ಸಾಮಾಜಿಕ ಮಾಧ್ಯಮಗಳ ಮೇಲೂ ಚುನಾವಣಾ ಆಯೋಗದ ನಿಗಾ
ಉದಯವಾಣಿ ಜತೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸಂವಾದ
Team Udayavani, Apr 13, 2019, 6:00 AM IST
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿ ದೃಷ್ಟಿಯಿಂದ “ಸಾಮಾಜಿಕ ಮಾಧ್ಯಮ’ಗಳ ಮೇಲೆ ನಿಗಾ ಇಡುವುದು ಸದ್ಯದ ಪರಿಸ್ಥಿತಿಯಲ್ಲಿ ಸವಾಲಿನ ಕೆಲಸ ಆಗಿದ್ದರೂ, ಆಯೋಗ ಈ ದಿಸೆಯಲ್ಲಿ ಬಹಳ ಗಂಭೀರವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಮತ ಜಾಗೃತಿ ಅಭಿಯಾನದ ಭಾಗವಾಗಿ “ಉದಯವಾಣಿ’ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಈ ವಿಚಾರದಲ್ಲಿ ಗೂಗಲ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ಮತ್ತಿತರ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಜೊತೆಗೆ ಸಮನ್ವಯ ಸಾಧಿಸಿ ಅವರಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳು, ನೇತಾರರು ಹಾಗೂ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ರಾಜಕೀಯ ಆರೋಪ-ಪ್ರತ್ಯಾರೋಪ, ವೈಯುಕ್ತಿಕ ನಿಂದನೆಗಳು, ಸಮಾಜದಲ್ಲಿ ಕ್ಷೋಭೆ ಹುಟ್ಟು ಹಾಕುವ, ಸಂಘರ್ಷಕ್ಕೆ ಅವಕಾಶ ಮಾಡಿಕೊಡುವ, ಯಾವುದೇ ನಿರ್ದಿಷ್ಟ ಪಕ್ಷ ಅಥವಾ ಅಭ್ಯರ್ಥಿಯ ಪರವಾಗಿ ಮತದಾರರಿಗೆ ಆಮಿಷ ನೀಡುವಂತಹ ಅಂಶಗಳು ಕಂಡು ಬಂದರೆ, ಅವುಗಳ ಪೈಕಿ ಐಪಿಸಿ ಅಥವಾ ಪ್ರಜಾಪ್ರತಿನಿಧಿ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲ್ಪಡುವ ವಿಷಯಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗುವ ಸಾಮಾಜಿಕ ಜಾಲತಾಣಗಳಾಗಿರುವ ಫೇಸ್‌ಬುಕ್, ಗೂಗಲ್, ಟ್ವಿಟರ್ ಮತ್ತಿತರ ಮಾಧ್ಯಮಗಳಲ್ಲಿ ಬರುವ ವಿಷಯಗಳನ್ನು ಪತ್ತೆ ಹಚ್ಚಲು ಕಷ್ಟವಿಲ್ಲ. ಆದರೆ ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಮಾಧ್ಯಮಗಳ ವೈಯುಕ್ತಿಕ ಬಳಕೆದಾರರು, ನಿರ್ದಿಷ್ಟ ಸಂಖ್ಯೆಯ ಖಾಸಗಿ ಬಳಕೆದಾರರು ಆಯೋಗಕ್ಕೆ ಸವಾಲಾಗಿದ್ದಾರೆ. ಹಾಗಂತ ಆಯೋಗ ಕೈಚೆಲ್ಲಿ ಕುಳಿತುಕೊಂಡಿಲ್ಲ ಚುನಾವಣಾ ನೀತಿ ಸಂಹಿತೆ ಜಾರಿ ದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಕ್ರಿಯಾ ಯೋಜನೆ ಸಿದ್ದಪಡಿಸಿಕೊಳ್ಳಲಾಗಿದೆ. ಕೆಲವು ಸಂದರ್ಭಗಳಲ್ಲಿ ಆಯಾ ಸಾಮಾಜಿಕ ಮಾಧ್ಯಮ ಸಂಸ್ಥೆಗಳೇ ಈ ಬಗ್ಗೆ ನಿಗಾ ಇಟ್ಟು ಆಕ್ಷೇಪಾರ್ಹ ಅಂಶಗಳಿದ್ದರೆ ಆಯೋಗದ ಗಮನಕ್ಕೆ ತರುತ್ತಾರೆ. ಒಟ್ಟಾರೆ, ಶಾಂತಿಯುತ, ಸೌಹಾರ್ದ, ಪಾರದರ್ಶಕ ಮತ್ತು ಸಂಘರ್ಷರಹಿತ ಚುನಾವಣೆ ಸಾಧ್ಯವಾಗಿಸಲು ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿಡಲಾಗಿದೆ ಎಂದರು.
ಒಟ್ಟಾರೆ ನೀತಿ ಸಂಹಿತೆ ಜಾರಿಗೆ ರಾಜ್ಯ ಮಟ್ಟದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಗಳು ಇವೆ. ನೀತಿ ಸಂಹಿತೆ ಜಾರಿಯ ಭಾಗವಾಗಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಈ ಸಮಿತಿಗಳಲ್ಲಿ ಇದ್ದಾರೆ. ಈ ಸಮಿತಿಗಳು ಸಂದರ್ಭಾನುಸಾರ ಮಾಹಿತಿಗಳನ್ನು ಪರಸ್ಪರ ವಿನಿಯಮ ಮಾಡಿಕೊಂಡು ನೀತಿ ಸಂಹಿತೆ ಜಾರಿ ವ್ಯವಸ್ಥೆಯ ನಿರ್ವಹಣೆ ಮಾಡುತ್ತವೆ. ಸಾಮಾಜಿಕ ಮಾಧ್ಯಮಗಳೂ ಸಹ ಇದರ ವ್ಯಾಪ್ತಿಗೆ ಬರುತ್ತದೆ ಎಂದರು.
ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಮೇಲೆ ನಿಗಾ ಇಟ್ಟು ಕ್ರಮ ಕೈಗೊಳ್ಳುವುದು ಸುಲಭ. ಈ ಮಾಧ್ಯಮಗಳಲ್ಲಿ ಪ್ರಸಾರವಾಗುವ ಯಾವ ವಿಷಯಗಳು ನೀತಿ ಸಂಹಿತೆ ಉಲ್ಲಂಘನೆಯ ವ್ಯಾಪ್ತಿಗೆ ಬರುತ್ತವೆ ಅಥವಾ ಇಲ್ಲ ಎಂಬ ಬಗ್ಗೆ ಸ್ಪಷ್ಟ ಕಾನೂನುಗಳು ಇವೆ ಮತ್ತು ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳು ಇವೆ. ಆದರೆ, ಸಾಮಾಜಿಕ
ಮಾಧ್ಯಮಗಳು ಇತ್ತಿಚಿನ ವರ್ಷಗಳಲ್ಲಿ ತುಂಬಾ ಪ್ರಚಲಿತಕ್ಕೆ ಬಂದಿವೆ. ಇದರ ಕುರಿತು ಅನೇಕ ವಿಚಾರಗಳಲ್ಲಿ ಇಲ್ಲಿವರೆಗೆ ಆಯೋಗಕ್ಕೂ ಸ್ಪಷ್ಟತೆ ಸಿಕ್ಕಿಲ್ಲ. ಸಾಕಷ್ಟು ವಿಚಾರಗಳಲ್ಲಿ ಕಾನೂನು ತೊಡಕುಗಳು ಇವೆ. ಅತ್ಯಾಧುನಿಕ ತಂತ್ರಜ್ಞಾನ ಇದ್ದಾಗ್ಯೂ ಸಾಮಾಜಿಕ ಮಾಧ್ಯಮಗಳನ್ನು ಹಿಂಬಾಲಿಸುವ ವ್ಯವಸ್ಥಿತ ಜಾಲದ ಕೊರತೆಯೂ ಇದೆ ಎಂದು
ಇದೇ ವೇಳೆ ಸಂಜೀವ ಕುಮಾರ್ ಅಸಹಾಯಕತೆ ತೋಡಿಕೊಂಡರು.
312 ದೂರುಗಳು
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈವರೆಗೆ ಒಟ್ಟು 312 ಪ್ರಕರಣಗಳು ದಾಖಲಾಗಿವೆ. ನಮ್ಮ ಕೋರಿಕೆಯ ಮೇರೆಗೆ ಫೇಸ್ ಬುಕ್, ಗೂಗಲ್, ವಾಟ್ಸಪ್ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿನ 350ಕ್ಕೂ ಹೆಚ್ಚು ಸಂದೇಶಗಳನ್ನು ಆಯಾ ಕಂಪೆನಿಗಳು ತೆಗೆದುಹಾಕಿವೆ. ಇಡೀ ದೇಶದಲ್ಲಿ ಇವುಗಳ ಸಂಖ್ಯೆ ಲಕ್ಷಾಂತರವಾಗಿದೆ. ನೀತಿ ಸಂಹಿತೆ ಜಾರಿ ದೃಷ್ಟಿಯಿಂದ ಫೇಸ್‌ಬುಕ್, ವಾಟ್ಸಪ್, ಗೂಗಲ್ ಮತ್ತಿತರರ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರಿಗೆ ಚುನಾವಣಾ ಆಯೋಗದಿಂದ ತರಬೇತಿ ನೀಡಲಾಗಿದೆ. ಅವರಿಂದ ಎಲ್ಲ ಹಂತಗಳಲ್ಲಿ ಸಮನ್ವಯ ಸಾಧಿಸಿ ಸಹಕಾರ ಪಡೆದುಕೊಳ್ಳಲಾಗುತ್ತಿದೆ ಎಂದು ಸಂಜೀವ ಕುಮಾರ್ ಮಾಹಿತಿ ನೀಡಿದರು.
ಒಂದೊಂದು ಓಟಿನಿಂದಲೂ ದೇಶ ರಕ್ಷಣೆ
17ನೇ ಲೋಕಸಭೆ ಚುನಾವಣೆ “ಪ್ರಜಾಪ್ರಭುತ್ವದ ಮಹಾ ಉತ್ಸವ’ ಆಗಿದೆ. ಇದರಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ ಮತ ಹಾಕುವ ಮೂಲಕ ಸಂಭ್ರಮಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೊಂದು ಮತಕ್ಕೂ ಅದರದೇ ಆದ ಮೌಲ್ಯವಿದೆ. ಮತದಾನ ಪ್ರತಿಯೊಬ್ಬ ಪ್ರಜೆಯ ಪವಿತ್ರ ನಾಗರಿಕ ಸೇವೆಯಾಗಿದೆ. ಕ್ರಿಕೆಟ್‌ನಲ್ಲಿ ಒಂದು ಓಟ ಪಂದ್ಯದ ಫಲಿತಾಂಶ ನಿರ್ಣಯಿ ಸುತ್ತದೆ. ಹಾಗೆಯೇ ಒಂದು ಓಟು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಟ್ಟುವಲ್ಲಿ ನಿರ್ಣಾ ಯಕ ಪಾತ್ರ ವಹಿಸುತ್ತದೆ. ನನ್ನ ಒಂದು ಓಟಿನಿಂದ ಏನಾಗಲಿದೆ ಎಂಬ ಅಸಡ್ಡೆ ಬೇಡ, ಮತದಾನದ ದಿನ ರಜೆಯನ್ನು ಮೋಜಿಗೆ ಮೀಸಲಿಡಬೇಡಿ. ಕಡ್ಡಾಯವಾಗಿ ಮತದಾನ ದಲ್ಲಿ ಪಾಲ್ಗೊಳ್ಳಿ, ಇತರರಿಗೂ ಪ್ರೇರೇಪಿಸಿ ಎಂದು ಸಂಜೀವ್‌ಕುಮಾರ್ ಸಲಹೆ ನೀಡಿದರು.
ನೈತಿಕ ಚುನಾವಣೆ ಸಾಧ್ಯವಾಗಬೇಕಾದರೆ ಮತದಾರರು ಹೆಚ್ಚು ಜಾಗೃತರಾಗಬೇಕು. ಅಭ್ಯರ್ಥಿಗಳ ಪೂರ್ವಾಪರ ತಿಳಿದುಕೊಂಡು ಯಾರು ಉತ್ತಮರು ಎಂದು ತಿಳಿದು ತಮ್ಮ ಪ್ರತಿನಿಧಿಗಳನ್ನು ಚುನಾಯಿಸ ಬೇಕು. ಯಾವುದೇ ಆಮಿಷ, ಒತ್ತಡಕ್ಕೆ ಒಳಗಾಗದೇ ಸ್ವಂತ ವಿವೇಕ ದಿಂದ ಮುಕ್ತವಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.