ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಯಲು ಟೆಂಡರ್ ವಿನಾಯ್ತಿ
Team Udayavani, May 1, 2019, 3:01 AM IST
ಬೆಂಗಳೂರು: ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಳವೆ ಬಾವಿ ಕೊರೆಸಲು ಟೆಂಡರ್ ವಿನಾಯ್ತಿ ನೀಡಿ ಪರಿಸ್ಥಿತಿ ನಿಭಾಯಿಸಲು ಅನುಮತಿ ನೀಡಿ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದ್ದು, ಕಳೆದ 15 ದಿನದಲ್ಲಿ 174 ಹೊಸ ಗ್ರಾಮಗಳಿಗೆ 223 ಟ್ಯಾಂಕರ್ ಮೂಲಕ ನೀರು ಪೂರೈಕೆ ಆರಂಭಿಸಲಾಗಿದೆ. ಕುಡಿಯುವ ನೀರಿನ ತುರ್ತು ಅಗತ್ಯತೆ ಆಧರಿಸಿ ಟೆಂಡರ್ ವಿನಾಯ್ತಿ ನೀಡಿ ಕೊಳವೆ ಬಾವಿ ಕೊರೆಸಲು ಅನುಮತಿ ನೀಡಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೂ ಒತ್ತು ನೀಡಲಾಗಿದ್ದು, ಘಟಕಗಳು ಬಳಕೆಗೆ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
11 ಗೋಶಾಲೆಗಳನ್ನು ತೆರೆಯಲಾಗಿದ್ದು, ಬಳ್ಳಾರಿಯಲ್ಲಿ 1, ಚಿತ್ರದುರ್ಗದಲ್ಲಿ 6 ಹಾಗೂ ಕೊಪ್ಪಳದಲ್ಲಿ 4 ಗೋಶಾಲೆಗಳಿದ್ದು, 11,120 ಜಾನುವಾರುಗಳನ್ನು ಸಂರಕ್ಷಿಸಲಾಗಿದೆ. 128 ಮೇವು ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿವೆ. ಅಗತ್ಯವಿರುವ ಕಡೆ ಗೋಶಾಲೆ ತೆರೆಯುವಂತೆಯೂ ಸೂಚಿಸಲಾಗಿದೆ.
ಸದ್ಯ 14 ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹವಿದೆ. ಬಳ್ಳಾರಿ, ರಾಯಚೂರಿನಲ್ಲಿ ಬತ್ತದ ಕಟಾವು ಹಿನ್ನೆಲೆಯಲ್ಲಿ ಮೇವು ಲಭ್ಯತೆ ಹೆಚ್ಚಾಗಿದೆ. ಬರ ನಿರ್ವಹಣೆ ಕಾರ್ಯಕ್ಕೆ ಅಡ್ಡಿಯಾಗದಂತೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಕೃತಿ ವಿಕೋಪ ಕಾಮಗಾರಿಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 682 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಒಟ್ಟು 726 ಕೋಟಿ ರೂ.ಹಣವಿದೆ ಎಂದರು.
ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಬರ ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಲು ಅವಕಾಶವಿಲ್ಲ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಬರ ಪರಿಸ್ಥಿತಿ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒಗಳೊಂದಿಗೆ ಸಭೆ ನಡೆಸಲು ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಈ ನಡುವೆ ಅಧಿಕಾರಿಗಳ ಮಟ್ಟದಲ್ಲಿ ಬರ ಪರಿಸ್ಥಿತಿಗೆ ಸಂಬಂಧಪಟ್ಟಂತೆ ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ನಾಲ್ಕು ಬಾರಿ ವಿಡಿಯೋ ಸಂವಾದ: ಮಾ.16, ಏ.2, ಏ.15, ಏ.30ರಂದು ಎಲ್ಲ ಜಿಲ್ಲಾಧಿಕಾರಿಗಳು, ಸಿಇಒಗಳೊಂದಿಗೆ ಬರ ಸ್ಥಿತಿಗತಿ ಕುರಿತಂತೆ ವಿಡಿಯೋ ಸಂವಾದ ನಡೆಸಿದ್ದೇನೆ. ಕುಡಿಯುವ ನೀರು ಪೂರೈಕೆ ಸ್ಥಿತಿಗತಿ ಪರಿಶೀಲನೆಗೆ ಸಂಬಂಧಪಟ್ಟಂತೆ ಕಳೆದ ಶನಿವಾರ ಎಲ್ಲಾ ಜಿಲ್ಲಾ ಪಂಚಾಯ್ತಿ ಸಿಇಒಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಯಿತು.
“ನರೇಗಾ’ ಅಡಿ ಮಾನವ ದಿನ ಸೃಷ್ಟಿ ಬಗ್ಗೆಯೂ ಪರಿಶೀಲನೆ ನಿರಂತರವಾಗಿ ನಡೆದಿದೆ. ಸಚಿವಾಲಯದ ಮಟ್ಟದಲ್ಲಿ ಅಭಿವೃದ್ಧಿ ಆಯುಕ್ತರು ಇಲಾಖಾ ಮುಖ್ಯಸ್ಥರೊಂದಿಗೆ ಪ್ರತಿ ವಾರ ಸಭೆ ನಡೆಸಿ, ಕುಡಿಯುವ ನೀರು ಸೇರಿದಂತೆ ಇತರ ವಿಚಾರಗಳ ಬಗ್ಗೆ ಸಿಇಒಗಳೊಂದಿಗೆ ಚರ್ಚಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾ ಅಭಿವೃದ್ಧಿ ಸ್ಥಿತಿ, ಬರ ಪರಿಸ್ಥಿತಿ ಸಮೀಕ್ಷೆ ನಡೆಸುತ್ತಿದ್ದಾರೆ ಎಂದರು.
ಜಿಲ್ಲಾಮಟ್ಟದಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಮಟ್ಟದಲ್ಲಿ ತಹಸೀಲ್ದಾರರುಗಳು ನಿಯಮಿತವಾಗಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಕುಡಿಯುವ ನೀರಿನ ನಿರ್ವಹಣೆಗೆ ಸಂಬಂಧಪಟ್ಟಂತೆ 26 ಜಿಲ್ಲೆಗಳಲ್ಲಿ 1205 ಗ್ರಾಮಗಳಿಗೆ 1893 ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ. ರಾಜ್ಯಾದ್ಯಂತ 1392 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು, 1064 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ.
ನಗರ ಪ್ರದೇಶಗಳಲ್ಲಿ 303 ವಾರ್ಡ್‌ಗಳಿಗೆ 214 ಟ್ಯಾಂಕರ್‌ನಲ್ಲಿ ನೀರು ವಿತರಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೆ ತಕ್ಷಣ ಟ್ಯಾಂಕರ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್ ಕತ್ರಿ, ಜಲಮಂಡಲಿ ಪ್ರಧಾನ ಎಂಜಿನಿಯರ್ ಕೆಂಪರಾಮಯ್ಯ ಉಪಸ್ಥಿತರಿದ್ದರು.
ಕಳೆದ ವರ್ಷ ಕೊಡಗು, ಚಿಕ್ಕಮಗಳೂರು ಹಾಗೂ ಮಲೆನಾಡಿನ ಕೆಲವೆಡೆ ಪ್ರವಾಹ ತಲೆದೋರಿದ್ದ ಹಿನ್ನೆಲೆಯಲ್ಲಿ ಈ ಬಾರಿಯ ಮಳೆಗಾಲದಲ್ಲಿ ಯಾವುದೇ ಅನಾಹುತ ಉಂಟಾಗದಂತೆ ತಡೆಯಲು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್‌ಡಿಆರ್‌ಎಫ್) ಎರಡು ತಂಡ ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆ ನೀಡಲಿದೆ. ಹಿರಿಯ ಅಧಿಕಾರಿಗಳ ತಂಡ ಗುರುವಾರ, ಶುಕ್ರವಾರ ಹಾಗೂ ಶನಿವಾರ ಕೊಡಗು, ಮಂಗಳೂರು, ಉಡುಪಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲಿಸಲಿದೆ. ಮುಂದಿನ ವಾರ ಅಧಿಕಾರಿಗಳ ತಂಡ ಚಿಕ್ಕಮಗಳೂರು, ಹಾಸನಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪರಿಶೀಲಿಸಲಿದೆ.
– ಟಿ.ಎಂ. ವಿಜಯ ಭಾಸ್ಕರ್, ಮುಖ್ಯ ಕಾರ್ಯದರ್ಶಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.