Telangana Election 2024: ಕಳೆಗುಂದಿದ ಬಿಆರ್‌ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Team Udayavani, Apr 23, 2024, 11:32 AM IST
ಬಿಸಿಲಿನ ತಾಪ ನೆತ್ತಿ ಸುಡುತ್ತಿರುವ ಬೆನ್ನಲ್ಲೇ ತೆಲಂಗಾಣದಲ್ಲಿ ರಾಜಕೀಯ ಬಿಸಿ ಕೂಡ ತಾರಕಕ್ಕೇರಿದೆ. ರಂಗೇರಿದ ಕಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಹಣಾಹಣಿಗೆ ಇಳಿದಿದ್ದರೂ ಬಿಆರ್‌ಎಸ್, ಅಸಾದುದ್ದಿನ್ ಒವೈಸಿ ಅವರ ಎಂಐಎಂ ಕೂಡ ಟಕ್ಕರ್‌ನೀಡಲು ಸಜ್ಜಾಗಿವೆ. ಒಟ್ಟು 17 ಕ್ಷೇತ್ರಗಳಲ್ಲಿ ಮೇ 13ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 2019ರಲ್ಲಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬೀಗಿದ್ದ ಕೆ. ಚಂದ್ರಶೇಖರ್‌ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಕಳೆಗುಂದಿದೆ. ಇದು ಕಾಂಗ್ರೆಸ್‌ಗೆ ವರದಾನವಾಗಿ
ಪರಿಣಮಿಸಿದೆ. ಕಳೆದ ಬಾರಿ 4 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 10 ಸ್ಥಾನಗಳಲ್ಲಿ ಗೆಲುವಿನ ಗುರಿ ಇಟ್ಟುಕೊಂಡು ಹೋರಾಡುತ್ತಿದೆ. ಒವೈಸಿ ಕಳೆದ ಬಾರಿ ಗೆದ್ದಿದ್ದ ಒಂದು ಸ್ಥಾನ ಉಳಿಸಿಕೊಳ್ಳಲು ಹೆಣಗಾಡಬೇಕಾದ ಸ್ಥಿತಿ ಇದೆ.
ಪಕ್ಷಗಳ ಬಲಾಬಲ ಹೇಗಿದೆ?: ದಶಕಗಳ ಹಿಂದೆ ಅಖಂಡ ಆಂಧ್ರಪ್ರದೇಶ ಇಬ್ಭಾಗವಾದ ಬಳಿಕ ತೆಲಂಗಾಣ ರಾಜ್ಯ ಉದಯವಾಗಿದೆ. ಸದ್ಯ ಕಾಂಗ್ರೆಸ್ ಅಡಳಿತವಿದ್ದು, ರೇವಂತ್ ರೆಡ್ಡಿ ಸಿಎಂ ಆಗಿದ್ದಾರೆ. ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ. ಕಳೆದ ಬಾರಿ ಅಧಿಕಾರದಲ್ಲಿ ಇಲ್ಲದಿದ್ದರೂ 3 ಸ್ಥಾನ ಗೆದ್ದಿದ್ದ
ಕಾಂಗ್ರೆಸ್ ಈ ಬಾರಿ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಯುವ ನೇತಾರ ರೇವಂತ್ ರೆಡ್ಡಿ ಸ್ವತ್ಛ ಆಡಳಿತ, ಕೆಸಿಆರ್‌ಪಕ್ಷ ನಡೆಸಿದ ದುರಾಡಳಿತ ಕಾಂಗ್ರೆಸ್‌ಗೆ ಅಸ್ತ್ರಗಳಾಗಿವೆ.
ಇನ್ನು ಬಿಜೆಪಿ ಕಳೆದ 10 ವರ್ಷಗಳಲ್ಲಿ ಗಣನೀಯ ಪ್ರಮಾಣದ ಬೆಳವಣಿಗೆ ಕಂಡಿದೆ. ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲೂ ಮತಗಳಿಕೆಯ ಪ್ರಮಾಣ ಹೆಚ್ಚಿಸಿಕೊಂಡಿದೆ. ಕಳೆದ ಬಾರಿ 4 ಸ್ಥಾನ ಗೆದ್ದಿದ್ದನ್ನು ಈ ಬಾರಿ 10 ಕ್ಷೇತ್ರಗಳಿಗೆ ಹಿಗ್ಗಿಸಿಕೊಳ್ಳುವ ಉಮೇದಿ ನಲ್ಲಿದೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರದ ಸಾಧನೆ, ಹಿಂದುತ್ವ ಅಲೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್, ಬಿಆರ್‌ಎಸ್, ಒವೈಸಿ ಕಡೆ ಛಿದ್ರವಾಗಿ ಹೋದರೂ ಹಿಂದೂ ಮತಗಳನ್ನು ಒಟ್ಟುಗೂಡಿಸಿ ಬುಟ್ಟಿಗೆ ಹಾಕಿಕೊಳ್ಳುವ ತಂತ್ರ ಆನುಸರಿಸುತ್ತಿದೆ. ಆದರೆ, ಪ್ರಾದೇಶಿಕವಾಗಿ ಪ್ರಬಲ ನಾಯಕರು ಇಲ್ಲದ್ದರಿಂದ ಅನ್ಯ ಪಕ್ಷಗಳ ಮುಖಂಡರನ್ನು ಕರೆತಂದು ಸ್ಪರ್ಧೆಗೆ ಇಳಿಸಿದ್ದು
ಕೊಂಚ ಹಿನ್ನಡೆಗೆ ಕಾರಣವಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ನಿರೀಕ್ಷೆಯಂತೆ ಪ್ರತ್ಯೇಕ ರಾಜ್ಯದ ಮುಂಚೂಣಿಯಲ್ಲಿದ್ದ ಕೆಸಿಆರ್ ದಶಕಗಳ ಕಾಲ ತೆಲಂಗಾಣದಲ್ಲಿ ಬಿಗಿ ಹಿಡಿತ ಹೊಂದಿದ್ದರು. ಆದರೆ, ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ,
ಕುಟುಂಬದ ಪಾರುಪತ್ಯದ ಫಲವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಟಿಆರ್‌ಎಸ್ ಇದ್ದದ್ದನ್ನು ಬಿಆರ್‌ಎಸ್ ಎಂದು ಹೆಸರು ಬದಲಾವಣೆ ಮಾಡಿದ್ದರೂ ಫಲ
ನೀಡಿಲ್ಲ. ಅಲ್ಲದೆ, ಎನ್‌ಡಿಎ, ಇಂಡಿಯಾ ಮೈತ್ರಿಕೂಟದಿಂದ ದೂರ ಉಳಿದು ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ದೆಹಲಿ
ಅಬಕಾರಿ ಪ್ರಕರಣದಲ್ಲಿ ಪುತ್ರಿ ಕೆ. ಕವಿತಾ ಸಿಕ್ಕಿ ಹಾಕಿಕೊಂಡು ಜೈಲು ಸೇರಿರುವುದು ಭಾರೀ ಹಿನ್ನಡೆಯುಂಟು ಮಾಡಿದೆ. ಫೋನ್ ಕದ್ದಾಲಿಕೆ ಆರೋಪವೂ ಉರುಳಾಗುವ ಸಾಧ್ಯತೆ ಇದೆ. ಕಳೆದ ಬಾರಿ 9 ಸ್ಥಾನ ಗೆದ್ದಿದ್ದ ಕೆಸಿಆರ್ ಈ ಬಾರಿ ಮಾತ್ರ ಕಷ್ಟದಲ್ಲಿದ್ದಾರೆ.
ಒವೈಸಿ, ಮಾಧವಿ ಲತಾ ಕದನ ಕುತೂಹಲ: ಮುಸ್ಲಿಂ ಮತಗಳನ್ನೇ ನೆಚ್ಚಿಕೊಂಡಿರುವ ಅಸಾದುದ್ದಿನ್ ಒವೈಸಿ ಕಳೆದ ಬಾರಿ ತಾವು ಗೆದ್ದಿದ್ದ ಒಂದು ಸ್ಥಾನ ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಇದೆ. ಹೈದ್ರಾಬಾದ್ ಕ್ಷೇತ್ರದಲ್ಲಿ ಒವೈಸಿ ವಿರುದ್ಧ ಈ ಬಾರಿ ಬಿಜೆಪಿ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿ ಟಕ್ಕರ್ ನೀಡಿದೆ. ಬಿಜೆಪಿ ಕಾರ್ಯಕರ್ತರು ತಳಮಟ್ಟದಲ್ಲಿ ಸಿಕ್ಕಾಪಟ್ಟೆ ಕೆಲಸ ಮಾಡುತ್ತಿದ್ದಾರೆ. ಬೂತ್ ಮಟ್ಟದಲ್ಲಿ ಮತ ಗಳಿಕೆಗೆ ತಂತ್ರ ರೂಪಿಸುತ್ತಿದ್ದಾರೆ. ಹೀಗಾಗಿ ಇವರಿಬ್ಬರ ನಡುವಿನ ಹೋರಾಟ ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿದೆ.
ಜಾತಿ ಲೆಕ್ಕಾಚಾರ ಹೇಗಿದೆ?: ರೆಡ್ಡಿಗಳ ನಾಡಿನಲ್ಲಿ ಕಮ್ಮ, ಕಾಪು, ಎಸ್‌ಸಿ, ಎಸ್‌ಟಿ ನಿರ್ಣಾಯಕರಾಗಿದ್ದಾರೆ. ರೆಡ್ಡಿ ಸೇರಿದಂತೆ
ಇತರೆ ಹಿಂದುಳಿದ ವರ್ಗದವರು ಶೇ.48ರಷ್ಟು, ಶೇ.17ರಷ್ಟು ದಲಿತರು, ಶೇ.11ರಷ್ಟು ಪರಿಶಿಷ್ಟ ಪಂಗಡ, ಶೇ12ರಷ್ಟು ಮುಸ್ಲಿಮರಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕರಾಗಿದ್ದು, ಕಾಂಗ್ರೆಸ್ ಹಾಗೂ ಬಿಆರ್‌ಎಸ್ ಪೈಪೋಟಿಗೆ ಬಿದ್ದಂತೆ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿವೆ. ಇದನ್ನೇ ಬಿಜೆಪಿ ಅಸ್ತ್ರವನ್ನಾಗಿಸಿಕೊಂಡಿದೆ.
*ಚನ್ನು ಮೂಲಿಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.