ತಾಲೂಕು ರೇಷ್ಮೆ ಇಲಾಖೆ ಕಚೇರಿಗಳಿಗೆ ಬೀಗ
ದ.ಕ., ಉಡುಪಿ ಜಿಲೆಗಳಲ್ಲಿ ರೇಷ್ಮೆ ಬೆಳೆ ಕುಸಿತ
Team Udayavani, Mar 4, 2023, 2:43 PM IST
ಬಂಟ್ವಾಳ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿಕರ ಸಂಖ್ಯೆ ಕುಸಿಯುತ್ತಿದ್ದಂತೆ ಉಭಯ ಜಿಲ್ಲೆಗಳ ತಾಲೂಕುಗಳಲ್ಲಿದ್ದ ರೇಷ್ಮೆ ಇಲಾಖೆಯ ಕಚೇರಿಗಳಿಗೆ ಬೀಗ ಬಿದ್ದಿದೆ. ಈ ತನಕ ದ.ಕ. ಜಿಲ್ಲೆಯಲ್ಲಿ ಇದ್ದ ಏಕೈಕ ತಾಲೂಕು ಕಚೇರಿ ಬಂಟ್ವಾಳದ ಏಕೈಕ ಸಿಬಂದಿ ಜ. 31ರಂದು ನಿವೃತ್ತರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ ಕಾರ್ಕಳದಲ್ಲಿ ಮಾತ್ರ ತಾಲೂಕು ರೇಷ್ಮೆ ಇಲಾಖೆ ಕಚೇರಿ ಕಾರ್ಯಾಚರಿಸುತ್ತಿದೆ. ಉಭಯ ಜಿಲ್ಲೆಗಳಲ್ಲಿ ಜಿಲ್ಲಾ ಕಚೇರಿಗಳು ಮಾತ್ರ ಒಂದೆರಡು ಸಿಬಂದಿಯೊಂದಿಗೆ ಕಾರ್ಯಾಚರಿಸುತ್ತಿವೆ.
ತಲಾ 10 ಹೆಕ್ಟೇರ್‌ನಲ್ಲಿ ಬೆಳೆ
ಒಂದು ಕಾಲದಲ್ಲಿ ಗರಿಷ್ಠ ರೇಷ್ಮೆ ಬೆಳೆಗಾರರನ್ನು ಹೊಂದಿದ್ದ ಅವಿಭಜಿತ ದ.ಕ.ದಲ್ಲಿ ವರ್ಷ ಕಳೆದಂತೆ ಬೆಳೆಗಾರರು ಕಡಿಮೆಯಾಗುತ್ತಾ ಬಂದು ಸದ್ಯ ಉಭಯ ಜಿಲ್ಲೆಗಳಲ್ಲಿ ತಲಾ 10 ಹೆಕ್ಟೇರ್‌ನಷ್ಟು ಮಾತ್ರ ರೇಷ್ಮೆ ಬೆಳೆ ಉಳಿದಿರಬಹುದು. ಬೆಳೆಗಾರರ ಸಂಖ್ಯೆಯೂ 60ರಷ್ಟಿರಬಹುದು ಎಂದು ಇಲಾಖೆಯ ಮೂಲಗಳು ಹೇಳುತ್ತಿವೆ. 2020ರ ಆಗಸ್ಟ್‌ನಲ್ಲಿ ಇಲಾಖೆಯ ಮಾಹಿತಿ ಪ್ರಕಾರ ದ.ಕ.ದಲ್ಲಿ 30 ಎಕ್ರೆ ವ್ಯಾಪ್ತಿಯಲ್ಲಿ 43 ಮಂದಿ ಹಾಗೂ ಉಡುಪಿಯಲ್ಲಿ 59 ಕೃಷಿಕರು 60 ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆಯುತ್ತಿದ್ದರು. ಈಗ ಸಂಬಂಧಪಟ್ಟ ಸಿಬಂದಿ, ಕಚೇರಿ ಇಲ್ಲದ ಕಾರಣ ಸ್ಪಷ್ಟವಾದ ಮಾಹಿತಿ ಕೂಡ ಇಲ್ಲ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹೆಚ್ಚಿನ ಬೆಳೆಗಾರರು, ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಒಂದಷ್ಟು ಬೆಳೆಗಾರರು ಉಳಿದಿದ್ದಾರೆ.
ಕಾರ್ಕಳದಲ್ಲಿ ನೂಲು ಬಿಚ್ಚುವ ಕೇಂದ್ರ
ಈ ಹಿಂದೆ ಬೆಳ್ತಂಗಡಿಯ ಗೇರುಕಟ್ಟೆ ಮತ್ತು ಪುತ್ತೂರಿನ ಕೊಯಿಲದಲ್ಲಿ ರೇಷ್ಮೆ ಇಲಾಖೆಯ ಫಾರ್ಮ್ ಕಾರ್ಯಾಚರಿ ಸುತ್ತಿದ್ದು, ಕೋಯಿಲದ ಫಾರ್ಮ್ ಹಲವು ವರ್ಷಗಳ ಹಿಂದೆಯೇ ಬಂದ್ ಆಗಿತ್ತು. ಪ್ರಸ್ತುತ ಗೇರುಕಟ್ಟೆಯ ಫಾರ್ಮ್ನಲ್ಲಿ 1 ಡಿ ಗ್ರೂಪ್ ನೌಕರ ಮಾತ್ರ ಇದ್ದಾರೆ. ಕಾರ್ಕಳದಲ್ಲಿ ರೇಷ್ಮೆ ಖರೀದಿ ಸಂಬಂಧಿಸಿ ಚಿಕ್ಕ ಮಾರುಕಟ್ಟೆ ಜತೆಗೆ ರೇಷ್ಮೆ ನೂಲು ಬಿಚ್ಚುವ ಕೇಂದ್ರವೂ ಇರುವುದರಿಂದ ಅಲ್ಲಿ ಒಂದಷ್ಟು ಬೆಳೆಗಾರರು ಉಳಿದಿದ್ದಾರೆ.
ಹಾಸನ ಜಿಲ್ಲೆಯವರಿಗೆ ಪ್ರಭಾರ
ದ.ಕ., ಉಡುಪಿ ಜಿಲ್ಲೆಗಳಲ್ಲಿ ಸಿಬಂದಿ ನಿವೃತ್ತಿಯಾಗುತ್ತಿದ್ದಂತೆ ಇಲಾಖೆಯ ಕಚೇರಿಗಳನ್ನು ಮುಚ್ಚುತ್ತಾ ಬರಲಾಗಿದ್ದು, ಸುಳ್ಯ ಕಚೇರಿ ಮುಚ್ಚಿದ ಬಳಿಕ ಅದನ್ನು ಪುತ್ತೂರಿಗೆ ಸ್ಥಳಾಂತರಿಸಲಾಗಿತ್ತು. ಬಳಿಕ ಪುತ್ತೂರಿನ ಕಚೇರಿಯ ಜತೆಗೆ ಬೆಳ್ತಂಗಡಿಯ ಕಚೇರಿಯೂ ಮುಚ್ಚಿದೆ. ಬಂಟ್ವಾಳದ ಕಚೇರಿಯ ಏಕೈಕ ಸಿಬಂದಿ ಜ. 31ರಂದು ನಿವೃತ್ತರಾಗಿದ್ದಾರೆ. ಪ್ರಸ್ತುತ ಮಂಗಳೂರಿನಲ್ಲಿ ಮಾತ್ರ ಜಿಲ್ಲಾ ಕಚೇರಿ (ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ) ಕಾರ್ಯಾಚರಿಸುತ್ತಿದೆ.
ಉಡುಪಿಯಲ್ಲಿ ಕುಂದಾಪುರ ಕಚೇರಿಯನ್ನು ಜಿಲ್ಲಾ ಕಚೇರಿಗೆ ಸ್ಥಳಾಂತರಿಸಲಾಗಿದ್ದು, ತಾಲೂಕಿನಲ್ಲಿ ಕಾರ್ಕಳದಲ್ಲಿ ಮಾತ್ರ ಕಚೇರಿ ಕಾರ್ಯಾಚರಿಸುತ್ತಿದೆ. ದ.ಕ. ಹಾಗೂ ಉಡುಪಿ ಸೇರಿ ಜಿಲ್ಲಾ ಮಟ್ಟಕ್ಕೆ ಒಂದೇ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ ಇದ್ದು, 2021ರ ಜುಲೈಯಲ್ಲಿ ಅವರ ನಿವೃತ್ತಿಯ ಬಳಿಕ ಪ್ರಸ್ತುತ ಹಾಸನ ಜಿಲ್ಲೆಯ ಸಹಾಯಕ ನಿರ್ದೇಶಕರು ಪ್ರಭಾರದಲ್ಲಿದ್ದಾರೆ.
ಕರಾವಳಿಯ ವಾತಾವರಣ ರೇಷ್ಮೆ ಬೆಳೆಗೆ ಸೂಕ್ತವಿಲ್ಲದೆ ಇರುವುದರಿಂದ ಬೆಳೆಗಾರರ ಸಂಖ್ಯೆ ಕ್ಷೀಣಿಸಿ, ಪ್ರಸ್ತುತ ಉಭಯ ಜಿಲ್ಲೆಗಳಲ್ಲಿ ತಲಾ 10 ಹೆಕ್ಟೇರ್‌ನಷ್ಟು ರೇಷ್ಮೆ ಬೆಳೆ ಇರಬಹುದು. ಸಿಬಂದಿ ನಿವೃತ್ತಿಯಾಗುತ್ತಿದ್ದಂತೆ ಕಚೇರಿಗಳನ್ನು ಕೂಡ ಮುಚ್ಚಿ ಇಲಾಖೆ ಬೇರೆ ಹತ್ತಿರದ ಕಚೇರಿಗೆ ಸ್ಥಳಾಂತರ ಮಾಡುತ್ತಿದೆ.
-ದೇವೇಂದ್ರ ಕುಮಾರ್, ರೇಷ್ಮೆ ಸಹಾಯಕ ನಿರ್ದೇಶಕರು, ಹಾಸನ (ದ.ಕ., ಉಡುಪಿ ಜಿಲ್ಲೆಯ ಪ್ರಭಾರಿ
ಬೆಲೆ ಕುಸಿತಕ್ಕೆ ಕಾರಣವೇನು?
ಕರಾವಳಿ ಜಿಲ್ಲೆಯಲ್ಲಿ ಮಾರುಕಟ್ಟೆ ಸಮಸ್ಯೆ ಸೇರಿದಂತೆ ಹಲವು ಕಾರಣಕ್ಕೆ ರೇಷ್ಮೆ ಬೆಳೆ ಕುಸಿತ ಕಂಡಿದೆ. ಗೂಡುಗಳನ್ನು ಮಾರಾಟಕ್ಕೆ ಬೇರೆ ಜಿಲ್ಲೆಗಳಿಗೆ ಕೊಂಡು ಹೋಗಬೇಕಿದೆ. ಇಲ್ಲಿನ ವಾತಾವರಣ ಕೂಡ ಬೆಳೆಗೆ ಸೂಕ್ತವಿಲ್ಲದೆ ಇರುವುದು ಕುಸಿತಕ್ಕೆ ಕಾರಣ. ಅತಿಯಾದ ಮಳೆ ಹಾಗೂ ಬಿಸಿಲಿನ ಪರಿಣಾಮ ಕೃಷಿಕರು ರೇಷ್ಮೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಇತರ ಕೆಲವು ಜಿಲ್ಲೆಗಳಲ್ಲಿ 10 ಬೆಳೆಗಳನ್ನು ಬೆಳೆದರೆ, ಕರಾವಳಿಯಲ್ಲಿ 2 ಬೆಳೆಯನ್ನೇ ಕಷ್ಟದಲ್ಲಿ ಬೆಳೆಯುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿದೆ.
~ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!
ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.