![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, May 19, 2024, 7:25 AM IST
ಕುಂದಾಪುರ: ಆಕೆ ವಿಶೇಷ ಚೇತನ ಯುವತಿ. ತಾಯಿಯೇ ಆಸರೆ. ಮನೆಯಲ್ಲಿ ಅವರಿಬ್ಬರ ಹೊರತು ಬೇರೆ ಯಾರೂ ಇಲ್ಲ. ಹೆತ್ತಬ್ಬೆ ಕಣ್ಣೆದುರೇ ಕುಸಿದು ಬಿದ್ದು ತಲೆಗೆ ಗಾಯವಾಗಿ ಮೃತಪಟ್ಟರೂ ಏನೂ ಮಾಡಲಾಗದ ಸ್ಥಿತಿ ಆಕೆಯದು. ಮೂರು ದಿನಗಳ ಬಳಿಕ ಈ ವಿಚಾರ ಹೊರಪ್ರಪಂಚಕ್ಕೆ ತಿಳಿಯುವ ವರೆಗೂ ಅಮ್ಮನ ಕೊಳೆತ ಶವದೆದುರು ಇರಬೇಕಾದ ಅನಿವಾರ್ಯ ಆಕೆಯದಾಗಿತ್ತು!
ಗೋಪಾಡಿ ಗ್ರಾಮದ ಮೂಡು ಗೋಪಾಡಿಯ ದಾಸನಹಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮೇ 16ರ ರಾತ್ರಿ ಪತ್ತೆಯಾಗಿದ್ದು, ಆಕೆಯ ಮೃತದೇಹದೊಂದಿಗೆ ಬುದ್ಧಿಮಾಂದ್ಯ ಪುತ್ರಿಯಾದ ಪ್ರಗತಿ 72 (3 ದಿನ) ಗಂಟೆಗೂ ಹೆಚ್ಚು ಕಾಲ ಕಳೆದಿರುವುದು ಬೆಳಕಿಗೆ ಬಂದಿದೆ.
ದಾಸನಹಾಡಿಯ ಮನೆಯಲ್ಲಿ ಜಯಂತಿ ಅವರು ಪುತ್ರಿ ಪ್ರಗತಿ ಯೊಂದಿಗೆ ನೆಲೆಸಿದ್ದರು. ಈಕೆ ಚಿಕ್ಕಂದಿನಿಂದಲೇ ಬುದ್ಧಿಮಾಂದ್ಯ ರಾಗಿದ್ದು, ಇತ್ತೀಚೆಗೆ ಮಧುಮೇಹ ಹೆಚ್ಚಾಗಿದ್ದರಿಂದ ಒಂದು ಕಾಲನ್ನೇ ಕತ್ತರಿಸ ಲಾಗಿತ್ತು. ಅದಾಗಿಯೂ ಈಕೆ ಯನ್ನು ತಾಯಿ ಚೆನ್ನಾಗಿಯೇ ನೋಡಿ ಕೊಳ್ಳುತ್ತಿದ್ದರು. ಜಯಂತಿ ಅವರ ಪತಿ ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದು, ಕೆಲವು ವರ್ಷಗಳ ಹಿಂದೆಯೇ ಮೃತ ಪಟ್ಟಿದ್ದರು.
ಯಾವಾಗ ಆಗಿರಬಹುದು?
ಮೇ 12ರಂದು ಜಯಂತಿ ಪುತ್ರಿಯ ಚೇತರಿಕೆಗಾಗಿ ಆನೆಗುಡ್ಡೆ ದೇಗುಲ ದಲ್ಲಿ ಪೂಜೆ ಸಲ್ಲಿಸಿದ್ದರು. ಮೇ 13ರಂದು ಕೋಟೇಶ್ವರ ದೇವ ಸ್ಥಾನಕ್ಕೆ ತೆರಳಲು ಇರುವುದಾಗಿ ಸ್ಥಳೀಯ ರಿಕ್ಷಾ ಚಾಲಕರೊಬ್ಬರಿಗೆ ತಿಳಿಸಿದ್ದರು. ಆ ರಿಕ್ಷಾ ಚಾಲಕ ಮೇ 13ರಂದು ಬೆಳಗ್ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಅಂದರೆ ಮೇ 12ರ ಸಂಜೆಯಿಂದ ಮೇ 13ರ ಬೆಳಗ್ಗಿನ ನಡುವೆ ಬಿದ್ದು ಗಾಯಗೊಂಡು ಸಾವನ್ನಪ್ಪಿರ ಬಹುದೇ? ಎನ್ನುವ ಅನುಮಾನವಿದೆ. 3 ದಿನ ಗಳ ಕಾಲ ಆ ಮನೆಯಲ್ಲಿ ತಾಯಿಯ ಮೃತದೇಹದೊಂದಿಗೆ ನೀರು, ಆಹಾರವಿಲ್ಲದೆ ಪುತ್ರಿ ಪ್ರಗತಿ ಒಬ್ಬಳೇ ಕಳೆದಿರುವುದು ದಿಗ್ಭ್ರಮೆ ಮೂಡಿಸಿದೆ.
ಜಯಂತಿ ಬಿದ್ದು ಗಾಯಗೊಂಡಿ ದ್ದಲ್ಲದೆ, ಮಧುಮೇಹ, ಅಧಿಕ ರಕ್ತ ದೊತ್ತಡವೂ ಇದ್ದುದ ರಿಂದ ಗಂಭೀರ ಗೊಂಡು ಸಾವನ್ನಪ್ಪಿರ ಬಹುದು. ಬಾತ್‌ರೂಮ್‌ಗೆ ತೆರಳಿ, ಬರುವ ವೇಳೆ ಕಾಲು ಜಾರಿ ಬಿದ್ದಿರ ಬಹುದೇ? ಎನ್ನುವ ಸಂಶಯವೂ ಇದೆ. ಗೋಡೆ, ನೆಲದ ಮೇಲೆ ರಕ್ತದ ಕಲೆ ಪತ್ತೆಯಾಗಿದೆ. ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವಿಗೆ ನಿರ್ದಿಷ್ಟ ಕಾರಣವೇನೆಂದು ತಿಳಿದು ಬರಬಹುದು.
ನೆರವಾದ ಎಸ್‌ಐ, ಗ್ರಾ.ಪಂ. ಅಧ್ಯಕ್ಷರು
3 ದಿನಗಳಿಂದ ಮನೆಯ ಗೇಟು ತೆರೆಯದ್ದನ್ನು ಗಮನಿಸಿದ ಅಕ್ಕ-ಪಕ್ಕದ ಮನೆಯವರು ಇವರಿಗೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಮೇ 16ರ ರಾತ್ರಿ ವಿಪರೀತ ದುರ್ವಾಸನೆ ಬಂದಿದ್ದರಿಂದ ಸ್ಥಳೀಯರು ಗೋಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ ಶೆಟ್ಟಿ ಅವರಿಗೆ ತಿಳಿಸಿದ್ದು, ಅವರು ಸ್ಥಳೀಯರೊಂದಿಗೆ ಇವರ ಸಂಬಂಧಿಕರನ್ನು ಪತ್ತೆ ಹಚ್ಚುವಲ್ಲಿ, ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು. ರಾತ್ರಿ 11ರ ವೇಳೆಗೆ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಆಗಮಿಸಿದ ಕುಂದಾಪುರ ಎಸ್‌ಐ ವಿನಯ ಎಸ್. ಕೊರ್ಲಹಳ್ಳಿ ಹಾಗೂ ಪೊಲೀಸ್ ಸಿಬಂದಿ ಆ ಮನೆಯ ಆ ಬಾಗಿಲು ಒಡೆದು ಅಸ್ವಸ್ಥಗೊಂಡಿದ್ದ ಯುವತಿಯನ್ನು ರಕ್ಷಿಸಿ, ಉಪಚರಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.
ಯುವತಿ ಚೇತರಿಕೆ
ಕೋಟೇಶ್ವರ ಅಂಕದಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವ ಪ್ರಗತಿ (32) ಅವರು ಸದ್ಯ ಚೇತರಿಕೆ ಕಾಣುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಎಲ್ಲವೂ ಅಂದು ಕೊಂಡಂತೆ ಆಗಿದ್ದರೆ ಮೇ 14ರಂದು ಆಕೆಗೆ ಕೃತಕ ಕಾಲು ಜೋಡಣೆ ಆಗಬೇಕಿತ್ತು. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು ಎನ್ನುವುದು ಮಾತ್ರ ದುರಂತ.
You seem to have an Ad Blocker on.
To continue reading, please turn it off or whitelist Udayavani.