ಅಸ್ತಿತ್ವಕ್ಕೆ ಧಕ್ಕೆ ತಂದುಕೊಂಡ ಕಾಂಗ್ರೆಸ್-ಜೆಡಿಎಸ್
Team Udayavani, Aug 1, 2019, 6:59 AM IST
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹದಿನಾಲ್ಕು ತಿಂಗಳು ಆಡಳಿತ ನಡೆಸಿದ್ದು ಹಾಗೂ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರ ಪ್ರತಿಫಲ ಎಂಬಂತೆ ಎರಡೂ ಪಕ್ಷಗಳು ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ನೆಲೆ ಕಳೆದುಕೊಳ್ಳುವಂತಾಗಿದೆ.
ಸರ್ಕಾರದ ವಿರುದ್ಧ ಬಂಡೆದ್ದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಹದಿನಾರು ಶಾಸಕರು ಆಯಾ ಪಕ್ಷದಿಂದ ಉಚ್ಛಾಟನೆ ಶಿಕ್ಷೆಗೊಳಗಾಗಿರುವುದು ಒಂದು ಕಡೆಯಾದರೆ ಅಷ್ಟು ಕ್ಷೇತ್ರಗಳ ಮಟ್ಟಿಗೆ ಎರಡೂ ಪಕ್ಷಗಳ ಅಸ್ತಿತ್ವಕ್ಕೂ ಧಕ್ಕೆ ತಂದುಕೊಂಡಂತಾಗಿದೆ.
ಉಚ್ಛಾಟನೆಗೊಂಡಿರುವವರ ಜತೆ ಜಿಲ್ಲಾ ಪಂಚಾಯಿತಿ, ತಾಲೂಕು-ಪಟ್ಟಣ ಪಂಚಾಯಿತಿ, ನಗರಸಭೆ, ಮಹಾನಗರ ಪಾಲಿಕೆ ಸದಸ್ಯರು, ಕಾರ್ಯಕರ್ತರು, ಮುಖಂಡರು ಒಂದಷ್ಟು ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿರುವುದರಿಂದ ಅವರೆಲ್ಲರನ್ನೂ ಪಕ್ಷಗಳು ಕಳೆದುಕೊಂಡಂತೆಯೇ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಉಚ್ಛಾಟನೆಗೊಂಡಿರುವವರ ಕ್ಷೇತ್ರಗಳಲ್ಲಿ ಮತ್ತೆ ಅಂತಹ ಸ್ವ ಸಾಮರ್ಥ್ಯ ಇರುವ ಅಭ್ಯರ್ಥಿಗಳನ್ನು ಸಿದ್ಧಪಡಿಸುವುದು ಅಷ್ಟು ಸುಲಭವೂ ಅಲ್ಲ. ಅಂತಹ ಅಭ್ಯರ್ಥಿಗಳು ಸಿಗಲು ವರ್ಷಗಳು ಬೇಕಾಗಬಹುದು ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.
ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿ ಮಾರ್ಪಟ್ಟಿದ್ದ ಯಶವಂತಪುರ, ರಾಜರಾಜೇಶ್ವರಿನಗರ, ಕೆ.ಆರ್.ಪುರ, ಶಿವಾಜಿನಗರ ಹಾಗೂ ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳು ಇದೀಗ ಒಂದು ರೀತಿಯಲ್ಲಿ ಎರಡೂ ಪಕ್ಷಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿವೆ. ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ನಡೆಯಲಿರುವುದರಿಂದ ದೊಡ್ಡ ಹೊಡೆತವೇ ಬಿದ್ದಂತಾಗಿದೆ.
ಜತೆಗೆ, ಬೆಳಗಾವಿ, ಹಾವೇರಿ, ರಾಯಚೂರು, ಉತ್ತರ ಕನ್ನಡ, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ಕಾಂಗ್ರೆಸ್‌ನ ಬುಡ ಅಲ್ಲಾಡುವಂತಾಗಿದೆ.
ತಕ್ಕ ಶಾಸ್ತಿ: ಕಾಂಗ್ರೆಸ್ ಪಕ್ಷವು 79 ಸ್ಥಾನಗಳಿಂದ 65ಕ್ಕೆ ಇಳಿದಿದ್ದರೆ ಜೆಡಿಎಸ್ 34ಕ್ಕೆ ಕುಸಿದಿದೆ. ಲೋಕಸಭೆ ಚುನಾವಣೆಯಲ್ಲಿ ಹತ್ತು ಸ್ಥಾನ ಪಡೆದಿದ್ದ ಕಾಂಗ್ರೆಸ್ 1 ಸ್ಥಾನಕ್ಕೆ, 2 ಸ್ಥಾನ ಪಡೆದಿದ್ದ ಜೆಡಿಎಸ್ 1 ಸ್ಥಾನಕ್ಕೆ, ಮಂಡ್ಯದಂತಹ ಭದ್ರಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ಲುವಂತಾಯಿತು. ಇದೆ ಲ್ಲವೂ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದರಿಂದಲೇ ಆಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗದಿದ್ದರೆ ಲೋಕ ಸಭೆಯಲ್ಲಿ ಮೈತ್ರಿಯಾಗುತ್ತಿರಲಿಲ್ಲ
ಮೈತ್ರಿ ಆಗದಿದ್ದರೆ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತಿದ್ದವು. ಆಗ, ಕಾಂಗ್ರೆಸ್ ಕನಿಷ್ಠ 8 ಸ್ಥಾನ, ಜೆಡಿಎಸ್ 2 ಸ್ಥಾನ ಗೆಲ್ಲುವ ಅವಕಾಶ ಇತ್ತು. ಆದರೆ, ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಯಿತು. ಒಂದು ತಪ್ಪಿಗೆ ಮತ್ತೂಂದು ತಪ್ಪು ಸೇರಿ ಅದಕ್ಕೆ ಸರಿಯಾದ ಶಾಸ್ತಿ ಆದಂತಾಗಿದೆ ಎಂಬ ಮಾತುಗಳು ಎರಡೂ ಪಕ್ಷಗಳ ವಲಯದಲ್ಲಿ ಕೇಳಿಬರುತ್ತಿವೆ.
ಪಕ್ಷ ಸಂಘಟನೆಗೆ ಇಳಿದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕಾರ್ಯಕರ್ತರು ಹಾಗೂ ಮುಖಂಡರ ಬಿಸಿ ತಟ್ಟಿದೆ. ಅಧಿಕಾರ ಇದ್ದಾಗ ನಾವ್ಯಾರೂ ನೆನಪಿಗೆ ಬರುವುದಿಲ್ಲ, ಅಧಿಕಾರ ಅನುಭವಿಸಲು ಬೇರೆಯವರು, ಇದೀಗ ನಾವು ಬೇಕಾ? ಯಾರನ್ನು ಕೇಳಿ ಸರ್ಕಾರ ಮಾಡಿದ್ದೀರಿ, ಯಾರನ್ನು ಕೇಳಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರಿ. ಇದೀಗ ಇಂತಹ ಸ್ಥಿತಿಗೆ ಪಕ್ಷ ತಲುಪಲು ನೀವೇ ಕಾರಣ ಎಂದು ಬಹಿರಂಗವಾಗಿಯೇ ಆಂತರಿಕ ಸಭೆಗಳಲ್ಲಿ ಅತೃಪ್ತಿ ಹೊರಹಾಕುತ್ತಿದ್ದಾರೆ.
ಕಾಂಗ್ರೆಸ್ ನಾಯಕರಿಗೂ ಇದೇ ರೀತಿಯ ಅನುಭವ ಆಗುತ್ತಿದ್ದು, ಕೆಲವು ನಾಯಕರ ಸ್ವ ಪ್ರತಿಷ್ಠೆ, ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಅಧೋಗತಿಗೆ ತಲುಪುವಂತಾಗಿದೆ.
ಮತ್ತೆ ಪಕ್ಷ ಕಟ್ಟಿ ಗಟ್ಟಿಗೊಳಿಸುವುದು ಅಷ್ಟು ಸುಲಭವಲ್ಲ ಎಂದು ಜಿಲ್ಲಾ ಮಟ್ಟದ ನಾಯಕರು ಹೇಳುವಂತಾಗಿದೆ.
ಒಟ್ಟಾರೆ, ಸಮ್ಮಿಶ್ರ ಸರ್ಕಾರ ರಚನೆ, ಒಲ್ಲದ ಮದುವೆ ಎಂಬ ಲೋಕಸಭೆ ಚುನಾವಣೆ ಮೈತ್ರಿಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಭಾರೀ ‘ದಂಡ’ ತೆತ್ತಿದ್ದು , ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿ ಸರ್ಕಾರದ ಪ್ರಭಾವದಲ್ಲಿ ಮತ್ತೆ ಪ್ರಬಲವಾಗುತ್ತಾ ಎಂಬುದು ಕಾದು ನೋಡಬೇಕಾಗಿದೆ.
50 ಕ್ಷೇತ್ರಗಳ ಕಥೆ ಚಿಂತಾಜನಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.