗಳ ಆರ್ಭಟದಿಂದ ನಲುಗಿ ಹೋಗಿದ್ದ ರಾಜ್ಯದ ಹಲವು ವಿದ್ಯಾರ್ಥಿಗಳು ರವಿವಾರ ಪೋಷಕರ ಮಡಿಲು ಸೇರಿದ್ದಾರೆ. ಹೀಗೆ ಬಂದವರಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಕಥೆ-ವ್ಯಥೆ ಇದೆ. ಗುಂಡಿನ ಸದ್ದು ಕೇಳಿದಾಗಲೆಲ್ಲ ಜೀವದ ಆಸೆಯನ್ನೇ ಬಿಟ್ಟಿದ್ದವರು ಇದೀಗ ಸುರಕ್ಷಿತವಾಗಿ ತವರು ಸೇರಿದ್ದು, ಅವರ ಕಣ್ಣಲ್ಲಿ ಧನ್ಯತಾಭಾವ ಮೂಡಿದೆ…
ರಣರಂಗದಲ್ಲಿ ಜೀವ ರಕ್ಷಿಸಿದ ಭಾರತದ ತ್ರಿವರ್ಣ ಧ್ವಜ
ಬೀದರ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಕ್ಷಿಪಣಿ, ಬಾಂಬ್ ದಾಳಿಗಳ ಆರ್ಭಟದಿಂದ ಭಾರತದಲ್ಲಿ ಹೆತ್ತವರ ಮಡಿಲು ಸೇರುತ್ತೇವಾ ಎನ್ನುವ ಆತಂಕದಲ್ಲಿದ್ದ ನಮಗೆ ಕನ್ನಡಿಗ ನವೀನ್ ಸಾವಿನ ಬಳಿಕ ಜೀವ ಭಯ ಹೆಚ್ಚಿತ್ತು. ಆದರೆ, ಬಂದಿದ್ದನ್ನು ಎದುರಿಸೋಣ ಎಂದು ಧೈರ್ಯ ಮಾಡಿ ಖಾರ್ಕಿವ್ ನಗರ ತೊರೆದ ಪರಿಣಾಮ ತಾಯ್ನಾಡಿಗೆ ಸುರಕ್ಷಿತವಾಗಿ ಬಂದೆವು.
-ಇದು ಉಕ್ರೇನ್‌ನಲ್ಲಿ ಸಿಲುಕಿ ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ ಜಿಲ್ಲೆಯ ಬಸವಕಲ್ಯಾಣ ತಾ|ನ ನಾರಾಯಣಪುರ ಗ್ರಾಮದ ವಿದ್ಯಾರ್ಥಿನಿ ವೈಷ್ಣವಿ ವಿಷ್ಣುರೆಡ್ಡಿ ಕರಾಳ ಅನುಭವದ ನುಡಿಗಳು. ಕೇಂದ್ರ ಸರಕಾರದ ಆಪರೇಷನ್ ಗಂಗಾ ಕಾರ್ಯಾಚರಣೆಯಿಂದಾಗಿ ಸ್ವಗ್ರಾಮಕ್ಕೆ ಆಗಮಿಸಿದ ವೈಷ್ಣವಿ, “ಉದಯವಾಣಿ’ ಜತೆಗೆ ಸಂತಸ ವ್ಯಕ್ತಪಡಿಸುವುದರ ಜತೆಗೆ ಯುದ್ಧಪೀಡಿತ ದೇಶ ದಿಂದ ಬಂದ ಘಟನೆಗಳನ್ನು ವಿವರಿಸಿದರು.
ಭಯಾನಕ ಆ 8 ದಿನಗಳು
ಖಾರ್ಕಿವ್ ವಿವಿಯಲ್ಲಿ ಎಂಬಿಬಿಎಸ್ ಮೊದಲ ಸೆಮಿಸ್ಟರ್ ಕಲಿಯುತ್ತಿರುವ ವೈಷ್ಣವಿ, ಕಳೆದ ಡಿಸೆಂಬರ್‌ನಲ್ಲಿ ಉಕ್ರೇನ್‌ಗೆ ತೆರಳಿದ್ದರು. ಕಳೆದ 8 ದಿನಗಳು ಅತ್ಯಂತ ಭಯಾನಕವಾದದ್ದು. ಗುಂಡಿನ ಸದ್ದು ಕೇಳಿದಾಗಲೆಲ್ಲ, ಜೀವದ ಆಸೆ ಬಿಟ್ಟಿದ್ದೆವು. ಕೊರೆಯುವ ಚಳಿ, ನೀರು, ಊಟದ ಸಮಸ್ಯೆ. ಆಗಾಗ ದೊರೆಯುವ ಒಂದಿಷ್ಟು ತಿಂಡಿ, ತಿನಸುಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಇತ್ತ ತಾಯ್ನಾಡಿನಲ್ಲಿ ಆತಂಕದಲ್ಲಿದ್ದ ಹೆತ್ತವರು ಕರೆ ಮಾಡಿ ಧೈರ್ಯ ತುಂಬುತ್ತಿದ್ದರು. ಆದರೆ, ನವೀನ್ ಸಾವು ನಮ್ಮಲ್ಲಿ ಭಯ ಸೃಷ್ಟಿಸಿತ್ತು. ಘಟನೆಯ ಮರು ದಿನವೇ ಬಂಕರ್‌ನಲ್ಲಿದ್ದ ಎಲ್ಲ 500ಕ್ಕೂ ಹೆಚ್ಚು ಜನ ಖಾರ್ಕಿವ್ ತೊರೆಯಲು ಸಜ್ಜಾದೆವು. 9 ಕಿ.ಮೀ. ನಡೆದುಕೊಂಡೇ ಕೀವ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಲೀವ್‌ಗೆ ತಲುಪಿದ್ದೆವು. ಮಾರ್ಗ ಮಧ್ಯೆ ಮೂರು ಕಡೆ ಬಾಂಬ್ ದಾಳಿ ಆದಾಗ ನಮ್ಮೊಂದಿಗಿದ್ದ ಹಲವು ಸಹಪಾಠಿಗಳು ಚದುರಿ ಹೋದರು. ಕೈಯಲ್ಲಿ ಹಿಡಿದುಕೊಂಡಿದ್ದ ಭಾರತದ ಧ್ವಜವೇ ನಮಗೆ ರಕ್ಷಣೆ ನೀಡಿತ್ತು. ಪೋಲೆಂಡ್‌ನಿಂದ ರಾಯಭಾರ ಕಚೇರಿಯ ನೆರವಿನಿಂದ ಭಾರತಕ್ಕೆ ಮರಳಲು ಸಾಧ್ಯವಾಯಿತು ಎಂದು ಹೇಳಿದರು.
ಚಿಕ್ಕಮಗಳೂರಿನ ಇಬ್ಬರು ತಾಯ್ನಾಡಿಗೆ
ಚಿಕ್ಕಮಗಳೂರು: ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ತರೀಕೆರೆ ತಾ|ನ ವೈಭವ್ ಎಲ್. ಸಪ್ತಗಿರಿ ಮತ್ತು ಕಡೂರು ತಾ|ನ ಎಚ್.ಸಿ. ಪೂಜಾ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ವೈಭವ್ ತರೀಕೆರೆ ತಾ|ನ ಟಿ.ಎನ್. ಲೋಕೇಶ್-ಎ.ಎಸ್. ಕವಿತಾ ದಂಪತಿ ಪುತ್ರ.
ಆತ ಉಕ್ರೇನ್ ಬೋಕವೇನಿಯಾ ಸ್ಟೇಟ್ ಮೆಡಿಕಲ್ ವಿವಿಯಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ. ಪೂಜಾ ಕಡೂರು ತಾ|ನ ಮತ್ತಣಗೆರೆ ಚಂದ್ರಮ್ಮ ಅವರ ಪುತ್ರಿ.ಆಕೆ ಝಪ್ರೋಷಿಯಾ ಸ್ಟೆಟ್ ಮೆಡಿಕಲ್ ವಿವಿಯಲ್ಲಿ ಎಂಬಿಬಿಸ್ ಮಾಡುತ್ತಿದ್ದರು. ಯುದ್ಧದ ಸಂದರ್ಭ ಭಾರೀ ಕಷ್ಟ ಎದುರಿಸಿದೆವು. ಭಾರತದ ತ್ರಿವರ್ಣ ಧ್ವಜ ನಮ್ಮನ್ನು ಕಾಪಾಡಿತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
“29 ಗಂಟೆಗಳ ನಿರಂತರ ಪ್ರಯಾಣದಿಂದ ಗಡಿ ಮುಟ್ಟಿದೆವು’
ಬೀದರ್: ಖಾರ್ಕಿವ್‌ನಲ್ಲಿ ಸಿಲುಕಿದ್ದ ಬೀದರ್‌ನ ಮಂಗಲಪೇಟ್ ನಿವಾಸಿ ಅಮಿತ್ ಚಂದ್ರಕಾಂತ ಸಿರಂಜೆ ಶನಿವಾರ ಸ್ವದೇಶಕ್ಕೆ ಆಗಮಿಸಿದ್ದು, ರವಿವಾರ ಬೆಳಗ್ಗೆ ನಗರಕ್ಕೆ ತಲುಪಿದ್ದಾರೆ. ಭಾರತಕ್ಕೆ ಮರಳಿದ ಖುಷಿಯಲ್ಲಿ ಅಮಿತ್ ಇದ್ದರೆ, ಹೆತ್ತವರು ತಮ್ಮ ಮಗ ಸುರಕ್ಷಿತವಾಗಿ ಮಡಿಲು ಸೇರಿದ್ದಾನೆಂಬ ಸಂಭ್ರಮದಲ್ಲಿದ್ದಾರೆ.
ಖಾರ್ಕಿವ್‌ನಲ್ಲಿ ಬಂಕರ್‌ವೊಂದ ರಲ್ಲಿ ಸಿಲುಕಿದ್ದ ನಮಗೆ ಪ್ರತಿದಿನ ಗುಂಡಿನ ದಾಳಿ ಆತಂಕ ಹೆಚ್ಚಿಸಿತ್ತು. ಬಂಕರ್ ಸ್ಟ್ರಾಂಗ್ ಇದ್ದ ಕಾರಣ ನಮಗೆ ಏನೂ ಆಗಲಿಲ್ಲ. ಕೊನೆಗೆ ಬಂಕರ್‌ನಲ್ಲಿದ್ದ 8 ಜನ ಧೈರ್ಯ ಮಾಡಿ ಖಾರ್ಕಿವ್ ತೊರೆದು ಜೀವ ಉಳಿಸಿಕೊಂಡಿದ್ದೇವೆ. ಬಂಕರ್‌ನಿಂದ ರೈಲ್ವೆ ನಿಲ್ದಾಣವರಗೆ 3 ಕಿ.ಮೀ. ನಡೆದುಕೊಂಡು ಹೋಗಿ, ಅಲ್ಲಿಂದ 29 ಗಂಟೆ ನಿರಂತರ ಪ್ರಯಾಣ ಮಾಡಿ ಪೋಲೆಂಡ್ ಗಡಿ ಮುಟ್ಟಿದ್ದೆವು ಎಂದು ಅಮಿತ್ ವಿವರಿಸಿದರು.
ಪೈಲಟ್ ಬೆಳಗಾವಿಯ ಸೊಸೆ ದಿಶಾ ಮಣ್ಣೂರ
ಬೆಳಗಾವಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ಆಪರೇಷನ್ ಗಂಗಾ ನಡೆದಿದ್ದು, ಈ ವಿಮಾನಗಳ ಕಾರ್ಯಾಚರಣೆ ನಡೆಸಿದ ಪೈಲಟ್‌ಗಳ ಪೈಕಿ ದಿಶಾ ಆದಿತ್ಯ ಮಣ್ಣೂರ ಅವರು ಬೆಳಗಾವಿ ಸೊಸೆ. ಭಾರತೀಯರನ್ನು ಕರೆತಂದಿರುವ ಎಐ-1947 ವಿಮಾನದ ನಾಲ್ವರು ಪೈಲಟ್‌ಗಳ ಪೈಕಿ ದಿಶಾ ಒಬ್ಬರು. ಬೆಳಗಾವಿ ಮೂಲದ ಆದಿತ್ಯ ಮಣ್ಣೂರ ಅವರ ಪತ್ನಿ ದಿಶಾ ದಿಲ್ಲಿಯಲ್ಲಿ ನೆಲೆಸಿದ್ದಾರೆ. ಬೆಳಗಾವಿಯ ಶಿವಬಸವನಗರದ ಪದ್ಮಜಾ-ಪ್ರಹ್ಲಾದ ದಂಪತಿಯ ಪುತ್ರ ಆದಿತ್ಯ. ಈ ಕುಟುಂಬ ಸದ್ಯ ಮುಂಬಯಿಯಲ್ಲಿ ನೆಲೆಸಿದೆ. ಯುದ್ಧದ ಸಂದರ್ಭದಲ್ಲಿ ಉಕ್ರೇನ್‌ನ ಕೀವ್‌ಗೆ ತೆರಳಿದ್ದ ದಿಶಾ ಭಾರತೀಯರನ್ನು ಕರೆತಂದಿದ್ದಾರೆ.
ಮೂರು ದಿನದಿಂದ ಊಟ, ನೀರಿಲ್ಲದೆ ಪರದಾಟ: ಅಳಲು
ದಾವಣಗೆರೆ: ಉಕ್ರೇನ್‌ನ ಖಾರ್ಕಿವ್‌ನಲ್ಲಿ ಸಿಲುಕಿಕೊಂಡಿರುವ ವೈದ್ಯಕೀಯ ವಿದ್ಯಾರ್ಥಿ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಆದರ್ಶ್ ಆಗಮನಕ್ಕೆ ಪೋಷಕರು ಕ್ಷಣ ಕ್ಷಣಕ್ಕೂ ಕಾಯುತ್ತಿದ್ದಾರೆ.
ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ದಿ| ರೇವಮ್ಮ ಮತ್ತು ದಿ| ಶಿವಾನಂದಪ್ಪ ಪುತ್ರ ಆದರ್ಶ ಉಕ್ರೇನ್‌ನ ಖಾರ್ಕಿವ್‌ನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ಅಭ್ಯಾಸ ಮಾಡುತ್ತಿದ್ದಾರೆ. ಯುದ್ಧ ಪ್ರಾರಂಭವಾದ 12 ದಿನಗಳಿಂದ ಮದ್ದು, ಗುಂಡುಗಳ ಸದ್ದು ಕೇಳಿ ಜೀವ ಭಯದಿಂದ ನರಳುತ್ತಿದ್ದಾರೆ. ಇದೀಗ ಭಾರತ ರಾಯಭಾರಿಗಳ ಜತೆ ಸುರಕ್ಷಿತವಾಗಿದ್ದು, ಭಾರತಕ್ಕೆ ಮರಳಲು ಈಗಾಗಲೇ ಉಕ್ರೇನ್ ಗಡಿ ಭಾಗ ತಲುಪಿದ್ದಾರೆ. ಇನ್ನು ನಾಲ್ಕು ದಿನಗಳಲ್ಲಿ ಭಾರತಕ್ಕೆ ವಾಪಸ್ ಆಗಲಿದ್ದಾರೆ.
ಇಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ. ಮದ್ದು, ಗುಂಡುಗಳ ಸದ್ದು ಕೇಳಿ ಜೀವ ಭಯದಿಂದ ಬದುಕುತ್ತಿದ್ದೇವೆ. ಮೂರು ದಿನದಿಂದ ಸರಿಯಾಗಿ ಊಟ ಇಲ್ಲ, ಕುಡಿಯಲು ನೀರು ಸಹ ಇಲ್ಲ. ರಷ್ಯಾ ಮತ್ತು ಉಕ್ರೇನ್ ದೇಶಗಳ ಗಡಿ ರೇಖೆ ಸಮೀಪದಲ್ಲೇ ಇರುವುದರಿಂದ ಜೀವ ಭಯವಿದೆ ಎಂದರು.
ಉಕ್ರೇನ್ ಯುದ್ಧವನ್ನು 6 ಗಂಟೆ ನಿಲ್ಲಿಸಿದ್ದ ಮೋದಿ!
ಕೊಪ್ಪಳ: ಉಕ್ರೇನ್ ದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಣೆ ಮಾಡಿ ಸ್ವದೇಶಕ್ಕೆ ಕರೆ ತರಲು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಗೆ ಮನವಿ ಮಾಡಿ 6 ಗಂಟೆ ಯುದ್ಧವನ್ನೇ ನಿಲ್ಲಿಸಿದರು. ಇದಕ್ಕಿಂತ ಇನ್ನೇನು ಮಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಸೇರಿದಂತೆ ಬೇರೆ ಬೇರೆ ದೇಶದವರು ಭಾರತದ ರಾಯಭಾರ ಕಚೇರಿ ಸಂಪರ್ಕ ಮಾಡಿ ರಕ್ಷಣೆ ಕೇಳುತ್ತಿದ್ದಾರೆ. ಬೇರೆ ಬೇರೆ ದೇಶದ ನಾಗರಿಕರು, ವಿದ್ಯಾರ್ಥಿಗಳು ಭಾರತದ ಬಾವುಟ ಹಿಡಿದು ರಕ್ಷಣೆ ಕೇಳುತ್ತಿದ್ದಾರೆ. ಕೇಂದ್ರದ ನಾಲ್ವರು ಸಚಿವರನ್ನು ಭಾರತೀಯರನ್ನು ಕರೆತರುವುದಕ್ಕಾಗಿ ಉಕ್ರೇನ್ ಅಕ್ಕಪಕ್ಕದ ದೇಶಕ್ಕೆ ಕಳುಹಿಸಲಾಗಿದೆ. ಅವರು ಅಲ್ಲಿನ ಗಡಿಯಲ್ಲಿ ನಮ್ಮವರನ್ನು ರಕ್ಷಣೆ ಮಾಡುತ್ತಿದ್ದಾರೆ. ಇದು ಇತಿಹಾಸದಲ್ಲಿ ಬೇರೆಲ್ಲೂ ಇಲ್ಲ. ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತೀ ಯರ ರಕ್ಷಣೆಯಲ್ಲಿ ಭಾರತ ಸರಕಾರ ಇನ್ನೇನು ಮಾಡಬೇಕು. ಯುದ್ಧ ಭೂಮಿಯಲ್ಲಿ ಹೋಗಿ ಕರೆ ತರಬೇಕಾಗಿತ್ತಾ? ಎಂದವರು ಪ್ರಶ್ನಿಸಿದರು.
ಗನ್ ಪಾಯಿಂಟ್‌ನಲ್ಲಿ ಇದ್ದೆವು
ರಾಮನಗರ: ನಾವು ಅವರ ದೇಶಕ್ಕೆ ತೊಂದರೆ ಮಾಡುವವರಲ್ಲ ಎಂದು ಸಾಬೀತು ಆಗುವವರೆಗೂ ಗನ್ ಪಾಯಿಂಟ್‌ನಲ್ಲಿ ಇದ್ದೆವು. ಹ್ಯಾಂಡ್ ಅಪ್ ಮಾಡಿ ಅಂದಾಗ ಮಾಡಬೇಕಿತ್ತು; ನಾವು ಭಾರತೀಯರು ಉಕ್ರೇನ್‌ಗೆ ತೊಂದರೆ ಮಾಡುವವರಲ್ಲ ಅಂತ ಗೊತ್ತಾದ ಅನಂತರ ನಗುತ್ತಲೇ ಸೈನಿಕರು ಬೀಳ್ಕೊಟ್ಟರು.-ಉಕ್ರೇನ್‌ನಿಂದ ರಾಮನಗರಕ್ಕೆ ರವಿವಾರ ವಾಪಸಾದ ಆಯೇಷಾ ಸುದ್ದಿಗಾರರೊಂದಿಗೆ ಅನುಭವ ಹಂಚಿಕೊಂಡರು.
ಶಾಲೆಯ ಕಟ್ಟಡದ ಕೆಳಗಿದ್ದ ಬಂಕರ್‌ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ತೀರಾ ಹಳೆಯದಾದ, ಧೂಳಿನಿಂದ ಆವೃತ್ತವಾಗಿದ್ದ ಬಂಕರ್ ಹಿಟ್ಲರ್ ಕಾಲದ್ದು ಎಂದು ಅಲ್ಲಿನವರೊಬ್ಬರು ಹೇಳುತ್ತಿದ್ದರು. ಕಿವಿವ್ ನಗರದ ಮೇಲೆ ದಾಳಿ ತೀವ್ರವಾಗಲಿದೆ ಎಂದು ಗೊತ್ತಾದ ಕೂಡಲೇ ನಮ್ಮನ್ನು ರೈಲಿನಲ್ಲಿ ಸ್ಲೋವಾಕಿಯಾ ಗಡಿಗೆ ಕಳುಹಿಸಲು ಏರ್ಪಾಟು ಮಾಡಿದರು. ಉಕ್ರೇನ್ ಸೈನಿಕರು ನಮಗೆ ರೈಲು ಹತ್ತಲು ಅವಕಾಶ ಮಾಡಲಿಲ್ಲ. ಹೀಗಾಗಿ ಕ್ಯಾಬ್‌ಗಳಲ್ಲಿ ಸ್ಲೋವಾಕಿಯಾ ಗಡಿ ತಲುಪಿದೆವು ಎಂದು ವಿವರಿಸಿದರು.
50 ಗಂಟೆಗಳ ಪ್ರಯಾಣ
ಸ್ಲೋವಾಕಿಯಾ ಗಡಿ ತಲುಪಲು ಸುಮಾರು 50 ಗಂಟೆಗಳ ಕಾಲ ಪ್ರಯಾಣವಿತ್ತು. ದಾರಿಯಲ್ಲಿ ಅನೇಕ ಬಾರಿ ಉಕ್ರೇನ್ ಸೈನಿಕರು ನಮ್ಮ ತಲೆಗೆ ಗನ್ ಇಟ್ಟು ನಾವೆಲ್ಲ ಯಾರು ಎಂದು ಪ್ರಶ್ನಿಸಿದರು. ನಮ್ಮ ಮೊಬೈಲ್‌ನಲ್ಲಿದ್ದ ಭಾರತದ ರಾಷ್ಟ್ರಧ್ವಜ ಮುಂತಾದ ಕುರುಹುಗಳನ್ನು ಕಂಡು ಪಾಸ್‌ಪೋರ್ಟ್ ಪರೀಕ್ಷಿಸಿದ ಅನಂತರವಷ್ಟೇ ಬೀಳ್ಕೊಟ್ಟರು ಎಂದು ಆಯೇಷಾ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು?
Contractor Case: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪ್ರಶ್ನೆಯೇ ಉದ್ಭವಿಸಲ್ಲ: ಸಿಎಂ
Huge Revenue: ಹೊಸ ವರ್ಷದ ಸಂಭ್ರಮ; ಅಬಕಾರಿ ಇಲಾಖೆಗೆ ಭರ್ಜರಿ ಆದಾಯ!
Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ
EPF ನಿಧಿ ವಂಚನೆ: ರಾಬಿನ್ ಉತಪ್ಪ ವಿರುದ್ದದ ವಾರಂಟ್‌ಗೆ ಹೈಕೋರ್ಟ್ ತಡೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!
Bhuvanam Gaganam Movie: ಪ್ರೇಮಿಗಳ ದಿನಕ್ಕೆ ಭುವನಂ ಗಗನಂ ತೆರೆಗೆ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
Ullala: ಆಯತಪ್ಪಿ ಪಾಳು ಬಾವಿಗೆ ಬಿದ್ದು ಸ್ಥಳೀಯ ಮೀನುಗಾರ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.