ಯಮರಾಜನ ತೆಕ್ಕೆಯಿಂದ ಮೂರು ಬಾರಿ ತಪ್ಪಿಸಿಕೊಂಡೆ!
Team Udayavani, Jan 19, 2020, 6:45 AM IST
ಭೀಕರ ಅಪಘಾತದಿಂದ ಪಾರಾದಾಗ ಅಥವಾ ದೊಡ್ಡ ಕಾಯಿಲೆಯಿಂದ ಗುಣವಾದಾಗ, ಸಂಬಂಧಪಟ್ಟವರು- “ಸಾವನ್ನು ತುಂಬಾ ಹತ್ತಿರದಿಂದ ನೋಡಿಬಂದೆ’ ಎಂದು ಹೇಳುವುದುಂಟು. ಅಂಥದೇ ಹಿನ್ನೆಲೆಯ ವಿನಯ್ ಕಿರ್‌ಪಾಲ್ ಎಂಬಾಕೆಯ ಬದುಕಿನ ಕಥೆ ಇಲ್ಲಿದೆ. ಯೂನಿವರ್ಸಿಟಿ ಪ್ರೊಫೆಸರ್ ಆಗಿದ್ದ ಈಕೆ, ಒಂದಲ್ಲ ಎರಡಲ್ಲ ಮೂರು ಬಾರಿ ಯಮರಾಜನ ತೆಕ್ಕೆಯಿಂದ ತಪ್ಪಿಸಿಕೊಂಡಿದ್ದಾರೆ. ಸಾವಿನ ಸಂದರ್ಭವನ್ನು ತುಂಬ ಹತ್ತಿರದಿಂದ ಕಂಡಾಗ ಆಗುವ ತಳಮಳ, ಇವತ್ತೋ ನಾಳೆಯೋ ಸಾಯುವುದು ಗ್ಯಾರಂಟಿ ಎಂದು ತಿಳಿದಾಗ ಮನುಷ್ಯನನ್ನು ಆವರಿಸಿಕೊಳ್ಳುವ ಭಾವನೆಗಳು, ಪ್ರತಿಯೊಬ್ಬ ಮನುಷ್ಯನನ್ನೂ ಸಾವಿನ ಸಮ್ಮುಖಕ್ಕೆ ಕರೆದೊಯ್ದು ನಿಲ್ಲಿಸುವ ಕಾಯಿಲೆಗಳು, ಅವುಗಳಿಂದ ಪಾರಾದಾಗ ಜೊತೆಯಾಗುವ ಹಿತಾನುಭವ-ಇದೆಲ್ಲವನ್ನೂ ವಿನಯ್ ಕಿರ್‌ಪಾಲ್ ವಿವರವಾಗಿ ಹೇಳಿ ಕೊಂಡಿದ್ದಾರೆ. ಅದನ್ನೆಲ್ಲ ಅವರ ಮಾತುಗಳಲ್ಲಿಯೇ ಹೇಳುವುದಾದರೆ…
ಅದು, ಇಸವಿ 2007ರ ಅಕ್ಟೋಬರ್ ತಿಂಗಳಿನ ಒಂದು ದಿನ. ಪೂನಾ ದಲ್ಲಿ ವಾಸ ವಿದ್ದ ನಾನು, ಮುಂಬಯಿಗೆ ಬಂದಿದ್ದೆ. ಅಲ್ಲಿ, ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕರಿಗೆ ಒಂದು ವಾರದ ತರಬೇತಿ ಶಿಬಿರ ನಡೆಸಬೇಕಿತ್ತು. ತರಗತಿ ಮುಗಿಸಿ ಹೋಟೆಲಿಗೆ ಬಂದವಳು, ನಿಲುವುಗನ್ನಡಿಯಲ್ಲಿ ನೋಡಿಕೊಂಡು- “ವಾಹ್, ನಾನು ತುಂಬಾ ಮುದ್ದಾಗಿ ಕಾಣಿ¤ದೀನಿ. ನನಗೆ 58 ವರ್ಷ ಆಗಿದೆ ಅಂತ ಸಾಕ್ಷಾತ್ ಬ್ರಹ್ಮನೂ ಹೇಳಲಾರ. ಈಗಷ್ಟೇ 40 ತುಂಬಿದೆ ಅನ್ನಬೇಕು. ಅಷ್ಟು ಯಂಗ್ ಆಗಿ ಕಾಣಿಸ್ತಿದೀನಿ’ ಅಂದುಕೊಂಡೆ. ಆಗಲೇ- ನನ್ನ ಸೌಂದರ್ಯದ ಬಗ್ಗೆ ಪರಿಚಿತರು, ಬಂಧುಗಳು, ಸಹೋದ್ಯೋಗಿಗಳು ಮತ್ತು ನನ್ನ ವಿದ್ಯಾರ್ಥಿಗಳು – ತಮ್ಮತಮ್ಮೊಳಗೇ ಪಿಸುಗುಟ್ಟಿ ಕೊಳ್ಳುತ್ತಿದ್ದುದು ನೆನಪಾಯಿತು. ಹತ್ತು ಮಂದಿ ಆಸೆಯಿಂದ ನೋಡುವಷ್ಟರಮಟ್ಟಿಗೆ ಸೌಂದರ್ಯ ಕಾಪಾಡಿಕೊಂಡಿದೀನಲ್ಲ – ನಾನು ಗ್ರೇಟ್, ಅಂದುಕೊಳ್ಳುತ್ತಾ ಬಟ್ಟೆ ಬದಲಿಸಲು ಮುಂದಾದೆ. ಶಾಕ್ ಹೊಡೆದಂತೆ ನಾನು ತತ್ತ ರಿ ಸಿದ್ದು ಆಗಲೇ. ಕಾರಣ ನನ್ನ ಎದೆಯ ಮೇಲೊಂದು ಕೆಂಪಗಿನ ಗಂಟು ಕಾಣಿಸಿತ್ತು! ಹಿಂದಿನ ದಿನ ಬಟ್ಟೆ ಬದಲಿಸುವಾಗ ಅದು ಕಂಡಿರಲಿಲ್ಲ. ಒಂದೇ ದಿನದಲ್ಲಿ, ಯಾಕಿಂಥ ಬದಲಾವಣೆ ಆಯ್ತು ಎಂಬ ಗೊಂದಲದಲ್ಲೇ ತರಬೇತಿ ಶಿಬಿರ ಮುಗಿಸಿದೆ. ಆ ಗಂಟು ಇದ್ದ ಜಾಗದಲ್ಲಿ ನೋವಾಗಲಿ, ಕೆರೆತವಾಗಲಿ, ಉರಿಯಾಗಲಿ ಇರಲಿಲ್ಲ. ಆದರೂ ಯಾಕೋ ಭಯ, ಏನೋ ಸಂಶಯ. ಶಿಬಿರದಿಂದ ಪುಣೆಗೆ ಬಂದವಳೇ, ಸರ್ಜನ್ ಒಬ್ಬರ ಬಳಿ ನನ್ನ ದುಗುಡ ಹೇಳಿಕೊಂಡೆ. ಅವರು- “ಯಾವುದಕ್ಕೂ ಒಮ್ಮೆ ಬ್ಲಿಡ್ ಟೆಸ್ಟ್ ಮಾಡೋಣ. ಏನೇ ತೊಂದರೆ ಇದ್ರೂ ಗೊತ್ತಾಗುತ್ತೆ’ ಅಂದರು. ಮರು ದಿನವೇ ಆಸ್ಪತ್ರೆಯಿಂದ ಕೆಟ್ಟ ಸುದ್ದಿ ಬಂತು: ನಿಮಗೆ ಸ್ತನ ಕ್ಯಾನ್ಸರ್ ಇದೆ!
ಈ ಮಾತು ಕೇಳುತ್ತಿದ್ದಂತೆಯೇ, ಬಾಲ್ಯದ ದಿನಗಳು ಕಣ್ಮುಂದೆ ಬಂದವು. ಅಪ್ಪನಿಗೆ ಜ್ಯೋತಿಷ್ಯ ಗೊತ್ತಿತ್ತು. ಅವರು ಅದೊಮ್ಮೆ ನನ್ನ ಹಸ್ತರೇಖೆಗಳನ್ನು ನೋಡಿ- “ನಿನಗೆ ದೀರ್ಘಾಯಸ್ಸು ಇದೆ. 90 ವರ್ಷದವರೆಗೂ ನೀನು ಬದುಕಿರಿ¤àಯ’ ಅಂದಿದ್ದರು. ಈ ಮಾತು ನನ್ನೊಳಗೆ ಅಚ್ಚಳಿಯದೆ ಉಳಿದುಬಿಟ್ಟಿತ್ತು. ಸುದೀರ್ಘ ಕಾಲ ಬದುಕ್ತೇನೆ ಅಂದಮೇಲೆ ಚೆನ್ನಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ಆರ್ಥಿಕವಾಗಿ ಗಟ್ಟಿಯಾಗಿ ಇರಬೇಕು. ಯಾರ ಮೇಲೂ ಡಿಪೆಂಡ್ ಆಗಬಾರದು ಅನಿಸಿತ್ತು. ಹಾಗೆಂದೇ ಶ್ರದ್ಧೆಯಿಂದ ಓದಿದೆ. ಯುನಿವರ್ಸಿಟಿಯ ಪ್ರೊಫೆಸರ್ ಅನ್ನಿಸಿಕೊಂಡೆ. ಯೋಗ-ಧ್ಯಾನದ ಮೂಲಕ ಉತ್ತಮ ಆರೋಗ್ಯವನ್ನೂ ಗಳಿಸಿಕೊಂಡೆ. ಯಾಕೋಪ್ಪ, ನನಗೆ ಮದುವೆಯಾಗಬೇಕು ಅನ್ನಿಸಲಿಲ್ಲ. ನಮ್ಮ ಪೋಷಕರೂ ಈ ಬಗ್ಗೆ ಒತ್ತಾಯ ಮಾಡಲಿಲ್ಲ. ಕಾಲೇಜಿನಲ್ಲಿ ಪಾಠ ಮಾಡಿಕೊಂಡು, ಸೆಮಿನಾರ್-ವರ್ಕ್‌ಶಾಪ್ ನೆಪದಲ್ಲಿ ಊರಿಂದೂರಿಗೆ ಹೋಗಿಬರುತ್ತಾ ಆರಾಮಾಗಿ ಇದ್ದವಳ ಮೇಲೆ ಸ್ತನ ಕ್ಯಾನ್ಸರ್ ಎಂಬ ರಕ್ಕಸ ಆಕ್ರಮಣ ಮಾಡಿತ್ತು. ವಿಷಯ ತಿಳಿದಾಗ ಕುಟುಂಬದವರೆಲ್ಲ ಕಂಗಾಲಾದರು. ಎಲ್ಲರ ಮೊಗದಲ್ಲೂ ಭಯ, ಆತಂಕ, ದಿಗ್ಭ್ರಮೆ, ಕಣ್ಣೀರು!
ಈ ವೇಳೆಗೆ ಚಿಕಿತ್ಸೆ ಆರಂಭವಾಗಿತ್ತು. ಇದು ಕಣ್ಣೀರು ಹಾಕುವ ಸಮಯವಲ್ಲ. ಮನಸ್ಸನ್ನು ಕಲ್ಲಿನಂತೆ ಗಟ್ಟಿ ಮಾಡ್ಕೊಬೇಕಾದ ಸಮಯ. ಕ್ಯಾನ್ಸರ್ ಆಗಲೇ 3ನೇ ಸ್ಟೇಜ್‌ಗೆ ಬಂದುಬಿಟ್ಟಿದೆ. ಈಗ ಆಪರೇಷನ್ ಮೂಲಕ ಸ್ತನಗಳನ್ನು ಸಂಪೂರ್ಣವಾಗಿ ತೆಗೆದುಬಿಡಬೇಕು. ಇಲ್ಲವಾದರೆ ಕ್ಯಾನ್ಸರ್ ಕೋಶಗಳು ಬೆನ್ನುಮೂಳೆಗೂ ವ್ಯಾಪಿಸುವ ಸಾಧ್ಯತೆಯಿದೆ ಅಂದರು ಡಾಕ್ಟರ್. ಹೆಣ್ಣುಮಕ್ಕಳಿಗೆ, ಸ್ತನ ಎಂಬುದೊಂದು ಐಡೆಂಟಿಟಿ. ಅದು ಇಡೀ ದೇಹದ ಒಂದು ಅತಿಮುಖ್ಯ ಅಂಗ. ಅದನ್ನೇ ಕಳೆದುಕೊಂಡರೆ ಬದುಕೋದು ಹೇಗೆ? ಅನ್ನಿಸಿತು. ಈಗ, ಜೀವ ಉಳಿಸಿಕೊಳ್ಳುವುದೇ ಮುಖ್ಯ. ಐಡೆಂಟಿಟಿಯಲ್ಲ. ಪ್ಲಾಸ್ಟಿಕ್ ಸರ್ಜರಿಯ ಮೂಲಕ ಅಥವಾ ಕೃತಕ ಸಾಧನಗಳ ಮೂಲಕ ಸ್ತನವನ್ನು ಮರಳಿ ಪಡೆಯಬಹುದು ಎಂದರು ಡಾಕ್ಟರ್. ಆಮೇಲೆ, ನೋಡನೋಡುತ್ತಲೇ ಆಪರೇಷನ್ ಮುಗಿದು, ಕೀಮೋಥೆರಪಿ ಕೂಡ ಶುರುವಾಯಿತು.
ಕ್ಯಾನ್ಸರ್ ರೋಗಿಗಳು ಕಿಟಾರನೆ ಚೀರುವುದು, ತಲೆಸುತ್ತು ಬಂದು ಬಿದ್ದುಹೋಗುವುದು – ಕೀಮೋಥೆರಪಿಯ ಸಂದರ್ಭದಲ್ಲಿಯೇ. ಕ್ಯಾನ್ಸರ್ ಕೋಶಗಳನ್ನು ರಾಸಾಯನಿಕ ಕ್ರಿಯೆಯ ಮೂಲಕ ನಾಶ ಮಾಡುವ ಪ್ರಕ್ರಿಯೆ ಅದು. ಈ ಸಂದರ್ಭದಲ್ಲಿ ಮೇಲಿಂದ ಮೇಲೆ ವಾಂತಿ, ಬೇಧಿ, ಸುಸ್ತು, ನಿಶ್ಶಕ್ತಿ ಆವರಿಸಿಕೊಳ್ಳುತ್ತದೆ. ಅದನ್ನು ತಡೆಯಲಾಗದೆ ಎಷ್ಟೋ ಜನ ಇದ್ದಕ್ಕಿದ್ದಂತೆ ಕುಸಿದು ಬೀಳು ತ್ತಾರೆ. ಮೂಛೆì ಹೋಗು ತ್ತಾರೆ. ಅದೊಮ್ಮೆ ನಾನೂ ಕೂಡ ಕೋಮಾಗೆ ಹೋಗಿ ಬಿಟ್ಟಿದ್ದೆನಂತೆ. ಇದ್ದಕ್ಕಿದ್ದಂತೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಣ್ಣದೊಂದು ಸ್ಟ್ರೋಕ್ ಕೂಡ ಆಗಿಬಿಟ್ಟಿತ್ತಂತೆ. ಓಹ್, ಸ್ಟ್ರೋಕ್ ಆದರೆ ದೇಹದ ಅರ್ಧಭಾಗ ಬಿದ್ದುಹೋಗುತ್ತೆ. ಆಮೇಲೆ ಬದುಕಿದ್ದೂ ಸತ್ತ ಹಾಗೇ ಎಂದು ವೈದ್ಯರೆಲ್ಲ ಮಾತಾಡಿಕೊಂಡಾಗಲೇ ಪವಾಡವೊಂದು ನಡೆಯಿ ತಂತೆ. ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತ ನಿಧಾನಕ್ಕೆ ಕರಗಿ, ನಾರ್ಮಲ್ ಆಗಿ ಬಿಟ್ಟಿತಂತೆ. ಇದನ್ನೆಲ್ಲ ಮುಂದೊಮ್ಮೆ ವೈದ್ಯರೇ ಹೇಳಿದರು: “ನಿಮ್ಮದು ಬಹಳ ಗಟ್ಟಿ ದೇಹ. ಇಂಥ ಪವಾಡ ಅಪರೂಪಕ್ಕೆ ಒಮ್ಮೆ ಆಗ್ತವೆ’
ಕೀಮೋಥೆರಪಿಯನ್ನು ಯಶಸ್ವಿಯಾಗಿ ಮುಗಿಸಿದರೆ, ಅರ್ಧಯುದ್ಧ ಗೆದ್ದಂತೆ. ಆದರೆ ಯಾವ ಕಾರಣಕ್ಕೂ ಮೈಮರೆಯುವ ಹಾಗಿಲ್ಲ. ಈ ಸಂಗತಿ ಅರ್ಥವಾದ ಮೇಲೆ, ಪಥ್ಯಗಳನ್ನು ಪಾಲಿಸಲು ಮುಂದಾದೆ. ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡೆ.
ಅಂದಹಾಗೆ, ನನ್ನಲ್ಲಿ ಕ್ಯಾನ್ಸರ್ ಪತ್ತೆಯಾದದ್ದು 2007ರಲ್ಲಿ. ಎರಡು ವರ್ಷ ಕಾಲ ಸತತವಾಗಿ ಚಿಕಿತ್ಸೆ ಪಡೆದ ನಂತರ, ಅಂದರೆ 2009ರ ಕೊನೆಗೆ- ಕ್ಯಾನ್ಸರ್ ಕಣಗಳೆಲ್ಲ ನಾಶವಾಗಿವೆ. ನೀವೀಗ ಕ್ಯಾನ್ಸರ್‌ನ, ಆ ಮೂಲಕ ಸಾವನ್ನು ಗೆದ್ದಿದ್ದೀರಿ ಎಂದರು ಡಾಕ್ಟರ್. ಈ ಸುದ್ದಿ ಕೇಳಿ, ಖುಷಿ ಯಿಂದ ಕುಣಿಯಬೇಕು ಅನಿಸ್ತಾ ಇತ್ತು. ಆದರೆ ದೇಹ ಸಹಕರಿಸ್ತಾ ಇರಲಿಲ್ಲ. ಹತ್ತು ಹೆಜ್ಜೆ ನಡೆದರೆ ಸಾಕು; ಸುಸ್ತಾಗುತ್ತಿತ್ತು. 2ು ಮಹಡಿ ಹತ್ತುವಷ್ಟರಲ್ಲಿ ಉಬ್ಬಸ . ಜೊತೆಗೆ, ಎದೆಯ ಭಾಗದಲ್ಲಿ ಸಣ್ಣಗೆ ನೋವು.
ಮುಂದಿನ ಭೇಟಿಯಲ್ಲಿ, ಡಾಕ್ಟರಿಗೆ ಇದನ್ನೇ ಹೇಳಿದೆ.ಎರಡು ವರ್ಷ ನಿರಂತರವಾಗಿ ಔಷಧಿ ತಗೊಂಡಿದೀರ ಅಲ್ವ? ಅದಕ್ಕೇ ಹೀಗಾಗಿರಬೇಕು. ಯಾವುದಕ್ಕೂ ಒಮ್ಮೆ “ಇಕೋ’ ಟೆಸ್ಟ್ ಮಾಡಿಬಿಡೋಣ. ಎಲ್ಲಾ ಕ್ಲಿಯರ್ ಆಗಿ ಗೊತ್ತಾಗುತ್ತೆ’ ಅಂದರು ಡಾಕ್ಟರ್. ಮರುದಿನ ಲ್ಯಾಬ್ ರಿಪೋರ್ಟ್ ಪಡೆಯಲು ಹೋದಾಗ, ವೈದ್ಯರ ಮುಖ ಕಳೆಗುಂದಿತ್ತು. ಅವರು ಹೇಳಿದರು: ಹೃದಯದಲ್ಲಿ ಎಡ ಹೃತುRಕ್ಷಿ ಮತ್ತು ಬಲ ಹೃತುಕ್ಷಿ ಎಂಬ ಭಾಗಗಳಿವೆ. ಎಡ ಹೃತುRಕ್ಷಿಯಲ್ಲಿ 100 ಎಂ.ಎಲ್.ನಷ್ಟು ರಕ್ತ ಶೇಖರಣೆಯಾದರೆ, ಅದರಲ್ಲಿ 70 ಎಂ.ಎಲ್.ನಷ್ಟು ರಕ್ತ ಬಲ ಹೃತುRಕ್ಷಿಯ ಮೂಲಕ ಪಂಪ್ ಆಗಿ ಹೊರಗೆ ಬರುತ್ತೆ. ಇದು ಆರೋಗ್ಯವಂತ ಹೃದಯದ ಲಕ್ಷಣ. ಆದರೆ ನಿಮ್ಮ ಹೃದಯದಲ್ಲಿ ಶೇಖರ ವಾಗುವ ಮತ್ತು ಆಚೆ ಬರುವ ರಕ್ತದ ಪ್ರಮಾಣದಲ್ಲಿ ವ್ಯತ್ಯಾಸ ಇದೆ. ಪಂಪ್ ಆಗಿ ಹೊರಗೆ ಬರುವ ರಕ್ತದ ಪ್ರಮಾಣ ಕಡಿಮೆ ಇರುವುದರಿಂದ ಹೃದಯದ ಎಲ್ಲಾ ಮಾಂಸಖಂಡಗಳಿಗೂ ಸರಿಯಾಗಿ ರಕ್ತ ಸರಬರಾಜು ಆಗ್ತಾ ಇಲ್ಲ. ಅಂದ ರೆ- ಹೃದಯ ಹಾಳಾಗಿದೆ ಎಂದು ಅರ್ಥ…
ಆನಂತರದಲ್ಲಿ ಪೂರ್ತಿ ಎರಡು ತಿಂಗಳು ಆಸ್ಪತ್ರೆ ವಾಸ. ಅದೇನೇನು ಚಿಕಿತ್ಸೆ ಮಾಡಿದರೋ; ವೈದ್ಯರಿಗಷ್ಟೇ ಗೊತ್ತು. ಅವರಿಗೆ ದೇಹವನ್ನೂ, ಜೀವವನ್ನೂ ಒಪ್ಪಿಸಿ- ಏನಾಗುತ್ತೋ ಆಗಲಿ ಎಂದುಕೊಂಡು ಮಲಗಿಬಿಟ್ಟಿದ್ದೆ. “ಮೇಡಂ, ಕೀಮೋಥೆರಪಿಗೆ ಟ್ರೀಟ್‌ಮೆಂಟ್ ತಗೊಳ್ತಾ ಇದ್ರಿ ಅಲ್ವ? ಆಗ ಯಾವುದೋ ಒಂದು ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟುಬಿಟ್ಟಿದ್ದಾರೆ. ಅದರ ಸೈಡ್‌ಎಫೆಕ್ಟ್‌ನ ರೂಪದಲ್ಲಿ ನಿಮ್ಮ ಹೃದಯಕ್ಕೆ ವಿಪರೀತ ಡ್ಯಾಮೇಜ್ ಆಗಿಹೋಗಿತ್ತು. ಅಗತ್ಯವಿದ್ದ ಎಲ್ಲ ಚಿಕಿತ್ಸೆಯನ್ನೂ ನೀಡಿದ್ದೀವಿ. ಇನ್ಮುಂದೆ ನೀವು ಹೆಚ್ಚು ದೂರ ನಡೆಯಬಾರದು. ಮೆಟ್ಟಿಲು ಹತ್ತಬಾರದು. ಹೆಚ್ಚು ಹೊತ್ತು ನಿಂತಿರಬಾರದು. ಜಾಸ್ತಿ ದುಃಖೀಸಬಾರದು’ ಎಂದೆಲ್ಲ ಎಚ್ಚರಿಕೆ ನೀಡಿ ಡಿಸ್‌ಚಾರ್ಜ್ ಮಾಡಿದರು. ಅವತ್ತಿನವರೆಗೂ ದಿನಕ್ಕೆ 16 ಗಂಟೆಗಳ ಕಾಲ ಅದೂ ಇದೂ ಕೆಲಸ ಮಾಡುತ್ತಾ ಬ್ಯುಸಿಯಾಗಿದ್ದವಳು, ದಿಢೀರ್ ಬದಲಾದ ಸಂದರ್ಭಕ್ಕೆ ಅದು ಹೇಗೋ ಒಗ್ಗಿಕೊಂಡೆ.
ದಿನಗಳು, ತಿಂಗಳುಗಳು, ವರ್ಷಗಳು ಉರುಳಿದವು. 2018ರಲ್ಲಿ ಮತ್ತೆ ಎದೆನೋವು ಕಾಣಿಸಿಕೊಂಡಿತು. ಈ ವೇಳೆಗಾಗಲೇ ಎರಡು ಬಾರಿ ಜೀವದಾನವಾಗಿತ್ತಲ್ಲ; ಹಾಗಾಗಿ, ಮೂರನೇ ಬಾರಿಯೂ ಆಸ್ಪತ್ರೆಯಿಂದ ಮನೆಗೆ ಮರಳುವ ವಿಶ್ವಾಸ ನನಗೇ ಇರಲಿಲ್ಲ. ಹಾಗೆಯೇ, ಸತ್ತು ಹೋಗ್ತಿà ನಲ್ಲ ಎಂಬ ಸಂಕ ಟವೂ ಇರ ಲಿಲ್ಲ. ಜೀವ ಬಿಡುವ ಮುನ್ನ ಕುಟುಂಬದವರನ್ನೆಲ್ಲ ಕಣ್ತುಂಬ ನೋಡಿಬಿಡಬೇಕು ಅನ್ನಿಸಿತು. ಬಂಧುಗಳು, ಗೆಳೆಯರನ್ನು ಆಸ್ಪತ್ರೆಗೇ ಕರೆಸಿಕೊಂಡೆ. ಇದು ಕಡೆಯ ಭೇಟಿ-ಅನ್ನುತ್ತಲೇ ಎಲ್ಲರೊಂದಿಗೆ ಮಾತಾಡಿದೆ. ಬಂಧುಗಳೆಲ್ಲ- “ಅಯ್ಯೋ ಯಾಕೆ ಕೆಟ್ಟ ಮಾತಾಡ್ತೀರಿ? ನಿಮ್ಗೆàನೂ ಆಗಲ್ಲ’ ಎನ್ನುತ್ತಿದ್ದರು. ಆದರೆ ಆ ಮಾತುಗಳ ಮೇಲೆ, ಅವರಿಗೇ ನಂಬಿಕೆ ಇರಲಿಲ್ಲ.
ಈ ಮಧ್ಯೆ, ಹಾಳಾಗಿರುವ ಹೃದಯವನ್ನು ತೆಗೆದುಹಾಕಿ, ಬದಲಿ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಬಿಡಿ ಎಂಬ ಸಲಹೆಯೂ ಬಂತು. ಆದರೆ, 69ನೇ ವಯಸ್ಸಿನಲ್ಲಿ, ಬದಲಿ ಹೃದಯದ ಶಸ್ತ್ರಚಿಕಿತ್ಸೆ ಯಶಸ್ವಿ ಯಾಗುವ ಬಗ್ಗೆ ವೈದ್ಯರಿಗೂ ಗ್ಯಾರಂಟಿ ಇರಲಿಲ್ಲ. “ಛಾನ್ಸಸ್ ಫಿಫ್ಟಿ-ಫಿಫ್ಟಿ. ಒಂದು ರಿಸ್ಕ್ ತಗೊಳ್ಳುವಾ’ ಎಂಬ ಮಾತುಗಳಷ್ಟೇ ನನ್ನ ಕಿವಿಗೆ ಬಿದ್ದವು. ಈ ನಡುವೆ- “ದಾನಿಯ ಹೃದಯವೊಂದು ಸಿಕ್ಕಿದೆ. ಬದಲಿ ಹೃದಯ ಜೋಡಣೆ ಶಸ್ತ್ರಚಿಕಿತ್ಸೆಯಲ್ಲಿ ಹೆಸರು ಮಾಡಿರುವ ಡಾ. ಕೆ.ಆರ್. ಬಾಲಕೃಷ್ಣನ್, ಡಾ. ಸುಂದರ್ ರಾವ್‌ರ ತಂಡ ಸಜ್ಜಾಗಿದೆ. ತಕ್ಷಣ ಚೆನ್ನೆçನ ಮಲಾರ್ ಆಸ್ಪತ್ರೆಗೆ ಬನ್ನಿ’ ಎಂಬ ಸಂದೇಶ ಬಂತು. ಕೆಲವೇ ಗಂಟೆಗಳಲ್ಲಿ ನಾನೂ, ಬಂಧುಗಳೂ ವಿಮಾನದ ಮೂಲಕ ಚೆನ್ನೆ ç ತಲುಪಿದೆವು.
ಹೌದು, ನನ್ನ ಬದುಕಿನಲ್ಲಿ ಮತ್ತೂಮ್ಮೆ ಪವಾಡ ನಡೆಯಿತು. ಎಲ್ಲ ಲೆಕ್ಕಾಚಾರಗಳನ್ನೂ ಮೀರಿ, ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. 69ನೇ ವಯಸ್ಸಿನ, ಅದೂ ಕ್ಯಾನ್ಸರ್‌ನಿಂದ ಜರ್ಝರಿತಗೊಂಡ ಹೆಣ್ಣಿನ ದೇಹ, ಬದಲಿ ಹೃದಯ ಜೋಡಣೆಯಂಥ ಶಸ್ತ್ರಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ತೀರಾ ವಿರಳ. ಅಂಥ ಕೇಸ್‌ಗಳಲ್ಲಿ ನನ್ನದೂ ಒಂದು ಅಂದುಕೊಂಡಾಗ, ನಾನು ಅದೃಷ್ಟವಂತೆ ಎಂಬ ಹೆಮ್ಮೆ ಜೊತೆ ಯಾಗುತ್ತದೆ. ಆಸ್ಪತ್ರೆಗೆ ಬರುವ ಎಲ್ಲ ಜೀವಿಗಳ ಬದುಕಲ್ಲೂ ಇಂಥ ಪವಾಡಗಳು ನಡೆಯುವಂತೆ ಮಾಡಪ್ಪಾ ದೇವರೇ ಎಂದು ಸದಾ ಪ್ರಾರ್ಥಿಸುತ್ತದೆ. ನಡೆದುದನ್ನೆಲ್ಲಾ ನೆನಪಿಸಿಕೊಂಡು ನಗುತ್ತಾ, ನಡುಗುತ್ತಾ, ಬೆರಗಾಗುತ್ತಾ, ಬೆಚ್ಚಿಬೀಳುತ್ತಾ, ಯಮರಾಜನ ತೆಕ್ಕೆಯಿಂದ ಎರಡಲ್ಲ, ಮೂರನೇ ಬಾರಿಯೂ ತಪ್ಪಿಸಿಕೊಂಡೆ ಎಂದುಕೊಳ್ಳುವಾಗಲೇ, ಅಪ್ಪ ಹೇಳಿದ್ದ ಮಾತು ನೆನಪಾಗುತ್ತದೆ: “ನಿನಗೆ ದೀರ್ಘಾಯುಷ್ಯವಿದೆ. 90 ವರ್ಷ ಬದುಕಿರಿಯ…’
ಮಾಹಿತಿ ಸೌಜನ್ಯ: ರೀಡರ್ಸ್ ಡೈಜೆಸ್ಟ್
ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.