Study of Jupiter: ಗುರು ಕಡೆಗೆ ಹೊರಟ ನೌಕೆಗೆ ಭೂಮಿ ಬಲ!
ಗುರು ಗ್ರಹ ಅಧ್ಯಯನಕ್ಕೆ ಐರೋಪ್ಯ ಸ್ಪೇಸ್ ಏಜೆನ್ಸಿಯಿಂದ ಜೂಸ್ ಮಿಷನ್, ಇಂಧನ ಉಳಿತಾಯಕ್ಕೆ ಚಂದ್ರ, ಭೂಮಿ ಹತ್ತಿರ ಸಾಗಲಿದೆ ನೌಕೆ
Team Udayavani, Aug 20, 2024, 7:20 AM IST
ಗುರು ಗ್ರಹದ ಅಧ್ಯಯನಕ್ಕೆ ಐರೋಪ್ಯ ಸ್ಪೇಸ್ ಏಜೆನ್ಸಿ ಜೂಸ್ ನೌಕೆಯನ್ನು ಕಳೆದ ವರ್ಷ ಉಡಾಯಿಸಿತ್ತು. 8 ವರ್ಷ ಜೂಸ್ ಪ್ರಯಾಣ ನಡೆಸಿ, ತನ್ನ ಗಮ್ಯಸ್ಥಾನ ಸೇರಲಿತ್ತು. ಆದರೆ ಈಗ ವರ್ಷದಲ್ಲಿಯೇ ಈ ನೌಕೆಯು ಭೂಮಿಯತ್ತ ಬರುತ್ತಿದೆ! ಇದು ಅದರ ವೈಫಲ್ಯವಲ್ಲ. ಬದಲಿಗೆ ಚಂದ್ರ ಮತ್ತು ಭೂಮಿ ಗುರುತ್ವಾಕರ್ಷಣೆಯ ಬಲವನ್ನು ಪಡೆದು ತನ್ನ ಶಕ್ತಿ ಹೆಚ್ಚಿಸಿಕೊಂಡು ಗುರುವಿನತ್ತ ಪಯಣ ಮಂದುವರಿಸಲಿದೆ. ಈ ವಿಶಿಷ್ಟ ಹಾಗೂ ಕಠಿನ ಫ್ಲೈ-ಬೈ (fly ಚಿy) ಪ್ರಯೋಗವನ್ನು ಐರೋಪ್ಯ ಸ್ಪೇಸ್ ಏಜೆನ್ಸಿ ನಡೆಸುತ್ತಿದೆ. ಏನಿದು ಪ್ರಯೋಗ? ಇದು ಹೇಗೆ ನಡೆಯಲಿದೆ? ಎಂಬುದರ ಮಾಹಿತಿ ಇಲ್ಲಿದೆ.
ಏನಿದು ಜೂಸ್ ಮಿಷನ್?
ಭೂಮಿಯಿಂದ ಅಂದಾಜು 79.81 ಕೋಟಿ ಕಿ.ಮೀ. ದೂರವಿರುವ, ಸೌರ ಮಂಡಲದ ಅತೀದೊಡ್ಡ ಗ್ರಹವಾದ ಗುರುವಿನ ಬೃಹತ್ ಉಪಗ್ರಹಗಳ ಕುರಿತು ಅಧ್ಯಯನ ನಡೆಸಲು ಐರೋಪ್ಯ ಸ್ಪೇಸ್ ಏಜೆನ್ಸಿ(ಇಎಸ್‌ಎ) 2023ರ ಎಪ್ರಿಲ್‌ನಲ್ಲಿ ಫ್ರಾನ್ಸ್‌ನ ಗಯಾನದಿಂದ ಜುಪಿಟರ್ ಐಸಿ ಮೂನ್ಸ್ ಎಕ್ಸ್‌ಫ್ಲೋರರ್ ಅಂದರೆ “ಜೂಸ್’ ನೌಕೆಯನ್ನು ಉಡಾವಣೆ ಮಾಡಿತ್ತು. ಗುರುವಿನ ಮೇಲ್ಮೆ„, ಗುರುವಿನ ದೊಡ್ಡ ಉಪಗ್ರಹಗಳು, ಅಲ್ಲಿನ ವಾತಾವರಣ ಹಾಗೂ ಗುರುವಿನ ಜಲಮೂಲಗಳ ಬಗ್ಗೆ ಮಾಹಿತಿ ಕಲೆ ಹಾಕುವುದು “ಜೂಸ್’ ಮಿಷನ್‌ನ ಉದ್ದೇಶವಾಗಿದೆ.
ಏನಿದು ಹೊಸ ಪ್ರಯೋಗ?
ಇಎಸ್‌ಎ ಉಡಾಯಿಸಿರುವ ಜೂಸ್ ನೌಕೆಯ ಕಾಲಾವಧಿ ಬರೋಬ್ಬರಿ 8 ವರ್ಷ. ಅಂದರೆ 2023ರಲ್ಲಿ ಉಡಾವಣೆಗೊಂಡ ನೌಕೆಯು 2031ರ ವೇಳೆಗೆ ಗುರುವಿನಲ್ಲಿಗೆ ತಲುಪಲಿದೆ. ಈ ಮಧ್ಯೆ ನೌಕೆಗೆ ತನ್ನ ಸುದೀರ್ಘ ಪ್ರಯಾಣಕ್ಕಾಗಿ ಭೂಮಿಯ ಗುರುತ್ವಾಕರ್ಷಣೆಯ ಅಗತ್ಯವಿದ್ದು, ಇದಕ್ಕಾಗಿ ಭೂಮಿಗೆ ಹಿಂದಿರುಗುತ್ತಿದೆ. ಭೂಮಿಯಿಂದ ಗುರುತ್ವಾಕರ್ಷಣೆಯನ್ನು ನೌಕೆಗೆ ನೀಡಿದಾಗ ಸೌರಮಂಡಲದ ಪರಿಧಿಯ ಹೊರಗಿನ ಪ್ರಯಾಣಕ್ಕೆ ಬೇಕಾಗುವ ಇಂಧನದ ಪ್ರಮಾಣವನ್ನು ಇದು ಕಡಿಮೆ ಮಾಡಬಹುದು. ಜತೆಗೆ ಗುರುವಿನೆಡೆಗೆ ಸಾಗುವ ಇದರ ವೇಗ ಹಾಗೂ ಮಾರ್ಗದಲ್ಲಿ ಇದು ಬದಲಾವಣೆ ತರಲಿದೆ ಎಂಬುದು ಬಾಹ್ಯಾಕಾಶ ವಿಜ್ಞಾನಿಗಳ ಯೋಚನೆ.
ಭೂಮಿಗೆ ತೀರಾ ಹತ್ತಿರ ಜೂಸ್ ನೌಕೆ
ಜೂಸ್ ಗಗನನೌಕೆ ಭೂಮಿಯತ್ತ ಬರಲಿದೆ (ಫ್ಲೈ-ಬೈ) ಎಂದರೆ ಭೂಮಿಯಲ್ಲಿ ಇಳಿಯುತ್ತದೆ ಎಂದರ್ಥವಲ್ಲ. ಬದಲಾಗಿ ಮೊದಲಿಗೆ ಚಂದ್ರ ಮತ್ತು ಆ ಬಳಿಕ ಭೂಮಿಯ ಗುರುತ್ವಾಕರ್ಷಣ ವಲಯವನ್ನು ಹಾದುಹೋಗಲಿದೆ. ಚಂದ್ರ ಮತ್ತು ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಬಳಸಿಕೊಂಡು ತನ್ನ ಗಮ್ಯವಾಗಿರುವ ಗುರುವಿನತ್ತ ಮುನ್ನುಗ್ಗುವುದೇ ಇದರ ಹಿಂದಿರುವ ಉದ್ದೇಶ.
ಒಂದು ಕವಣೆಯಲ್ಲಿ ಕಲ್ಲನ್ನು ಒಂದು ಸುತ್ತು ಬೀಸಿ ಎಸೆಯುವುದಕ್ಕೂ ಹಲವು ಸುತ್ತು ಬೀಸಿ ಎಸೆಯುವುದಕ್ಕೂ ವ್ಯತ್ಯಾಸ ಇದೆ ತಾನೇ? ಹಲವು ಸುತ್ತು ಬೀಸಿ ಎಸೆದರೆ ಕವಣೆ ಕಲ್ಲು ಹೆಚ್ಚು ದೂರ ಹೋಗಿ ಬೀಳುತ್ತದೆ. ಜೂಸ್ ನೌಕೆಯೂ ಇದೇ ರೀತಿ ಭೂಮಿ ಮತ್ತು ಚಂದ್ರನ ಗುರುತ್ವಾಕರ್ಷಣ ಶಕ್ತಿ ಉಪಯೋಗಿಸಿ ಕಡಿಮೆ ಇಂಧನ ಬಳಸಿ ಗುರುವಿನಲ್ಲಿಗೆ ತಲುಪುವಂತೆ ಮಾಡುವುದು ಈ ಹೊಸ ಸಾಹಸದ ಹೂರಣ.
ನೌಕೆಗೆ ಚಂದ್ರ, ಭೂಮಿ ಗುರುತ್ವಾಕರ್ಷಣೆಯ ಶಕ್ತಿ
ಜೂಸ್ ನೌಕೆಯ ಚಂದ್ರ-ಭೂಮಿ ಗುರುತ್ವಾಕರ್ಷಣೆ ಸಹಾಯ ಹೊಸ ಪ್ರಯೋಗದ ಮೊದಲ ಹೆಜ್ಜೆಯು ಆ.19-20ರಂದು ಕೈಗೂಡಿದೆ. ಆ.19ರಂದು ಚಂದ್ರನ ಮೇಲ್ಮೆ„ಯಿಂದ ಕೆಲವೇ ನೂರು ಕಿ. ಮೀ. ಗಳಷ್ಟು ದೂರದಲ್ಲಿದ್ದ ನೌಕೆಯು 24 ತಾಸುಗಳ ಬಳಿಕ ಅಂದರೆ ಆ.20ರಂದು ಭೂಮಿಯ ಕೆಲವೇ ಸಾವಿರ ಕಿ.ಮೀ.ಗಳ ಹತ್ತಿರದಿಂದ ಹಾರಾಟ (ಫ್ಲೈ-ಬೈ) ನಡೆಸಿದೆ.
ಈ ವೇಳೆಯಲ್ಲಿ ನೌಕೆಯು ಭೂಮಿಯಿಂದ ಗುರುತ್ವಾಕರ್ಷಣೆಯ ಸಹಾಯವನ್ನು ಪಡೆದು ಮುಂದಿನ ಕೆಲವು ಸಮಯದವರೆಗೆ ಇದೇ ಶಕ್ತಿಯಿಂದ ಇಂಧನ ರಹಿತವಾಗಿ ತನ್ನ ಪ್ರಯಾಣ ಮುಂದುವರಿಸಲಿದೆ. ಜೂಸ್ ನೌಕೆಯು ಚಂದ್ರನನ್ನು ಹಾದು ಹೋದ ಬಳಿಕ, ಭೂಮಿಯ ಕಕ್ಷೆಯ ಬಳಿ ತನ್ನ ಅರ್ಧ ಪ್ರಯಾಣವನ್ನು ಪೂರೈಸಿದ ಬಳಿಕ ಅದನ್ನು ಬೇರೊಂದು ದಿಕ್ಕಿಗೆ ಹಾರಿ ಬಿಡಲಾಗುತ್ತದೆ. ಈ ಗುರುತ್ವಾಕರ್ಷಣ ಶಕ್ತಿಯ ಬಲವು 2025ರಲ್ಲಿ ಜೂಸ್ ಶುಕ್ರನ ಕಕ್ಷೆಯಲ್ಲಿ ಪ್ರಯಾಣಿಸಲು ನೆರವಾಗುತ್ತದೆ.
ವಿಜ್ಞಾನ ಕ್ಷೇತ್ರ ಹಾಗೂ ಮಾನವ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯೊಂದು ಗುರುತ್ವಾಕರ್ಷಣ ಶಕ್ತಿಗಾಗಿ ಭೂಮಿಯನ್ನು ಅವಲಂಬಿಸಿ ಪ್ರಯಾಣ ಬೆಳೆಸಲಿದೆ. ಇದೇ ರೀತಿಯಾಗಿ ಇನ್ನೆರಡು ಬಾರಿ ಅಂದರೆ, 2026ರ ಸೆಪ್ಟಂಬರ್ ಹಾಗೂ 2029ರ ಜನವರಿಯಲ್ಲಿ ಇಎಸ್‌ಎ ಈ ಪ್ರಯೋಗವನ್ನು ನಡೆಸಿ, ಜೂಸ್ ನೌಕೆಯನ್ನು ಗುರುವಿನಲ್ಲಿಗೆ ತಲುಪಿಸಲಿದೆ.
ಗುರುವಿನಲ್ಲಿ ಏನೇನು ಅಧ್ಯಯನ?
ಗುರುವಿನ ಉಪಗ್ರಹಗಳ ಅಧ್ಯಯನಕ್ಕಾಗಿಯೇ ಸಿದ್ಧಪಡಿಸಿರುವ ಮೊದಲ ನೌಕೆಯಿದು. ಗುರು ಮೂರು ದೈತ್ಯ ಉಪಗ್ರಹಗಳನ್ನು ಹೊಂದಿದೆ. ಗ್ಯಾನಿಮೇಡ್, ಕ್ಯಾಲಿಸ್ಟೋ ಹಾಗೂ ಯುರೋಪಾ. ಈ ಉಪಗ್ರಹಗಳಲ್ಲಿ ಭೂಮಿಯಲ್ಲಿರುವಂತೆ ಸಮುದ್ರಗಳಿರಬಹುದು ಹಾಗೂ ಇವುಗಳು ಹಿಮಗಳಿಂದ ಆವೃತವಾಗಿವೆ ಎಂದು ಊಹಿಸಲಾಗಿದ್ದು, ಗುರು ಗ್ರಹದ ಉಗಮ, ಇತಿಹಾಸ ಹಾಗೂ ಅದರ ವಿಕಾಸವನ್ನು ಅರ್ಥೈಸಿಕೊಳ್ಳುವುದು ಈ ಮಿಷನ್‌ನ ಮೂಲ ಉದ್ದೇಶ. ಗ್ರಹಗಳು ಹಾಗೂ ಘಟಕಗಳ ಕಾಲಾಂತರದಲ್ಲಿ ಆಗುವ ಬದಲಾವಣೆಯ ಒಳನೋಟವನ್ನು ಇದು ನೀಡಲಿದೆ.
ಗುರುವಿನ ಮೂರು ಪ್ರಮುಖ ಉಪಗ್ರಹಗಳಲ್ಲಿ ಒಂದಾಗಿರುವ ಗ್ಯಾನಿಮೇಡ್‌ನ ಅಧ್ಯಯನಕ್ಕೆ ಈ ಜೂಸ್ ಮಿಷನ್ ಯೋಜನೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಗುರುವಿನ ಅನಂತರ ಗ್ಯಾನಿಮೇಡ್‌ನ ಕಕ್ಷೆಯಲ್ಲಿ ಇಳಿಯುವ ಜೂಸ್, ಗ್ಯಾನಿಮೇಡ್‌ನ ರಚನೆ, ಗುರುತ್ವಾಕರ್ಷಣೆ, ಚಲನೆ, ಆಕಾರದ ಕುರಿತು ಸಂಪೂರ್ಣ ಚಿತ್ರಣ ನೀಡಲಿದೆ.
2023ರ ಎಪ್ರಿಲ್‌ನಲ್ಲಿ ಉಡಾವಣೆಗೊಂಡಿರುವ ಜೂಸ್ ನೌಕೆ, 2026ರಲ್ಲಿ ಶುಕ್ರ ಗ್ರಹ ಹಾಗೂ 2029ರಲ್ಲಿ ಭೂಮಿಯ ಕಕ್ಷೆಯಲ್ಲಿ ಎರಡನೇ ಬಾರಿ ಹಾರಾಟ ನಡೆಸಿದ ಅನಂತರ 2031ಕ್ಕೆ ಗುರುವಿನ ಕಕ್ಷೆಯನ್ನು ತಲುಪಲಿದೆ. 2034ರ ವೇಳೆಗೆ ಗುರುವಿನ ಅತೀದೊಡ್ಡ ಉಪಗ್ರಹವಾದ ಗ್ಯಾನಿಮೇಡ್‌ನ ಅಧ್ಯಯನ ನಡೆಸಲಿದೆ.
ಫ್ಲೈ-ಬೈ ಕಾರ್ಯಾಚರಣೆ ಹೇಗೆ?
ಜೂಸ್ ನೌಕೆಯು ಚಂದ್ರ ಹಾಗೂ ಭೂಮಿಯ ಬಳಿ ಹಾದುಹೋಗುವ ಸಮಯದಲ್ಲಿ ವಿಜ್ಞಾನಿಗಳು ಜೂಸ್ ನೌಕೆಯ ವೇಗವನ್ನು ಕಡಿಮೆ ಮಾಡುತ್ತಾರೆ ಹಾಗೂ ಮುಂಬರುವ ವರ್ಷ ಗಳಲ್ಲಿ ಅದನ್ನು ಹೆಚ್ಚಿಸುತ್ತಾರೆ. ಈ ವಿಧಾನವು ಗುರುವಿನೆಡೆಗಿನ ನೌಕೆಯ ಪ್ರಯಾಣಕ್ಕೆ ಶಾರ್ಟ್‌ಕಟ್ ಅನ್ನು ತೆಗೆದುಕೊಳ್ಳುವ ಮಾರ್ಗವಾಗಿದೆ. ಈ ಪ್ರಯೋಗಕ್ಕೆ ಜೂನ್‌ನಿಂದಲೇ ತಯಾರಿ ಆರಂಭವಾಗಿದ್ದು ಆ.19ರಂದು ಇದರ ಮುಖ್ಯ ಘಟ್ಟವನ್ನು ತಲುಪಿದೆ. ಚಂದ್ರ ಹಾಗೂ ಭೂಮಿಯ ಬಳಿ ನೌಕೆಯು ಹಾದುಹೋಗುವ ಸಮಯದಲ್ಲಿ ವಿಜ್ಞಾನಿಗಳು ಈ ಯೋಜನೆಯ ಉಳಿದ 10 ಉಪಕರಣಗಳನ್ನು ಪರೀಕ್ಷಿಸಲಿದ್ದಾರೆ. ಜತೆಗೆ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಜೂಸ್ ನೌಕೆ ಸೆರೆ ಹಿಡಿಯಲಿದೆ. ಈ ವೇಳೆ ನೌಕೆಯು ಚಂದ್ರನಿಂದ 700 ಕಿ.ಮೀ. ಹಾಗೂ ಭೂಮಿಯಿಂದ 7,000 ಕಿ.ಮೀ. ದೂರದಲ್ಲಿರಲಿದೆ!
ಅಕ್ಟೋಬರ್‌ನಲ್ಲಿ ಗುರು ಬಳಿಗೆ ನಾಸಾ ನೌಕೆ!
ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಕೂಡ ಗುರು ಗ್ರಹಕ್ಕೆ ತನ್ನ ನೌಕೆಯನ್ನು ಕಳುಹಿಸಲು ಸಜ್ಜಾಗಿದೆ. 2024ರ ಅಕ್ಟೋಬರ್‌ನಲ್ಲಿ ನಾಸಾವು ತನ್ನ ನೌಕೆ ಯುರೋಪಾ ಕ್ಲಿಪರ್ ಅನ್ನು ಉಡಾವಣೆ ಮಾಡಲಿದೆ. ಇಎಸ್‌ಎ ಉಡಾಯಿಸಿರುವ ಜೂಸ್ ನೌಕೆಯು ಗುರುವಿನ ಕಕ್ಷೆಯನ್ನು ತಲುಪುವ ವೇಳೆಗಾಗಲೇ ನಾಸಾದ ನೌಕೆಯು ಅದಾಗಲೇ ಗುರುವಿನ ಕಕ್ಷೆಗೆ ತಲುಪಿರಲಿದೆ!
ಫ್ಲೈ-ಬೈ ಎಂದರೇನು?
ಗಗನನೌಕೆ ಹಾದು ಹೋಗುವ ಒಂದು ಬಿಂದು. ಇನ್ನು ಸರಳವಾಗಿ ಹೇಳಬೇಕು ಎಂದರೆ ಗಗನನೌಕೆಯು ಗ್ರಹ ಅಥವಾ ಉಪಗ್ರಹಕ್ಕೆ ಹತ್ತಿರದ ಒಂದು ಬಿಂದುವಿನಲ್ಲಿ ಬಂದು ಹೋಗುವುದು ಎಂದರ್ಥ.
– ವಿಧಾತ್ರಿ ಭಟ್, ಉಪ್ಪುಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.