Thomas Cook History:ರೋಚಕ ಕಥನ- ಪ್ಯಾಕೇಜ್ ಪ್ರವಾಸದ ಪಿತಾಮಹ ಥಾಮಸ್ ಕುಕ್!
ಡೋಂಟ್ ಜಸ್ಟ್ ಬುಕ್ ಇಟ್, ಥಾಮಸ್ ಕುಕ್ ಇಟ್!
Team Udayavani, Jul 13, 2024, 11:46 AM IST
ಕಳೆದ ತಿಂಗಳು ನಾನು ಬಹುಸಂಖ್ಯಾಕ ಬ್ರಿಟಿಷ್ ಭಾರತೀಯ ಮೂಲದವರು ವಾಸಿಸುತ್ತಿರುವ ಲೆಸ್ಟರ್ ಶಹರಕ್ಕೆ ಹೋದಾಗ ಸ್ಟೇಶನ್‌ನ ಹೊರಗಡೆಯಲ್ಲಿ ಕಟ್ಟೆಯ ಮೇಲೆ ನಿಂತ ಆರಡಿ ಎತ್ತರದ ಅರ್ಧ ಬೋಳು ತಲೆಯ ಈಗ ತಾನೆ ಪ್ರವಾಸಕ್ಕೆ ಹೊರಟವನ ಮೂರ್ತಿ ಕಣ್ಣಿಗೆ ಬಿತ್ತು. ಒಂದು ಕೈಯಲ್ಲಿ ಹಳೆಯ ಕಾಲದ ಗಾಂಧಿ ತಾತನ ಹತ್ತಿರ ಇದ್ದಂಥ ವಾಚು, ಇನ್ನೊಂದು ಕೈಯಲ್ಲಿ ಮಡಿಚಿಟ್ಟ ಕೊಡೆ, ಬ್ಯಾಗು, ಅದರಡಿ ಸ್ಥಾಪಿಸಿದ ಟೂರಿಂಗ್ ಸೂಟ್ ಕೇಸ್. ಅಪ್ಪಟ ಹಳೆಯಕಾಲದ ಇಂಗ್ಲಿಷ್ “ಜಂಟಲ್ ಮನ್ ಟೂರಿಸ್ಟ್.’ ಯಾರೀತ ? ಇದೊಂದು ರೋಚಕ ಪ್ರವಾಸಿ ಕಥನ!
ಇಂದು ಊರಿಂದೂರಿಗೆ ಮತ್ತು ದೇಶಾಂತರ ಪ್ರವಾಸಿಗಳ ಸಂಖ್ಯೆ ದಿನೇದಿನೆ ಬೆಳೆಯುತ್ತಿದೆ. ಇಪ್ಪತ್ತನೆಯ ಶತಮಾನದ 60-70ರ ದಶಕಗಳಲ್ಲಿ ಇಂಗ್ಲೆಂಡಿನಲ್ಲಿ ಸರ್‌ಫ್ರೆಡ್ಡಿ ಲೇಕರ್ ಸ್ಲೈ ಟ್ರೇನ್ ಎನ್ನುವ ಕಂಪೆನಿ ಶುರು ಮಾಡಿದ ಅನಂತರ ಪ್ಯಾಕೇಜ್ ಹಾಲಿಡೇಗಳು ಬೆಳೆಯುತ್ತ ಥಾಮಸ್ ಕುಕ್ ಕಂಪೆನಿ 1980ರ ದಶಕದಲ್ಲಿ ಅದನ್ನು ಉಚ್ಚ್ರಾಯ ಸ್ಥಿತಿಗೆ ಒಯ್ಯಿತು. ಆದರೆ ಅದು ಯಾವಾಗ ಪ್ರಾರಂಭವಾಯಿತು?
ಕಾಲ್ನಡಿಗೆಯಲ್ಲಿ ಹೊರಟ ಪಾದ್ರಿ ಟೂರಿಸಂ ಹುಟ್ಟಿದ ಜಾಗ ಇಂಗ್ಲೆಂಡಿನ ಲೆಸ್ಟರ್‌ಎನ್ನುವ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. 183 ವರ್ಷಗಳ ಹಿಂದೆ ಜೂನ್ 6ರಂದು ಥಾಮಸ್ ತನ್ನ ಊರಿಂದ ಕಾಲ್ನಡಿಗೆಯಲ್ಲಿ 15 ಮೈಲು ದೂರದ ಲೆಸ್ಟರ್ ನಗರಕ್ಕೆ ಟೆಂಪರನ್ಸ್ ( ಮದ್ಯಪಾನ ಸಂಯಮ ಸಂಘ) ಮೀಟಿಂಗಿಗೆ ಹೊರಟಿದ್ದ. ಉದರ ನಿರ್ವಹಣೆಗಾಗಿ ಬಡಿಗನಾಗಿ ಕೆಲಸ ಮಾಡುತ್ತಿದ್ದರೂ ತನಗೆ ಅತೀವ ಶ್ರದ್ಧೆಯಿದ್ದ ಕ್ರಿಸ್ತಮತದ ಬಾಪ್ಟಿಸ್ಟ್ ಪ್ರವಚನಕಾರನೂ ಆಗಿದ್ದ ಆತನ ತಲೆಯಲ್ಲಿ ಫಕ್ಕನೆ ವಿಚಾರವೊಂದು ಸುಳಿಯಿತು. ಇತ್ತೀಚಿಗೆ ಬೆಳೆಯುತ್ತಿರುವ ರೈಲ್ವೇಯ ಪ್ರಭಾವವನ್ನು ನಮ್ಮ ಬಡವರನ್ನು ಹೀನ ಸ್ಥಿತಿಗೆಳೆಯುತ್ತಿರುವ ಮದ್ಯಪಾನದಂಥ ದುರ್ವ್ಯಸನಗಳ ಸಂಯಮ ಚಳುವಳಿಗೇಕೆ ಉಪಯೋಗಿಸಿಕೊಳ್ಳಬಾರದು? ಎಂದು. ಈ ವಿಚಾರವನ್ನು ಅಂದು ಟೆಂಪರನ್ಸ್ ಸೊಸೈಟಿ (Temperance) ಸಭೆಯಲ್ಲಿ ಮಂಡಿಸಿ ಕಮಿಟಿಯಿಂದ ಆನುಮತಿ ಪಡೆದು ಕಾರ್ಯಪ್ರವೃತ್ತನಾದ.
ಮುಂದಿನ ಜುಲೈ 5, 1841 ಮಹತ್ವದ ದಿನ. ಮೊದಲ ಬಾರಿ ಇಂಗ್ಲೆಂಡಿನ ಲೆಸ್ಟರ್ ನಗರದಿಂದ ಲಫ್ ಬರಾ (Temperance) ಎನ್ನುವ ಊರಿಗೆ 485 ಜನರನ್ನು ಹದಿನೈದು ಮೈಲು ರೈಲು ಪ್ರವಾಸ ಮಾಡಿಸಿ ಥಾಮಸ್ ಕುಕ್ ಪಪ್ರಥಮ ದಾಖಲೆಯನ್ನೇ ಮಾಡಿದನು. ಆ ದಿನ ಅವರೆಲ್ಲ ಮರಳಿ ಲೆಸ್ಟರಿಗೆ ಬಂದಾಗ ರಾತ್ರಿ 10.30! ಅವರು ತೆತ್ತ ಶುಲ್ಕ ಬರೀ ಒಂದು ಶಿಲ್ಲಿಂಗ್. ಈಗಿನ ಲೆಕ್ಕದಲ್ಲಿ ಮೂರು ಪೌಂಡುಗಳು; ಅಂದು ಸಾಮಾನ್ಯ ಮನುಷ್ಯನ ಆಗಿನ ಕಾಲದ ಒಂದು ತಿಂಗಳ ಆದಾಯಕ್ಕೆ ಸಮವಾಗಿತ್ತು. ಅಂದೇ ಹುಟ್ಟಿತು ಪ್ಯಾಕೇಜ್ ಪ್ರವಾಸ. ಆತನೇ ಅದಕ್ಕೆ ಚಾಲನೆ ಕೊಟ್ಟವರಲ್ಲಿ ಮೊದಲಿಗನು. ಆತನ ಅನಂತರ ಆತನ ಮಗನು ಥಾಮಸ್ ಕುಕ್ ಕಂಪೆನಿಯನ್ನು ಮುನ್ನಡೆಸಿ ಇನ್ನಷ್ಟು ಬೆಳೆಸಿದನು. ಮುಂದೆ ಮೊಮ್ಮಕ್ಕಳೂ ಸೇರಿಕೊಂಡರು. ಅವರದೇ ಏರ್‌ಲೈನ್ ಸಹ ಪ್ರಾರಂಭವಾಯಿತು.
ಫ್ರೆಡ್ಡಿ ಲೇಕರ್ ಅವರ ಸ್ಕೈ ಟ್ರೇನ್ ಮತ್ತು ವಿದೇಶ ಪ್ರವಾಸದ ಬೆಳವಣಿಗೆ, ಮೋಡ, ಮಂಜು ಕವಿದ ಬ್ರಿಟಿಷ್ ಆಕಾಶಕ್ಕೆ ಹೊಂದಿಕೊಂಡವರು ಮತ್ತು ಇಡೀ ವರ್ಷ ಸತತವಾಗಿಯಲ್ಲದಿದ್ದರೂ ತಿಂಗಳಲ್ಲೊಂದು ಬಾರಿಯಾದರೂ ಮಳೆಯಾಗುವ ಈ ಚಳಿನಾಡಿನಲ್ಲಿ ವಾಸಿಸುವ ಆಂಗ್ಲರ ಹವ್ಯಾಸಗಳಲ್ಲಿ ಒಂದು ಬಹುತೇಕ ಎಲ್ಲ ಕುಟುಂಬದವರು “ಬೇಸಗೆಯಲ್ಲಿ’ ಒಂದು ಅಥವಾ ಎರಡು ವಾರಗಳು ಸಮುದ್ರ ತಟದ ಮೇಲೆ ಕಳೆಯುವ ಬೀಚ್ ಹಾಲಿಡೇ! ಚಿಕ್ಕಂದಿನಲ್ಲಿ ಈ ದೇಶದ ನೈಋತ್ಯದ ಡೆವನ್ ಮತ್ತು ಕಾರ್ನ್ ವಾಲ್ ಪ್ರದೇಶಗಳಿಗೆ ತಂಡೋಪ ತಂಡವಾಗಿ ಹೋಗುವ ಅಭ್ಯಾಸ ಅವರದು. ಅದು ತಪ್ಪಿದರೆ ಉತ್ತರದ ಬ್ಲಾಕ್ ಪೂಲ್ ಅಥವಾ ಆಗ್ನೇಯದ ಗ್ರೇಟ್ ಯಾರ್ಮೌತ್ ಅಥವಾ ಸ್ಕಾಟ್ಲೆಂಡಿಗೆ ಕಾರಿಗೆ ಕಾರವಾನ್ ಲಗತ್ತಿಸಿ ಪಯಣ. ಇದು ತಲೆ ತಲಾಂತರಗಳಿಂದ ಅವರು ಮಾಡುತ್ತಿದ್ದರೆಂದು ವಿಕ್ಟೋರಿಯನ್ ಆಂಗ್ಲ ಸಾಹಿತಿ ಚಾರ್ಲ್ಸ್ ಡಿಕೆನ್‌ಸನ್ ಓದುಗರಿಗೂ ವಿದಿತ.
ಆಗ ಮಧ್ಯಮ ವರ್ಗದ ಕುಟುಂಬಗಳಿಗೆ ವಿಮಾನದಲ್ಲಿ ಪರದೇಶಗಳಿಗೆ ಹೋಗುವ ಸಾಮರ್ಥ್ಯ ಇರಲಿಲ್ಲ. ಅದನ್ನು ಮುರಿದವನು 1977ರಲ್ಲಿ ಬರೀ 118 ಸ್ಟರ್ಲಿಂಗ್ ಪೌಂಡುಗಳಿಗೆ ಅಮೆರಿಕ್ಕಕೆ ಕೊಂಡೊಯ್ಯುವ ಸ್ಕೈಟ್ರೇನ್ ಪ್ರಾರಂಭ ಮಾಡಿದವನೇ ಮುಂದೆ “ಸರ್’ ಬಿರುದು ಪಡೆದು ಸರ್ ಫ್ರೆಡ್ಡಿ ಲೇಕರ್ ಆದ. ಆ ಟಿಕೇಟು ಉಳಿದ ದೊಡ್ಡ ಏರ್‌ಲೈನ್‌ಗಳಿಗಿಂತ ಶೇಕಡಾ 66 ಕಡಿಮೆ ದರದ್ದು ಎಂದ ಮೇಲೆ ಶ್ರೀಸಾಮಾನ್ಯನ ಪರದೇಶ ಪ್ರವಾಸದ ಕನಸು ನನಸಾಯಿತು.
ಹಲವೇ ವರ್ಷಗಳ ಅನಂತರ 1980ರ ದಶಕದಲ್ಲಿ ಹಣಕಾಸಿನ ಕುಸಿತ (ರಿಸೆಷನ್) ಮತ್ತು ಆತನ ಪ್ರತಿಸ್ಫರ್ದಿ ಏರ್‌ಲೈನ್‌ಗಳ ಷಡ್ಯಂತ್ರ ಇವೆರಡರ ಕಾರಣದಿಂದ ಆತನ ಕಂಪೆನಿ ಮುಳುಗಿದರೂ ಜನರಿಗೆ ಯೂರೋಪ್ ಮತ್ತು ದೂರ ದೇಶಗಳಿಗೆ ಬಿಸಿಲನ್ನು ಬೆನ್ನು ಹತ್ತಿ ಪ್ರವಾಸ ಮಾಡುವ ಚಟ ಆಗಲೇ ಹತ್ತಿತ್ತು. ಚಳಿ-ಮಳೆಯಿಂದ ಬೇಸತ್ತು ಯುಕೆಯನ್ನು ಬಿಟ್ಟು ಎರಡೇ ತಾಸುಗಳೊಳಗೆ ದಕ್ಷಿಣ ಫ್ರಾನ್ಸ್ ಅಥವಾ ಅಗ್ಗ ದರದಲ್ಲಿ ಬೇಸಗೆಯಲ್ಲಿ ಬೇಯುವ ಸ್ಪೇನಿನ ಕಾಸ್ಟಾ ಡೆಲ್ ಬೀಚ್‌ಗಳಿಗೆ ಹೋಗುವ ಸಾಧ್ಯತೆ ಅವರ ಮಡಿಲಲ್ಲಿ ಬಂದು ಬಿದ್ದಾಗ ಯಾರಿಗೆ ಬೇಡ?
ಒಂದು ಅಥವಾ ಎರಡು ವಾರಗಳ ಅನಂತರ ವಿಮಾನದಲ್ಲಿ ಮರಳುವಾಗ ಬೀಚ್‌ನಲ್ಲಿ ಬೆಂದ ಕಂದು ಬಣ್ಣದ ಸನ್ ಟ್ಯಾನ್ ಮೈ ಬಿಟ್ಟು ಕೊಂಡು ಮೆರೆದವರೇ. ಟೀಚರ್-ಲಾಯರ್‌ನಿಂದ ಹಿಡಿದು ಗಣಿ ಕೆಲಸಗಾರರು ಸಹ. ಇದರ ಲಾಭ ಪಡೆದ ಥಾಮಸ್ ಕುಕ್ ಕಂಪೆನಿ ಒಮ್ಮೆಲೆ ನೂರು ಟ್ರಾವಲ್ ಏಜೆಂಟ್ ಅಂಗಡಿಗಳನ್ನು ಊರೂರಿಗೆ ಹೋಗಿ ತೆರೆಯಿತು. ಅದರ ಹೆಸರು ಪ್ಯಾಕೇಜ್ ಹಾಲಿಡೇಗೆ ಮನೆಮಾತಾಯಿತು. ಅವುಗಳೂ ಏರಿಳಿತಗಳನ್ನು ಕಂಡ ಕಥೆಯನ್ನು ಅನಂತರ ನೋಡುವಾ.
ಟ್ರಾವಲರ್ಸ್ ಚೆಕ್
ಫುಲ್ ಪ್ಯಾಕೇಜ್ ಅಂದರೆ ವಿಮಾನ ಪಯಣವಲ್ಲದೆ ಹೊಟೇಲ್ ವಾಸ ಮತ್ತು ದೈನಂದಿನ ಖರ್ಚಿಗಾಗಿ ಟ್ರಾವಲ್ ಚೆಕ್‌ಗಳ ಪುಡಿಕೆ. ನಾನು ಮೊದಲ ಬಾರಿ ಇಂಗ್ಲೆಂಡಿಗೆ ಬಂದದ್ದು ಐವತ್ತು ವರ್ಷಗಳ ಹಿಂದೆ. ಆರೇ ತಿಂಗಳ ಅನಂತರ ಭಾರತಕ್ಕೆ ಭೇಟಿ ಕೊಟ್ಟಾಗ ಹಣ ಕಳುವಾಗದಂತೆ ಒಯ್ಯಲು ಅನುಕೂಲ ಎಂದು ಹೇಳಿ ಇನ್ನೂ ಬಡವನಾಗಿದ್ದ ನನಗೂ (ಬೇಂದ್ರೆ ಅವರ ಮಾತಿನಲ್ಲಿ) “ಹಿಡಿ ಹಿಡಿಯಂತ’ ಮಿತ್ರ ಕೊಡಿಸಿದ್ದು ಒಂದು “ಹಿಡಿ’ ಥಾಮಸ್ ಕುಕ್ ಟ್ರಾವಲರ್ಸ್ ಚೆಕ್‌ಗಳು. ಇತ್ತೀಚಿನವರೆಗೆ ಈ ಹೆಸರಿನಲ್ಲೇ ಅವುಗಳು ಜಗತ್ತಿನ ಎಲ್ಲ ಕಡೆ ನಗದು ಹಣದಂತೆಯೇ ಚಾಲ್ತಿಯಲ್ಲಿವೆ. “ಸರ್ಕ್‌ಯುಲರ್ ನೋಟ್ಸ್’ ಎನ್ನುವ ಹೆಸರಿನಲ್ಲಿ ಅವುಗಳನ್ನು ಥಾಮಸ್ ಕುಕ್ 1874ರಲ್ಲೇ ಪ್ರಾರಂಭ ಮಾಡಿದ್ದರು. ಆಮೇಲೆ ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ಅಮೆರಿಕನ್ ಬ್ಯಾಂಕ್‌ಗಳ ಚೆಕ್‌ಗಳೂ ಪ್ರಚಲಿತವಾಗಿದ್ದವು. ವಿದೇಶದಲ್ಲಿ ಗ್ರಾಹಕ ಚೆಕ್ ನೋಟಿನ ಮೇಲೆ ಅಂಗಡಿ ಅಥವಾ ಹೊಟೇಲ್‌ನಲ್ಲಿ ಪ್ರತ್ಯಕ್ಷ ಸಹಿ ಮಾಡಿ ಕ್ಯಾಶ್ ಮಾಡಬಹುದಿತ್ತು.
1975ರಲ್ಲಿ ನಾನು ಮುಂಬಯಿಯಲ್ಲಿ ಬಂದಿಳಿದಾಗ ಅದನ್ನು ಕ್ಯಾಶ್ ಮಾಡಲು ಹೆಚ್ಚಿನ ಎಕ್ಸ್‌ಚೇಂಜ್ ಮಾರುಕಟ್ಟೆಗಳು ಆಗ ಇರಲಿಲ್ಲ. ಫೋರ್ಟ್ ಪ್ರದೇಶಕ್ಕೇ ಹೋಗಬೇಕಾಗಿ ಬಂತು. ಪಾಸ್ ಪೋರ್ಟ್ ತೋರಿಸಿ ಅದರ ಬುಡದಲ್ಲಿ ಸಹಿ ಮಾಡಿ ರೂಪಾಯಿಗಳನ್ನು ಪಡೆದುಕೊಂಡೆ. ಮುಂದೆರಡು ವಾರಗಳ ಅನಂತರ ಹುಬ್ಬಳ್ಳಿ – ಧಾರವಾಡದ ಪ್ರತಿಷ್ಠಿತ ಬ್ಯಾಂಕ್‌ಗೆ ಹೋದಾಗ ಯಾರೂ ಅದನ್ನು ನೋಡಿಯೇ ಇರಲಿಲ್ಲ ಅಂತ ರೂಪಾಯಿ ಕೊಳ್ಳಲು ತ್ರಾಸವಾಯಿತು.! ಈಗ ಜಗತ್ತು ಮುಂದುವರೆದಿದೆ. ಕ್ರೆಡಿಟ್ ಕಾರ್ಡ್ ಮತ್ತು ಪ್ರಿಪೇಡ್ ಕಾರ್ಡ್‌ಗಳ ಈಗಿನ ಬದಲಾದ ವಾತಾವರಣದಲ್ಲಿ ಅವುಗಳು ಅಪರೂಪವಾಗಿ ಮತ್ತೆ ಮಾಯವಾಗುತ್ತಿವೆ.
ಕುಕ್ ಸಾಮ್ರಾಜ್ಯದ ಅವನತಿ ಮತ್ತು ಪುನರ್ಜನ್ಮ
178 ವರ್ಷಗಳ ನಿರಂತರ (ಮಹಾಯುದ್ಧದ ಸಮಯದಲ್ಲಿ ಸ್ವಲ್ಪ ಕಾಲ ರಾಷ್ಟ್ರೀಕರಣವಾದದ್ದನ್ನು ಬಿಟ್ಟು) ಸೂರ್ಯೋದಯ ಸೂರ್ಯಾಸ್ತಗಳನ್ನರಸಿ ಬಂದ ಲಕ್ಷಾಂತರ ಪ್ರಯಾಣಿಕರ ಸಾಗಣಿಕೆ, ವಸತಿ, ಆರೈಕೆಯ ವ್ಯಾಪಾರದ ಅನಂತರ ಸೆಪ್ಟಂಬರ್, 2019ರಲ್ಲಿ ಅದರ ನೇಸರ ಅಸ್ತಂಗತವಾಯಿತು. ಏಕೆ? ಕಾಲ ಬದಲಾದಂತೆ ಮತ್ತು ಅಗ್ಗ ದರದ ವಿಮಾನಯಾನದ ಕಂಪೆನಿಗಳಾದ ಈಸಿ ಜೆಟ್, ರೈಯಾನ್ ಏರ್, ಜೆಟ್-2, Airbnbಗಳ ಪೈಪೋಟಿ, ಕೋವಿಡ್ ಮಹಾಮಾರಿ ಜನರ ಓಡಾಟವನ್ನು ನಿಲ್ಲಿಸಿದ್ದು ಇವೆಲ್ಲ ಕೂಡಿ ಅದರ ಬೇಡಿಕೆ ಕಡಿಮೆಯಾಗಲಾರಂಭಿಸಿತು.
ಜತೆಗೆ 2016ರಲ್ಲಿ ಯೂರೋಪಿಯನ್ನರ ಪ್ರಮುಖ ಹಾಲಿಡೇ ದೇಶವಾಗಿದ್ದ ಟರ್ಕಿಯಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ, 2018 ರಲ್ಲಿ ಹೀಟ್ ವೇವ್, ಇಂದಿನ ಯುವ ಪ್ರವಾಸಿಕರು ಇಂಟರ್ನೆಟ್‌ನಲ್ಲಿ ತಮ್ಮ ವಿಮಾನ, ಹೊಟೇಲ್ ಹುಡಿಕಿಕೊಳ್ಳುವುದು ಇವೆಲ್ಲ ಸೇರಿ ಒಂದು ಪ್ರಸಿದ್ಧ ಆಂಗ್ಲ ಪದಗುಚ್ಛದಂತೆ (To cook one’s goose ಕುಕ್ ಒನ್ಸ್‌ಗೂಸ್) ಥಾಮಸ್ ಕುಕ್ಕನ “ಬಾತನ್ನು ಬೇಯಿಸಿದಂತಾಯಿತು!’ ಆದರೆ ಫೀನಿಕ್ಸ್ ಪಕ್ಷಿಯಂತೆ ಅದು ಆನ್‌ಲೈನ್ ಟ್ರಾವಲ್ ಏಜೆಂಟಿನ ರೂಪದಲ್ಲಿ ಥಾಮಸ್ ಗ್ರುಪ್ ಟೂರಿಸಂ ಹೆಸರಿನಲ್ಲಿ ಸನ್ನಿ ಹಾರ್ಟ್ ಲಾಂಛನದೊಂದಿಗೆ ಮತ್ತೆ ತಲೆಯಿತ್ತಿದೆ. ವಿಪರ್ಯಾಸವೆಂದರೆ ಅದರ ಧ್ಯೇಯವಾಕ್ಯ: ಡೋಂಟ್ ಜಸ್ಟ್ ಬುಕ್ ಇಟ್, ಥಾಮಸ್ ಕುಕ್ ಇಟ್! (Don’t just book it, Thomas Cook it.)
*ಶ್ರೀವತ್ಸ ದೇಸಾಯಿ, ಡೋಕಾಸ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.