ಕ್ಷಯ ರೋಗ ನಿರ್ಮೂಲನೆ ಅಸಾಧ್ಯವೇನಲ್ಲ
Team Udayavani, Mar 24, 2021, 6:20 AM IST
ಕ್ಷಯ ರೋಗವು ಬಹಳ ಪುರಾತನ ಕಾಯಿಲೆಯಾದರೂ ಇದರ ಬಗ್ಗೆ ಇರುವ ತಪ್ಪು ಕಲ್ಪನೆ ಹಾಗೂ ನಂಬಿಕೆಗಳು ಇನ್ನೂ ಮಾಯವಾಗಿಲ್ಲ. ಬಡತನ, ಅಪೌಷ್ಟಿಕತೆ ಹಾಗೂ ನಗರಗಳಲ್ಲಿ ಹೆಚ್ಚುತ್ತಿರುವ ಕೊಳಚೆ ಪ್ರದೇಶಗಳು ಮುಂತಾದ ಹಲವು ಕಾರಣಗಳಿಂದಾಗಿ ಕ್ಷಯ ರೋಗ ನಿಯಂತ್ರಣ ಸರಕಾರದ ಪಾಲಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ದೇಶವನ್ನು 2025ರ ವೇಳೆಗೆ ಕ್ಷಯ ರೋಗ ಮುಕ್ತ ರಾಷ್ಟ್ರವನ್ನಾಗಿಸುವ ಗುರಿಯನ್ನು ಕೇಂದ್ರ ಸರಕಾರ ಹಾಕಿಕೊಂಡಿದೆ.
1882ರ ಮಾರ್ಚ್ 24ರಂದು ಜರ್ಮನಿಯ ವಿಜ್ಞಾನಿ ಡಾ| ರಾಬರ್ಟ್ ಕಾಕ್ ಕ್ಷಯ ರೋಗವು ಮೈಕೊಬ್ಯಾಕ್ಟೀರಿಯಮ್ ಟ್ಯುಬರ್‌ಕ್ಯುಲೋಸಿಸ್ ಎಂಬ ರೋಗಾಣುವಿನಿಂದ ಹರಡುತ್ತದೆ ಎಂದು ತಮ್ಮ ಸಂಶೋಧನೆಯಿಂದ ಕಂಡುಕೊಂಡರು. ಇದಾದ ಬಳಿಕ ತ್ವರಿತಗತಿಯಲ್ಲಿ ರೋಗ ನಿರ್ಣಯವನ್ನು ಮಾಡಲು ಮತ್ತು ಈ ರೋಗಕ್ಕೆ ಔಷಧವನ್ನು ಸಂಶೋಧಿಸಲು ವೈದ್ಯಕೀಯ ಜಗತ್ತಿಗೆ ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಮೂಲಕ ಕ್ಷಯ ರೋಗದ ಬಗೆಗೆ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ.
ಈ ವರ್ಷದ ವಿಶ್ವ ಕ್ಷಯ ರೋಗ ದಿನದ ಧ್ಯೇಯವಾಕ್ಯ “ಕ್ಷಯ ರೋಗ ನಿರ್ಮೂಲನೆಗೆ ಸಮಯ ಮೀರುತ್ತಿದೆ’ ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ “ಟಿಬಿ ಸೋಲಿಸಿ, ದೇಶ ಗೆಲ್ಲಿಸಿ’ ಎನ್ನುವ ಘೋಷವಾಕ್ಯದೊಂದಿಗೆ ಎಲ್ಲರೂ ದೇಶವನ್ನು ಕ್ಷಯ ರೋಗ ಮುಕ್ತವನ್ನಾಗಿಸಲು ಪಣತೊಡಬೇಕು.
ರೋಗದ ಲಕ್ಷಣಗಳು ಮತ್ತು ಪತ್ತೆ ವಿಧಾನ: ಕ್ಷಯ ರೋಗವನ್ನು ಅತ್ಯಂತ ಸರಳ ವಿಧಾನಗಳಿಂದ ಪತ್ತೆ ಹಚ್ಚಬಹುದು. ಮೊದಲನೆಯದಾಗಿ ಕ್ಷಯ ರೋಗದ ಲಕ್ಷಣಗಳ (ಎರಡು ವಾರಗಳಿಗಿಂತ ಹೆಚ್ಚಿನ ಅವಧಿಯ ಕಫ ಸಹಿತ ಕೆಮ್ಮು, ರಾತ್ರಿ ವೇಳೆ ಜ್ವರ, ರಕ್ತಮಿಶ್ರಿತ ಕಫ, ಎದೆನೋವು, ತೂಕ ಕಡಿಮೆಯಾಗುವುದು, ಹಸಿವೆ ಇಲ್ಲದಿರುವುದು.)ಮೂಲಕ, ಎರಡನೆಯದಾಗಿ ಕಫ ಪರೀಕ್ಷೆಯ ಮೂಲಕ, ಮೂರನೆಯದಾಗಿ ಕ್ಷ-ಕಿರಣದ ಮೂಲಕ ಹಾಗೂ ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ತಂತ್ರಜ್ಞಾನದಿಂದ ತ್ವರಿತವಾಗಿ ಅಂದರೆ ಕೇವಲ 2 ತಾಸುಗಳಲ್ಲಿ CBNAAT ಯಂತ್ರದ ಮೂಲಕ ಪತ್ತೆ ಹಚ್ಚಬಹುದು. ಈ ನೂತನ ಪರೀಕ್ಷಾ ವಿಧಾನಗಳು ಎಲ್ಲ ತಾಲೂಕು ಹಾಗೂ ಜಿಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯ. ಇಂತಹ ಸೌಲಭ್ಯಗಳನ್ನು ಕ್ಷಯ ರೋಗದ ಲಕ್ಷಣ ಉಳ್ಳವರು ಉಪಯೋಗಿಸಿ, ಪ್ರಾರಂಭಿಕ ಹಂತದಲ್ಲಿ ಕ್ಷಯ ರೋಗವನ್ನು ಪತ್ತೆಹಚ್ಚಬೇಕು.
ಹರಡುವಿಕೆ ಹೇಗೆ?: ಕ್ಷಯ ರೋಗದ ರೋಗಾಣುಗಳು ಗಾಳಿಯ ಮೂಲಕ ಹಾಗೂ ಕ್ಷಯ ರೋಗಿಯ ನಿಕಟ ಸಂಪರ್ಕ ದಿಂದ ಆರೋಗ್ಯವಂತ ಶ್ವಾಸಕೋಶವನ್ನು ಸೇರಿ ದ್ವಿಗುಣಗೊಳ್ಳುತ್ತದೆ. ಆದುದರಿಂದ ಕಫದಲ್ಲಿ ಅಧಿಕ ಸಾಂದ್ರತೆಯಲ್ಲಿ ರೋಗಾಣುಗಳು ಕಂಡುಬರುತ್ತವೆ. ಅಲ್ಲಲ್ಲಿ ಉಗುಳುವ ದುರಾಭ್ಯಾಸವು ಈ ರೋಗವನ್ನು ಹಬ್ಬಿಸಲು ಮುಖ್ಯ ಕಾರಣವಾಗುತ್ತದೆ. ಒಬ್ಬ ಕ್ಷಯ ರೋಗಿಯು ಔಷಧವನ್ನು ಪಡೆಯದಿದ್ದಲ್ಲಿ ಸುಮಾರು 10-15 ಜನರಿಗೆ ಈ ರೋಗವನ್ನು ಹರಡಬಲ್ಲನು.
ಮೂಳೆ, ಕರುಳು, ದುಗ್ಧರಸ ಗ್ರಂಥಿಗಳು, ಮೆದುಳಿನ ಪರದೆ, ಎದೆಗೂಡಿನ ಪರದೆ ಮುಂತಾದ ಅಂಗಾಂಗಗಳಲ್ಲಿಯೂ ಕ್ಷಯ ರೋಗವು ಕಾಣಿಸಿಕೊಳ್ಳುವುದು. ಆದರೆ ಈ ವಿಧದ ಶ್ವಾಸಕೋಶೇತರ ಕ್ಷಯವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.
ಕ್ಷಯ ರೋಗವು ಅಧಿಕವಾಗಿ ಎಚ್.ಐ.ವಿ. ಸೋಂಕಿತರಲ್ಲಿ, ಮಾದಕ ವ್ಯಸನಿಗಳಲ್ಲಿ, ಧೂಮಪಾನ ಮತ್ತು ಮದ್ಯಪಾನ ಮಾಡುವವರಲ್ಲಿ, ಮಧುಮೇಹ ರೋಗಿಗಳಲ್ಲಿ, ಡಯಾಲಿಸಿಸ್ ರೋಗಿಗಳಲ್ಲಿ ಹಾಗೂ ಅನಾಥಾಶ್ರಮ ಮತ್ತು ನಗರ ಪ್ರದೇಶ ಗಳ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವವರಲ್ಲಿ ಹೆಚ್ಚಾಗಿ ಕಂಡುಬರುವುದು.
ಕ್ರಮಬದ್ಧ ಔಷಧ ಸೇವನೆ ಅಗತ್ಯ: ಕ್ಷಯ ರೋಗವನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಕ್ರಮಬದ್ಧ ಔಷಧ ಸೇವನೆಯಿಂದ (6 ತಿಂಗಳು) ಸಂಪೂರ್ಣವಾಗಿ ಗುಣಪಡಿಸಬಹುದು. ಇತರ ಸಾಂಕ್ರಾಮಿಕ ರೋಗಗಳಂತೆ ಕೆಲವೇ ದಿನಗಳ ಚಿಕಿತ್ಸೆಯಿಂದ ಇದನ್ನು ಗುಣಪಡಿಸಲು ಅಸಾಧ್ಯ.
ಇತ್ತೀಚಿನ ನೂತನ ಚಿಕಿತ್ಸೆಯಲ್ಲಿ ರೋಗಿಯು ಅವನ ತೂಕಾನುಸಾರ ಪ್ರತಿನಿತ್ಯ ಔಷಧವನ್ನು ಕ್ರಮಬದ್ಧವಾಗಿ 6 ತಿಂಗಳುಗಳ ಕಾಲ ಸೇವಿಸಬೇಕು. ಔಷಧ ಸೇವಿಸಿ 10-15 ದಿನಗಳಲ್ಲಿ ರೋಗಲಕ್ಷಣಗಳು ಕಡಿಮೆಯಾದರೂ ಔಷಧ ಸೇವನೆಯನ್ನು ಮುಂದುವರಿಸಬೇಕು. ಯಾಕೆಂದರೆ ರೋಗಾಣುಗಳು ಶ್ವಾಸಕೋಶದಲ್ಲಿ ಜೀವಂತವಾಗಿರುತ್ತವೆ. ಕ್ರಮಬದ್ಧವಲ್ಲದ ಹಾಗೂ ಅಸಂಪೂರ್ಣ ಚಿಕಿತ್ಸೆಯಿಂದ ಕ್ಷಯರೋಗವು ಮರುಕಳಿಸಬಹುದು. ಈ ತೆರನಾದ ಅಸಮರ್ಪಕ ಚಿಕಿತ್ಸೆಯಿಂದ ರೋಗಾಣುಗಳು ಔಷಧಗಳಿಗೆ ಪ್ರತಿರೋಧಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತವೆ. ಈ ಕ್ಷಯ ರೋಗವನ್ನು ಔಷಧ ನಿರೋಧಕ ಕ್ಷಯವೆಂದು ಕರೆಯಲಾಗುವುದು. ಇದನ್ನು ದೀರ್ಘಕಾಲದ (12-24 ತಿಂಗಳು) ಚಿಕಿತ್ಸೆಯಿಂದ ಮಾತ್ರ ಗುಣಪಡಿಸಬಹುದು.
ಔಷಧ ನಿರೋಧಕ ಕ್ಷಯ ರೋಗಿಗಳು ಬಹಳ ಅಪಾಯಕಾರಿ ಹಾಗೂ ಇತರರಿಗೆ (ಕುಟುಂಬದವರಿಗೆ ಮತ್ತು ಉದ್ಯೋಗ ಸ್ಥಳದಲ್ಲಿ ನಿಕಟವರ್ತಿಗಳಿಗೆ) ಬಹಳ ತ್ವರಿತಗತಿಯಲ್ಲಿ ಹರಡ ಬಲ್ಲದು. ಆದುದರಿಂದ ರೋಗ ನಿರೋಧಕ ಶಕ್ತಿ ಕಡಿಮೆ ಉಳ್ಳವರು ಸದಾ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ತಮ್ಮನ್ನು ರಕ್ಷಿಸಿಕೊಳ್ಳಬೇಕು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕ್ಷಯರೋಗಿಯ ನಿಕಟ ಸಂಪರ್ಕದಲ್ಲಿರುವ ಎಲ್ಲ ಜನರನ್ನು ತಪಾಸಣೆ ಹಾಗೂ ಪರೀಕ್ಷೆಗೆ ಒಳಪಡಿಸಿ ಪ್ರಾರಂಭಿಕ ಹಂತದ ಲ್ಲಿಯೇ ರೋಗವನ್ನು ಪತ್ತೆಹಚ್ಚಲಾಗುತ್ತದೆ.
ತಡೆಗಟ್ಟುವ ವಿಧಾನಗಳು: 1. ಕೆಮ್ಮುವಾಗ, ಸೀನುವಾಗ ತಪ್ಪದೇ ಕರವಸ್ತ್ರ/ಮಾಸ್ಕ್ ಧರಿಸುವುದು. 2. ಅಲ್ಲಲ್ಲಿ ಉಗುಳುವ ದುರಾಭ್ಯಾಸವನ್ನು ನಿಲ್ಲಿಸಬೇಕು. 3. ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮಕ್ಕಳನ್ನು ಕ್ಷಯ ರೋಗಿಗಳಂದ ದೂರವಿಡಬೇಕು. 4. ಹುಟ್ಟಿದ ಒಂದು ತಿಂಗಳೊಳಗೆ ಎಲ್ಲ ಮಕ್ಕಳಿಗೂ ತಪ್ಪದೇ ಬಿ.ಸಿ.ಜಿ. ಲಸಿಕೆಯನ್ನು ಹಾಕಿಸುವುದು. 5. ಧೂಮಪಾನ, ಮದ್ಯಪಾನದಿಂದ ದೂರವಿರು ವುದು. 6. ಪೌಷ್ಟಿಕ ಮತ್ತು ಸಮತೋಲನ ಆಹಾರ ಸೇವನೆ.
ಸವಾಲುಗಳು: ರೋಗದ ನಿರ್ಮೂಲನೆ ಮಾಡಲು ನಮ್ಮ ಮುಂದೆ ಇರುವ ಅನೇಕ ಸವಾಲುಗಳು; 1. ಬಡತನ, 2. ಅಪೌಷ್ಟಿಕತೆ, 3. ಎಚ್.ಐ.ವಿ. ಸೋಂಕು, 4. ಹೆಚ್ಚುತ್ತಿರುವ ಮಧುಮೇಹ ರೋಗಿಗಳು, 5. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕೊಳೆಗೇರಿಗಳು, 6. ಹೆಚ್ಚುತ್ತಿರುವ ಜೀವನಶೈಲಿಗೆ ಸಂಬಂಧಪಟ್ಟ ರೋಗಗಳು (ಸ್ಥೂಲಕಾಯ)
ಮೇಲಿನ ಎಲ್ಲ ಸವಾಲುಗಳನ್ನು ಎದುರಿಸಿ ಹಂತಹಂತವಾಗಿ ಅವುಗಳನ್ನು ನಿವಾರಿಸಲು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಒಟ್ಟುಗೂಡಿ ಶ್ರಮಿಸಬೇಕು. ಆರೋಗ್ಯ ಇಲಾಖೆ ಮಾತ್ರವಲ್ಲದೇ ಸಂಬಂಧಪಟ್ಟ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ಜನರು ವೈಯಕ್ತಿಕ ಸ್ವತ್ಛತೆಯತ್ತ ಗಮನಹರಿಸಬೇಕಿದೆ. ಹೀಗಾದಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು ತಕ್ಕಮಟ್ಟಿಗೆ ಸಾಧ್ಯ.
ಡಾ| ರಾಮಚಂದ್ರ ಕಾಮತ್, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.