Talk Fight: ನಿನ್ನ ಭಾಷೆಯಲ್ಲೇ ಸತ್ಯಾಂಶ ಬಿಚ್ಚಿಡುವೆ: ಸಚಿವ ಎಂ.ಬಿ.ಪಾಟೀಲ್ ಎಚ್ಚರಿಕೆ
ಮಾಜಿ ಸಚಿವ ಮುರುಗೇಶ ನಿರಾಣಿಗೆ ಏಕವಚನದಲ್ಲೇ ವಾಗ್ದಾಳಿ, ಪ್ರತ್ಯುತ್ತರ, ನನ್ನ ತಂಟೆಗೆ ಬಂದವರಿಗೆ ಹಿಂದೆಯೂ ಬಿಟ್ಟಿಲ್ಲ: ಕೈಗಾರಿಕಾ ಸಚಿವ
Team Udayavani, Sep 1, 2024, 9:22 PM IST
ವಿಜಯಪುರ: ಮಿಸ್ಟರ್ ನಿರಾಣಿ ತಾನಾಗಿಯೇ ‘ದನಕಾಯುವವ’ ಎಂದು ತಿಳಿದುಕೊಂಡು, ಸಂಸ್ಥೆ ಮತ್ತು ನನ್ನ ಕುರಿತು ಏಕವಚನದಲ್ಲಿ ಕೆಟ್ಟ ಭಾಷೆ ಬಳಸಿದ್ದಾನೆ. ನಾನು ವಿಜಯಪುರ ಜಿಲ್ಲೆಯವ. ಇಂತಹ ಎಲ್ಲ ಭಾಷೆಗಳು ನನಗೂ ಬರುತ್ತವೆ. ನಾನೇ ಸ್ವತಃ ಬಾಗಲಕೋಟೆಗೆ ಬಂದು ನಿನ್ನ ಭಾಷೆಯಲ್ಲಿಯೇ ನಿನ್ನ ಸತ್ಯಾಂಶ ಬಿಚ್ಚಿಡುತ್ತೇನೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಎಚ್ಚರಿಸಿದ್ದಾರೆ.
ಮಿ.ಮುರುಗೇಶ ನಿರಾಣಿ ಬಾಗಲಕೋಟೆಯಲ್ಲಿ ನೀನು ಮಾಡಿರುವ ಪತ್ರಿಕಾಗೋಷ್ಠಿ ಗಮನಿಸಿದ್ದೇನೆ. ಸಿದ್ದಾರ್ಥ ಟ್ರಸ್ಟ್ ಗೆ ಯಾವುದೇ ರಿಯಾಯಿತಿ ಇಲ್ಲದೆ ಸಿಎ ನಿವೇಶನ ನೀಡಿದ್ದರೂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಅನಾವಶ್ಯಕವಾಗಿ ಎಳೆದು ತಂದು ಹಗರಣವಾಗಿದೆ ಎಂದು ಬಿಜೆಪಿಯವರು ಬಿಂಬಿಸುತ್ತಿರುವುದಕ್ಕೆ ಪ್ರತಿಯಾಗಿ ನಾನು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಅವಧಿಯಲ್ಲಿ ಬಿಜೆಪಿ ನಾಯಕರು ಯಾರು ಯಾರು ಎಷ್ಟೆಷ್ಟು ಲಾಭ ಪಡೆದಿದ್ದಾರೆ ಎಂಬುದು ತಿಳಿಸುವುದು ನನ್ನ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಮಿ.ನಿರಾಣಿ ತನ್ನ ಶಿಕ್ಷಣ ಸಂಸ್ಥೆ ಮತ್ತು ಸಕ್ಕರೆ ಕಾರ್ಖಾನೆಗೆ ಪಡೆದಿರುವ ಲಾಭದ ಮಾಹಿತಿಯನ್ನು ನೀಡಿದ್ದೇನೆ ಎಂದು ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದನಕಾಯುವುದು ಗೌರವದ ಕಾಯಕ:
ಆದರೆ, ‘ದನಕಾಯುವವನು’ ಎಂಬ ಶಬ್ದವನ್ನು ನಾನು ಎಲ್ಲಿಯೂ ಬಳಸಿಲ್ಲ ಮತ್ತು ಏಕವಚನದಲ್ಲೂ ನಾನು ಮಾತನಾಡಿಲ್ಲ. ಅಷ್ಟಕ್ಕೂ, ದನಕಾಯುವುದು ಗೌರವದ ಕಾಯಕ. ದನಕಾಯುವವರನ್ನು ನಾನು ಗೌರವಿಸುತ್ತೇನೆ. ಅನಾವಶ್ಯಕವಾಗಿ ನನ್ನ ತಂಟೆಗೆ ಬಂದವರಿಗೆ ಹಿಂದೆಯೂ ಬಿಟ್ಟಿಲ್ಲ, ಇಂದು ಮತ್ತು ಮುಂದೆಯೂ ಬಿಡುವುದಿಲ್ಲ. ಅದರ ಕಹಿ ಅನುಭವ ಈ ಹಿಂದೆ ನಿನಗೆ ಆಗಿದೆ ಎನ್ನುವುದನ್ನು ನೆನಪಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನು, ತಮ್ಮ ಕಾಲದಲ್ಲಿ ಕೈಗಾರಿಕಾ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಸಂಬಂಧ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ಮಾಡಿದ್ದ ಮುರುಗೇಶ್ ನಿರಾಣಿ, ಗೌಡ ನಿನ್ನ ಗೌಡಕಿಯ ದರ್ಪ, ಅಧಿಕಾರಿದ ದರ್ಪವನ್ನ ನಮ್ಮ ಮುಂದೆ ತೋರಿಸಬೇಡ. ನೀನು ಒಂದೇ ಒಂದು ಭ್ರಷ್ಟಾಚಾರ ಮಾಡಿಲ್ಲ ಅಂತ ತಾಯಿ ಮೇಲೆ ಪ್ರಮಾಣ ಮಾಡು. ಇದು ನನ್ನ ಸವಾಲು ಎಂದು ಎಂ.ಬಿ. ಪಾಟೀಲ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.