ಬೆಲ್ಲದಿಂದ ಬದುಕು ಸಿಹಿ…ಉದ್ಯೋಗ ಬಿಟ್ಟು ಬಂದವ ಉದ್ಯಮಿಯಾದ!
ಪ್ರಮೋದ್‌ರ ತಂದೆ ಚಿತ್ತೂರಿ ವೆಂಕಟೇಶ್ವರ ರಾವ್, ಗಂಗಾವತಿ ತಾಲೂಕಿನ ಆಯೋಧ್ಯ ಗ್ರಾಮದವರು.
Team Udayavani, Jan 11, 2021, 6:15 PM IST
ಸಿದ್ಧಾಪುರದಿಂದ ನಂದಿಹಳ್ಳಿಗೆ ಹೋಗುವ ಒಳದಾರಿಯ ರಸ್ತೆಯಲ್ಲಿದ್ದೆವು. ಗಂಗಾವತಿ ಬಿಟ್ಟಾಗಿನಿಂದ ರಸ್ತೆಯ ಎರಡೂ ಬದಿಗೆ ಭತ್ತದ ರಾಶಿ ಹಾಕಿಕೊಂಡು ಒಣಗಿಸಲು ರೈತರು ಒದ್ದಾಡುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಉಣಿಸಿ, ಸಾಲ ಸೋಲ ಮಾಡಿ ಬೆಳೆದ ಭತ್ತವನ್ನು ಮಳೆಗೆ ಸಿಗದಂತೆ ರಕ್ಷಿಸುವ ಗಡಿಬಿಡಿಯಲ್ಲಿ ಅವರಿದ್ದರು. ಭತ್ತ ಒಣಗಿಸಿ, ಸಿಕ್ಕಷ್ಟು ಬೆಲೆಗೆ ಅದನ್ನು ಮಾರಾಟ ಮಾಡುವ ತರಾತುರಿ.
ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಸೋನಾ ಅಕ್ಕಿಯನ್ನು ತಾವೇ ನೇರ ಮಾರುಕಟ್ಟೆಗೆ ತರುವ ಪ್ರಯತ್ನಗಳೇ ಇಲ್ಲ. ಇದೇ ಗುಂಗಿನಲ್ಲಿ ಕಕ್ಕರಗೋಳದ ಪ್ರಮೋದ್ ಅವರ ತೋಟದಲ್ಲಿ ಕಾಲಿಟ್ಟೆವು. ಸಮೃದ್ಧ ನೀರಿನ ಆಸರೆಯಲ್ಲಿ, ಬಹುಬೇಡಿಕೆ ಇರುವ ಸೋನಾ ಮಸೂರಿ ಅಕ್ಕಿ ಬೆಳೆವ ರೈತರೇ ಹೈರಾಣಾಗಿರುವಾಗ, ಮುಳ್ಳುಗಂಟಿಗಳ ನಡುವಿನ ತೋಟದಲ್ಲಿ ಇನ್ನೇನಿರಲು ಸಾಧ್ಯ ಎಂಬ ಮನೋಭಾವ ನಮ್ಮದಾಗಿತ್ತು.
ಅಚ್ಚರಿಗೊಳಿಸುವಂತೆ ಹಸಿರಿನ ರಾಶಿ ನಮ್ಮನ್ನು ಸ್ವಾಗತಿಸಿತು. “ಸರ್, ಇದು ಒಂದು ಕಾಲಕ್ಕೆ ಕಲ್ಲು ನೆಲ. ಪಾಳು ಬಿದ್ದಿತ್ತು. ಅದನ್ನು ಸ್ವಲ್ಪ ಸ್ವಲ್ಪ ರೆಡಿ ಮಾಡಿಕೊಂಡು ಈ ಸ್ಥಿತಿಗೆ ತಂದಿದ್ದೀವಿ’- ಪ್ರಮೋದ್ ಹೆಮ್ಮೆಯಿಂದ ಹೇಳಿದರು. ಅವರ ಮಾತಿಗೆ, ತೊನೆಯುತ್ತಿದ್ದ ಕಬ್ಬು ಬಾಳೆ ಸಾಕ್ಷಿಯಾಗಿದ್ದವು. ಪ್ರಮೋದ್, ಚಿತ್ತೂರಿ ನಗರದಲ್ಲಿ ಬೆಳೆದ ಹುಡುಗ. ಹೈದರಾಬಾದ್ ನಲ್ಲಿ ಬಿ. ಟೆಕ್ ಮುಗಿಸಿ, ದೆಹಲಿಯಲ್ಲಿ ಎಂಬಿಎ ಪದವಿ ಪಡೆದರು. ನಾಲ್ಕು ವರ್ಷ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿದರು.
ಪ್ರಮೋದ್‌ರ ತಂದೆ ಚಿತ್ತೂರಿ ವೆಂಕಟೇಶ್ವರ ರಾವ್, ಗಂಗಾವತಿ ತಾಲೂಕಿನ ಆಯೋಧ್ಯ ಗ್ರಾಮದವರು. ಇವರದು ಆಂಧ್ರದಿಂದ ವಲಸೆ ಬಂದ ಕೃಷಿ ಕುಟುಂಬ. ಹಸುಗಳ ಬಗ್ಗೆ ಬಹು ಪ್ರೀತಿ. 2013ರಲ್ಲಿ ಗೋಶಾಲೆ ಮಾಡುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ ಗ್ರಾಮದ ಗುಡ್ಡದ ಅಂಚಿನ 80 ಎಕರೆ ಹೊಲ ಖರೀದಿಸಿದರು. ಓಂಗೋಲ್ ಜಾತಿಯ ಹಸುಗಳ ಸಂಗೋಪನೆಗೆ ನಾಂದಿ ಹಾಡಿದರು. ಕಬ್ಬು, ಬಾಳೆ ಕೃಷಿ ಆರಂಭಿಸಿದರು. ತಮ್ಮ ಹೊಲದಲ್ಲಿ ಬೆಳೆದ ಉತ್ಪನ್ನಗ ಳನ್ನು ದಾಸ್ತಾನು ಮಾಡಿ ಇಡಲು ಗೋಡನ್ ಒಂದರ ಅಗತ್ಯವಿತ್ತು. ಗಂಗಾವತಿಯ ಹೊರವಲಯದಲ್ಲಿ ಗೋಡನ್‌ನ ನಿರ್ಮಾಣ
ಮಾಡಿದರು. ಅದರ ಮುಂದಿನ ಜಾಗವನ್ನು ಖಾಲಿ ಬಿಡುವ ಬದಲು ಸಾವಯವ ಮಳಿಗೆ ಆರಂಭಿಸುವ ಆಲೋಚನೆ ಬಂತು. ಪರಿಣಾಮ, ಸಿವಿಆರ್
ಆರ್ಗಾನಿಕ್ ಜನ್ಮ ತಾಳಿತು.
ನೌಕರಿ ಬಿಟ್ಟು ಬಂದರು!
ಈ ಸಂದರ್ಭದಲ್ಲಿ ದೆಹಲಿಯಲ್ಲಿದ್ದ ಪ್ರಮೋದ್, ಸಾವಯವ ಮಳಿಗೆ ನೋಡಿಕೊಳ್ಳಲು ಕೆಲಸ ಬಿಟ್ಟು ಗಂಗಾವತಿಗೆ ವಾಪಸಾದರು. ತಮ್ಮ ತೋಟದ ಉತ್ಪನ್ನಗಳನ್ನು ತಾವೇ ನೇರವಾಗಿ ಮಾರಾಟ ಮಾಡಲು ಮುಂದಾದರು. ಸಾವಯವ ಕಬ್ಬಿನ ತಾಜಾ ಜ್ಯೂಸ್, ಎಣ್ಣೆ ಮಿಲ್ ಸಾವಯವ ಮಳಿಗೆಯ
ಭಾಗವಾದವು. ಸಾವಯವ ಬೆಲ್ಲಕ್ಕೆ ಇರುವ ಬೇಡಿಕೆಯನ್ನು ಗುರುತಿಸಿದ ಪ್ರಮೋದ್, ತಮ್ಮ ಕಕ್ಕರಗೋಳ ತೋಟದಲ್ಲಿ ಬೆಲ್ಲ ತಯಾರಿಕಾ ಘಟಕ ಆರಂಭಿಸಿದರು. ಮಹಾರಾಷ್ಟ್ರದ ಕಬ್ಬಿನ ಗಾಣಗಳ ಎಡತಾಕಿ, ಗೂಗಲ್‌ನಲ್ಲಿ ಸಾಕಷ್ಟು ಮಾಹಿತಿ ಸಂಗ್ರಹಿಸಿ, ಸಾಂಪ್ರದಾಯಿಕ ಬೆಲ್ಲಕ್ಕಿಂತ ಭಿನ್ನವಾದ ಮಾದರಿಯಲ್ಲಿ ಬೆಲ್ಲ ಮಾಡುವ ಬಗೆಯನ್ನು ಕಲಿತರು; ಅದೂ ಅಪ್ಪಟ ಸಾವಯವ ವಿಧಾನದಲ್ಲಿ.
ಬೆಲ್ಲದಿಂದ ಬದುಕು ಸಿಹಿ…
ಈಗ ಪ್ರಮೋದ್, ಇಟ್ಟಿಗೆ ರೂಪದ ಅರ್ಧ ಕೆಜಿಯ ಬೆಲ್ಲದ ಅಚ್ಚು, ಬೆಲ್ಲದ ಪುಡಿ, ಬೆಲ್ಲದ ಹರಳು, ಶುಂಠಿ ಬೆಲ್ಲ ಮತ್ತು ಕಾಕಂಬಿ ಉತ್ಪಾದನೆ ಮಾಡುತ್ತಿದ್ದಾರೆ. ಹೈದರಾಬಾದ್, ದೆಹಲಿ, ಬೆಂಗಳೂರಿನ ಗ್ರಾಹಕರಿಗೆ ಪಾರ್ಸಲ್ ಮೂಲಕ ನೇರ ಮಾರಾಟ ಮಾಡುತ್ತಿದ್ದಾರೆ. ಅಚ್ಚು ಬೆಲ್ಲ ಕೆಜಿಗೆ ರೂ.80 , ಬೆಲ್ಲದ ಪುಡಿ ರೂ. 150, ಶುಂಠಿ ಬೆಲ್ಲಕ್ಕೆ ರೂ. 130 ದರ ನಿಗದಿ ಮಾಡಿದ್ದಾರೆ. ಅಮೆಜಾನ್ ಮೂಲಕವೂ ಮಾರಾಟ ಮಾಡುತ್ತಿದ್ದಾರೆ. ವರ್ಷಕ್ಕೆ 25 ಲಕ್ಷ ಮೌಲ್ಯದ ಬೆಲ್ಲ
ಮಾರಾಟ ಮಾಡುತ್ತಾರೆ.
ತಮ್ಮ ಗಾಣಕ್ಕೆ ಬೇಕಾದ ಕಬ್ಬನ್ನು ತಮ್ಮ ಹೊಲದಲ್ಲೇ ಬೆಳೆಸುವುದು ಪ್ರಮೋದ್ ಅವರ ವಿಶೇಷ. 35 ಎಕರೆ ವಿಸ್ತಾರದ ಜಮೀನಿನಲ್ಲಿ ಕಬ್ಬು ವಿವಿಧ ಹಂತಗಳಲ್ಲಿ
ಬೆಳೆಯುವುದರಿಂದ ವರ್ಷಪೂರ ಬೆಲ್ಲದ ಉತ್ಪಾದನೆ ಸಾಧ್ಯವಾಗಿದೆ. ಗೋಶಾಲೆಯಲ್ಲಿರುವ 30 ಹಸುಗಳ ಸಗಣಿ ಗೊಬ್ಬರ ತೋಟಕ್ಕೆ ಸಾಕು. ಹೊರಗಿನಿಂದ
ಏನನ್ನೂ ಕೊಂಡು ತರುವ ಅಗತ್ಯ ಇಲ್ಲ. ಸಮೀಪದ ತುಂಗಭದ್ರಾ ನದಿಯೇ ಕೃಷಿ ಚಟುವಟಿಕೆಗೆ ಇರುವ ನೀರಿನ ಆಸರೆ. ಬೆಳೆದದ್ದನ್ನು ಮೌಲ್ಯವರ್ಧನೆ ಮಾಡಿ,
ನೇರ ಮಾರುಕಟ್ಟೆ ಹುಡುಕಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಬಹುದು ಎಂಬುದನ್ನು ಪ್ರಮೋದ್
ತೋರಿಸಿಕೊಟ್ಟಿದ್ದಾರೆ. ಸಣ್ಣ ಮತ್ತು ಮಧ್ಯಮ ವರ್ಗದ ಕಬ್ಬು ಬೆಳೆಗಾರರು ಸಂಘಟಿತರಾಗಿ, ಬೆಲ್ಲದ ಘಟಕ ಸ್ಥಾಪಿಸಿ, ನೇರ ಮಾರುಕಟ್ಟೆ ಮಾಡುವ ಪ್ರಯೋಗದ
ಸಾಕಾರಕ್ಕೆ ಇದು ಮಾದರಿ. ವಿವರಗಳಿಗೆ ಪ್ರಮೋದ್ ಚಿತ್ತೂರಿ ಅವರನ್ನು (9910168814) ಸಂಪರ್ಕಿಸಬಹುದು.
*ಚಿತ್ರ-ಲೇಖನ: ಜಿ.ಕೃಷ್ಣಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.