ಬಿಎಸ್‌ವೈ, ಸಿದ್ದು ತವರು ಭಾಗದ ಸಕ್ಕರೆ ಕಾರ್ಖಾನೆ ಉಳಿಸಿ
ಹೀಗೆ ಪಾಳು ಬಿಟ್ಟರೆ ಕಾರ್ಖಾನೆ ಇತಿಹಾಸ ಪುಟ ಸೇರಲಿದೆ..
Team Udayavani, Mar 5, 2021, 6:46 PM IST
ಕೆ.ಆರ್.ನಗರ: ಜಿಲ್ಲೆಯ ರೈತರ ಜೀವನಾಡಿ, ಲಕ್ಷಾಂತರ ಕಬ್ಬು ಬೆಳೆಗಾರರಿಗೆ ನೆರವಾಗಿದ್ದ ಪ್ರಸಿದ್ಧ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಕಳೆದ 9 ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತವಾಗಿದೆ.
ಹಲವರ ಪರಿಶ್ರಮದಿಂದ ಸ್ಥಾಪಿತವಾಗಿದ್ದ ಕಾರ್ಖಾನೆ ಪುನಾರಂಭಕ್ಕೆ ಜನಪ್ರತಿನಿಧಿಗಳೂ ಇಚ್ಛಾಶಕ್ತಿ ತೋರುತ್ತಿಲ್ಲ. ಈಭಾಗದ ಜನರು ಕೂಡ ಧ್ವನಿ ಎತ್ತುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಶ್ರೀರಾಮ ಸಕ್ಕರೆ ಕಾರ್ಖಾನೆ ಇತಿಹಾಸ ಪುಟಕ್ಕೆ ಸೇರಲಿದೆ.
1974ರಲ್ಲಿ 12 ಕೋಟಿ ರೂ. ಮೂಲ ಬಂಡವಾಳದೊಂದಿಗೆ ಮಾಜಿ ಶಾಸಕ ಕೆಂಚೇಗೌಡರ ನೇತೃತ್ವದಲ್ಲಿ ಆರಂಭವಾದ ಈ ಸಕ್ಕರೆ ಕಾರ್ಖಾನೆ ಲಾಭದಾಯಕವಾಗಿ ಮುನ್ನಡೆಯುತ್ತಿತ್ತು.ಆದರೆ, ಆಡಳಿತ ಮಂಡಳಿಗಳ ನಿರ್ವಹಣೆಯ ವೈಫಲ್ಯದಿಂದ ವರ್ಷದಿಂದ ವರ್ಷಕ್ಕೆ ಅವನತಿಯತ್ತ ಸಾಗಿತು. ಪ್ರಸಕ್ತ ಕಾರ್ಖಾನೆಯಲ್ಲಿ ಒಟ್ಟು 16 ಸಾವಿರ ಷೇರುದಾರ ಸದಸ್ಯರಿದ್ದು, ಕಾರ್ಖಾನೆ ಕೇವಲ ಕೆ.ಆರ್.ನಗರ ತಾಲೂಕು ಮಾತ್ರವಲ್ಲದೆ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ಪೇಟೆಮತ್ತು ಎಚ್.ಡಿ.ಕೋಟೆ ತಾಲೂಕುಗಳ ಸಹಸ್ರಾರು ಕಬ್ಬು ಬೆಳೆಗಾರರು ಈ ಕಾರ್ಖಾನೆಯನ್ನೇ ಆಶ್ರಯಿಸಿದ್ದರು.
ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ತಾಲೂಕಿನಲ್ಲಿ 5 ಸಾವಿರ ರೈತರು 6-7ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಕಬ್ಬುಬೆಳೆಯುತ್ತಿದ್ದರು. ಅದು ಸ್ಥಗಿತಗೊಂಡ ನಂತರ ಕೇವಲ 3 ರಿಂದ 4 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅಲ್ಲದೆ ತಾವು ಬೆಳೆದ ಕಬ್ಬನ್ನು ಪಾಂಡವಪುರ, ಶ್ರೀನಿವಾಸಪುರ ಮತ್ತಿತರ ನೂರಾರು ಕಿಲೋ ಮೀಟರ್ ದೂರದಲ್ಲಿರುವ ಕಾರ್ಖಾನೆಗಳಿಗೆ ಸಾಗಿಸಲಾಗುತ್ತದೆ. ಇದರಿಂದ ರೈತರು ಹೆಚ್ಚು ಸಾಗಣೆ ವೆಚ್ಚ ಭರಿಸಬೇಕಾಗಿದೆ.
ಸಕ್ಕರೆ ಕಾರ್ಖಾನೆ ಹಿಂದಿನಿಂದಲೂ ರಾಜಕೀಯ ಮುಖಂಡರಿಗೆ ರಾಜಕಾರಣ ಮಾಡಲು ಅಸ್ತ್ರವಾಗಿ ಬಳಕೆಯಾಗುತ್ತಿದೆಯೇ ಹೊರತು ಶಾಶ್ವತ ಪರಿಹಾರ ಕಂಡು ಹಿಡಿಯುವ ದಿಸೆಯಲ್ಲಿ ಯಾವುದೇ ರಾಜಕಾರಣಿಗಳು ಗಂಭೀರ ಚಿಂತನೆ ನಡೆಸಿಲ್ಲ.ಪರಿಣಾಮ ಪ್ರಸ್ತುತ ಹೀನಾಯ ಸ್ಥಿತಿಗೆ ತಲುಪಿ ರೈತರಪಾಲಿಗೆ ಸಿಹಿಯಾಗಬೇಕಿದ್ದ ಕಾರ್ಖಾನೆ ಕಹಿಯಾಗಿ ಪರಿಣಮಿಸಿದೆ.
2006ರಲ್ಲಿ ಕಾರ್ಖಾನೆಯಲ್ಲಿ ಅಧಿಕಾರ ನಡೆಸುತ್ತಿದ್ದ ಆಡಳಿತ ಮಂಡಳಿ ರಾಜಕೀಯ ಕಾರಣಗಳಿಂದ ರಾಜೀನಾಮೆ ನೀಡಿ ನಿರ್ಗಮಿಸಿತು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಶಾಸಕ ಸಾ.ರಾ.ಮಹೇಶ್ ಖಾಸಗಿಯವರಿಗೆ ವಹಿಸಲು ಒತ್ತಡ ತಂದಿದ್ದರಿಂದ ಚೆನ್ನೈ ಮೂಲದ ಅಂಬಿಕಾ ಶುಗರ್ಸ್ ಕಂಪನಿ 22 ವರ್ಷಗಳ ಅವಧಿಗೆ 169 ಕೋಟಿ ರೂ.ಗಳಿಗೆ ಗುತ್ತಿಗೆ ಪಡೆಯಿತು.ಆದರೆ, ಗುತ್ತಿಗೆ ನೀಡಿಕೆಯಲ್ಲಿ ಎಡವಿದ ಸರ್ಕಾರ ಅಂಬಿಕಾ ಶುಗರ್ಸ್ಗೆ ಕಾರ್ಖಾನೆಯನ್ನು ನೋಂದಣಿ ಮಾಡಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಕಂಪನಿಯವರು ಸರ್ಕಾರಕ್ಕೆ ತೆರಿಗೆ ವಂಚಿಸಿ 5ವರ್ಷಗಳ ನಂತರ ರೈತರು ಮತ್ತು ಕಾರ್ಮಿಕರಿಗೆ ಕೈಕೊಟ್ಟು ಕಾರ್ಖಾನೆಯಿಂದ ಕಾಲ್ಕಿತ್ತಿತು. ಇದರಿಂದ ತಾಲೂಕಿನ ಸಾವಿರಾರು ರೈತರು, 400ಕ್ಕೂ ಅಧಿಕ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು ಅತಂತ್ರರಾಗಿದ್ದಾರೆ.
ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಕಾರ್ಖಾನೆಯ ಪುನರಾರಂಭದ ಬಗ್ಗೆ ಮನಸ್ಸು ಮಾಡಿಲ್ಲ.ಇತ್ತೀಚೆಗೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಲು ಹಲವಾರು ಬಾರಿ ಟೆಂಡರ್ ಕರೆಯಲಾಗಿತ್ತಾದರೂ ಯಾರೂ ಟೆಂಡರ್‌ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರಿಂದ ಮತ್ತೆ ನನೆಗುದಿಗೆ ಬಿದ್ದಿದೆ. ಸಕ್ಕರೆ ಕಾರ್ಖಾನೆಯನ್ನುಸರ್ಕಾರವೇ ವಹಿಸಿಕೊಂಡು ಕೂಡಲೇ ಕಬ್ಬು ಅರೆಯುವ ಕಾರ್ಯ ಆರಂಭಿಸದಿದ್ದರೆ ಯಂತ್ರೋಪಕರಣಗಳು ತುಕ್ಕು ಹಿಡಿದು ಹಾಳಾಗುವುದು ನಿಶ್ಚಿತ. ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರು ಕಾರ್ಖಾನೆಯ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದು, ಪರಿಹಾರ ಮತ್ತು ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸುತ್ತಿಲ್ಲ. ಸರ್ಕಾರ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳದಿದ್ದರೆ ರೈತರ ಪರಿಶ್ರಮದಿಂದಲೇ ಜನ್ಮ ತಾಳಿದ ಕಾರ್ಖಾನೆ ಬಾಗಿಲು ಹಾಕಿಕೊಳ್ಳುವ ದಿನಗಳು ದೂರವಿಲ್ಲ.
ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿ ಗಳಾಗಿದ್ದಾಗ ಶೀಘ್ರದಲ್ಲೇ ಕಾರ್ಖಾನೆ ಆರಂಭವಾಗುತ್ತದೆ ಎಂದು ರೈತರು ನಿರೀಕ್ಷೆಯ ಮೂಟೆಯನ್ನೇ ಹೊತ್ತಿದ್ದರು. ಆದರೆ, ಒಮ್ಮೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಸಕ್ಕರೆ ಕಾರ್ಖಾನೆಯ ಬಗ್ಗೆ ತುಟಿ ಬಿಚ್ಚಲಿಲ್ಲ. ಜತೆಗೆ ಕಾರ್ಖಾನೆ ವ್ಯಾಪ್ತಿಯ ಆಡಳಿತ ಪಕ್ಷದ ಶಾಸಕರೂ ಅವರ ಗಮನಕ್ಕೆ ತರಲಿಲ್ಲ.
ಪ್ರಸಕ್ತ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು,ರೈತಪರ ಹೋರಾಟಗಾರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿರುವುದರಿಂದ ಈಗಲಾದರೂ ಮುಖ್ಯಮಂತ್ರಿಗಳು 9 ವರ್ಷಗಳಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭದ ಬಗ್ಗೆಗಮನ ಹರಿಸಬೇಕು ಎಂಬುದು ತಾಲೂಕಿನ ರೈತರಒಕ್ಕೊರಲ ಒತ್ತಾಯವಾಗಿದೆ.
- ಗೇರದಡ ನಾಗಣ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.